top of page

ಆ ಒಂದು ಕ್ಷಣಕೆ......!

ಆಗಸದ ಅರಸನಿಗೆ ಗ್ರಹಣ ಸರಿವ ಕ್ಷಣ;

ಕಾರ್ಮೋಡವು ಜೀವಹನಿಯಾಗಿ ಧ್ವನಿಯಾಗಿ;

ವಸುಂಧರೆಯ ಮೈಪುಳಕಗೊಂಡ ಕ್ಷಣ;

ಗರ್ಭದೊಳಗಣ ಕೂಸು ಪ್ರಸವಿಸಿದೆಡೆ,

ಜಗದ ಹನಿಯಾಗಿ ಮಾರ್ಧನಿಯಾದ ಕ್ಷಣ;

ಬೀಜವೊಂದು ಮೊಳಕೆಗೆ ಸಾಕ್ಷಿಯಾದ ಕ್ಷಣ.


ಕಾರುಣ್ಯದ ಬೇರು ಎದೆಯಲಿ ಹೆಮ್ಮರವಾದ ಕ್ಷಣ;

ಹೃದಯದಲಿ ಪ್ರೇಮಭಾವ ಉಕ್ಕಿ ಕಣ್ಣೀರಾದ ಕ್ಷಣ;

ಜಗದ ಹೃದಯಗಳಲಿ 'ನಾನು' ಪ್ರತಿಧ್ವನಿಸಿದ ಕ್ಷಣ;

ಕಡಲು ಶಶಿಯಬಿಂಬಕೆ ಪ್ರವರ್ತಿಸಿ ನೃತ್ಯವಾಗುವ ಕ್ಷಣ;

ಹಸಿದ ಒಡಲುಗಳು ಸತ್ವ ತುಂಬಿ ನಗೆ ಬಿರಿದ ಕ್ಷಣ; ಮನವು 'ಅಮನ'ವಾಗಿ ಇರವು ಅರಿವಾಗಿ ನಿಂತ ಆ ಕ್ಷಣ.


ಕಾದಿದೆ ಆ ಒಂದು ಕ್ಷಣಕೆ.....

ಜೀವ ಭಾವವಾಗಿ, ಕಾಮ ಪ್ರೇಮವಾಗಿ;

ಶಿವ ಶಿವೆಯರ ಮಿಲನದಲಿ ನಾಟ್ಯರಸಗಂಗೆಯಾಗಿ;

ಹೃದಯ ಮಂದಿರವೆ ನಟರಾಜನ ಅಂಗಳವಾಗಿ;

ಅಂತರಂಗಬಹಿರಂಗದ ಅರುವು ಒಂದಾದ ಕ್ಷಣಕೆ.

ನನ್ನಿರವೇ ನಗೆಯಾಗಿ, ಅರಿವಾಗಿ,ಮರವಾಗಿ;

ಫಲವಾಗಿ ನೆರಳಾಗುವ ಕ್ಷಣಕೆ ಕಾದಿದೆ ಅನವರತ...!!


ಉಂಚೋಡಿ ತಿಮ್ಮಪ್ಪ.

12 views0 comments

Commentaires


bottom of page