top of page

ಆಲೋಚನೀಯ


ಮೈ ಮನಗಳು ಮರಗಟ್ಟಿ ಹೋದ ಅನುಭವ! ಅದು ಪಿಲಿಡೆಲ್ಪಿಯಾದ ಚಳಿಗಲ್ಲ. ಇಲ್ಲಿ ಸ್ಪ್ರಿಂಗ್ ಅಂದರೆ ಬೇಸಿಗೆ ಕಾಲ. ಕಾರಣ ಮಣಿಪುರದಲ್ಲಿ ನಡೆದಿರುವ ಅಮಾನವೀಯ ಘಟನೆ. ಇದರ ಅರಿವಿದ್ದು ಜಾಣ ಕುರುಡು ಮತ್ತು‌ ಜಾಣ ಕಿವುಡನ್ನು ತೋರುತ್ತಿರುವ ಅಲ್ಲಿಯ ಭಂಡ ಹಾಗು ಲಜ್ಜೆಗೆಟ್ಟ ರಾಜಕಾರಣಿಗಳು,ಆಳುವವರಿಗೆ ಶಾಮೀಲಾಗಿರುವ ಪೋಲಿಸರು,ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯ ಪೈನಾಮ ಗ್ರಾಮದಲ್ಲಿ ಮೈತ್ರೇಯಿ ಸಮುದಾಯದವರಿಂದ ನಡೆದಿರುವ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ,ಅತ್ಯಾಚಾರ,ಹತ್ಯೆ ಮೇ ತಿಂಗಳ ೪ ನೆ ತಾರೀಖು ನಡೆದಿದ್ದರೂ, ಈ ಬಗ್ಗೆ ಪತ್ರಿಕೆಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆದಿದ್ದರು ಏನೂ ನಡೆದೆ ಇಲ್ಲ ಎಂಬಂತೆ ಮೌನವಾಗಿರುವ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ,ಚಾಣಾಕ್ಷರಾದ ಪ್ರಧಾನ ಮಂತ್ರಿಗಳು,ಅವರನ್ನು ಹಾಡಿ ಹೊಗಳುವ ಭಜನಾ ಮಂಡಳಿಗಳು ಎಲ್ಲರೂ ಈ ಬಗ್ಗೆ ತುಟಿ ಹೊಲಿದು ಕೊಂಡವರಂತೆ ವರ್ತಿಸುತ್ತಿರುವುದು. ಇದು ಬುಡಕಟ್ಟು,ದಲಿತ ಹಾಗು ಅಲ್ಪ ಸಂಖ್ಯಾತ ಹಿಂದು ಸಮುದಾಯಗಳಿಗೆ ಕೇಡುಗಾಲ ಬಂತೇನು ಎಂಬ ಆತಂಕವನ್ನು ಹುಟ್ಟಿಸುತ್ತಿದೆ. ಈ ಪ್ರಕರಣವಾಗಿ ಎರಡು ತಿಂಗಳು ಇಪ್ಪತ್ತು ದಿನ ಕಳೆದರು ಯಾರು ಮಾತನಾಡುತ್ತಿಲ್ಲ. ಸುಪ್ರೀಮ್ ಕೋರ್ಟ್ ಈ ಬಗ್ಗೆ ಖಡಕ್ ಸಂದೇಶ ರವಾನಿಸಿದರು‌ ಆ ಸಂದೇಶದ ಮೇಲೆ ಡಿಬೇಟ್ ಮಾಡುವ ಮೂಲಭೂತವಾದಿಗಳ ಜಾಲತಾಣದಲ್ಲಿಯ ಮಾತು ಕರ್ಣ ಕಠೋರವಾಗಿ ಕೇಳುತ್ತಿದೆ. ಜನ ಸಾಮಾನ್ಯರನ್ನು,ಅಸಂಘಟಿತರನ್ನು ,ಬುಡಕಟ್ಟು ಸಮುದಾಯದವರನ್ನು ನಿರ್ಗತಿಕರೆಂದು ತಿಳಿದು ಅಧಿಕಾರ ಹಿಡಿದವರು ವರ್ತಿಸುವ ರೀತಿ ಹೇಸಿಗೆ ಹುಟ್ಟಿಸುವಂತದ್ದಾಗಿದೆ..

