ರೂಢಿ ರಾಕ್ಷಸ
ಕಾಲ ಪ್ರವಾಹ ಎಂದಿಗೂ ನಿಲ್ಲುವುದಿಲ್ಲ. ಯಾರು ಅದನ್ನು ತಡೆಯಲಾರರು. ಆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರು ಅದರ ಅರಿವಿಲ್ಲದೆ ತಾವೆ ಶಾಶ್ವತ ಎಂದು ತಮ್ಮ ಮಾತಿನ ವರಸೆಯನ್ನು ಬದಲಾಯಿಸದೆ ಇರುತ್ತಾರೆ.ಇದು ಅವರಿಗೆ ರೂಢಿಯಾಗಿರುತ್ತದೆ. ಹೊಸತನ್ನು,ಬದಲಾವಣೆಯನ್ನು ಕೆಲವರು ಬಡಪಟ್ಟಿಗೆ ಒಪ್ಪಿಕೊಳ್ಳುವುದಿಲ್ಲ. ಹಿಂದೆ ಇದ್ದದ್ದೆ ಸರಿ. ಈಗ ಆಗುತ್ತಿರುವುದು ಅನರ್ಥ,ಅಪಾಯ,ಆಘಾತಕಾರಿ ಎಂದು ತಮಗೆ ತಿಳಿದಿರುವ ಪದಗಳನ್ನೆಲ್ಲಾ ಬಳಸಿ ಅದ್ವಾನ ಉಂಟು ಮಾಡುವವರ ಬಳಗ ಬಹಳ ದೊಡ್ಡದೆ ಇದೆ. ಒಬ್ಬಾತ ಒಂದು ಹೂವಿನ ಗಿಡವನ್ನು ಕೊಂಡು ತಂದ. ಅದು ಯಾವಾಗ ಬೇರು ಬಿಟ್ಟೀತು? ಹೂವು ಎಂದು ಅರಳೀತು? ಎಂಬ ಕುತೂಹಲದಿಂದ ಪ್ರತಿದಿನ ಆ ಗಿಡವನ್ನು ಕಿತ್ತು ನೋಡಿದ. ಆ ಗಿಡ ಬೇರು ಬಿಡುವುದಕ್ಕೆ ಅವಕಾಶವನ್ನೆ ಕೊಡಲಿಲ್ಲ. ತಿಳಿಯಾದ ನೀರಿನಲ್ಲಿನಮ್ಮ ಪ್ರತಿಬಿಂಬವನ್ನು ನೋಡ ಬಹುದು. ಆದರೆ ಕದಡಿದ ರಾಡಿಯಾದ ನೀರಿನಲ್ಲಿ ಪ್ರತಿಬಿಂಬವನ್ನು ಕಾಣಲು ಸಾಧ್ಯವಿಲ್ಲ. ಅದು ಕಾಣ ಬಾರದು ಎಂಬ ಉದ್ದೇಶದಿಂದ ನೀರು ತಿಳಿಯಾಗದಂತೆ ಕದಡುವ ಜನರ ಗಡಣಕ್ಕೆ ಕೊರತೆಯಿಲ್ಲ.
ಯಾವುದೆ ಒಂದು ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದರ ಕಾರ್ಯ ವೈಖರಿಯನ್ನು ತಾಳ್ಮೆಯಿಂದ ಕಾದು ನೋಡಬೇಕು. ಸಮತೋಲನ ತಪ್ಪಿದಂತೆ ಕಂಡು ಬಂದರೆ ಎಚ್ಚರಿಕೆಯನ್ನು ಕೊಡ ಬೇಕು. ಎಲ್ಲ ಆಟಗಳಲ್ಲಿ ಅದರದೆ ಆದ ನಿಯಮಗಳಿರುತ್ತವೆ.ಆ ನಿಯಮಗಳನ್ನು ಪಾಲಿಸಿ ಗೆದ್ದು ಬಂದರೆ ಅದು ಎರಡು ಕಡೆಯವರಿಗೆ ಖುಷಿಯ ವಿಚಾರ. ಆದರೆ ರಾಜಕಾರಣದ ಚದುರಂಗದಾಟದಲ್ಲಿ ಸೋತವರು ತಮ್ಮ ಸೋಲನ್ನು ಒಪ್ಪಿ ಕೊಳ್ಳುವುದೆ ಇಲ್ಲ.ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಇಂದೊ ನಾಳೆಯೊ ಪತನ ಹೊಂದುತ್ತದೆ ಎಂದು ಭವಿಷ್ಯ ನುಡಿಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕುಡುಕನೊಬ್ಬ ನಾನು ಸಾರಾಯಿ ಕುಡಿದದ್ದರಿಂದ ಈಗಿನ ಸರ್ಕಾರಕ್ಕೆ ಇಷ್ಟೆಲ್ಲಾ ಭಾಗ್ಯವನ್ನು ಕೊಡಲು ಸಾಧ್ಯವಾಯಿತು ಎಂದು ವಾದಿಸುತ್ತಾನೆ. ಆತ ನಡೆಯುತ್ತಿರುವಾಗ ಅಮಲು ಹೆಚ್ಚಾಗಿ ಬಿದ್ದು ಹೋಗುತ್ತಾನೆ. ಆಗ ಆ ವೀಡಿಯೊ ಮಾಡಿದಾತ ಸರ್ಕಾರ ಬಿದ್ದು ಹೋಯಿತು ಎಂದು ಒಬ್ಬ ಯುವಕನ ಮೂಲಕ ಹೇಳಿಸುತ್ತಾನೆ. ಈ ಭಾಗ್ಯವನ್ನು ವಿಡಂಬಿಸುವ 'ವಧು ಬೇಕಾಗಿದೆ' ಎಂಬ ಜಾಹೀರಾತಿನಲ್ಲಿ ಸರ್ಕಾರ ನೀಡುವ ಐದು ಭಾಗ್ಯಗಳನ್ನು ಪಡೆಯಲುಅರ್ಹಳಾದ ಹುಡುಗಿ ಬೇಕಾಗಿದ್ದಾಳೆ ಎಂದು ಪ್ರಕಟಿಸಲಾಗಿದೆ.
