top of page

"ಇನಾಸಮಾಮನ ಟಪಾಲು ಚೀಲ" ದಲ್ಲಿ ಒಂದಿಷ್ಟು ಚೇತೋಹಾರಿ ಕತೆಗಳು ಕತೆಗಾರರು: ಸುರೇಶ ಹೆಗಡೆ

ಕನ್ನಡದ ಕಥಾಪರಂಪರೆ ಬಹಳ ದೀರ್ಘವಾದದ್ದು. ಮುಖ್ಯವಾಗಿ ನವೋದಯ ಕಾಲದಲ್ಲಿ ಅಸಂಖ್ಯಾತ ಕತೆಗಾರರು, ಕಾದಂಬರಿಕಾರರು ಕನ್ನಡದ ಕಥಾಕಣಜವನ್ನು ತುಂಬಿ ಸಮೃದ್ಧಗೊಳಿಸಿದರು. ನವ್ಯ ದಲಿತ, ಬಂಡಾಯಗಳ ನಂತರವೂ ಕಥಾವಾಹಿನಿ ಹರಿಗಡಿಯದ ಪ್ರವಾಹವಾಗಿ ಮುಂದುವರಿದುಕೊಂಡು ಬಂದಿರುವದನ್ನು ಕಾಣಬಹುದು. ಆದರೆ ಸಹಜವಾಗಿಯೇ ಕಾವ್ಯ ಮತ್ತು ಕಥೆಗಳಲ್ಲಿ ಹೊಸತನ ಮೈಗೂಡಿಕೊಂಡಿರುವದೂ ನಿಜ. ಇ ಹೊಸತನ ಬಮದಿರುವದು ಮುಖ್ಯವಾಗಿ ನಿರೂಪಣೆಯ ಸ್ವರೂಪದಲ್ಲಿ. ಕಾಲಕಾಲಕ್ಕೆ ತನ್ನಲ್ಲಿ ತಾನೇ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ತಂದುಕೊಳ್ಳುತ್ತ ಮುಂದೆ ಸಾಗುವದೇ ಒಂದು ವಿಶೇಷ.