ಇಪ್ಪತ್ತನೆ ಶತಮಾನದ ಎಪ್ಪತ್ತರ ದಶಕ ಕರ್ನಾಟಕದಲ್ಲಿ ತುಂಬಾ ಕ್ರಿಯಾಶೀಲವಾಗಿತ್ತು. ಚಳುವಳಿಗಳು

ಪ್ರತಿಭಟನೆಗಳು,ಊಳವವನೆ ಒಡೆಯ ದಂತಹ ಕ್ರಾಂತಿಕಾರಿ ಕಾನೂನುಗಳು‌ ಆಗ ಜಾರಿಗೆ ಬಂದಿತು. ಆ ಸಂದರ್ಭದಲ್ಲಿ ಸಮುದಾಯ,ರೈತ ಸಂಘ, ಎಸ್.ಎಫ್.ಐ.,ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆ ಇವರೆಲ್ಲರು ಒಂದಾಗಿ ಅನ್ಯಾಯವನ್ನು‌ ಪ್ರತಿಭಟನೆ ಮಾಡಿದವು. ಬೆಲ್ಚಿಯಲ್ಲಿ ನಡೆದ ದಲಿತರ ಹತ್ಯೆ,ತತ್ತೂರಿನಲ್ಲಿ‌ ದಲಿತರಿಗೆ ಮಾಡಿದ ಅವಮಾನ ಇವೆಲ್ಲವನ್ನು ಪ್ರತಿಭಟಿಸಲಾಯಿತು. ಆಗ ' ಯಾರಿಗೆ ಬಂತು ನಲ್ವತೇಳರ ಸ್ವಾತಂತ್ರ್ಯ ಪೋಲಿಸರ ಬೂಟಿಗೆ ಬಂತು' ಎಂಬ ಘೋಷಣೆ ಮೊಳಗಿತು. ಖಾದಿ,ಖಾಕಿ ಮತ್ತು ಕಾವಿ ಈ ಮೂರನ್ನು ನಂಬ ಬೇಡಿ ಎಂಬ ಗೋಡೆ ಬರಹಗಳು,ಪತ್ರಿಕಾ ಲೇಖನಗಳು‌ ಪ್ರಕಟವಾದವು.

ಈಗ ಜನರು ಏನೂ ನಡೆದಿಲ್ಲ ಎಂಬ ಹಾಗೆ,ಎಲ್ಲವನ್ನು ಮೈಗೊಂಡವರ ಹಾಗೆ ತಣ್ಣಗೆ ಬದುಕುತ್ತಿದ್ದಾರೆ !!

ಮಣಿಪುರದ ಘಟನೆ ಮತ್ತೆ ಮನವ ಕಾಡುತಿದೆ. ಪಣಿಪುರ ನೃತ್ಯಕ್ಕೆ ಹೆಸರಾಗಿದ್ದ ಅಲ್ಲಿಯ ಮಹಿಳೆಯರ ಬಿಕ್ಕುಗಳನ್ನು ಕೇಳುವವರು ಯಾರು? ಎಂತಹ ಅಪರಾಧಗಳನ್ನು ಮಾಡಿಯು ಧಕ್ಕಿಸಿಕೊಳ್ಳುತ್ತೇವೆ ಎಂಬ ಅಹಂಕಾರದ ಮೈತ್ರೇಯಿ ಮತ್ತು‌ ಅವರಂತೆ ಇರುವ ದುರಹಂಕಾರದ ಹಲವು ಮೇಲಸ್ತರದ ಸಮುದಾಯಗಳ ಪುಂಡ ಪೋಕರಿಗಳಿಗೆ ಕಾನೂನಿನ ಕೈ ಕೋಳ ಹಾಕುವ ಕಾಲ ಯಾವಾಗ ಬರುತ್ತದೆ. ಇದನ್ನೆಲ್ಲಾ ಕಂಡು ಕೇಳಿ ಪ್ರಜ್ಞಾವಂತರು,ಸಾಮಾಜಿಕ ಕಳಕಳಿಯುಳ್ಳವರು ವಸ್ತ್ರಾಪಹರಣದ ಪಾಂಡವರಂತೆ ಎಷ್ಟು ದಿನ ಕೈಕಟ್ಟಿಕೊಂಡು ಕೂಡ್ರುವುದು. ಈ ಬಗ್ಗೆ ಚಿಂತನೆ ಪ್ರತಿಭಟನೆ ಮತ್ತು ನ್ಯಾಯಕ್ಕಾಗಿ ಹಕ್ಕೋತ್ತಾಯ ಮಾಡುವ ಕಾಲ ಆದಷ್ಟು ಬೇಗ ಬರಲಿ. ನೊಂದ ಮಹಿಳೆಯರಿಗೆ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ. ಮನುಕುಲದ ಮೌಲ್ಯಗಳು ಬದುಕಿ ಬಾಳಲಿ.

‌‌‌ ಡಾ.ಶ್ರೀಪಾದ ಶೆಟ್ಟಿ105 views0 comments

コメント


bottom of page