top of page

ಇದು ಸುಳ್ಳಲ್ಲ ಅಲ್ಲವೆ- ಡಾ.ಎಸ್.ಡಿ.ಹೆಗ್ಡೆ


ಚಿಂತನೆಗೆ ತೊಡಗಿಸುವ ಪುಸ್ತಕ

ಹೊನ್ನಾವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶ್ರೀ ಎಸ್. ಡಿ. ಹೆಗಡೆಯವರ ಈ ಪುಸ್ತಕದ ತಲೆಬರೆಹವೇ ಅದನ್ನು ಓದುವ ಕುತೂಹಲ ಹುಟ್ಟಿಸುತ್ತದೆ. ಅವರು ಯಾವತ್ತೂ ವಾದವಿವಾದಗಳ ನಡುವೆಯೇ ಇರುವವರು ಎನ್ನುವುದನ್ನು ನಾನು ಗಮನಿಸಿದ್ದೇನೆ. ಯಾವುದೇ ವಿಷಯವನ್ನು ತಮ್ಮದೇ ಆದ ವಿಶಿಷ್ಟ ಚಿಂತನೆಗೊಳಪಡಿಸಿ ನೋಡುವವರು ಯಾವಾಗಲೂ ವಿವಾದಕ್ಕೆ ಒಳಗಾಗುತ್ತಾರೆ. ಅದಕ್ಕೆ ಕಾರಣ ಎಲ್ಲರಲ್ಲೂ ಯಾವುದೇ ಒಂದು ವಿಷಯವನ್ನು ಚಿಂತನಾ ದೃಷ್ಟಿಯಿಂದ ನೋಡುವ ಶಕ್ತಿ ಇರುವುದಿಲ್ಲ. ಚಿಂತನೆ ಯಾವತ್ತೂ ಹೊಸದನ್ನು ಹುಡುಕುವಂತೆ ಮಾಡುತ್ತದೆ. ಹಾಗಂತ ಎಲ್ಲರೂ ಎಲ್ಲವನ್ನೂ ಒಪ್ಪುತ್ತಾರೆಂದೂ ಇಲ್ಲ,‌ ಒಪ್ಪಲೇಬೇಕೆಂದೂ ಇಲ್ಲ. ಪ್ರತಿಯೊಬ್ಬನ ವಿಚಾರಧಾರೆ, ನಂಬಿಕೆಗಳು ವಿಭಿನ್ನವಾಗಿಯೇ ಇರುತ್ತವೆ. ಆದರೆ ಬೇರೆಯವರ ವಿಚಾರಗಳನ್ನು ಸುಮ್ಮನೇ ಅಲ್ಲಗಳೆಯದೆ ಅದರ ಕುರಿತು ಅಧ್ಯಯನ ಮಾಡಿ ಸರಿಯಾಗಿ ತಿಳಿದುಕೊಂಡು ನಾವು ಅದರ ಪರ ಅಥವಾ ವಿರುದ್ಧ ಮಾತನಾಡಬೇಕು.

ಪ್ರೊ. ಎಸ್. ಡಿ. ಹೆಗಡೆಯವರ ಈ ಕೃತಿಯನ್ನು ನಾನು ಸಾಕಷ್ಟು ಕುತೂಹಲದಿಂದಲೇ ಓದಿದ್ದೇನೆ. ಇಲ್ಲಿಯ ಹಲವು ವಿಷಯಗಳ ಕುರಿತು ಅವರು ಆಳವಾದ ಅಧ್ಯಯನ ಮಾಡಿಯೇ ಬರೆದಿದ್ದಾರೆ ಮತ್ತು ಆಧಾರಸಹಿತವಾಗಿಯೇ ತಮ್ಮ ವಾದ ಮಂಡಿಸಿದ್ದಾರೆ. ಆದ್ದರಿಂದ ಹೆಗಡೆಯವರ ಈ ವಿಚಾರಗಳನ್ನು ಖಂಡಿಸಬೇಕಾದರೂ ನಾವು ಸಹ ಅಧ್ಯಯನ ಮಾಡಲೇಬೇಕಾದ ಅಗತ್ಯವಿದೆ. ಅವರ ಪ್ರಕಾರ ಈ ಜಗತ್ತು ನಿಸರ್ಗ ಮೂಲವಾದುದು. ನಿಸರ್ಗತತ್ವವನ್ನು ಅರಿತಾಗ ಮಾತ್ರ ಈ ಸತ್ಯ ನಮಗೆ ಕಂಡುಬರಲು ಸಾಧ್ಯ. ಪಂಚಭೂತಗಳಿಂದ ನಿರ್ಮಾಣವಾದದ್ದು ಪಂಚಭೂತಗಳಲ್ಲೇ ಸೇರಿಕೊಳ್ಳುತ್ತದೆನ್ನುವುದು ನಂಬಿಕೆಯಷ್ಟೇ ಅಲ್ಲ, ವೈಜ್ಞಾನಿಕ ಸತ್ಯವೂ ಹೌದು. ನಿಸರ್ಗ ಸ್ತ್ರೀ ಸ್ವರೂಪವಾದದ್ದು.

