ಸಂಗಾತಿಗಳೆ,
ನಿಮ್ಮೊಡನೆ ಈ ಮೂಲಕ ಸಂವಹನ ಸಾಧಿಸುವ ಖುಷಿ ಅನನ್ಯವಾದುದು. ಕರೋನಾ ಎಂಬ ವೈರಸ್ಸು ಕಾರಣವಾಗಿ ನಮ್ಮ ಆಚಾರ, ವಿಚಾರ, ಚಿಂತೆ, ಚಿಂತನೆಗಳೆಲ್ಲ ಬದಲಾಗಿವೆ. ಕೆಲವೆಡೆ ಪಲ್ಲಟವಾಗಿವೆ. ಕರೋನಾವನ್ನೆ ನೆಪ ಮಾಡಿಕೊಂಡು ದಿಕ್ಕು ತೋಚದವರಂತೆ ಕೆಲವರು ಇದ್ದಾರೆ. ಸುದ್ದಿ ಮಾಧ್ಯಮಗಳು ಬೆಂಕಿ ಬಿದ್ದ ಮನೆಯಿಂದ ಹಿರಿದುಕೊಂಡಷ್ಟು ಬಂತು ಎಂಬ ಹಾಗೆ ಭಯವನ್ನು ವಿಸ್ತರಿಸುತ್ತ, ಆತಂಕವನ್ನು ಸೃಷ್ಟಿಸುತ್ತಾ ನಿರಾಶಾವಾದದತ್ತ ಕರೊದೊಯ್ಯುತ್ತಿದ್ದಾರೆ. ಕರೋನಾ ಪೀಡೆಯಿಂದ ಬದುಕಿ ಬಂದವರ ಅನುಭವ ಕಥನವನ್ನು ಜನರೆದುರು ಇಡದೆ ಶವ ಸಂಸ್ಕಾರದಲ್ಲಿ ಆದ ಎಡವಟ್ಟುಗಳನ್ನು, ಆ ಸಂದರ್ಭದಲ್ಲಿ ನಡೆದ ಪ್ರತಿಭಟನೆಗಳನ್ನು ಜನ ಹೆದರುವಂತೆ ಮತ್ತು ಪ್ರತಿಭಟಿಸಲು ಸಜ್ಜಾಗುವಂತೆ ಮಾಡಲು ಪರೋಕ್ಷ ಪ್ರೇರಣೆ ನೀಡುವಂತಿದೆ ಅವರ ಟಿ.ಆರ್.ಪಿ.ಗಳಿಕೆಯ ಹುನ್ನಾರಗಳು. "ಯಾವುದು ನಿನ್ನ ಮನಸ್ಸಿಗೆ ವಿಷವಾಗುತ್ತದೆಯೊ ಅದರಿಂದ ದೂರ ಇರು" ಎಂದರು ಸ್ವಾಮಿ ವಿವೇಕಾನಂದರು. ಆದರೆ ಸ್ವಂತ ಲಾಭಕ್ಕಾಗಿ ಎಲ್ಲವನ್ನು ವಿಷಮಯ ಮಾಡುವವರಿಗೆ ಲೋಕಹಿತದ ಕಾಳಜಿ ಮೂಡುವುದು ಯಾವಾಗ!
ಮಹಾ ಕವಿ ಕುವೆಂಪು ಅವರು “ನಾನು ದಿನ ಪತ್ರಿಕೆಗಳ ಓದಿನಿಂದ ವಿಮುಖನಾಗುತ್ತಿದ್ದೇನೆ. ಮುಖಪುಟದಲ್ಲಿಯೆ ಕೊಲೆ, ಅತ್ಯಾಚಾರ,ಹಿಂಸೆಯ ಸುದ್ದಿಯನ್ನು ಪ್ರಕಟಿಸುವ ಪತ್ರಿಕೆಗಳು ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋದ ಬಂಗಾರದ ಒಡವೆಗಳನ್ನು ನಿಯತ್ತಿನಿಂದ ಮರಳಿಸಿದ ರಿಕ್ಷಾ ಮಾಲಿಕನ ಪ್ರಾಮಾಣಿಕ ನಡತೆಯ ಬಗ್ಗೆ ಎಲ್ಲೊ ಮೂಲೆಯಲ್ಲಿ ಸಣ್ಣ ಸುದ್ದಿ ಹಾಕುತ್ತಾರೆ” ಎಂದು ಒಮ್ಮೆ ಆಕ್ಷೇಪಿಸಿದ್ದು ನೆನಪಿಗೆ ಬರುತ್ತಿದೆ. ಇಂಗ್ಲೆಂಡ್ ನಂತಹ ಪ್ರಗತಿಪರ ರಾಷ್ಟ್ರದ ಪತ್ರಿಕೆಗಳು ಬಾಂಬ ಸ್ಪೋಟದ ಸುದ್ದಿಯನ್ನು ಮಧ್ಯದ ಪುಟದಲ್ಲಿ ಬರೆದು ಗಗನಯಾನ, ಹೊಸ ಸಂಶೋಧನೆಯ ಬಗ್ಗೆ ಮುಖಪುಟದಲ್ಲಿ ಸುದ್ದಿ ಮಾಡುತ್ತವೆಯಂತೆ.