ಈ ಕಥಾ ಪ್ರಪಂಚದಲ್ಲಿ ಈಚೆಗಷ್ಟೇ ಕಾಣಿಸಿಕೊಂಡವರು ಹುಬ್ಬಳ್ಳಿಯ ಸುರೇಶ ಹೆಗಡೆಯವರು. ಈಚೆಗಷ್ಟೇ ಎನ್ನಲು ಕಾರಣ ಅವರೇನೂ ಯುವ ಕತೆಗಾರರಲ್ಲ. ಆದರೆ ತಮ್ಮ ಉದ್ಯೋಗದ ನಿವೃತ್ತಿಯ ನಂತರದಲ್ಲಿ ಕಥಾಲೋಕದಲ್ಲಿ ಕಾಣಿಸಿಕೊಂಡು " ಇನಾಸ ಮಾಮನ ಟಪಾಲುಚೀಲ" ವೆಂಬ ಚೊಚ್ಚಿಲು ಸಂಕಲನವನ್ನು ಕೊಟ್ಟವರು. ಈ ಟಪ್ಪಾಲು ಚೀಲದಲ್ಲಿ ಹತ್ತು ಕಥೆಗಳಿವೆ. ಉತ್ತರ ಕನ್ನಡದ ಕರ್ಕಿಯಿಂದ ದಿಲ್ಲಿ ಅಮೆರಿಕಾಗಳತನಕ ವಿಶಾಲ ಪ್ರದೇಶ ವ್ಯಾಪ್ತಿಯಲ್ಲಿ ಓಡಾಡುವ ಅವರ ಕಥೆಗಳಲ್ಲಿ ಮುಖ್ಯವಾಗಿ ಗುರುತಿಸುವಂತಹದು ಅವುಗಳ ನಿರೂಪಣೆಯಲ್ಲಿರುವ ಲವಲವಿಕೆ. ಅಲ್ಲಿ ಯಾವ ಧಾವಂತವೂ ಇಲ್ಲ. ಗಡಿಬಿಡಿಯಿಲ್ಲ. ತಾನೊಂದು ಕತೆ ಬರೆಯಲು ಹೊರಟಿದ್ದೇನೆಂಬ ಭಾವನೆಯ ಒತ್ತಡವಿರಿಸಿಕೊಳ್ಳದ ಸಹಜ ಓಟ ಅವುಗಳದು. ಇದು ನಮಗೆ ಹಿಂದೆ ಮಾಸ್ತಿ, ಆನಂದ, ನಾ. ಡಿಸೊಜಾರಂಥವರ ಕತೆಗಳಲ್ಲಿ ಕಂಡುಬಂದ ಗುಣ. ಯಾವುದೇ ತಂತ್ರದ ಗೋಜಲು, ಶೈಲಿಯ ಆಡಂಬರ, ಅಸಹಜ ವರ್ಣನೆಗಳ ಮತ್ತು ಗಂಭೀರ ಚಿಂತನೆಗಳ ಭಾರ ನಮಗಿಲ್ಲಿ ಕಂಡುಬರುವದಿಲ್ಲ. ಇದರಿಂದಾಗಿಯೇ ನಮಗೆ ಅವು ಆಪ್ತವಾಗಿಬಿಡುತ್ತವೆ. ಯಾವುದೇ ಕತೆಯಲ್ಲಾದರೂ ಒಂದು " ಕತೆ " ಕಾಣಿಸಿಕೊಳ್ಳಬೇಕು. ಕತೆ ಎಂದದ್ದೆಲ್ಲಾ ಕತೆಯಾಗುವದಿಲ್ಲ. ಕತೆಗಳಲ್ಲಿ ಕತೆಗಿಂತ ಯಾವುದೋ ಒಂದು ತಾತ್ವಿಕ ಚಿಂತನೆ, ವೈಚಾರಿಕ ವಿಶ್ಲೇಷಣೆಗಳೇ ಹೆಚ್ಚಾದಾಗ ಓದುಗರಿಗೆ ಆ ಕತೆಯಲ್ಲಿ ಬೆರೆತುಕೊಳ್ಳುವದು ಸಾಧ್ಯವಾಗುವದಿಲ್ಲ. ನನ್ನ ಈ ಮಾತಿನ ತಾತ್ಪರ್ಯ ಕತೆಗಳು ಕತೆಯ ಸ್ವರೂಪವನ್ನು ಕಳೆದುಕೊಳ್ಳಬಾರದು.

ಸುರೇಶ ಹೆಗಡೆಯವರಲ್ಲೊಬ್ಬ ಕತೆಗಾರ ಮೊದಲಿನಿಂದಲೂ ಇದ್ದನಾದರೂ ಅವನು ಹೊರಬರಲು ಅವಕಾಶವಾಗಿರಲಿಲ್ಲ. ನಿವೃತ್ತಿ ನಂತರ ಬಿಡುವಾಗಿ ತಮ್ಮಲ್ಲಿ ಅಡಗಿದ್ದ ಆ ಕತೆಗಾರನನ್ನು ಹೊರಗೆ ಬಿಡುವ ಹೊತ್ತಿಗೆ ಅವನು ಜೀವನಾನುಭವದಿಂದ ಪರಿಪಕ್ವವಾಗಿದ್ದ. ಆದ್ದರಿಂದಲೇ ಅವರಿಗೆ ಇಷ್ಟು ಒಳ್ಳೆಯ ಕತೆಗಳನ್ನು ಕೊಡಲು ಸಾಧ್ಯವಾಗಿದೆ. ಅವರು ಬರೆಯುವ ರೀತಿ ನೋಡಿದಾಗ ಅವರು ಹೊಸಬರು ಎಂದು ಅನಿಸುವದೇ ಇಲ್ಲ. ಇಲ್ಲಿನ ಕತೆಗಳು ಕೊಡುವ ಖುಷಿಯೇ ನನಗೆ ಮುಖ್ಯವಾದದ್ದು.

