top of page

ಆಲೋಚನೀಯ

ಹೆರರಿಗಾಳಾಗಿಸುತ ಬೇಡಿಸದಿರು


ಕೊಡು ವೈನತೇಯ ಶಕ್ತಿ ಸಿಂಹ ಪರಾಕ್ರಮ.


ಕೆ.ಎಸ್.ನಿಸಾರ ಅಹಮದ್


ನಿತ್ಯೋತ್ಸವ ಕವನ ಸಂಕಲನದ ಈ ಮೇಲಿನ ಕವಿತೆಯ ಸಾಲುಗಳನ್ನು ಬಿ.ಎ.ಐಚ್ಚಿಕ ತರಗತಿಯ ಮೊದಲನೆಯ ವರ್ಷಕ್ಕೆ ಪಾಠ ಮಾಡುತ್ತಿದ್ದ ಎಂಬತ್ತರ ದಶಕದ ದಿನಗಳು. ಆ ಕವಿತೆಯನ್ನು ಪಾಠ ಮಾಡುತ್ತಲೆ ನನ್ನ ಆತ್ಮವಿಶ್ವಾಸ ಮತ್ತು ನಿಲುವನ್ನು ಬೆಳೆಸಿಕೊಂಡ ದಿನಗಳು‌ ಅದು. ಈಗ ಇನ್ನೊಂದು ನೆಲೆಯಲ್ಲಿ ಆ ಸಾಲುಗಳ ಅರ್ಥ ಹುಡುಕ ಬೇಕಾಗಿದೆ!

ರಾಜಕೀಯ ಪಕ್ಷಗಳ ಪಾಲಿಗೆ ಅಧಿಕಾರ ಹಿಡಿಯುವುದು ಒಂದು ಯುದ್ದವೆ ಸರಿ. ಗೆದ್ದು ಬಂದು ಹುದ್ದೆ ಹಿಡಿಯುವ ವರೆಗೆ ಅವರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಾರೆ.ತಂತ್ರ ಪ್ರತಿ ತಂತ್ರಗಳನ್ನು ಮಾಡುತ್ತಾರೆ. ಆಶ್ವಾಸನೆ,ಭರವಸೆ, ಕಟ್ಟು ಕತೆ, ನಟನೆ, ಏಕಪಾತ್ರಾಭಿನಯ,ಹಗರಣ, ನಾಟಕ,ಬೀದಿ ನಾಟಕ,ಮೆರವಣಿಗೆ,ರಂಗು ರಂಗಿನ ಪ್ರಚಾರ ಏನೋನೊ ಮಾಡುತ್ತಾರೆ. ಚುನಾವಣೆಯ ಪರಿಣಾಮ ಪ್ರಕಟವಾದ ಮೇಲೆ ಮತ್ತೊಂದು ವರಸೆ.ಇನ್ನೊಂದು ರಂಗ ತಾಲೀಮು, ಸರ್ಕಸ್,ಬೀದಿ ನಾಟಕ ಮಾಡಲು ಸೋತ ಪಕ್ಷಗಳು ರಿಹರ್ಸಲ್ ನಡೆಸಿ ಪ್ರದರ್ಶನ ಆರಂಭಿಸುತ್ತವೆ. ಇದು ಎಲ್ಲಾ ರಾಜ್ಯಗಳಲ್ಲಿಯು ನಡೆಯುವ ವಿದ್ಯಮಾನಗಳು.

ಆದರೆ ಮತ ಪಡೆಯಲು ನೀಡಿದ ಭರವಸೆಗಳನ್ನು ಪೂರೈಸಲು ಆಡಳಿತಕ್ಕೆ ಬಂದ ಪಕ್ಷ ಯೋಚನೆ ಮಾಡಿ ಯೋಜನೆ ರೂಪಿಸುವ ಹಂತದಲ್ಲಿಯೆ ವಿರೋಧ ಪಕ್ಷಗಳು ಮತದಾರರನ್ನು‌ ಕೆರಳಿಸುವ,ವಿಳಂಬ ನೀತಿ ಎಂದು ಪ್ರತಿ ಭಟಿಸುವ ರಂಗ ತಾಲೀಮು‌ ನಡೆಸುತ್ತಾ ಇರುತ್ತವೆ. ಟಿ.ಆರ್.ಪಿ.ಯ ಮಹಾ ಸಮರದಲ್ಲಿ ಸಜ್ಜಾಗಿರುವ ಮಾಧ್ಯಮಗಳು ಉರಿಯುವ ಬೆಂಕಿಗೆ ಹದವಾಗಿ ತುಪ್ಪ ಸುರಿಯುತ್ತಲೆ ಇರುತ್ತವೆ.

‌ ಕರ್ನಾಟಕದಲ್ಲಿ‌ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಕಾರ್ಯ ಯೋಜನೆ ರೂಪಿಸುತ್ತಿರುವ ಈ ಸಂದರ್ಭದಲ್ಲಿಯೆ ಸುದ್ದಿ ಮನೆಯ ತುಂಬ ತರಹೇವಾರಿ ಸುದ್ದಿಗಳು. ಸಾವಿರಾರು ಪ್ರತಿಕ್ರಿಯೆಗಳು. ಸಾಮಾಜಿಕ ಜಾಲತಾಣದಲ್ಲಿ‌ ಈಗ ಹೇಳಿದ್ದು ಇನ್ನೊಂದು ಕ್ಷಣದಲ್ಲಿ ಪ್ರಕಟವಾಗಿ‌ ಆವಾಂತರ ಹುಟ್ಟಿಸಿ ಬಿಡುತ್ತಿವೆ.

