top of page

ಆ ಕರಾಳ ರಾತ್ರಿ


 

( ನಾಟಕ, ಚಿತ್ರಕಥೆ, ಸಂಭಾಷಣೆ )

ಮೂಲ ನಾಟಕಕಾರರು:ಮೋಹನ ಹಬ್ಬು, ವಂದಿಗೆ

 

ಇದೊಂದು ಹೊಸ ಸ್ವರೂಪದ ಪುಸ್ತಕ. ಉತ್ತರ ಕನ್ನಡದ ಹಿರಿಯ ಸಾಹಿತಿ ಮೋಹನ ಹಬ್ಬು ಅವರು ದಶಕದ ಹಿಂದೆ ಆಂಗ್ಲ ಬರೆಹಗಾರ ರೂಪರ್ಟ್ ಬ್ರೂಕ್ ಅವರ ಇಂಗ್ಲಿಷ ನಾಟಕ Lithuania ವನ್ನು ಏಕಾಂಕವಾಗಿ ಇಲ್ಲಿಯ ವಾತಾವರಣಕ್ಕೆ ಹೊಂದುವ ಹಾಗೆ ಕನ್ನಡಕ್ಕೆ ರೂಪಾಂತರಿಸಿದ್ದರು. ನಾಟಕಕ್ಕೆ ಅವರು ಉತ್ತರ ಕರ್ನಾಟಕದ ಆಡು ಭಾಷೆಯನ್ನು ಬಳಸಿದ್ದಾರೆ. ( ಈ ಮೊದಲು ಹಬ್ಬು ಅವರು ಹವ್ಯಕ ಭಾಷೆಯಲ್ಲೂ ಉತ್ತರಣ ಎಂಬ ನಾಟಕ ಬರೆದಿದ್ದಾರೆ).

ಹಬ್ಬು ಅವರ ಈ ನಾಟಕವನ್ನು ಎರಡು ವರ್ಷಗಳ ಹಿಂದೆ ಓದಿದವರೊಬ್ಬರು ಅದನ್ನು ಮೆಚ್ಚಿಕೊಂಡು ಚಲನಚಿತ್ರವಾಗಿ ಮಾಡುವ ಬಗ್ಗೆ ಸಂಪರ್ಕಿಸಿದ್ದರಂತೆ. ಕೊನೆಗೆ ಕನ್ನಡದ ಹೊಸಪೀಳಿಗೆಯ ಪ್ರತಿಭಾವಂತ ನಿರ್ದೇಶಕರಾದ ದಯಾಳ್ ಪದ್ಮನಾಭನ್ ಅವರು " ಇದನ್ನು ಚಲನಚಿತ್ರವಾಗಿ ನಿರ್ಮಿಸಿದರಲ್ಲದೆ ಅದು ಸಾಕಷ್ಟು ಯಶಸ್ವಿಯೂ ಆಯಿತು. ಎಲ್ಲ ಪತ್ರಿಕೆಗಳೂ ಅದನ್ನು ಪ್ರಶಂಸಿಸಿ ವಿಮರ್ಶೆ ಬರೆದಿವೆ. ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ.

ಈಗ ಈ ನಾಟಕ ಓದುಗರ ಕೈಗೆ ವಿಭಿನ್ನ ರೂಪದಲ್ಲಿ ಕೈಸೇರುವಂತಾಗಿದೆ. "ಆ ಕರಾಳ ರಾತ್ರಿ"ಯ ಮೂಲ ನಾಟಕ ಮತ್ತು ಅದರ ಸಿನಿಮಾ ಸ್ಕ್ರಿಪ್ಟ್ ನ ಸಂಭಾಷಣೆ , ಎರಡನ್ನೂ ಸೇರಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಹಬ್ಬು ಅವರು ಬರೆದ ನಾಟಕ ೨೪ ಪುಟಗಳಷ್ಟಿದ್ದು, ನವೀನ ಕೃಷ್ಣ ಅವರು ಅದರ ಸಿನಿಮಾ ಸಂಭಾಷಣೆಗಳನ್ನು ಬರೆದಿದ್ದಾರೆ ಮತ್ತು ಅದು ಎಪ್ಪತ್ತು‌ ಪುಟಗಳಷ್ಟಿದೆ. ದಯಾಳ್ ಅವರು ಇದನ್ನು ಒಂದೂಮುಕ್ಕಾಲು ತಾಸಿನ ಸಿನಿಮಾವನ್ನಾಗಿ ಮಾಡಿದ್ದಾರೆ.


