ಸಂಗಾತಿಗಳೇ, "ಓ ಓ ಕಾಲಪುರುಷಂಗೆ ಗುಣಮಣಮಿಲ್ಲಂ ಗಡಾ!
ಒಡಲೊಳ್ ಗುಡುಗಟ್ಟುಗುಂ ಗಡಾ."
ರಾಮಾಶ್ವಮೇಧವನ್ನು ಕವಿ ಮುದ್ದಣ ಆರಂಭಿಸಿದ ಬಗೆ ಇದು.ಹಿಂದಿನ ಕವಿಗಳಂತೆ ದೇವತಾ ಸ್ತುತಿ, ಕುಕವಿ ನಿಂದೆ, ಕಾವ್ಯದ ಫಲಶ್ರುತಿಯನ್ನು ಹೇಳದೆ ಆತ ಮಳೆಗಾಲದ ಕಾಲಪುರುಷನ ವರ್ಣನೆ ಆರಂಭಿಸಿದ್ದು ಹೀಗೆ. ಈಗ ಉತ್ತರ ಕನ್ನಡದ ಕರಾವಳಿಯಲ್ಲಿ ಬಿಡದೆ ಸುರಿವ ಮುಸಲ ಧಾರೆ ಮುದ್ದಣನ ಮಾತನ್ನು ನೆನಪಿಸುತ್ತದೆ. ಕೊರೊನಾ ಹಾವಳಿಯಿಂದ ಕೆಲವು ಜನ ಅಸ್ವಸ್ಥರಾಗಿ,ಹಲವು ಜನ ಭಯದಿಂದ ಮಾನಸಿಕ ಅಸ್ವಸ್ಥರಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮುದ್ದಣ ಕವಿಯ ಮಾತು ಮತ್ತೆ ಮತ್ತೆ ನೆನಪಾಗುತಿದೆ.
ಕಾಲ ಪುರುಷನ ಗುಣವೆ ಹಾಗೆ,
ಏಕೆ ಕುಣಿವೆ ತಾಳತಪ್ಪಿ ಕಾಲ ಭೈರವ
ನಾಕ ಹೋಗಿ ನರಕವಾಯ್ತು ಸಾಕು ಮಾಡು ವೈರವ
ಎಂಬ ಕವಿ ವಾಣಿ ನೆನಪಾಯಿತು. " ಸಾವಿಗೆ ನಾವು ಹೆದರ ಬೇಕಾಗಿಲ್ಲ.ಯಾಕೆಂದರೆ ನಾವಿದ್ದಾಗ ಸಾವು ಬರುವುದಿಲ್ಲ.ಸಾವು ಬಂದಾಗ ನಾವು ಇರುವುದಿಲ್ಲ" ಎಂಬ ಮೇಧಾವಿಯೊಬ್ಬರ ಮಾತು ನೆನಪಾಗುತ್ತಿದೆ.
ವೈಯಕ್ತಿಕ ನೈರ್ಮಲ್ಯ, ಪ್ರತಿ ನಿತ್ಯ ದೈಹಿಕ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ, ಗುಣ ಮಟ್ಟದ ಆಹಾರ, ಸಕಾರಾತ್ಮಕ ಚಿಂತನೆ, ಪುಸ್ತಕಗಳ ಓದು, ಸಂಗೀತ ಕೇಳುವುದು, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿರುವುದು, ಬರವಣಿಗೆ, ಚಿತ್ರಕಲೆ, ನೃತ್ಯಾಭ್ಯಾಸ, ವೆಬಿನಾರ್ ಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. " ಕಾವ್ಯ ಶಾಸ್ತ್ರ ವಿನೋದೇನ ಕಾಲೊ ಗಚ್ಚತಿ ಧೀಮತಾಂ" ಎಂಬ ಸಂಸ್ಕೃತದ ಸೂಕ್ತಿಯಂತೆ ಕಾವ್ಯ ರಚನೆ, ಕಾವ್ಯದ ಓದು, ಶಾಸ್ತ್ರದ ಅಭ್ಯಾಸ ಹಾಗು ವಿನೋದದಲ್ಲಿ ಧೀಮಂತರು ತಮ್ಮ ಕಾಲವನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ. ನಾವು ಅದೆ ಬಗೆಯಲ್ಲಿ ಕಾಲವನ್ನು ಕಳೆದರೆ ಬದುಕು ಸಾರ್ಥಕ. ಆಲೋಚನೆ.ಕಾಮ್ ಆ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ವೇದಿಕೆಯಾಗಿ ತಮ್ಮೊಂದಿಗೆ ಖಂಡಿತ ಮುಂದಡಿಯಿಡುತ್ತಿದೆ.