ಕೆಲವರಿಗೆ ತಮ್ಮ ಮನೋಭಾವದಿಂದ ಹೊರ ಬರಲಾಗದ ಸ್ಥಿತಿ ಬಂದೊದಗಿದೆ. ಅವರಿಗೆ ತಾವು ಕಂಡ ಮೊಲಕ್ಕೆ ಕೋಡಿದೆ ಎಂಬ ಭಾವನೆ ತಳ ಹಿಡಿದು ಕುಳಿತಿದೆ. ತಮ್ಮ ಜಾತಿ ಶ್ರೇಷ್ಠ,ತಮ್ಮ ವಿಚಾರ ಅಮೂಲ್ಯ. ತಾವೆ ಭವ್ಯ ಭಾರತದ ಸುಧಾರಕರು ಎಂದು ನಂಬಿಕೊಂಡಿದ್ದಾರೆ. ಇಂಥವರನ್ನು ಸಾಕ್ಷಾತ್ ಭಗವಂತನೆ ಬಂದರೂ ಅವರಿಗೆ ವಸ್ತು ಸತ್ಯವನ್ನು ಮನವರಿಕೆ ಮಾಡಿಕೊಡಲಾರದ ಪರಿಸ್ಥಿತಿ. ಇದಕ್ಕೆ ಪೂರಕವಾಗಿ ಜನ ಮನದಲ್ಲಿ ತಳ ಹಿಡಿದು ಕುಳಿತ ಯತಾಸ್ಥಿತಿವಾದ, ನಿರಾಶೆ,ಅಸಹಾಯಕತೆಯ ಎಲ್ಲೆಗಳು ವಿಸ್ತಾರವಾಗುತ್ತಾ ಹೋಗುತ್ತದೆ.
ಕವಿ ಎಂ.ಗೋಪಾಲಕೃಷ್ಣ ಅಡಿಗರು ತಮ್ಮ 'ಕಟ್ಟುವೆವು ನಾವು' ಎಂಬ ಕವನದಲ್ಲಿ ' ರೂಢಿ ರಾಕ್ಷಸನಸುರ ಗೈವನು ತೋಳ್ತಟ್ಟಿ ಕರೆವನು ಸಂಗ್ರಾಮಕೆ' ಎಂದು ಬರೆಯುತ್ತಾರೆ. ರೂಢಿ ಸರಿಯಾಗಿದ್ದರೆ ಅದು ಜಗತ್ತಿಗೆ ಹಿತ. ರೂಢಿ ತಪ್ಪಿದರೆ ಎಲ್ಲರಿಗು ಅಹಿತ. ನಾವು ರೂಢಿಸಿಕೊಂಡ ರೂಢಿಗೆ ವಿಜ್ಞಾನದ ಹಿನ್ನೆಲೆಯಿಲ್ಲ. ಜಾತಿಮತ,ಪಂಥ,ವರ್ಣಗಳ ರೂಢಿ ಮನುಕುಲದ ಸರ್ವೋದಯಕ್ಕೆ ಅಡ್ಡಿಯಾಗುತ್ತಲೆ ಇದೆ. ನಮ್ಮ ದೇಶದ ಉದಾಹರಣೆಯನ್ನೆ ಕೊಡುವುದಾದರೆ ಇಲ್ಲಿರುವ ಜಾತಿ ಪದ್ದತಿ ಮೇಲ್ಜಾತಿ ಯವರಿಗೆ ಆಗಲಿ,ಕೀಳು ಜಾತಿಯವರಿಗೆ ಆಗಲಿ ನೆಮ್ಮದಿಯನ್ನು ಕೊಟ್ಟಿಲ್ಲ ಕೊಡುವುದು ಇಲ್ಲ. ಆದರೆ ಈ ಸುಳ್ಳನ್ನೆ ಸತ್ಯವೆಂದು ಭ್ರಮಿಸಿದವರು ತಮ್ಮದೆ ಆದ ಮತ್ತಿನಲ್ಲಿದ್ದಾರೆ. ಅದರ ಬಗ್ಗೆ ವೈಭವಿಕರಿಸುವುದೆ ಗಮ್ಮತ್ತು ಎಂದು ಭಾವಿಸಿ ತಮಗೆ ತೋಚಿದಂತೆ ವಾದ ಮಾಡುತ್ತಾರೆ. ಮಹಾತ್ಮಾ ಗಾಂಧೀಜಿಯವರು ಉಪವಾಸ ಕೈಗೊಂಡಾಗ ಅವರನ್ನು ಬೆಟ್ಟಿಯಾಗಿ ಮಾತುಕತೆ ನಡೆಸ ಹೋದ ಡಾ.ಬಿ.ಆರ್.ಅಂಬೇಡ್ಕರ ಅವರು ಬಾಪೂಜಿ ನನ್ನ ಜನರು ಊರಾಚೆ ಪ್ರಾಣಿಗಳಂತೆ ಬದುಕಿದ್ದಾರೆ. ಅವರ ಬದುಕು ಎಲ್ಲರಂತಾದರೆ ಅದು ಒಳಿತು. ನಿಮ್ಮ ಉಪವಾಸಕ್ಕಿಂತ ನನ್ನ ಜನರ ಕ್ಷೇಮ ಮುಖ್ಯ ಎಂದು ಬಲವಾಗಿ ವಾದಿಸುತ್ತಾರೆ.
