ಅಸಾಮಾನ್ಯ ವ್ಯಕ್ತಿಗಳು ಸಾಮಾನ್ಯರಂತೆ ಬದುಕಿ ಬಾಳಿದರು. ಅಸಾಮಾನ್ಯರ ಸೋಗು ಮತ್ತು ಅನುಕರಣೆ ಮಾಡ ಹೊರಟವರು ಕೊನೆಗೆ ಹೇಳಹೆಸರಿಲ್ಲದೆ ಹೊರಟು ಹೋದರು. ಎಲ್ಲರೊಳಗೊಂದಾಗಿ ಬಾಳುವುದು ಒಂದು ಕಡೆ. ಎಲ್ಲರೊಡನಿದ್ದು ಎಲ್ಲರಂತಾಗದೆ ತನ್ನತನವನ್ನು ಕಾಪಾಡಿಕೊಂಡು ತನ್ನದೆ ಆದ ತತ್ವ ಆದರ್ಶಗಳನ್ನು ರೂಪಿಸಿಕೊಂಡು ಅಸಾಮಾನ್ಯನಾಗಿ ಬದುಕುವ ಬಗೆ ಉಳಿದವರಿಗೆ ಒಂದು ಸಂದೇಶವಾಗುತ್ತದೆ. ಮಹಾತ್ಮಾಗಾಂಧಿ,ಅಬ್ರಹಾಂ ಲಿಂಕನ್, ನೆಲ್ಸನ್ ಮಾಂಡೆಲಾ,ಲೀಯೊ ಟಾಲಸ್ಟಾಯ್ ,ಬಾಬಾ ಆಮ್ಟೆ,ಡಾ.ಬಿ.ಆರ್.ಅಂಬೇಡ್ಕರ್,ಮಹಾತ್ಮಾ ಪುಲೆ,ಸಾವಿತ್ರಿ ಬಾಯಿ ಪುಲೆ, ಸರೋಜಿನಿ ನಾಯ್ಡು ಹೀಗೆ ಹೆಸರಿಸುತ್ತಾ ಹೋಗ ಬಹುದು. ಜೀವನವನ್ನು ಬಹುಕಾಲ ಬದುಕುವುದಕ್ಕಿಂತ ಬದುಕಿರುವಷ್ಟು ಕಾಲ ಬದುಕಿಗೆ ಮೌಲ್ಯವನ್ನು ತುಂಬಿ ಎಲ್ಲರು ನೆನಪಿಟ್ಟುಕೊಳ್ಳುವಂತೆ ಬದುಕುವದು ಒಂದು ಘನ.
" ದಾಸಾಳದೊಳಗುಂಟು
ನನ್ನ ಜೀವನದ ಗಂಟು
ಹನ್ನೆರಡು ತಿಂಗಳು ಬಿರಿದು ಬಿರಿದೂ
ಇದಕೆ ಬೇಕಾಗಿಲ್ಲ ಯಾವ ಬಿರುದು."
" ಸಾಮಾನ್ಯ ಹೂ ಜಾತಿ
ಬೇಕಿಲ್ಲ ಪ್ರಖ್ಯಾತಿ
ದಾಸಾಳ ನನ್ನ ಜೀವನದ ರೀತಿ"
ದಿನಕರ ದೇಸಾಯಿ
ಇದು ಸಮಾಜವಾದಿ ಕವಿ ದಿನಕರ ದೇಸಾಯಿಯವರ ಜೀವನ ಧೋರಣೆಯನ್ನು ಪ್ರತಿನಿಧಿಸುವ ಕವನ. ನಾಮದಾರ್ ಗೋಪಾಲಕೃಷ್ಣ ಗೋಖಲೆಯವರ ಶತಮಾನದ ಸ್ಮರಣೆಗಾಗಿ ದಿನಕರ ದೇಸಾಯಿಯವರು ಅಂಕೋಲೆಯಲ್ಲಿ ಗೋಖಲೆ ಶತಾಬ್ದಿ ಮಹಾವಿದ್ಯಾಲಯವನ್ನು 1966 ನೆ ಇಸ್ವಿಯಲ್ಲಿ ಸ್ಥಾಪನೆ ಮಾಡಿದರು. ಕಾಲೇಜಿನ ಆವರಣದಲ್ಲಿ ದಾಸಾಳ ಗಿಡವನ್ನು ನೆಡಿಸಿದರು.ದಾಸಾಳ ಆ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆಯ ಹೆಸರು ಹೌದು.