" ಜೀವನ ಚೈತ್ರ" ಎಂಬ ಮೊದಲ ಕತೆ ಅಶೋಕ ಎಂಬ ಅರಣ್ಯ ಅಧಿಕಾರಿ ಮತ್ತು ಅವನ ಜೊತೆ ಕೆಲಸ ಮಾಡಿದ ಸುಧಾಕರ ಎಂಬವರ ಕುಟುಂಬಗಳ ನಡುವೆ ಬೆಸೆಯುವ ಬಾಂಧವ್ಯ, ತನ್ನ ಬದುಕಿನೊಳಗಿನ ಒಂದು ರಹಸ್ಯ ಸಂಗತಿಯನ್ನು ಅಶೋಕ ಸುಧಾಕರನೆದುರು ಬಿಚ್ಚಿಟ್ಟು ಹಗುರಾಗುವುದು ನಮ್ಮ ಮನಸ್ಸನ್ನು ಆರ್ದ್ರಗೊಳಿಸುವ ರೀತಿಯಲ್ಲಿ ನಿರೂಪಿತವಾಗಿದೆ. ಕತೆಯ ಪರಿಸರವನ್ನೂ ಇಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಎರಡನೆಯ ಕತೆ " ಸ್ಟ್ರಾಬೆರಿ". ಜೀವನಪ್ರೀತಿಯುಳ್ಳ ಒಬ್ಬ ತಂದೆ ಮತ್ತು ಮಗಳ ಕತೆ. ಅಪ್ಪ ಮೊದಲ ಹೆಂಡತಿ ಸತ್ತ ನಂತರ ಮತ್ತೊಬ್ಬಳು ಸಂಗಾತಿಯನ್‌ಉ ಕಟ್ಟಿಕೊಳ್ಳುವದನ್ನು ಒಮ್ಮೆ ವಿರೋಧಿಸಿದರೂ ನಂತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಪ್ಪಿಕೊಳ್ಖುವ ಅರ್ಪಿತಾ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲೂ ವಿಶಿಷ್ಠವಾದ ನಿರ್ಣಯ ಕೈಕೊಳ್ಳುತ್ತಾಳೆ. ಸುದೈವದಿಂದ ಅದು ಅಚ್ಚರಿದಾಯಕ ಸುಖಾಂತ್ಯ ಕಾಣುತ್ತದೆ. ಖುಷಿ ಕೊಡುವ ಕತೆ ಇದು.

" ವ್ಯವಸ್ಥೆ" ಕತೆ ಇಂದಿನ ಸಾಮಾಜಿಕ ವ್ಯವಸ್ಥೆಯ ಒಂದು ಮುಖವನ್ನು ತೋರಿಸುವಮತಹದು. ಅಪ್ಪಣ್ಣ ಭಟ್ಟರಿಗೆ ಮೂಲ ಊರಿನ ಆಸ್ತಿಪಾಸ್ತಿಯನ್ನು ಮಾರಿ ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಗೆ ಹೋಗಿ ಉಳಿಯಲು ಇಷ್ಟವಿರುವದಿಲ್ಲ. ಮಗನ ವಿಚಾರವನ್ನು ನಾಜೂಕಾಗಿ ಬದಿಗೆ ಸರಿಸಿ ತಮ್ಮ ಇಚ್ಛೆಯಂತೆಯೇ ಭಟ್ಟರು ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ಪುಸ್ತಕದ ಶೀರ್ಷಿಕೆಯಾಗಿರುವ. " ಇನಾಸಮಾಮನ ಟಪಾಲು ಚೀಲ" ಮಾನವೀಯ ಮುಖವುಳ್ಳದ್ದು. ಮುಗ್ಧ ಸ್ವಭಾವದ ಇನಾಸಮಾಮ ತನಗೇ ಗೊತ್ತಿಲ್ಲದಂತೆ ಸಮಾಜದ ಒಂದು ಕರಾಳ ವ್ಯವಸ್ಥೆಯ ಒಳಗೆ ಸಿಲುಕಿಕೊಂಡು ತನಗೆ ತಾನೇ ಏನೋ ಮಹಾಪರಾಧ ಮಾಡಿದೆನೆಂಬ ಭಾವನೆಯನ್ನು ತಂದುಕೊಂಡು ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಡುತ್ತಾನೆ. ಮನ ಕಲಕುವ ಕತೆ.

