top of page

ಆಲೋಚನೀಯ

ಸಾಹಿತ್ಯದ ಕುರಿತು ಕಾಲಕಾಲಕ್ಕೆ ಸಮಾಜದ ನೋಟ - ನಿಲುವುಗಳು ಬದಲಾಗುತ್ತ ಬಂದಿರುವುದು ಅತ್ಯಂತ ಕುತೂಹಲಕರವಾದ ಒಂದು ಸಂಗತಿಯಾಗಿ ಕಾಣುತ್ತಿದೆ. ಒಂದು ತಲೆಮಾರಿನ ಹಿಂದಿನ ವರೆಗೆ ಸಾಹಿತಿ ಹಿನ್ನೆಲೆಯಲ್ಲಿರುತ್ತಿದ್ದ; ಆತ ಬರೆದ ಸಾಹಿತ್ಯ ಮುನ್ನೆಲೆಯಲ್ಲಿ ಇರುತ್ತಿತ್ತು. ನಾಲ್ಕು ಕಾಲ ನಿಲ್ಲುವ ಉತ್ತಮ ಸಾಹಿತ್ಯದ ರಚನೆ ಮಾಡುವುದರ ಕಡೆಗೆ ಸಾಹಿತಿಗಳ ಲಕ್ಷ್ಯ ಇರುತ್ತಿತ್ತು. ಬರೆದುದೆಲ್ಲವನ್ನೂ ಅವರು ಪ್ರಕಟಿಸುತ್ತಿರಲಿಲ್ಲ. ಬರೆದಾದ ಮೇಲೆ ನಾಲ್ಕು ಜನರಿಗೆ ತೋರಿಸಿ, ಚರ್ಚಿಸಿ ಅನಂತರ ಪ್ರಕಟಿಸುತ್ತಿದ್ದರು. ವರ್ಷಕ್ಕೊಮ್ಮೆಯೋ, ಎರಡು ಮೂರು ವರ್ಷಕ್ಕೊಮ್ಮೆಯೋ ಉತ್ತಮ ಕೃತಿಯೊಂದನ್ನು ನೀಡುತ್ತಿದ್ದರು. ಸಾಹಿತ್ಯಪ್ರಿಯರು ಅದನ್ನು ಓದಿ ಚರ್ಚಿಸುತ್ತಿದ್ದರು ಕೂಡ.


ಕೇವಲ ಮೂವತ್ತು - ನಲವತ್ತು ವರ್ಷಗಳಲ್ಲಿ ಎಂತಹ ಬದಲಾವಣೆ ಆಗಿ ಹೋಯಿತು! ಇಂದು ಕೃತಿ ಹಿಂದೆ; ಕೃತಿಕಾರ ಮುಂದೆ! ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಸಾಹಿತ್ಯದ ವಸ್ತು ವಿಷಯ ಸತ್ತ್ವದ ಚರ್ಚೆಗಿಂತ ಕೃತಿಕಾರನ ವೈಭವೀಕರಣದ ಭರಾಟೆಯೇ ಜೋರಾಗಿದೆ! ತಾನು ಬರೆದುದನ್ನು ತಾನೇ ತಲೆ ಮೇಲೆ ಹೊತ್ತು ಊರಿಡೀ ತಮಟೆ ಬಾರಿಸುತ್ತ ಮೆರವಣಿಗೆ ಹೋಗುತ್ತಾನೆ. ಬರೆದ ಮೊದಲ ಕೃತಿಗೆ ಹದಿನೈದೋ ಇಪ್ಪತ್ತೋ ಪ್ರಶಸ್ತಿಗಳೂ ಬರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಲಂಕಾರಿಕ ಭಾಷೆಯಲ್ಲಿ ನಾಟಕೀಯವಾಗಿ ದೇಶಾವರಿ ರೀತಿಯಲ್ಲಿ ತಾನೇ ಬರೆದುಕೊಳ್ಳುತ್ತಾನೆ!