‌‌ಸರ್ಕಾರದ ಭರವಸೆಗೆ ಬಾಯಾರಿ ನಿಂತಿರುವ ನನ್ನ ಜನರ ಪರಿಸ್ಥಿಯನ್ನು ಕಂಡಾಗ ಅಳಬೇಕೊ ನಗ ಬೇಕೊ ತಿಳಿಯುತ್ತಿಲ್ಲ. ತುಪ್ಪದ ಕೊಡ ಬಿದ್ದವನು ಅತ್ತನು. ಖಾಲಿ ಕೊಡ ಬಿದ್ದವನು ಅತ್ತನು ಎಂಬ ಹಾಗೆ ಆಗಿದೆ. ನಿಜವಾದ ಬಡವ,ದಲಿತ, ಹಿಂದುಳಿದವ ಸರ್ಕಾರ ಹಾಕಿದ ಲಕ್ಷ್ಮಣ ರೇಖೆ ದಾಟಿ ಆಯಾ ಕೇಂದ್ರಗಳಿಗೆ ಹೋಗಿ‌ ಅದನ್ನು ಪಡೆಯಲು‌ ಎಷ್ಟೋ ಕಾಲ ಕಳೆದು ಹೋಗಿರುತ್ತದೆ. ಇದರ ಉಸಾಬರಿಯೆ ಬೇಡ ಎಂದು ತಮ್ಮ ಪಾಡಿಗೆ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಸ್ವಾಭಿಮಾನಿಗಳು ಇದ್ದಾರೆ.

‌‌‌‌‌‌‌ ಆಡಳಿತವನ್ನು ಮಾಡುವ ಸರ್ಕಾರ ತನ್ನ ರಾಜ್ಯದ ಆರ್ಥಿಕ ಸ್ಥಿತಿ ಗತಿಗಳ ಸುಧಾರಣೆಗೆ

ಕಟಿಬದ್ಧವಾಗಿರಬೇಕು.ತಲಾ ಆದಾಯದ ಹೆಚ್ಚಳದ ಕಡೆಗೆ ಗಮನ ಹರಿಸ ಬೇಕು‌. ಇದರೊಂದಿಗೆ ಜನರ ಬಾಳಿನ ಮಟ್ಟವನ್ನು‌( Standard of life) ಎತ್ತರಿಸುವಲ್ಲಿ ಪರಿಶ್ರಮಿಸ ಬೇಕು.‌

ಮತದಾರರು ಪ್ರಜ್ಞಾವಂತರಾಗುವಂತೆ ಮಾಡ ಬೇಕು. ಸರ್ಕಾರದ ಸವಲತ್ತುಗಳಿಗೆ ಅಲವತ್ತಿಕೊಳ್ಳದೆ ನೆಮ್ಮದಿಯಿಂದ ದೃಢತೆಯಿಂದ ಬದುಕುವ ಇರಾದೆ ಹೊಂದುವಂತೆ ಮಾಡ ಬೇಕು. ನಮ್ಮ ರಾಜ್ಯದ ಘನತೆಯ ಪ್ರಶ್ನೆ ಇದು. ಇತರ ರಾಜ್ಯದವರು ನಮ್ಮ ಜನರು ಹಪ ಹಪಿಸುವುದನ್ನು ಕಂಡು ನಗದೆ ಇರುವರೇನು?

ಆತ್ಮಾಭಿಮಾನಿಗಳು,ಸ್ವಾಭಿಮಾಗಳು ಬಿಟ್ಟಿ ಕೂಳಿಗೆ ಕೈಯೊಡ್ಡದ ನರ ವೀರರು ನಮ್ಮ ಕರ್ನಾಟಕದಲ್ಲಿ ಇದ್ದಾರೆ. ಅವರ ಸಂಖ್ಯೆ ವೃದ್ಧಿಯಾದರೆ ಅದು ಈ ರಾಜ್ಯದ ಸೌಭಾಗ್ಯ. ಕವಿ‌ ನಿಸಾರ ಅಹಮದ್ ‌ಅವರ ಮಾತನ್ನು ಮತ್ತೆ ಮತ್ತೆ ಮೆಲುಕು ಹಾಕುವ ಕಾಲ ಇದು.

ಬೇರೆಯವರ ಆಳಾಗಿ ಮಾಡಿ ಬೇಡಿಸ ಬೇಡ. ಗರುಡನ ಶಕ್ತಿಯನ್ನು ಕೊಡು. ಸಿಂಹದ ಪರಾಕ್ರಮವನ್ನು ಕೊಡು.


ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ


 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

1 Comment


shreyaspericharan7
Jun 10, 2023

.......ನೂರಕ್ಕೆ ನೂರು ನಿಜ....ಲೇಖನ ಸಕಾಲಿಕ....👍👍👍🌺🌺🌺🌺✌️✌️✌️

Like

©Alochane.com 

bottom of page