ಕಥನ ತಂತ್ರದ ದೃಷ್ಟಿಯಿಂದ " ತೀರ್ಪು " ಎಂಬ ಕತೆ ಗಮನ ಸೆಳೆಯುವಂತಹದು. ಅರವಿಂದನೆಂಬ ಪ್ರಾಧ್ಯಾಪಕ , ಅವನು ಬರೆದ ಕತೆಯ ತೀರ್ಪುಗಾರನಾಗಿದ್ದ ಮನೋಜನೆಂಬ ಸಾಹಿತಿ ಆ ಕತೆಯ ಮೂಲಕವೇ ತನ್ನ ಬದುಕಿನಲ್ಲಿ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವಂತಾಗುವದು ಮುಖ್ಯ ಎಳೆ.

" ಬಣ್ಣದ ಬಲೂನು" ಮುಂಬಯಿ ಎಂಬ ಮಾಯಾನಗರಿಯಲ್ಲಿ ನಡೆಯುವ ಮೋಸವಂಚನೆ ಕ್ರೌರ್ಯಗಳ ಕತೆ ಹೇಳುತ್ತದೆ.

ನಮಗೆ ಹತ್ತಿರದವರೆನಿಸಿಕೊಂಡವರೇ ನಮಗೆ ಮೋಸ ಮಾಡುವದು ಎಲ್ಲ ಕಡೆ ಇರುವಂತಹದೇ. ಅಂತಹ ನಯವಂಚಕ ಮತ್ತು ಅವನ ಕೈಯಲ್ಲಿ ಸಿಕ್ಕು ಅಸಹಾಯಕನಾದವನೊಬ್ಬನ ಕತೆ " ಧಾತು".

ತಾನು ನಿರ್ಮಿಸುವ ಮತ್ತು ಪೂಜಿಸುವ ಗಣಪತಿಯನ್ನೇ ನಂಬಿದ ಕುಂಪಶೆಟ್ಟರು ಕಳೆದುಕೊಂಡಂತಾಗಿದ್ದ ಮಗ ಮತ್ತೆ ಕೈಗೆ ಸಿಗುವದನ್ನು ಸೊಗಸಾಗಿ ವಿವರಿಸುವ ಕತೆ " ಕುಂಪಶೆಟ್ಟರ ಗಣಪತಿ ಪೂಜೆ.

ನರ್ಸ್ ಪಾರ್ವತಕ್ಕ, ಅವಳ ಮಾಜಿ ಪ್ರೇಮಿ ಚಟರ್ಜಿಯ ಪುನರ್ಮಿಲನ, ಅವಳ ಮಗಳು ಸರಸ್ವತಿ ಮತ್ತು ಡಾಕ್ಟರ್ ಪ್ರೇಮಿ ದೀಪಾಂಕುರ ನಡುವಿನ ಪ್ರೇಮ ಸಫಲವಾಗುವಿಕೆಯ ಕತೆ " ಎತ್ತಣ ಮಾಮರ" ದಲ್ಕಿದೆ.

ತಾಯಿಯ ಮೃತದೇಹವನ್ನು ಅಮೆರಿಜೆಯಿಂದ ಊರಿಗೆ ತಂದು ಅಂತ್ಯಕ್ರಿಯೆಯನ್ನು ಮಾಡಿ ಊರಲ್ಲಿ ತನ್ನ ಕಳೆದುಹೋಗಿದ್ದ ಇಮೇಜನ್ನು ಮರಳಿ ಸ್ಥಾಪಿಸಿಕೊಳ್ಳುವ ಪ್ರಯತ್ನಕ್ಜಿಳಿದ ಶ್ರೀಪಾದ, ಹಿಂದೆ ಅವನಿಂದ ವಂಚಿತಳಾಗಿದ್ದ ವಿದ್ಯಾಳನ್ನು ಮರಳಿ ಪಡೆಯಲು ಸಿದ್ಧನಾದರೂ ಅವಳೇ ಅವನಿಂದ ಬುದ್ಧ್ಯಾಪೂರ್ವಕ ದೂರ ಉಳಿಯುವ ಅಚ್ಚರಿಯ ನಿರ್ಧಾರ ಕೈಕೊಳ್ಳುವದು ಕತೆಯ ಸಾರ.

