top of page

ಆವರಣ ಇಲ್ಲದ ಮನೆಗಳು


ಇಲ್ಲೀಗ ಯಾವ ಮನೆಗೂ ಆವರಣವಿಲ್ಲ

ಬಾಗಿಲು ಕಿಟಿಕಿಗಳು ಅಭದ್ರ

ಗೋಡೆಯ ಗಚ್ಚುಗಾರೆ ಅಲ್ಲಲ್ಲಿ ಕಿತ್ತು ಹೋಗಿದೆ

ಮಳೆಯ ನೀರಿಳಿದು ತಾರಸಿಗೆ ಪಸೆ ಬಂದಿದೆ.


ಸಿಕ್ಕಸಿಕ್ಕವರು ಪೋಸ್ಟರ್ ಅಂಟಿಸುತ್ತಾರೆ

ಬೀಡಾಡಿ ನಾಯಿಗಳು ಮತ್ತು ಭಿಕ್ಷುಕರು

ಮೂತ್ರ ಮಾಡುವುದು ಇಲ್ಲಿಯೇ

ಮತ್ತು ಕೆಲವೊಮ್ಮೆ ರಾತ್ರಿ ಗೋಡೆಗಾನಿಸಿ ಮಲಗುವುದು

ಘೂರ್ಕ ಇದ್ದೂ ಇಲ್ಲದ ಹಾಗೆ

ಪ್ರತಿ ತಿಂಗಳೂ ಬಂದು ಕೈಯೊಡ್ಡುತ್ತಾನೆ.


ಪಡ್ಡೆ ಹುಡುಗರು ಅಡ್ಡೆ ಮಾಡಿರುವುದು ಇಲ್ಲೇ

ಬೀಡಿ ಸಿಗರೇಟಿನ ಹೊಗೆಯಾಡಿಸುತ್ತ

ಕೆಲವೊಮ್ಮೆ ಗಾಂಜಾ ಸೇವಿಸಿ

ರಮ್ಮಿ ಆಡುವುದು ಇಲ್ಲೇ ಸನಿಹದಲ್ಲೇ..


ಗಾಳಿ ಮಳೆ ಬಂದರೆ ಸೀರಣೆ ಎರಚುತ್ತದೆ ಮನೆಯೊಳಗೆ

ಪರದೆಗಳು ಅಲ್ಲಲ್ಲಿ ಹರಿದು ಹೋಗಿವೆ

ಮಲಗುವ ಕೋಣೆಯ ಬಾಗಿಲು ಹಾಕಲು ಆಗುವುದಿಲ್ಲ

ಬಿಜಾಗರಿಗಳಿಗೆ ಮಣ್ಣು ಹಿಡಿದಿದೆ

ಸೊಳ್ಳೆ ತಿಗಣೆಗಳ ಕಾಟ ವಿಪರೀತ

ರಾತ್ರಿ ಹೊತ್ತು ಅವುಗಳದೇ ಸಂಗೀತ.


ಹೊರಗೆ ನೆಟ್ಟ ಹೂಗಿಡಗಳ ಹಸುಗಳು ತಿಂದು ಹಾಕಿದವು

ಕಳಚಿಟ್ಟ ಚಪ್ಪಲಿಯ ನಾಯಿ ಹೊತ್ತಿತು

ಕಾಲಿಂಗ್ ಬೆಲ್ ಹಾಳಾಗಿ ಹೋಗಿದೆ

ಮೊನ್ನೆ ತಡರಾತ್ರಿ ಶಿಫ್ಟ್ ಮುಗಿಸಿ ಬಂದ ಮನೆಯವರು

ತುಂಬ ಹೊತ್ತು ಧಬಧಬ ಬಾಗಿಲು ಬಡಿಯಬೇಕಾಯಿತು

ಆದರೂ ಬಾಗಿಲು ತೆರೆಯಲು ಭಯ.


ಬೀದಿದೀಪಗಳು ಯಾಕೋ ಉರಿಯುತ್ತಿಲ್ಲ

ಇಂದೀಗ ಬೆಳಗ್ಗೆಯೇ ಕುಡುಕರಿಬ್ಬರು ಕೆಟ್ಟದಾಗಿ ಬೈದಾಡಿ

ಕಿತ್ತಾಡಿಕೊಳ್ಳುತ್ತಿದ್ದರು ಕೈಕೈ ಮಿಲಾಯಿಸಿ

ಇಬ್ಬರ ಕೈಯಲ್ಲೂ ಬಾಟಲಿಗಳು.


ಯಾಕೆ ಆವರಣವನ್ನು ತೆಗೆದರು ಗೊತ್ತಿಲ್ಲ

ಹರಕು ಮುರುಕಾದರೂ ಇದ್ದಿತ್ತು ರಕ್ಷಣೆಗೆ

ಈಗ ಅದೂ ಇಲ್ಲ

ಹೊಸದು ಮಾಡಿಸುತ್ತಾರಂತೆ..


