top of page

ಆಲೋಚನೀಯ

ಹೂವಿಗಿಂತ ನಾರೇ ದೊಡ್ಡದಾಗಿರುವ ದುರ್ವಿಧಿ!


ಮೂಗಿಗಿಂತ ಮೂಗುತಿ ಭಾರ ಎಂಬಂತೆ ಸಾಹಿತ್ಯ ಮತ್ತು ಸಾಹಿತಿ ಹಿನ್ನೆಲೆಗೆ ಸರಿದು ಸಾಹಿತ್ಯ ಸಂಘಟಕ (ಸಾಹಿತ್ಯ ಪರಿಚಾರಕ) ಮುನ್ನೆಲೆಗೆ ಬಂದು ನಿಂತಿರುವುದು ಆಧುನಿಕ ಕಾಲದ ಚೋದ್ಯಗಳಲ್ಲಿ ಒಂದು. ಈ ಪ್ರಕ್ರಿಯೆ ಕಳೆದ ಸುಮಾರು ಮೂವತ್ತು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈಗ ತುಟ್ಟತುದಿಗೆ ಬಂದು ನಿಂತ ಹಾಗೆ ಕಾಣುತ್ತಿದೆ.


ಇವತ್ತು ಒಳ್ಳೆಯ ಸಾಹಿತ್ಯಕೃತಿಯೊಂದು ಪ್ರಕಟವಾದಾಗ ಚರ್ಚೆ ಸಂವಾದಗಳಾಗುವುದು ಕಾಣಿಸುತ್ತಲಿಲ್ಲ. ಸಾಹಿತ್ಯ ಚರಿತ್ರೆ ಸಾಹಿತ್ಯದ ಇತಿಹಾಸ ಅರಿತು ಅದನ್ನೊಂದು ಅಧ್ಯಯನವಾಗಿ ಕೈಗೊಂಡು ಸಾಹಿತ್ಯರಚನೆಯಲ್ಲಿ ಪರಿಶ್ರಮ ಪಡುವುದಾಗಲೀ ಸದಭಿರುಚಿಯ ಕವಿ ಸಾಹಿತಿಗಳನ್ನು ಬೆಳೆಸುವ ಮತ್ತು ಅಂತಹ ವಾತಾವರಣ ನಿರ್ಮಾಣ ಮಾಡುವ ಕಡೆಗಾಗಲೀ ಆಸಕ್ತಿ ವಹಿಸುವುದು ಕಾಣುತ್ತಲಿಲ್ಲ. ಬದಲಾಗಿ ಸಾಹಿತ್ಯದ ಪರಿಚಾರಿಕೆಯೇ ಮುನ್ನೆಲೆಗೆ ಬಂದು ಅದೇ ದೊಡ್ಡದೆಂಬ ಪ್ರಚಾರದ ಭರಾಟೆಯಲ್ಲಿ ಮುಳುಗಿದಂತೆ ಕಾಣುತ್ತಿದೆ.


ಸಾಹಿತ್ಯರಚನೆ ಪ್ರಥಮ ದರ್ಜೆಯ ಪ್ರತಿಭೆ. ಸಂಘಟನೆಯ ಕೆಲಸ ಆನುಷಂಗಿಕ ಅಥವಾ ಗೌಣ. ಈ ಎರಡನೆಯದನ್ನು ಯಾರು ಬೇಕಾದರೂ ಮಾಡಬಹುದು. ಅದೇನೂ ಮುಖ್ಯವಲ್ಲ ಮತ್ತು ಅದನ್ನೇ ದೊಡ್ಡದಾಗಿ ಬಿಂಬಿಸುವ ಅಗತ್ಯವೂ ಇಲ್ಲ.


ಸಾಹಿತ್ಯ ರಚನೆಗಿಂತ ಅದರ ಉಸ್ತುವಾರಿ ಕೆಲಸಗಳನ್ನು ದೊಡ್ಡದು ಎಂಬಂತೆ ಬಿಂಬಿಸುವ ಈ ಪ್ರಕ್ರಿಯೆಯಿಂದಾಗಿ ಸಮಾಜಕ್ಕೆ ಮೊದಲ ದರ್ಜೆಯ ಮಾದರಿಗಳು ಲಭ್ಯವಾಗದೆ ಸಮಾಜ ಬಡವಾಗುತ್ತದೆ. ಕೆಟ್ಟ ಮಾದರಿಗಳೇ ಹೊಸ ತಲೆಮಾರಿಗೆ ಸಿಗುವಂತಾಗುತ್ತದೆ.