" ಜಾತಿ ಎಂಬುದು ಕೋತಿ ಮಾನಸಿಕ ಗೋಡೆ
ಇದುವೆ ನವ ಭಾರತದ ಪೀಡೆ" ಎಂದರು ದಿನಕರ ದೇಸಾಯಿ. ನಾವೆಲ್ಲರು ನಮ್ಮ ಮನೆಯೊಳಗೆ ಅನಾದಿಕಾಲದಿಂದ ಸಾಕಿಕೊಂಡ ಈ ಮಂಗನನ್ನು ಹೊರಗೆ ಅಟ್ಟುವುದು. ಸರಕಾರದ ಯೋಜನೆಗಳನ್ನು ಸಮದರ್ಶಿತನದಿಂದ ಕಾಣದೆ ತನ್ನ ಜಾತಿಯ ಜನರ ಸಂತುಷ್ಟಿಗಾಗಿ ಹಳೆಯದನ್ನೆ ನೆಮ್ಮಿ ನಿಲ್ಲವುದು ಸರಿಯಲ್ಲ. ರೂಢಿ ರಾಕ್ಷಸ ನಮ್ಮನ್ನು ಯತಾಸ್ಥಿತಿವಾದದ ಕಡೆ ಎಳೆದೊಯ್ಯುತ್ತಿರುವಾಗ ಅದರಿಂದ ತಪ್ಪಿಸಿಕೊಂಡು ನಾವು ನಿರಪೇಕ್ಷ ಮನೋಭಾವದಿಂದ ಕಟ್ಟ ಕಡೆಯ ಜನರ ಯೋಗ ಕ್ಷೇಮದ ಬಗ್ಗೆ ಮತದ ಆಸೆ ಬದಿಗಿಟ್ಟು ಪ್ರಾಮಾಣಿಕ ಕಾಳಜಿ ವಹಿಸ ಬೇಕು. ಇದು ಇಂದಿನ ಅಗತ್ಯ.
" ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಂ
ಪರವಿಚಾರಮುಂ" ( ಬಂಗಾರ ಎಂದರೆ ಬೇರೆಯವರ ಧರ್ಮವನ್ನು ವಿಚಾರವನ್ನು ಸೈರಿಸಿಕೊಳ್ಳುವುದು) ಕವಿರಾಜ ಮಾರ್ಗ ಕಾರನ ಮಾತು ನಮ್ಮನ್ನು ಎಚ್ಚರಿಸುತ್ತಿರಲಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
.....ನೂರಕ್ಕೆ ನೂರು ನಿಜ...Sir...ಎಲ್ಲವೂ ರೂಢಿಯಾಗಿದೆ, ಈಗ
we take things for granted...ಜನರಿಗೆ ಬದಲಾವಣೆಯೇ
ಅಪಥ್ಯ..we have been electing same set of scoun --drels for several decades...ಎಂಟೆಂಟು... ಹತ್ತಾರು ಸಾರಿ ಘನ ಘೋರ ಪಿಶಾಚಿಗಳನ್ನೇ ಚುನಾಯಿಸುತ್ತಿದ್ದೇವೆ....ಇದು
ದೌಭಾರ್ಗ್ಯವೇ ಸರಿ....🌺🌺🌺🌺🌺