" ಇದ್ದವರು ಇದ್ದಾಗ ಇದ್ದಾಂಗ ಅನಿಸಲಿಲ್ಲ." ದ.ರಾ.ಬೇಂದ್ರೆ.
" ಕರುಣ ಬಂದರೆ ಕಾಯೊ ಮರಣ ಬಂದರೆ ಒಯ್ಯೊ
ಕರುಣಿ ಕಲ್ಯಾಣಿ ಬಸವಣ್ಣ ಕೊನೆತನಕ ಕಾಯೊ ಸ್ವಾಭಿಮಾನ- ಗರತಿಯ ಹಾಡು.
ನಮ್ಮ ಆಲೋಚನೆ.ಕಾಂ ಈ ಪತ್ರಿಕೆಯ ಹಿತೈಷಿಗಳು, ಹಿರಿಯರು,ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕರು ಆದ ಶ್ರೀ ಎಸ್.ಬಿ.ನಾಯಕ ಪಾರುಮನೆ ಅವರು ಇಂದು ಬೆಳಿಗ್ಗೆ(18-5-2021- 10 am) ಹತ್ತು ಗಂಟೆಗೆ ತಮ್ಮ ಕೊನೆಯುಸಿರೆಳೆದರು ಎಂದು ತಿಳಿಸಲು ವಿಷಾದವೆನಿಸುತ್ತದೆ.ಕರಾವಳಿ ಕಲ್ಯಾಣ ನಗರದ ಎಂಟನೆ ರಸ್ತೆಯಲ್ಲಿರುವ ಅವರ ಮನೆಯ ಹೆಸರು.ಗಂಗಾವಳಿ ನದಿಯ ದಡದಿಂದ ಶಾಲ್ಮಲೆಯ ತಾಣಕ್ಕೆ ಬಂದು ನೆಲೆ ನಿಂತವರು ಪಾರುಮನೆ ಸುಬ್ರಾವ್ ಅವರು.
ಹೆಜ್ಜೇನು ಪ್ರಕಾಶನವನ್ನು ಆರಂಭಿಸಿ ಉದಯೋನ್ಮುಖ ಬರಹಗಾರರನ್ನು ಹುರಿದುಂಬಿಸಿದವರು. ಮೇ ೮ ನೇ ತಾರೀಖಿನಂದು ಅವರ ಪತ್ನಿ ಹೀರಾ ಬಾಯಿ ಅವರು ದಿವಂಗತರಾಗಿದ್ದರು. ಅಂದೇ ಅವರ ಉತ್ಸಾಹ ಶಕ್ತಿ ಉಡುಗಿ ಹೋಗಿತ್ತು.ನಾನು ಮಾತನಾಡಿಸಿದಾಗ ಅಳುವೊಂದೆ ಅವರ ಉತ್ತರವಾಗಿತ್ತು. ಮತ್ತೊಮ್ಮೆ ಅವರೆ ಪೋನು ಮಾಡಿ ಬಿಕ್ಕಿ ಬಿಕ್ಕಿ ಅತ್ತಿದ್ದರು.ನಾನು ಎಷ್ಟು ಸಮಾಧಾನದ ಮಾತು ಆಡಿದರು ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.