ಇಲ್ಲಿ ಅವರು ಆಗಾಗ ಬರೆದ ೩೮ ಪ್ರತ್ಯೇಕ ಬಿಡಿ ಲೇಖನಗಳಿದ್ದರೂ ಅವುಗಳ ಮೂಲ ಸೂತ್ರ ಒಂದೇ ಎನ್ನುವುದು ಗಮನಿಸಬೇಕಾದ ಅಂಶ. ಅವರು ದೇವರನ್ನು ಅಲ್ಲಗಳೆದಿಲ್ಲ. ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಾಚರಣೆಗಳನ್ನು , ಅಂಧಾನುಕರಣೆಗಳನ್ನು ಮಾತ್ರ ಖಂಡಿಸುತ್ತಾರೆ. ಈ ಕೃತಿಯ " ಹಕ್ಕೆ ಪೂಜೆಯ ಆರಾಧನೆಯೇ ಯಕ್ಷಗಾನದ ಮೂಲ" ಎಂಬ ಮೊದಲ ಲೇಖನದಲ್ಲಿ ಅವರು ವಿಷಯವನ್ನು ಮಂಡಿಸಿದ ರೀತಿ ಗಮನಾರ್ಹವಾದುದು. ಅವರ ಹಲವು ಲೇಖನಗಳಲ್ಲಿ ಬರುವ ಇಂತಹ ವಿಚಾರಗಳನ್ನು ಸಲೀಸಾಗಿ ಅಲ್ಲಗಳೆಯುವುದು ಅಷ್ಟು ಸುಲಭವಲ್ಲ. ಅದಕ್ಕೂ ಅಭ್ಯಾಸ ಬೇಕು. ಜಗತ್ತಿನ ಕಲೆಗಳೆಲ್ಲ ಸ್ತ್ರೀಮೂಲವಾದವು ಎನ್ನುವ ವಿಚಾರವಾಗಿ ಅವರು ಬಹಳ ವ್ಯಾಪಕವಾದ ಕ್ಷೇತ್ರಕಾರ್ಯ / ಸಂಶೋಧನಾತ್ಮಕ ತಿರುಗಾಟ ಮಾಡಿದ್ದಾರೆನ್ನುವುದನ್ನು ನಾವು ಮರೆಯುವಂತಿಲ್ಲ. "ಆ ನಂತರದಲ್ಲೇ ನನಗೆ ದೇವರ ಕುರಿತು ಮೊದಲಿದ್ದ ಭಯ ಮಾಯವಾಗಿ ದೇವರು ಧರ್ಮಗಳಲ್ಲಿ ವಿಶ್ವಾಸ ಮೂಡಿತು " ಎನ್ನುವ ಅವರ ಮಾತು ಬಹಳ ಮುಖ್ಯವಾದದ್ದು. ಅಂದರೆ ಅವರು ದೇವರು ಧರ್ಮದ ವಿರೋಧಿಯಲ್ಲ. ಆದರೆ ದೇವರು ಧರ್ಮ ಅಂದರೆ ನಿಜಕ್ಕೂ ಏನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದವರು.