ಇಂಥವರು ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರವನ್ನೂ ಗಿಟ್ಟಿಸಿಕೊಳ್ಳುತ್ತಾರೆ. ಸಾಹಿತ್ಯ ರಚನೆ ಮಾಡಿ ಅದನ್ನು ಪ್ರಕಟಿಸಿ ಕಲೆಯ ಔನ್ನತ್ಯ ಮೆರೆಯುವುದಕ್ಕಿಂತ ಕಾರ್ಯಕ್ರಮಗಳ ವರದಿ ಪ್ರಕಟವಾಗುವುದರಲ್ಲಿ ಹೆಚ್ಚು ತೃಪ್ತರಾಗುವ 'ಕಾರ್ಪೊರೇಟ್ ಸಂಸ್ಕೃತಿ' ಸಾಹಿತ್ಯ ಸಾಂಸ್ಕೃತಿಕ ರಂಗಕ್ಕೆ ಪ್ರವೇಶಿಸಿ ಅದೇ ಈಗ ವಿಜೃಂಭಿಸತೊಡಗಿದೆ.


ಅಂದರೆ ಹೂವಿಗಿಂತ ದಾರಕ್ಕೆ (ನಾರಿಗೆ) ಹೆಚ್ಚು ಪ್ರಾಮುಖ್ಯ ಲಭಿಸತೊಡಗಿರುವುದು ಈ ಕಾಲದ ವೈಶಿಷ್ಟ್ಯ ಅನಿಸುತ್ತದೆ. ಸಾಹಿತ್ಯ ಕ್ಷೇತ್ರವೊಂದೇ ಅಲ್ಲ, ಇತರ ಕಡೆಗಳಿಗೂ ಈ ಪ್ರವೃತ್ತಿ ಹಬ್ಬಿದೆ. ಓರ್ವ ಉತ್ತಮ ಅಧ್ಯಾಪಕನಾಗಿದ್ದು ಆ ಕ್ಷೇತ್ರದಲ್ಲಿ ಪರಿಣಿತನಾದರೆ ಆತ ಶಿಕ್ಷಣತಜ್ಞ. ಆದರೆ ಈಗ ಶಿಕ್ಷಣಸಂಸ್ಥೆಗಳನ್ನು ನಡೆಸುವ 'ಯಜಮಾನ' ಶಿಕ್ಷಣತಜ್ಞ ಆಗಿ ಬಿಟ್ಟಿದ್ದಾನೆ! ಬೆಳೆ ಬೆಳೆಯುವ ರೈತನಿಗಿಂತ ಅದನ್ನು ಮಾರುವ ಮಾರಾಟಗಾರ/ಮಧ್ಯವರ್ತಿ ಇವತ್ತು ದೊಡ್ಡವನಾಗಿದ್ದಾನೆ!

ಸಾಹಿತ್ಯ, ಕಲೆ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಜೀವಮಾನವಿಡೀ ಸಾಧನೆ ಮಾಡಿದವನಿಗಿಂತ ತಾಂತ್ರಿಕ ನೆರವಿನ ಉದ್ಯಮದ ಮೂಲಕ ಹಾದು ಬರುವ (ಉದಾ: ಸಿನಿಮಾ, ಟಿ.ವಿ.) ಹಣವುಳ್ಳವನು ಖ್ಯಾತಿಯ ಉತ್ತುಂಗಕ್ಕೆ ಏರಿಬಿಡುತ್ತಾನೆ ಮತ್ತು ಅವನೇ ಸಮಾಜಕ್ಕೆ ಶ್ರೇಷ್ಠನೂ ಮಾದರಿಯೂ ಆಗಿ ಬಿಡುತ್ತಾನೆ!


'ಮಾಧ್ಯಮಸ್ಫೋಟ'ದ ಈ ಯುಗದಲ್ಲಿ ನಿಜದ ಸತ್ತ್ವಕ್ಕಿಂತ ಹುಸಿಪ್ರಚಾರದ ವ್ಯಕ್ತಿತ್ವಗಳು ವಿಜೃಂಭಿಸುತ್ತಿವೆ. ಪ್ರಚಾರದ ಭರಾಟೆ ಎಷ್ಟು ಜೋರಾಗಿದೆಯೆಂದರೆ ಪ್ರಶಸ್ತಿಗಳು ಕೂಡ ಬೀದಿಯಲ್ಲಿ, ಬೀದಿಯ ಹೋರಾಟಗಳಲ್ಲಿ ನಿರ್ಧಾರ ಆಗುತ್ತದೆ!


ನಿಜವಾದ ವೃತ್ತಿನೈಪುಣ್ಯದ (professionals) ಸಾಧಕರು ಮತ್ತು ತಜ್ಞರು ಮೂಲೆಗುಂಪಾಗಿ ಹುಸಿವ್ಯಕ್ತಿತ್ವಗಳು ಮೇಲ್ಮೆ ಗಳಿಸತೊಡಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ! ಏನನ್ನೋಣ, ಹೂವಿಗಿಂತ ನಾರೇ ದೊಡ್ಡದಾಗಿರುವ ಪರಿಸ್ಥಿತಿ ಬಂದು ಬಿಟ್ಟಿದೆ!


-- ಡಾ. ವಸಂತಕುಮಾರ ಪೆರ್ಲ

9 views0 comments
bottom of page