ನಾಟಕದ ಕತೆಯ ಹರಹು ಬಹಳ ಸಣ್ಣದೇ. ಕಡುಬಡತನ ತುಂಬಿದ ಒಂದು ಕುಟುಂಬ ಅತಿಯಾಸೆ ಮತ್ತು ಅವಿವೇಕತನದಿಂದ ತಾನೇ ಮೈಮೇಲೆಳೆದುಕೊಂಡ ಅನಾಹುತದ ಹೃದಯವಿದ್ರಾವಕ ಕತೆ ಇದು. ಮೂಲ ನಾಟಕದಲ್ಲಿರುವದು ಆರು ಪಾತ್ರಗಳು ಮಾತ್ರ. ಕುಡುಕ ತಂದೆ, ಅವನ ಹೆಂಡತಿ, ಪ್ರಾಯಕ್ಕೆ ಬಂದ ಮಗಳು, ಹಾಗೂ‌ ಒಬ್ಬ ಆಗಂತುಕ. ಇನ್ನಿಬ್ಬರು. ಊರ ಹೊರಗೆ ಗುಡಿಸಲಲ್ಲಿ ಆ ಕುಟುಂಬದ ವಾಸ. ಒಂದು ದಿನ ಸಂಜೆ ವೇಳೆಗೆ ಒಬ್ಬ ಅಪರಿಚಿತ ಯುವಕ ಅಲ್ಲಿಗೆ ಬಂದು ಅಲ್ಲಿಯೇ ಊಟ ಮಾಡಿ ಉಳಿಯಬಯಸುತ್ತಾನೆ. ಆತ ತನ್ನ ಶ್ರೀಮಂತಿಕೆಯ ಪ್ರದರ್ಶನವನ್ನೂ ಮಾಡುತ್ತಾನೆ. ಇದು ಆ ಬಡಕುಟುಂಬದ ಮಗಳ ಕಣ್ಣು ಕುಕ್ಕುತ್ತದೆ. ಅವಳಲ್ಲಿ ದುರಾಸೆ ಹುಟ್ಟಿಕೊಳ್ಳುತ್ತದೆ. ಆ ರಾತ್ರಿ ಅವನನ್ನು ಕೊಂದು ಅವನಲ್ಲಿದ್ದ ಹಣ , ಚಿನ್ನ ಎಲ್ಲವನ್ನೂ ಪಡೆದುಕೊಳ್ಳಬಾರದೇಕೆ ಎಂಬ ದುರಾಲೋಚನೆ ಅವಳದು. ಅದಕ್ಕೆ ಸಿದ್ಧವಾಗುತ್ತಾಳೆ ಅವಳು.

ಮುಂದೇನಾಯಿತು? ಆ ಅಪರಿಚಿತ ಯಾರು? ಇದೇ ಈ ಕರಾಳ ರಾತ್ರಿಯ ಸೀಕ್ರೆಟ್. ಆ ಅಂತ್ಯದಲ್ಲೇ ಈ ನಾಟಕದ ಕುತೂಹಲ ಅಡಗಿರುವದರಿಂದ ನಾನು ಅದನ್ನಿಲ್ಲಿ ಹೇಳುತ್ತಿಲ್ಲ. ಆದರೆ ಅದೊಂದು‌ ಭಯಾನಕ ರಾತ್ರಿಯೂ ಹೌದು, ಭೀಭತ್ಸ ಅಂತ್ಯವೂ ಹೌದು. ಬಡತನ ಎಂತಹ ಕ್ರೌರ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ ಮತ್ತು ಅದು ಎಷ್ಟು ದಾರುಣವಾದ ಸನ್ನಿವೇಶವನ್ನು ನಿರ್ಮಾಣ ಮಾಡಬಲ್ಲುದು ಎನ್ನುವದನ್ನು ಈ ನಾಟಕದ ಕತೆ ಸ್ಪಷ್ಟಪಡಿಸುತ್ತದೆ. ಇಲ್ಲಿ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಅಸಹಾಯಕರು. ಅವರಿಗೂ ಎಚ್ಚರವಿಲ್ಲದೆ ಅನಾಹುತ ನಡೆದುಹೋಗುತ್ತದೆ.