ಸರಳವಾಗಿರುವುದು ಒಂದು ಸಾಧನೆಯೆ ಸರಿ. ಆದರೆ ಸರಳತೆಯ ಮಂತ್ರ ಪಠಣ ಮಾಡುತ್ತಾ ಸಂಕೀರ್ಣತೆಯನ್ನೆ ಆವಾಹಿಸಿಕೊಳ್ಳುವರ ಗಡಣ ನಮ್ಮ ಮುಂದಿದೆ. ' ಓದುವುದು ಕಾಶಿ ಕಾಂಡ ತಿನ್ನುವುದು ಮಸಿಕೆಂಡ ' ಎಂಬಂತೆ ಬಹಳ ಜನರ ಪರಿ.
Simple living high thinking ಎಂಬ ಮಾತು ಮರೆತವರಂತೆ ನಮ್ಮ ಇಂದಿನ ಬದುಕು. ಹಿಂದಿನವರು ತಿಳಿದೊ ತಿಳಿಯದೆಯೊ ಒಂದು ಯೋಜನೆಗೆ ಬದ್ಧರಾಗಿ ಜೀವನ ನಿರ್ವಹಣೆ ಮಾಡುವುದನ್ನು ಕಲಿತಿದ್ದರು. ಆದರೆ ಈಗ ಬರಿಗೈಯಲ್ಲಿ ಮೊಳ ಹಾಕುವವರೆ ಹೆಚ್ಚಾಗಿದ್ದಾರೆ. ಯೋಜನೆಗೆ ಯೋಚನೆಯ ತಳಹದಿಯೆ ಇಲ್ಲವಾಗಿದೆ. " ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೊ ನೋಡ ಬೇಕು" ಎಂಬ ಕವಿ ಗೋಪಾಲ ಕೃಷ್ಣ ಅಡಿಗರ ಕವನದ ಸಾಲು ನೆನಪಾಗುತ್ತಿದೆ.
ಜನ ನೆಮ್ಮದಿಯಿಂದ ಬದುಕುವಂತಾಗ ಬೇಕು. ಆಳುವ ಸರಕಾರ, ವಿರೋಧ ಪಕ್ಷಗಳು,ಮಾಧ್ಯಮಗಳು,ಸಮಾಜ ಸೇವಾ ಸಂಸ್ಥೆಗಳು ಈ ಬಗ್ಗೆ ಬದ್ಧತೆ ಮತ್ತು ನಿಷ್ಠೆಯಿಂದ ದುಡಿಯ ಬೇಕು.
ಇನ್ನೊಬ್ಬರ ಅವನತಿ ನಮ್ಮ ಉನ್ನತಿ ಎಂಬ ಲೆಕ್ಕಾಚಾರ ಪ್ರಯೋಜನಕ್ಕೆ ಬರುವುದಿಲ್ಲ. ದೇಶದ ಹಿತ ದೃಷ್ಟಿಯಿಂದ ಇಂತಹ ಆಲೋಚನೆ ಸಾಧುವಲ್ಲ. ದೇಶ ಪ್ರೇಮ,ಮನಸ್ಸಾಕ್ಷಿಗೆ ಒಪ್ಪುವಂತಹ ಸಮುದಾಯ ಹಿತದ ಕಾಯಕದಿಂದ ಎಲ್ಲರು ತೊಡಗಿಕೊಂಡರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ.
ಡಾ.ಶ್ರೀಪಾದ ಶೆಟ್ಟಿ

Thank you so much Shreepad for the inclusion. I shall enjoy the experience.