ಆತ ಪೂರ್ವಸೂರಿಗಳನ್ನು ಸರಿಯಾಗಿ ಓದಿಕೊಂಡಿರುವುದಿಲ್ಲ. ಸಾಹಿತ್ಯ ಚರಿತ್ರೆಯ ಬಗ್ಗೆ ಗೊತ್ತಿರುವುದಿಲ್ಲ. ಇತರ/ಸಮಕಾಲೀನ/ಹಿರಿಯ ಸಾಹಿತಿಗಳೊಂದಿಗೆ ಮಾತುಕತೆ, ಚರ್ಚೆ, ಸಂಸರ್ಗ, ಸಾಂಗತ್ಯ ಹೊಂದಿರುವುದಿಲ್ಲ. ಅಭಿಪ್ರಾಯ ವಿನಿಮಯ ಆಗುವುದಿಲ್ಲ. ಭಾಷೆಯ ಮೇಲೆ ಪ್ರಭುತ್ವ ಅಷ್ಟಕ್ಕಷ್ಟೆ. ಶೈಲಿಯಲ್ಲಿ ತೇಜೋಮಯತೆ ಕಾಣಿಸುವುದಿಲ್ಲ. ವಿಚಾರದಲ್ಲಿ ಆಳ ಮತ್ತು ಗಹನತೆ ಕಡಿಮೆಯೇ ಇರುತ್ತದೆ.. ಬರೆವಣಿಗೆಯಲ್ಲಿ ನಿಖರತೆ ಸ್ಪಷ್ಟತೆ ಅಡಕತೆ ಸೂಕ್ಷ್ಮತೆ ಸಂಕ್ಷಿಪ್ತತೆ ಭಾವತೀವ್ರತೆಗಳು ಕೂಡ ಅಷ್ಟಕ್ಕಷ್ಟೆ.


ಇಂದಿನ ಸಾಹಿತ್ಯಲೋಕಕ್ಕೆ ಪರಿಶ್ರಮಕ್ಕಿಂತ (ಅಂದರೆ 'ಕೃಷಿ'ಗಿಂತ) 'ಆಕರ್ಷಣೆ' ಮತ್ತು ಪ್ರಚಾರದ ಲೋಲುಪತೆ ಅಧಿಕವಾಗಿರುವಂತೆ ಕಾಣುತ್ತದೆ. 'ಕಾರ್ಪೊರೇಟ್ ಸಂಸ್ಕೃತಿ' ಸಾಹಿತ್ಯಲೋಕಕ್ಕೂ ಅಮರಿಕೊಂಡಂತೆ ಕಾಣುತ್ತದೆ. ಇಂದಿನ ಸಾಹಿತ್ಯಲೋಕ 'ಸಾಧನೆ' ಮಾಡಿ 'ಸಿದ್ಧಿ' ಪಡೆದುಕೊಳ್ಳಬೇಕು ಎಂಬ ತತ್ತ್ವದಿಂದ ದೂರ ಸರಿದು ಪ್ರಚಾರ ಮತ್ತು ಮಾರುಕಟ್ಟೆ ಸಂಸ್ಕೃತಿಯ ಕಡೆಗೆ ಓಲುವೆ ಪ್ರದರ್ಶಿಸುತ್ತಿದೆ ಅನಿಸುತ್ತದೆ.


ಕಾಲಾಯ ತಸ್ಮೈ ನಮಃ..


ಒಂದೊಂದು ಕಾಲಘಟ್ಟದ ರುಚಿ-ಅಭಿರುಚಿಗಳು ಹೇಗೆ ವ್ಯತ್ಯಾಸಗೊಳ್ಳುತ್ತಿದೆ ಎಂಬುದು ಒಂದು ಆಲೋಚನೀಯ ಸಂಗತಿ. ಪರಸ್ಪರ ಪ್ರೋತ್ಸಾಹಿಸುತ್ತ ಬೆಂಬಲಿಸುತ್ತ ಸಮಷ್ಟಿ ಬೆಳವಣಿಗೆಗಿಂತ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತ ಗುಂಪುಗಾರಿಕೆ ಮಾಡುತ್ತ ಹೋಗುವುದು ಇವತ್ತಿನ ಕಾಲಪರಿಸ್ಥಿತಿ ಇರಬೇಕು.


ಸಾಹಿತ್ಯವು ಸಮಾಜದ ಪ್ರತಿಬಿಂಬ ಆಗಿರುವುದರಿಂದ ಸಮಾಜದಲ್ಲಿ ಕಂಡು ಬರುವ ಅಂಶಗಳಿಂದ ಸಾಹಿತ್ಯಕ್ಷೇತ್ರ ಕೂಡ ಪ್ರಭಾವಿತವಾಗುತ್ತಿದೆಯೋ ಏನೋ!


-ಡಾ. ವಸಂತಕುಮಾರ ಪೆರ್ಲ

16 views1 comment
bottom of page