ಹೆಗಡೆಯವರ ಹೆಚ್ಚಿನ ಲೇಖನಗಳು ಈ ಭೂಮಿ, ಸ್ತ್ರೀಶಕ್ತಿ, ನಿಸರ್ಗ ವಿಚಾರ, ಕಲೆಗಳ ಸುತ್ತ ಸುತ್ತುತ್ತದೆ. ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ತಮ್ಮದೇ ಆದ ವಿಚಾರಗಳನ್ನು ಮಂಡಿಸುವ ಅವರು ಅದಕ್ಕೆಲ್ಲ ಸಾಕಷ್ಟು ಮನನೀಯವಾದ ಉದಾಹರಣೆಗಳನ್ನು, ಆಧಾರಗಳನ್ನು ನೀಡುತ್ತಾರೆ. ಒಂದು ವೇಳೆ ಅವರ ವಿಚಾರಗಳನ್ನು ಖಂಡಿಸುವುದೇ ಆದಲ್ಲಿ ಅದಕ್ಕೂ ನಾವು ಸರಿಯಾದ ಆಧಾರಗಳನ್ನು ನೀಡಬೇಕಾಗುತ್ತದೆ. ಅಧ್ಯಯನದ ಹೊರತಾಗಿ ಅದು ಅಸಾಧ್ಯ.

ಈ ಕೃತಿಯಲ್ಲಿನ ವಿಷಯಗಳನ್ನು ನಾನು ಇನ್ನಷ್ಟು ವ್ಯಾಪಕವಾಗಿ ಅಭ್ಯಸಿಸಬೇಕಾಗಿದೆ. ಅವಸರದಲ್ಲಿ ಅಭಿಪ್ರಾಯ ನೀಡುವುದು ಸರಿಯಲ್ಲ. ಹೆಗಡೆಯವರ ಬಹುತೇಕ ವಿಚಾರಗಳನ್ನು ನಾನು ಮೆಚ್ಚಿಕೊಳ್ಳುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಕೆಲವು ವಿಷಯಗಳ ಕುರಿತು ನಾನು ಯೋಚಿಸುವ ರೀತಿಯೂ ಅದೇ ಆಗಿದೆ. ಯಾವುದೇ ವಿಷಯ ಇರಲಿ, ಚಿಂತನ -ಮಂಥನಗಳನ್ನು ನಡೆಸದೇ ಅಲ್ಲಗಳೆಯಲು ಹೋಗಬಾರದು ಎನ್ನುವುದು ನನ್ನ ನಿಲುವು. ನಾವು ತಿಳಿದದ್ದೇ ಸತ್ಯ ಎಂಬ ಹಟ ಬೇಕಾಗಿಲ್ಲ. ಬೇರೆಯವರ ವಿಚಾರಗಳನ್ನೂ ಪರಿಶೀಲಿಸುವ ಮನಸ್ಸು, ಸಹನೆ ನಮಗೆ ಬೇಕು. ಈ ದೃಷ್ಟಿಯಿಂದ ೧೬೦ ಪುಟಗಳ, ೩೮ ಲೇಖನಗಳ ಈ ಪುಸ್ತಕ ವಿಚಾರ ಮಥನಕ್ಕೆ ಯೋಗ್ಯವಾಗಿದೆ. ಅವರು ಹೇಳಿದ್ದೆಲ್ಲ ಸುಳ್ಳು ಎಂದೂ ಹೇಳಲಾರೆ.


- ಎಲ್. ಎಸ್. ಶಾಸ್ತ್ರಿಶ್ರೀ ಎಲ್.ಎಸ್.ಶಾಸ್ತ್ರಿ ಅವರು ಡಾ.ಎಸ್.ಡಿ.ಹೆಗ್ಡೆ‌ಅವರ "ಇದು ಸುಳ್ಳಲ್ಲ ಅಲ್ಲವೆ" ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ. ಸಂ.ಆಲೋಚನೆ.ಕಾಂ

16 views0 comments
bottom of page