ಕೆಲವು ದಿನಗಳ ಹಿಂದೆ ಕಲ್ಯಾಣ ನಗರದ ಅವರ ಮನೆಗೆ ಮಗ ಜಯದತ್ತನೊಂದಿಗೆ ಹೋಗಿ ಮಗಳು ಗೌತಮಿಯ ಮದುವೆಗೆ ಕರೆದು ಇಬ್ಬರಿಗು ವಂದಿಸಿ ಬಂದಿದ್ದೆ. ಮೇ ೭ ನೇ ತಾರೀಖಿನ ವರೆಗೆ ಅವರು ನನ್ನೊಂದಿಗೆ ಮಾತನಾಡುತ್ತಲೆ ಇದ್ದರು. ಮೇ ೪ ನೇ ತಾರೀಖಿನಂದು ಕರೆಮಾಡಿ ಶ್ರೀಪಾದ ಶೆಟ್ಟರೆ ನಾನು ಟ್ಯಾಕ್ಸಿ ಯವನಿಗೆ ಹೇಳಿ ಆಗಿದೆ. ಶಿರಸಿಯ ತೋಟಗಾರರ ಕಲ್ಯಾಣ ಮಂಟಪಕ್ಕೆ ನಾನು ಬರುತ್ತೇನೆ. ಎಲ್ಲರೂ ಅಕ್ಷತೆ ಹಾಕಿ ಬಂದ ನಂತರ ಕೊನೆಗೆ ನನಗೊಂದು ಅವಕಾಶ ಮಾಡಿಕೊಡಿ ಎಂದು ಕೇಳಿದ್ದರು. ಅದಕ್ಕೆ ಸರ್ ನಿಮ್ಮ ಆರೋಗ್ಯ ನನಗೆ ಬಹಳ ಮುಖ್ಯ. ಅಲ್ಲಿಂದಲೆ ಆಶೀರ್ವಾದ ಮಾಡಿ ಎಂದು ಹೇಳಿದರೂ ಅವರು ಕಿವಿಗೆ ಹಾಕಿಕೊಂಡವರಲ್ಲ. ನನ್ನ "ಹುಗಿದಿಟ್ಟ ಮೌನ"ಕವನ ಸಂಕಲನ ಮತ್ತು "ಹಲವು ಚೌಕಟ್ಟುಗಳ ಚಿತ್ರ" ವ್ಯಕ್ತಿ ಚಿತ್ರಗಳ ಸಂಕಲನದ ಪ್ರೂಫ್ ತಾನೆ ನೋಡಿಕೊಡುವುದಾಗಿ ನನ್ನಿಂದ ಅದನ್ನು ಪಡೆದು ಕವನ ಸಂಕಲನದ ಪ್ರೂಫ್ ನೋಡಿ ಪ್ರಕಾಶಕರಿಗೆ ತಾವೆ ಕೋರಿಯರ್ ಮೂಲಕ ಕವನ ಸಂಕಲನ ಕಳಿಸಿದ್ದರು.
ಅವರು ತಮ್ಮ ಎಂಬತ್ತೆಂಟರ ಹರೆಯದಲ್ಲಿ ವಾಟ್ಸಯಾಪ, ಫೇಸ್ ಬುಕ್ ಗಳಲ್ಲಿ ಬರೆಯುವುದನ್ನು ಕಲಿತವರು.ಆಲೋಚನೆ.ಕಾಂ.ಪತ್ರಿಕೆಯ ಲೇಖನಗಳಿಗೆ ಮತ್ತು ಆಲೋಚನೀಯ ಎಂಬ ನನ್ನ ಸಂಪಾದಕೀಯಕ್ಕೆ ಬಿಡದೆ ಓದಿ ಪ್ರತಿಕ್ರಿಯಿಸುತ್ತಿದ್ದರು.
ನನಗೆ ಕೋವಿಡ್ ಆಗಿ ಪರಿಸ್ಥಿತಿ ಕೈ ಮೀರುತ್ತದೆ ಎಂದು ಮನಗಂಡು ವಿಶ್ರಾಂತ ಪೋಲೀಸ್ ವರಿಷ್ಠ ಅಧಿಕಾರಿಗಳಾದ ಬಿ.ವಿ.ನಾಯಕ ಅವರಿಗೆ ವಿಷಯ ತಿಳಿಸಿ ಸೂಕ್ತ ಚಿಕಿತ್ಸೆ ದೊರೆಯುವಲ್ಲಿ ನೆರವಾಗಿದ್ದರು. ಮಂಗಳೂರಿನ ಡಿಸಿಪಿ ವಿನಯ ಗಾಂವಕರ ಜವಾಬ್ದಾರಿಯಿಂದ ಚಿಕಿತ್ಸೆಕೊಡಿಸಿ ನಾನು ಗುಣಮುಖನಾಗಿ ಬಂದಾಗ ಅವರು ನಿರಾಳವಾಗಿದ್ದರು.
" ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ" ಎಂಬ ಅನುನಯದ ರೀತಿ,ಗಂಗಾವಳಿ ನದಿಯಂತೆ ಬತ್ತಿ ಹೋಗದ ಪ್ರೀತಿ ಅವರದು.
ಉತ್ಸಾಹ ಶಕ್ತಿ,ಕ್ರಿಯಾ ಶಕ್ತಿ ಮತ್ತು ಇಚ್ಛಾಶಕ್ತಿಗಳ ತ್ರವೇಣಿ ಸಂಗಮವೆ ಅವರಾಗಿದ್ದರು. ಇನ್ನೊಬ್ಬರ ನೆರವಿಗೆ ಧಾವಿಸುವಲ್ಲಿ ಅವರಿಗೆ ಖುಷಿಯಿತ್ತು.ಅವರಲ್ಲಿಗೆ ನೆರವು ಯಾಚಿಸಿ ಬಂದವರಿಗೆ ಅವರು ಬದುಕಿನ ದಾರಿಯನ್ನೆ ತೋರಿದವರು.ಅವರ ಮಾರ್ಗದರ್ಶನ ಇಲ್ಲದೆ ಇದ್ದರೆ
' ದಿನಕರ ದೇಸಾಯಿ ಬದುಕು ಬರಹ' ಎಂಬ ನನ್ನ ಪಿಎಚ್,ಡಿ. ಪ್ರಬಂಧ ಕ.ವಿ.ವಿ ಧಾರವಾಡ ದಿಂದ ಪ್ರಕಟವಾಗುವುದು ಕಷ್ಟವೇ ಆಗಿತ್ತು. ಅದು ಇಡಿಯಾಗಿ ಪ್ರಸಾರಾಂಗ ದಿಂದಲೆ ಕಾನೂನು ರೀತ್ಯಾ ಪ್ರಕಟವಾಗುವಂತೆ ಅಲ್ಲಿಯ ನಾನು ಹೊನ್ನಾವರದಲ್ಲಿ ಕಟ್ಟುತ್ತಿರುವ ಮನೆಗೆ ಸಿರಾಮಿಕ್ ಟೈಲ್ಸನ್ನು ಹಾಕಲು ಹಿಚಕಡದ ಶಂಕರ ನಾಯಕ ಅವರ ಪರಿಚಯ ಮಾಡಿಕೊಟ್ಟು ಸಿಮೆಂಟಿನ ನೆಲಕ್ಕೆ ರೆಡ್ ಆಕ್ಷೈಡ್ ಬದಲು ಸಿರಾಮಿಕ್ ಟೈಲ್ಸ ಹಾಕಲು ಯೋಜನೆಯನ್ನು ರೂಪಿಸಿ ಇಡಿ ಮನೆಯ ಅಂದ ಹೆಚ್ಚಲು ಕಾರಣಾದುದಲ್ಲದೆ ಸುನಾದದ ಪ್ರವೇಶ ಸಮಾರಂಭಕ್ಕೆ ಸಪತ್ನಿಕರಾಗಿ ಮನೆಗೆ ಬಂದು ಹರಸಿದ ಅಪರೂಪದ ಸಜ್ಜನರು ಅವರು.ನಾಯಕರು ಅಂಕೋಲೆಗೆ ಬಂದಾಗ ನಾನು ಅವರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಅವರ ಬಂಧುಗಳಾದ ರಮೇಶ ಮಾಸ್ತರರು ನಮ್ಮ ಜೊತೆಗಿರುತ್ತಿದ್ದರು. ೨೦೦೮ ನೇ ಇಸ್ವಿಯಲ್ಲಿ ಕನ್ನಡದಲ್ಲಿ ಆ ವರೆಗೆ ಬಂದ ಆತ್ಮ ಚರಿತ್ರೆಗಳ ಸಮೀಕ್ಷೆಯನ್ನೊಳಗೊಂಡ "ಆಲಯಗಳ ಬಯಲು" ಎಂಬ೭೩೪ ಪುಟಗಳ ಅಭಿನಂದನಾ ಗ್ರಂಥವನ್ನು ಸಂಪಾದಕರಾದ ಡಾ.