ಆವರಣದ ಜೊತೆಗೆ ಮನೆಯೂ ದುರಸ್ತಿ ಆಗಬೇಕಾಗಿದೆ

ಸುಣ್ಣಬಣ್ಣ ಬಳಿದು ಬಾಗಿಲು ಕಿಟಿಕಿ ಭದ್ರಪಡಿಸಬೇಕು

ಹೊರಗೆ ಹೋಗಲೂ ಭಯವಾಗಿದೆ ಬೀಗ ಇಲ್ಲದೆ

ಮೊನ್ನೆ ಪೇಟೆಗೆ ಹೋಗಿ ರಿಕ್ಷಾದಲ್ಲಿ ಬಂದಿಳಿದಾಗ

ಮನೆಯ ಗುರುತೇ ಹತ್ತಲಿಲ್ಲ

ಎಲ್ಲ ಮನೆಗಳೂ ಆಗಿವೆ ಒಂದೇ ಹಾಗೆ!


- ಕೆ. ಶೈಲಾಕುಮಾರಿ.ಬಿ ಎಸ್ ಸಿ ಓದಿ ಅನಂತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಕೆ. ಶೈಲಾಕುಮಾರಿ ಅವರು ಚೆನ್ನೈಯ ಅಮೆರಿಕನ್ ಸೆಂಟರ್ ಲೈಬ್ರೆರಿಯಲ್ಲಿ ಗ್ರಂಥಪಾಲಕಿಯಾಗಿ ಕೆಲಕಾಲ ಸೇವೆ ಸಲ್ಲಿಸಿ ಬಳಿಕ ಮಣಿಪಾಲದಲ್ಲಿ ಗ್ರಂಥಾಲಯ ಸೇವೆಯನ್ನು ಮುಂದುವರಿಸಿದರು. ವಿವಾಹವಾಗಿ ಮಕ್ಕಳಾದ ಮೇಲೆ ಉದ್ಯೋಗ ತೊರೆದು ಪೂರ್ಣಪ್ರಮಾಣದ ಗೃಹಕೃತ್ಯದಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಶಾಲಾಕಲಿಕೆಯೊಂದಿಗೆ ಸಾಹಿತ್ಯ, ಸಂಗೀತ ಮತ್ತು ನೃತ್ಯಕಲೆಯಲ್ಲಿ ಬೆಳೆಯುವಂತೆ ಮಾಡಿದರು. ಸ್ವತಃ ಕರ್ಣಾಟಕ ಸಂಗೀತ ಕಲಿತರು. ಪತ್ರಿಕೆಯೊಂದಕ್ಕೆ ಅಂಕಣ ಬರೆದರು. ಮನೆಯಲ್ಲೇ ದೊಡ್ಡ ಗ್ರಂಥಾಲಯವೊಂದನ್ನು ಕಟ್ಟಿ ಬೆಳೆಸಿದರು. ಕವಿತೆ - ಸಣ್ಣಕಥೆಗಳನ್ನು ಬರೆದರು.


ತಂದೆಯಮನೆಯ ಕಡೆಯಿಂದ ಮತ್ತು ಪತಿಯ ಮನೆಯ ಕಡೆಯಿಂದ ದೊಡ್ಡದೊಂದು ವಿದ್ವತ್ ಪರಂಪರೆಗೆ ಸೇರಿರುವ ಕೆ. ಶೈಲಾಕುಮಾರಿಯವರ ಇಡೀ ಮನೆಯ ಪರಿಸರ ಸಾಹಿತ್ಯ ಸಂಗೀತ ನೃತ್ಯ ಮುಂತಾದ ಕಲೆ-ಸಂಸ್ಕೃತಿಗಳಿಂದ ತುಂಬಿಕೊಂಡಿದೆ.


೨೦೦೭ರಲ್ಲಿ ಪ್ರಕಟವಾದ ಶೈಲಾಕುಮಾರಿಯವರ ಸಣ್ಣ ಕಥಾ ಸಂಗ್ರಹ ’ಮುದ್ದು ಗಿಣಿಯ ಸಾಕಿ’ ಒಳ್ಳೆಯ ಹೆಸರು ಸಂಪಾದಿಸಿತು. ಅವರ ಕೆಲವು ಕವಿತೆಗಳು ಅನ್ಯ ಭಾಷೆಗಳಿಗೆ ಅನುವಾದವಾಗಿದ್ದು, ಸಾಹಿತ್ಯ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಪ್ರತಿಷ್ಠಿತ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

65 views0 comments
bottom of page