ಈ ಸಂದರ್ಭದಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಹಲವು ದಾರಿಗಳು ನಮಗೆ ತೆರೆದೆ ಇವೆ. ಬರಹಗಾರರು, ಕಲಾವಿದರು, ಶಿಲ್ಪಿಗಳು, ಸಂಗೀತಗಾರರು ತಮ್ಮ ಕಲೆಗೆ ಹೊಸ ಆವಿಷ್ಕಾರವನ್ನು ನೀಡುವುದರೊಂದಿಗೆ ಅದಕ್ಕೆ ಗುರುತ್ವ ಮತ್ತು ಗಾಂಭೀರ್ಯದ ಸ್ಪರ್ಶವನ್ನು ನೀಡಲು ಸಾಧ್ಯ. ಹಣಗಳಿಕೆಯ ದಾಹ ಕ್ರಮೇಣ ಇಂಗುತ್ತಿದೆ. ಅದು ಕರೋನಾ ಕಾರಣವಾಗಿ. ಆದರೆ ಬದುಕನ್ನು ಕಟ್ಟಿಕೊಳ್ಳುವ, ಪ್ರಕೃತಿಯನ್ನು ಪ್ರೀತಿಸುವ, ಮಣ್ಣಿನಲ್ಲಿ ಬದುಕನ್ನು ಮತ್ತೆ ಚಿಗುರಿಸುವ ಕಾಲ ಬಂದಿದೆ. " ಕಾಳು ಇದೆ ಕೂಳು ಇಲ್ಲ; ಜನಕೆ ಹಣದ ಹುಚ್ಚು ಹಿಡಿದಿದೆ" ಎಂದ ಕವಿ ಬೇಂದ್ರೆಯವರು 'ಅನ್ನಯಜ್ಞ’ ಕವನದಲ್ಲಿ 'ಅನ್ನದಲ್ಲಿ ಮಣ್ಣ ಕಲಸ ಬೇಡಿ ಅಣ್ಣಗಳಿರಾ' ಎಂದು ಕಳೆದ ಶತಮಾನದ ೪೦ ರ ದಶಕದಲ್ಲಿ ವರಕವಿ ಅಲವತ್ತಿಕೊಂಡಿದ್ದರು." ನಾವು ಮನುಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗಲು ಹುಟ್ಟಿದ್ದೇವೆ" ಎಂಬ ಯಶವಂತ ಚಿತ್ತಾಲರ ಮಾತು ನಮಗೆ ನೆನಪಿನಲ್ಲಿ ಇರಬೇಕು. ನೋಟು ಮತ್ತು ನೋಟ ಎಂಬ ತಮ್ಮ ಲೇಖನವೊಂದರಲ್ಲಿ ನಮ್ಮ ಸಂಪಾದಕರಾದ ಶ್ರೀಪಾದ ಹೆಗಡೆಯವರು “ನೋಟಿನ ಮೇಲಿನ ನಮ್ಮ ನೋಟವು ಅಮಾನವೀಯಗೊಳ್ಳುತ್ತ ನೋಟು ತಾನು ಬೆಳೆದು ನಮ್ಮನ್ನು ಟೊಳ್ಳಾಗಿಸುತ್ತದೆ. ನೋಟಿನ ಮೇಲಿನ ನಮ್ಮ ನೋಟದಲ್ಲಿ ನಾವು ನಮ್ಮನ್ನು ಕಳೆದುಕೊಳ್ಳದಂತೆ ಬದುಕುವುದಕ್ಕೆ ಒಂದೇ ಮಾರ್ಗವೆಂದರೆ ಕಲೆಗೆ ಒಳಗಾಗುವುದು" ಎಂಬ ಮಾತು ಇಲ್ಲಿ ಉಲ್ಲೇಖನಾರ್ಹ. ಕರೋನಾ ಕಾಲದಲ್ಲಿ ಸೃಷ್ಟಿಯಾದ ಈ ಏಕಾಂತವನ್ನು ಸದುಪಯೋಗ ಮಾಡಿಕೊಳ್ಳೋಣ. ಬ್ರಾಹ್ಮಣಕಗಳು, ಅರಣ್ಯಕಗಳು, ಉಪನಿಷತ್ತುಗಳು ಋಷಿಗಳ ಆಶ್ರಮದಲ್ಲಿ ಏಕಾಂತದಲ್ಲಿ ಸೃಷ್ಟಿಯಾದವು. ಹಾಗೆ ಇಂತಹ ಏಕಾಂತ, ಮೌನ ಮತ್ತು ಧ್ಯಾನಸ್ಥ ಸ್ಥಿತಿಯನ್ನು ಜೀವನವನ್ನೆ ಕಲೆಯಾಗಿ ರೂಪಿಸಲು ದುಡಿಸಿಕೊಳ್ಳೋಣ.
ಡಾ. ಶ್ರೀಪಾದ ಶೆಟ್ಟಿ
Comments