top of page

ಆಲೋಚನೀಯ - 12

ಅಭಿನಂದನೆಯ ನುಡಿಡಾ.ರಾಮಕೃಷ್ಣ ಗುಂದಿ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಸಂದಾಯವಾಗಿದೆ. ಪ್ರಭಾವಿ ಪ್ರಧ್ಯಾಪಕ, ಕತೆಗಾರ,ಯಕ್ಷಗಾನದ ಅಭಿಜಾತ ಕಲಾವಿದ ಪ್ರೊ.ರಾಮಕೃಷ್ಣ ಗಣಪು ಗುಂದಿ ಸಹಜ, ಸರಳ, ಸಜ್ಜನ, ಸ್ನೇಹ ಜೀವಿ. ತರಗತಿಗಯಲ್ಲಿ ಪಾಠ ಮಾಡುವಾಗ ಅವರ ಉಪನ್ಯಾಸ, ಹಾವ, ಭಾವ, ಅಭಿವ್ಯಕ್ತಿ, ನಿರೂಪಣೆಯ ರೀತಿ ಎಲ್ಲವೂ ಚಿತ್ತಾಪಹಾರಿ. ನಾಟಕದ ಕಲಾವಿದರಿಗೆ ಅಂಕೋಲೆಯ ಜಿ.ಸಿ.ಕಾಲೇಜಿನ ಅಭಿನಯ ಮಂಟಪ, ಕರ್ನಾಟಕ ಮಠಾಧಿಪತಿಗಳನ್ನು, ಬಸಂತ(ಬಂಡಾಯ ಸಂಘಟನೆಯ ತಂಡ ಬೀದಿ ನಾಟಕ) ದಲ್ಲಿ ಅನುರಣನ ಉಂಟು ಮಾಡಿದವರು. ಅವರೊಂದಿಗೆ ಕಲಾವಿದನಾಗಿ, ನಿರ್ದೇಶಕನಾಗಿ, ಬೀದಿ ನಾಟಕದ ಸ್ಕ್ರಿಪ್ಟ ಬರಹಗಾರನಾಗಿ ಪಾಲ್ಗೊಂಡವನು ನಾನು. ಮೋಹನ ಹಬ್ಬು, ಶ್ಯಾಮ ಹುದ್ದಾರ, ಸುರೇಂದ್ರ ದಫೇದಾರ, ಕೃಷ್ಣ ನಾಯಕ ಹಿಚಕಡ, ಪ್ರಕಾಶ ಶೆಟ್ಟಿ ಕಡಮೆ, ಹುದ್ದಾರರ ಮಕ್ಕಳು, ಪೂರ್ಣಿಮಾ ಗಾಂವಕರ, ಶಾಂತಾರಾಮ ಹಿಚಕಡ, ವಿಷ್ಣು ನಾಯ್ಕ ಎಲ್ಲರೂ ಪಾಲ್ಗೊಂಡ ದಿನಗಳವು.ಎಂಬತ್ತರ ದಶಕದಲ್ಲಿ ಅಂಕೋಲೆಯ ತಹಶಿಲ್ದಾರ ಆಗಿದ್ದ ವ್ಯಾಸ ದೇಶಪಾಂಡೆ ಅವರು ನಾಟಕಕಾರ, ನಟ, ನಿರ್ದೇಶಕರಾಗಿ ನಮ್ಮ ನಾಟಕ ತಂಡದಲ್ಲಿ ಸಂಚಲನವನ್ನುಂಟು ಮಾಡಿದವರು.


ಎ.ಎಸ್ ಮೂರ್ತಿ ಅವರ ಕಟ್ಟು ಎಂಬ ಬೀದಿ ನಾಟಕ ಸ್ವರೂಪದ ನಾಟಕವನ್ನು ಅಂಕೋಲೆಯ ಕರ್ನಾಟಕ ಸಂಘದವತಿಯಿಂದ ಆಡಿ ಜಿಲ್ಲೆಗೆ ಪ್ರಥಮ ಪ್ರಶಸ್ತಿ ಪಡೆದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಿದೆವು. ಬೆಂಗಳೂರಿನ ರಂಗ ತಾಲೀಮು, ಬದಲಾದ ಪರಿಸರದಿಂದ ನಾಟಕ ನಮಗೆ ಸಮಾಧಾನ ನೀಡಲಿಲ್ಲ. ಮೇಕಪ್ ಕಳಚಿ ನಮ್ಮೆದುರು ಬಂದ ಡಾ.ಗುಂದಿಯವರ ಅಳುವನ್ನು ನಿಲ್ಲಿಸಲಾಗಲಿಲ್ಲ. ಆದರೆ ಮುಂದೆ ಅವರು ಅದನ್ನೆಲ್ಲ ಮೀರಿ ಏಕಮೇವಾದ್ವಿತಿಯ ನಟರಾಗಿ ಗಮನ ಸೆಳೆದರು.


