ಕಬೀರ ಕಂಡಂತೆ..೧೪
ಕ್ಷಣಕ್ಷಣಕ್ಕೂ ಶರೀರ ಸಾವಿನ ಕಡೆಗೆ ಪಯಣ ನಡೆಸುತ್ತಿದ್ದರೂ ಮನದ ಮಾಯಾ, ಮೋಹಗಳು ಮಾತ್ರ ಒಂದಕ್ಕೆ ನೂರಾಗಿ ವಿಜ್ರಂಭಿಸುತ್ತಲೇ ಇರುವದು ವಾಸ್ತವ' ಆಸೆಯೇ ದುಃಖಕ್ಕೆ ಕಾರಣ' ಎಂಬ ಬುದ್ಧವಾಣಿಯನ್ನು ಲಕ್ಷಿಸದೇ, ಆಸೆ ಎಂಬ ಮರೀಚಿಕೆಯ ಬೆನ್ನು ಹತ್ತಿ ಸಂಕಷ್ಟಕ್ಕೆ ಈಡಾಗು-
ತ್ತಿದ್ದೇವೆ. ಮರಣಶಯ್ಯೆಯಲ್ಲಿದ್ದರೂ ಮನೆಗೆ ಬೀಗ ಹಾಕಿದ್ದಾರೋ ಇಲ್ಲವೋ, ಕಳ್ಳರು ಬಂದರೆ ಏನು ಗತಿ? ಎಂದು ಚಿಂತಿಸುವಷ್ಟರ ಮಟ್ಟಿಗೆ ನಾವು ಆಸೆಯ ದಾಸರಾಗಿದ್ದೇವೆ. ಆಸೆಯ ಗರ್ಭದಲ್ಲಿ ನಿರಾಸೆ, ವಿಷಾದ ಮನೆ ಮಾಡಿದ್ದು ಗೊತ್ತಾಗದಷ್ಟು ವಿಭ್ರಮೆಗೆ ಒಳಗಾಗಿದ್ದೇವೆ. ನಾನು, ನನ್ನದು ಎಂಬ ಮಮಕಾರ ಮನುಷ್ಯನನ್ನು ಅಧಃಪತನದ ಪ್ರಪಾತಕ್ಕೆ ತಳ್ಳುತ್ತಿದೆ.
ಮೇಲಿನ ದೋಹೆಯಲ್ಲಿ ಸಂತ ಕಬೀರರು, ಆಶಾ ಮರೀಚಿಕೆಯ ಬೆನ್ನು ಹತ್ತಿದ ಮನುಷ್ಯನ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ಆಸೆಗೆ ಕೊನೆ ಇಲ್ಲ. ರಕ್ತ ಬೀಜಾಸುರನ ಸಂತತಿಯಂತೆ ಆಸೆಯ ಸಂಖ್ಯೆ ಹೆಚ್ಚಾಗುತ್ತಲೇ ನಡೆದಿದ್ದು ಅವುಗಳನ್ನು ತೃಪ್ತಿ ಪಡಿ- ಸುವ ವ್ಯರ್ಥ ಪ್ರಯತ್ನಗಳು ನಡೆದೇ ಇವೆ.
"ಮಾಯೆಗೂ ಸಾವಿಲ್ಲ, ಮನಸ್ಸಿಗೂ ಸಾವಿಲ್ಲ, ಸಾಯುವದೊಂದೆ ಶರೀರ/
ಆಸೆಗೂ ಸಾವಿಲ್ಲ, ತೃಷ್ಣೆಗೂ ಸಾವಿಲ್ಲ, ಹೇಳಿ ಹೋಗಿರುವ ಕಬೀರ// ಎಂಬುದು ಕಬೀರರ ಆತಂಕ. ನಡೆದುಕೊಂಡೇ ತಿರುಗುತ್ತಿದ್ದ ವ್ಯಕ್ತಿ, ಸೈಕಲ್ ಖರೀದಿಸಿದಾಗ ಸಂತಸ ಪಡುತ್ತಾನೆ. ಆದರೆ, ಈ ಸಂತಸ ಬಹಳ ದಿನ ಉಳಿಯ ಲಾರದು. ಏಕೆಂದರೆ ಬೈಕ್ ಖರೀದಿಸಬೇಕು, ಕಾರು, ಐಷಾರಾಮಿ ಜೀವನ... ಹೀಗೆ ಆಸೆಯ ಪೆಡಂಭೂತ ಬೆಳೆಯುತ್ತಲೇ ಸಾಗುತ್ತದೆ!
"ದೇಹ ತೀರಿದರೂ ದಾಹ ತೀರದಾಗಿದೆಯಿಲ್ಲಿ, ಅರಸುತಿಹೆ ಅಲ್ಲಲ್ಲಿ ಸುಖವೆಂಬ ಮರೀಚಿಕೆ, ಸಂತೃಪ್ತಿಯ ಬುಗ್ಗೆ ತಣಿಸೀತು ಬಾಯಾರಿಕೆ, ಧೃಡಚಿತ್ತನಾಗಿ ಮನವ ಮಂದಿರವಾಗಿಸು" ಎಂಬ ನುಡಿ, ಕಟ್ಟೀತು ಸುಂದರ ಬದುಕು..!! ಈ ದೇಹ ನಶ್ವರ, ಜಗತ್ತಿನಲ್ಲಿ ಕಾಣುವ ಭೌತಿಕ ವಸ್ತುಗಳೆಲ್ಲ ನಶ್ವರ. ಆದರೆ ಜಗತ್ತನ್ನು ನಿಯಂತ್ರಿಸುವ ಶಕ್ತಿ ಮಾತ್ರ ಶಾಶ್ವತ ಎಂವ ಸತ್ಯವನ್ನು ಮನಗಾಣ ಬೇಕಾಗಿದೆ. ಆಸೆಯೆಂಬ ಮಾಯಾಮೃಗದ ಸವಾರಿ ಮಾಡಿ ದುಃಖ ಅನುಭವಿಸುವದಕ್ಕಿಂತ ಆಸೆಗೆ ಕಡಿವಾಣ ಹಾಕಿದರೆ ಮನಸ್ಸು ಶಾಂತವಾಗಿ ಸುಖ ತನ್ನಿಂದ ತಾನೇ ನಮ್ಮ ಪಾಲಿಗೆ ದೊರೆಯು- ತ್ತದೆ. ಆಸೆ, ಅತೃಪ್ತಿ ಎಂಬ ರಣಹದ್ದುಗಳು ಕುಕ್ಕಿ ತಿಂದಾವು ಬದುಕು, ಬಾಳ ಹೊಲದಲ್ಲಿ ಸಂತೃಪ್ತಿ- ಯ ನವಿಲು ಗರಿಗೆದರುವಂತಾದರೆ ಬದುಕು ಅದೆಷ್ಟು ಸುಂದರವಾದೀತು..!!
ಮತಿಯರಿತು ನಡೆದೊಡೆ ಜಗವೆಲ್ಲ ಮೆಚ್ಚೀತು
ಮಿತಿಯರಿತು ನಡೆವೊಡೆ ಸುಖವರಸಿ ಬಂದೀತು/
ಅತಿಗೆ ಮಿತಿಯ ಹಾಕಿದೊಡೆ ಸಂತೃಪ್ತಿ ದಕ್ಕೀತು
ಗತಿಯರಿತು ನಡೆ - ಶ್ರೀವೆಂಕಟ//
ಶ್ರೀರಂಗ ಕಟ್ಟಿ ಯಲ್ಲಾಪುರ.
コメント