ಗುರುಪಾದ ಮರಿಗುದ್ದಿಯವರ ನಿರ್ದೇಶನದಲ್ಲಿ ನಾನು ಕ.ವಿ.ವಿಯ ಡಾ.ರಾಜೇಂದ್ರ ಎಂ. ನಾಯಕ,ಪ್ರಿರಾಜೇಂದ್ರ ನಾಯಕ ಸಗಡಗೇರಿ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿ,ಕವಿ ಚೆನ್ನವೀರ ಕಣವಿ, ಪ್ರೊ.ಜಿ.ಎಸ್.ಆಮೂರ ಅವರ ಹಿರಿತನದಲ್ಲಿ ನಾಡೋಜ ಡಾ.ಎಸ್ಆರ್.ನಾಯಕ ಅವರು ಸಪ್ತಾಪುರದ ಸಮುದಾಯ ಭವನದಲ್ಲಿ ಲೋಕಾರ್ಪಣೆ ಮಾಡಿದ್ದು ಈಗ ಒಂದು ಸ್ಮರಣೀಯ ನೆನಪು. ಆ ಸಂದರ್ಭದಲ್ಲಿ ಆಗಾಗ ಎದೆ ನೋವಿನಿಂದ ಬಳಲುತ್ತಿದ್ದ ನಾಯಕ ಅವರು ಪುಸ್ತಕ ಬಿಡುಗಡೆ ಆಗುವ ವರೆಗಾದರು ಬದುಕಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ.ಹತ್ತು ಹಲವು ಒಳ್ಳೆಯ ಕೆಲಸಗಳ ಮೂಲಕ ಜನ ಸೇವೆಯನ್ನು ಮಾಡಿದವರು ಅವರು. ಅವರ ಪತ್ನಿ ಹೀರಕ್ಕ ನಿಜವಾದ ಅರ್ಥದಲ್ಲಿ ಆ ಮನೆಯ ಅನ್ನಪೂರ್ಣೇಶ್ವರಿಯೇ ಆಗಿದ್ದರು.ಪತ್ನಿ ಅಗಲಿ ಸೂತಕ ಕಳೆಯುವ ಮುನ್ನ ಹತ್ತನೇ ದಿನದಲ್ಲಿ ಸುಬ್ರಾವ್ ಬೀರಣ್ಣ ನಾಯಕ ಪಾರುಮನೆಯವರು ನಮ್ಮನ್ನೆಲ್ಲ ಅಗಲಿದರು. ಕಲ್ಯಾಣ ನಗರದ ಸಮುದಾಯ ಭವನವು ಇನ್ನೇನು ಪೂರ್ಣಗೊಳ್ಳುತ್ತದೆ ಎನ್ನುವಾಗಲೆ ತಮ್ಮ ತೊಂಬತ್ತರ ಹೊಸ್ತಿಲಲ್ಲಿ ಹದಿನೆಂಟರ ಹರೆಯದ ಉತ್ಸಾಹಿ ಸುಬ್ರಾಯರು ಇನ್ನಿಲ್ಲವಾದರು.ಕರಾವಳಿಯ ಜೀವ ನದಿಯೊಂದು ಕಣ್ಮರೆಯಾಯಿತು.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.ಅವರ ಅಗಲುವಿಕೆಗೆ ಆಲೋಚನೆ.ಕಾಂ ಪತ್ರಿಕೆ ತನ್ನ ಅಶ್ರುತರ್ಪಣ ಸಲ್ಲಿಸುತ್ತಿದೆ.ಪಾರುಮನೆಯವರು ಬಿಟ್ಟು ಹೋದ ಪ್ರೀತಿ ಮತ್ತು ನೀತಿಯ ಬೆಳಕು ನಮ್ಮನ್ನು ಬೆಳಗುತ್ತಿರಲಿ.
ಡಾ.ಶ್ರೀಪಾದ ಶೆಟ್ಟಿ