ಈ ಕರೋನಾ ಸಂಕಟದ ಮಧ್ಯೆ ಪುಟ್ಟ ಮಕ್ಕಳನ್ನು ಆನ್ ಲೈನ್ ಕ್ಲಾಸಿಗೆ ನೂಕುವ ಹರ ಸಾಹಸವೊಂದು ನಡೆಯುತ್ತಿದೆ. ಮೇಷ್ಟ್ರು ಕೇಳಿದ್ದನ್ನೆಲ್ಲಾ ಮಕ್ಕಳಿಗೆ ಕೊಡಲು ಸದಾ ಸಿದ್ಧರಾಗಿರುವ ಪಾಲಕರು ಆ ಮಕ್ಕಳ ಮಿದುಳು, ಕಣ್ಣು, ಚಲನೆಗಳಿಗೆ ಬಂಧನವನ್ನು ಕಲ್ಪಿಸುತ್ತಿದ್ದಾರೆ. ಇದರಿಂದ ಬಿಡುಗಡೆ ಹೇಗೆ ಎಂಬ ಬಗ್ಗೆ ಮಕ್ಕಳ ಮನೋವಿಜ್ಞಾನಿಗಳು ಸಲಹೆ ನೀಡ ಬೇಕು. ಮಕ್ಕಳು ಈ ದೇಶದ ಭವಿಷ್ಯದ ರೂವಾರಿಗಳು ಅವರ ಬದುಕು ಅಯೋಮಯವಾಗದಂತೆ ಜಾಗ್ರತಿವಹಿಸುವುದು ಪ್ರಜ್ಞಾವಂತರ ಜವಾಬ್ದಾರಿ.
ದೇವಿಯ ಪ್ರಾರ್ಥನೆಯ ಮಂತ್ರದಲ್ಲಿ ಭಯದಿಂದ ನಮ್ಮನ್ನು ಕಾಪಾಡು ದೇವಿ ದುರ್ಗೆ ನಿನಗೆ ನಮೊಸ್ತುತೆ (ಭಯೇಭ್ಯೊ ಸ್ತ್ರಾಹಿನೊ ದೇವಿ ದುರ್ಗೆ ದೇವಿ ನಮೊಸ್ತುತೆ) ಎಂದಿದೆ. ಹಾವು ಕಚ್ಚಿ ಸಾಯುವವರು ಶೇಕಡಾ ಇಪ್ಪತ್ತರಷ್ಟು ಜನರಾದರೆ ಭಯದಿಂದ ಸಾಯುವವರು ಶೇಕಡಾ ಎಂಬತ್ತರಷ್ಟು ಜನ ಎಂಬ ಮಾತೊಂದಿದೆ. ಈ ಕಾಲದಲ್ಲಿ ತಾಳ್ಮೆಯಿಂದ ಬದುಕಿ ಕಾಲಯಾಪನೆ ಮಾಡುವುದು ಪರಮ ಪ್ರಯೋಜನ ಎಂಬ ಅರಿವಿನೊಂದಿಗೆ ಬಾಳೋಣ. ಆದಷ್ಟು ಹೆಚ್ಚು ಸಮಯ ಮನೆಯಲ್ಲಿಯೆ ಇರೋಣ.
ಡಾ.ಶ್ರೀಪಾದ ಶೆಟ್ಟಿ
ಸಂಪಾದಕ
ಸುಂದರ ಮಾತುಗಳು