ಈ ಸಿನಿಮಾ ಬಗ್ಗೆ ಪ್ರಜಾವಾಣಿ -" ಅಂತರಂಗ ಕಲಕುವ ಮಾನವೀಯ ಕಥನ" ಎಂದರೆ, ವಿಜಯವಾಣಿ -" ಕರಾಳ ರಾತ್ರಿಯ ಭಾವುಕ ಕಥನ " ಎನ್ನುತ್ತದೆ. "ಮನ ಕಲಕುವ ಆ ಕರಾಳ ರಾತ್ರಿ " ಎಂದು ಸಂಜೆವಾಣಿ ಹೇಳುತ್ತದೆ. ಇದೊಂದು ವಿಭಿನ್ನ ರೀತಿಯ ಪ್ರಯತ್ನ ಎಂದೇ ಎಲ್ಲರೂ‌ ಅಭಿಪ್ರಾಯ ಪಟ್ಟಿದ್ದಾರೆ. ಅದು ನಿಜವೂ ಹೌದು. ಈ ಪುಸ್ತಕದಲ್ಲಿ ಸಿನಿಮಾ ಬಗ್ಗೆ ಪತ್ರಿಕೆಗಳ ಮತ್ತು ಪ್ರೇಕ್ಷಕರ ಅನಿಸಿಕೆಗಳನ್ನೂ ಪ್ರಕಟಿಸಲಾಗಿದೆ.

ಮುಖ್ಯವಾಗಿ‌ ಒಂದು‌ ಕತೆ ಅಥವಾ ನಾಟಕವನ್ನು ಸಿನಿಮಾ ರೂಪವಾಗಿ ತರುವಾಗ ಅದು ಯಾವ ರೀತಿಯಾಗಿರುತ್ತದೆ ಎನ್ನುವದನ್ನು ನಾವಿಲ್ಲಿ ಅರಿತುಕೊಳ್ಳಬಹುದಾಗಿದೆ. ಸತ್ವಯುತವಾದ ಕತೆ ಇಲ್ಲದಿದ್ದಲ್ಲಿ ಯಾವುದೇ ಸಿನಿಮಾ ಯಶಸ್ವಿಯಾಗುವದು ಸಾಧ್ಯವಿಲ್ಲ. ಇಲ್ಲಿ ಹಬ್ಬು ಅವರು ಅಂತಹ ಸತ್ವಯುತವಾದ ಕತೆಯನ್ನು ಒದಗಿಸಿದ್ದರಿಂದಲೇ ಆ ಕರಾಳ ರಾತ್ರಿ ಯಶಸ್ವಿಯಾಗಿದೆ. ಸಂಗಡ ಚಿತ್ರಕಥೆ ಸಿದ್ಧ ಪಡಿಸಿದ ನವೀನ ಕೃಷ್ಣ ಮತ್ತು ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಸಾಮರ್ಥ್ಯವೂ ಸಿದ್ಧವಾಗಿದೆ. ಸಂಭಾಷಣೆಗಳು ಬಹಳ ಶಕ್ತಿಯುತವಾಗಿ ಒಂದು ಸನ್ನಿವೇಶವನ್ನು ನಿರ್ಮಿಸಲು ಹೇಗೆ ಸಹಾಯಕವಾಗುತ್ತವೆ ಎನ್ನುವದನ್ನಿಲ್ಲಿ ನೋಡಬಹುದಾಗಿದೆ. ಇಂತಹ ಒಂದು ಒಳ್ಳೆಯ ಸಿನಿಮಾ ಬೆಳ್ಳಿತೆರೆಗೆ ಬರಲು‌ ಕಾರಣರಾದ ಮೋಹನ ಹಬ್ಬು ಅವರಿಗೆ ನಾವು ಅಭಿನಂದನೆಗಳನ್ನು ಹೇಳಲೇಬೇಕು. ಅದರೊಂದಿಗೇ ಆ ಮೂಲ ನಾಟಕದ ಸತ್ವವನ್ನು ಗಮನಿಸಿ ಸಿನಿಮಾ ಮಾಡಿದ ದಯಾಳ್ ತಂಡದವರಿಗೂ ಅಭಿನಂದನೆ.


ಪುಸ್ತಕ ಸಿಗುವ ಸ್ಥಳ: ಶ್ರೀ ಮೋಹನ ಹಬ್ಬು " ಸೌಜನ್ಯ"

ವಂದಿಗೆ , ತಾ. ಅಂಕೋಲಾ ಉತ್ತರ ಕನ್ನಡ -೫೮೧ ೩೫೭ ಮೊ. ೯೪೪೮೧೮೨೨೨೩

ಪುಟಗಳು : ೧೨೮ ಬೆಲೆ : ೧೨೦ ರೂ.

ತರಿಸಿಕೊಂಡು ಓದಬೇಕಾದ ಪುಸ್ತಕ.

- ಎಲ್. ಎಸ್. ಶಾಸ್ತ್ರಿ


ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು.- ಸಂಪಾದಕ.


38 views0 comments

Comments


bottom of page