ಇಲ್ಲಿನ ಹತ್ತು ಕತೆಗಳೂ ಭಿನ್ನ ಭಿನ್ನವಾದ ಸಾಮಾಜಿಕ , ಸಾಂಸಾರಿಕ ಸಮಸ್ಯೆಗಳನ್ನೆತ್ತಿಕೊಂಡು ಬರೆದವುಗಳಾಗಿರುವದರಿಂದ ಈ ವಿಷಯ ವೈವಿಧ್ಯತೆ ಕತೆಗಳ ನಿರೂಪಣೆಯ ಏಕತಾನತೆಯನ್ನು ತಪ್ಪಿಸಿವೆ. ಸಂಗಡ ಸುರೇಶ ಹೆಗಡೆಯವರಲ್ಲಿ ಕಥನ ಕಲೆಯ ಕೌಶಲ್ಯವಿರುವದರಿಂದ ಓದುಗ ಸುಮ್ಮನೇ ಪುಟ ಮಗುಚಿ ಹಾಕಬೇಕಾದ ಅಗತ್ಯವೇನಿಲ್ಲ. ಮೊದಲೇ ಹೇಳಿದಂತೆ ಇವು ಚೇತೋಹಾರಿಯಾಗಿವೆ. ಕೆಲವು ಕತೆಗಳಲ್ಲಿ ವಿಶೇಷ ಹೊಸತನವೇನೂ ಕಂಡುಬರಲಿಕ್ಕಿಲ್ಲ. ಅಲ್ಲದೇ ಇವು ನವೋದಯ ಮಾದರಿಯ ಕತೆಗಳೇ. ಆದರೆ ವಸ್ತುವಿಷಯ ಏನೇ ಇದ್ದರೂ ಕತೆಗಾರ ಕತೆ ಹೆಣೆಯುವ , ಕತೆ ಹೇಳುವ ರೀತಿ ಬಹಳ ಮುಖ್ಯವಾದದ್ದು. ಅದರಲ್ಲಿ ಹೆಗಡೆಯವರು ಯಶಸ್ವಿಯಾಗಿದ್ದಾರೆ. ಯಾವ ಕತೆಗಳು ನಮ್ಮಲ್ಲಿ ಓದುವ ಪ್ರೀತಿ ಹುಟ್ಟಿಸುತ್ತವೋ ಅವೇ ಯಶಸ್ವಿ ಕತೆಗಳು. ಸುರೇಶ ಹೆಗಡೆಯವರ ಈ ಕಥಾಯಾತ್ರೆ ಮುಂದುವರಿಯಲಿ. ಅವರ ಮುಂದಿನ ಕಥಾಸಂಕಲನವನ್ನು ಆದಷ್ಟು ಶೀಘ್ರವಾಗಿ ಓದುವ ಅವಕಾಶವನ್ನು ಅವರು ನಮಗೆ ಒದಗಿಸಿಕೊಡಲಿ ಎಂದು ಆಶಿಸುತ್ತೇನೆ.

*

ಇನಾಸ ಮಾಮನ ಟಪಾಲು ಚೀಲ

ಕಥಾಸಂಕಲನ

ಚಂದಿರ ಪ್ರಕಾಶನ, ವಿದ್ಯಾನಗರ

ಹುಬ್ಬಳ್ಳಿ-೫೮೦ ೦೩೧

ಪುಟಗಳು: ೧೩೨

ಬೆಲೆ: ೧೦೦/ ರೂ.

ಮೊ. ೯೪೪೮೭ ೨೨೮೬೬

- ಎಲ್. ಎಸ್. ಶಾಸ್ತ್ರಿ
23 views0 comments

Comments


bottom of page