ಆಲೋಚನೀಯ

"ನಡೆದಷ್ಟು ದಾರಿಯಿದೆ ಪಡೆದಷ್ಟು ಭಾಗ್ಯವಿದೆ"   ಡಾ.ವಿ.ಕೆ.ಗೋಕಾಕ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಾಗ ದೊರಕುವ ತೃಪ್ತಿ ಅನನ್ಯ.ಆಲೋಚನೆ.ಕಾಂ ಆರಂಭಿಸಿದ ಬಳಿಕ ಬಿಡುವಿಲ್ಲದ ತೊಡಗಿಕೊಳ್ಳುವಿಕೆ  ಖುಷಿಯ ಸಂಗತಿ.ಆಗೊಮ್ಮೆ ಈಗೊಮ್ಮೆ ಇದೊಂದು ಒತ್ತಡ ಎನಿಸುವಷ್ಟರಲ್ಲೆ ಬರಹಗಾರರ ಓದುಗರ ಪ್ರೀತಿ ಮತ್ತು ಬೆಂಬಲ ಸಂತೃಪ್ತಿಯ ಗರಿಗೆದರಿ ತೇಲುವ ಭಾವನೆಯನ್ನು ಮೂಡಿಸಿ  ಬಿಡುತ್ತಿದೆ.ಪತ್ರಿಕೆಯ ಆರಂಭದಲ್ಲಿ ಮಿತ್ರ ಶ್ರೀಪಾದ ಹೆಗಡೆ ಸಾಲಕೋಡ ಅವರೊಂದಿಗಿನ ಮಾತುಕತೆಯಲ್ಲಿ ನಾನು ಗಿರೀಶ ಕಾರ್ನಾಡರ ಯಯಾತಿ ನಾಟಕದ ಮಾತನ್ನು ಉಲ್ಲೇಖಿಸಿದ್ದೆ.


" ನೀರಿಗೆ ಕಲ್ಲು ಹಾಕುವುದಷ್ಟೆ ನಿನ್ನ ಅಧಿಕಾರವೆ ಹೊರತು ಅದು ಸೃಷ್ಟಿಸುವ ಅಲೆಗಳ ಮೇಲಲ್ಲ" ಎಂಬ ಮಾತನ್ನು ಹೇಳಿದ್ದೆ.ಆಲೋಚನೆಗೆ ಹೊಸ ತಲೆಮಾರಿನ  ಬರಹಗಾರರು,ಅನುಭವಿಗಳಾದ ಹಿರಿಯ ಲೇಖಕರು ಬರೆಯುತ್ತಿದ್ದಾರೆ.ಇದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ. ಹನ್ನೊಂದುವರೆ ಸಾವಿರದಷ್ಟು ಜನ ಈ ವರೆಗೆ ಪತ್ರಿಕೆ ಗಮನಿಸಿದ್ದಾರೆ.ಒಂದು ನೂರಾ ಇಪ್ಪತೈದಕ್ಕಿಂತ ಹೆಚ್ಚು ಬರಹಗಳನ್ನು ಪ್ರಕಟಿಸಲಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳ ಜೊತೆಗೆ, ಆರೋಗ್ಯ, ಕಾನೂನು, ಮನೆಮದ್ದು,ಚಿಂತನೆ,ಚಿತ್ರಕಲೆ,ವ್ಯಂಗ್ಯ ಚಿತ್ರ,ಕೃತಿ ಕನ್ನಡಿ( ಪುಸ್ತಕ ಪರಿಚಯ) ವ್ಯಕ್ತಿ ಚಿತ್ರ,ವ್ಯಕ್ತಿತ್ವ ವಿಕಸನ,ಕೃಷಿ,ತೋಟಗಾರಿಕೆ, ಸಂಗೀತ,ಕ್ರೀಡೆ,ಅಡಿಗೆ,ಜಾನಪದ,ಯಕ್ಷಗಾನ ಮುಂತಾದ ಅನೇಕ ಸಂಗತಿಗಳಿಗೆ ನಮ್ಮ ಈ ಪತ್ರಿಕೆಯಲ್ಲಿ  ಅವಕಾಶ ಕಲ್ಪಿಸ ಬೇಕು ಎಂಬ ನಮ್ಮ ಹಂಬಲವನ್ನು ನೀವು ಬೆಂಬಲಿಸ ಬೇಕಾಗಿ ಭಿನ್ನಹ.


"ಇಲ್ಲುಂಟು ಅಗೆವ ಬುದ್ದಿಗೆ ಅನಂತ ಅವಕಾಶ ಹೊಳೆದದ್ದು ತಾರೆ ಉಳಿದದ್ದು ಆಕಾಶ"  ಎಂಬ  ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಮಾತನ್ನು ನಿಮ್ಮ ಬರವಣಿಗೆಯ ಮೂಲಕ ರುಜುವಾತು ಪಡಿಸ ಬೇಕು ಎಂಬ  ಬಯಕೆ ನಮ್ಮದು.


   ಬರಹಗಾರ ಬಂಧುಗಳೆ ಈ. ಪತ್ರಿಕೆಯ ಮೂಲಕ ಆರೋಗ್ಯವಂತ ಸಮಾಜದ  ಹಿತವನ್ನು ಹಾರೈಸುವ,ಸಮಾನತೆಯನ್ನು ಪ್ರೀತಿಸುವ,ಎಲ್ಲರನ್ನು ಒಂದೆ ಮನೆಯವರಂತೆ ಪರಿಭಾವಿಸುವ ಆ ಮೂಲಕ ವಿಶ್ವಮಾನವತೆಯತ್ತ ಸಾಗ ಬೇಕೆಂಬ ಗುರಿ ನಮ್ಮದು.ಇಲ್ಲಿ ಯಾರನ್ನೊ ವಿನಾಕಾರಣವಾಗಿ ಟೀಕಿಸುವ,ಇನ್ನು ಯಾರನ್ನೊ ಲಾಭದಾಸೆಯಿಂದ ಸ್ತುತಿಸುವ ಇರಾದೆ ನಮಗಿಲ್ಲ.ಇಲ್ಲಿ  ಎಲ್ಲರೂ ಸಮಾನರು ಮತ್ತು ನಮ್ಮವರು.ಆದ್ದರಿಂದ "ಮನುಷ್ಯ ಜಾತಿ ತಾನೊಂದೆ ವಲಂ" ಎಂಬ ಮಹಾಕವಿ ಪಂಪನ ಮಾತನ್ನು ಮನ್ನಿಸುವ ನಿಮ್ಮದೆ ಆದ ಈ ಪತ್ರಿಕೆಯ ಘನತೆ,ಗಾಂಭೀರ್ಯ ಮತ್ತು ಗುರುತ್ವವನ್ನು ಹೆಚ್ಚಿಸುವಲ್ಲಿ ನಮೊಡನಿದ್ದು  ನಿಮ್ಮ ಬೆಂಬಲವನ್ನು ನೀಡಿ ಈಗ ತಾನೆ ಆರಂಭವಾದ ಈ ಪತ್ರಿಕೆಯನ್ನು ಪೋಷಿಸ ಬೇಕಾಗಿ ವಿನಂತಿ.


  ನಮ್ಮ ಪತ್ರಿಕೆಯ ನಡೆಯನ್ನು ಪ್ರೀತಿಯಿಂದ ಓದಿ ಪ್ರೋತ್ಸಹಿಸುತ್ತಿರುವ ಹಿರಿಯರಿಗೆ ಮತ್ತು ಮೆಚ್ಚಿಕೊಳ್ಳುವ ಕಿರಿಯರಿಗೆ ಅಕ್ಕರೆಯ ವಂದನೆಗಳು.   


- ಡಾ.ಶ್ರೀಪಾದ ಶೆಟ್ಟಿ.

126 views2 comments