ರಾಮಕೃಷ್ಣ   ಗುಂದಿಯವರ ಯಕ್ಷಗಾನ ಪಾತ್ರಗಳಿಗೆ ಜಿಲ್ಲಾ ಮಟ್ಟದಲ್ಲಿ ಇನ್ನಿಲ್ಲದ ಬೇಡಿಕೆ. ಅವರು ಶನಿವಾರ ಮತ್ತು ರವಿವಾರ ಮಾತ್ರ ತಮ್ಮ ಅಧ್ಯಾಪನಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಿ ಅದ್ಭುತವಾದ ಅಭಿನಯದಿಂದ ಪ್ರತೀತ ಯಶರಾಗಿದ್ದರು. ಗುಂದಿಯವರ ಗದಾ ಪರ್ವದ ಕೌರವ, ಕಂಸ ವಧೆಯ ಕೃಷ್ಣ, ವಿಶ್ವಾಮಿತ್ರ, ಕೃಷ್ಣ, ಶಿಶುಪಾಲ, ರಾವಣ ಹಾಗೆ ಇನ್ನು ಬಹಳಷ್ಟು ಪಾತ್ರಗಳಲ್ಲಿ ಅವರದು ಆಕರ್ಷಕ ಅಭಿನಯ,ಗಮನ ಸೆಳೆವ ಮಾತುಗಾರಿಕೆ,ಕಣ್ಮನವ ಸೆಳೆವ ಕಾಲಾಟ,ಹಾವ ಭಾವ ಒಂದೊಂದು ಅಚ್ಚರಿ.ಅವರು ಸಾಲಿಗ್ರಾಮ, ಅಮೃತೇಶ್ವರಿ ಮೇಳದ ಟೆಂಟ ಆಟದಲ್ಲಿ ಕಲಾವಿದರಾಗಿ  ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಂತಹ ಮೇರು ನಟರೊಂದಿಗೆ ಸೈ ಸೈ ಎನ್ನುವಂತೆ ಅಭಿನಯಿಸಿ ಆ ಮೇಳದ ಗಲ್ಲಾಪೆಟ್ಟಿಗೆ ತುಂಬಲು ಕಾರಣರಾಗಿದ್ದಾರೆ.


ಪದಕ್ಕೆ ಹಿತವಾಗುವಷ್ಟು ಕುಣಿತ,ಔಚಿತ್ಯ ಪ್ರಜ್ಞೆಯನ್ನು ಮೀರದ ಮಾತುಗಾರಿಕೆ,ಎದುರಾಳಿಯ ಮಾತಿಗೆ ಮುನಿಯದೆ ಪ್ರತ್ಯುತ್ಪನ್ನ ಮತಿಯಿಂದ ಕೊಡುವ ಉತ್ತರ ಅವರನ್ನು ತಾರಾ ಮೌಲ್ಯವುಳ್ಳ ಕಲಾವಿದನನ್ನಾಗಿ ರೂಪಿಸಿದ್ದು ಸತ್ಯಸ್ಯ ಸತ್ಯ. ಗದಾಪರ್ವದ ಕೌರವನ ಪಾತ್ರ ಮಾಡಲು ನನ್ನ ಊರಾದ ಮುಗ್ವಾಕ್ಕೆ ಅವರನ್ನು ಕರೆಸಿಕೊಂಡು ಸಂಜಯನ ಪಾತ್ರ ಮಾಡಿದ್ದೆ.ಜಿ.ಸಿ.ಕಾಲೇಜಿನ ಆರ್ಟ ಸರ್ಕಲ್ ವತಿಯಿಂದ ಶಿಷ್ಯ ಭಾಗವತ ಬೊಮ್ಮಯ್ಯ ಗಾಂವಕರ ಅವರ ನಿರ್ದೇಶನದಲ್ಲಿ ಗುಂದಿಯವರು ಭೀಷ್ಮನಾಗಿ ನಾನು ಸಾಲ್ವನಾಗಿ ಅರ್ಥ ಹೇಳಿದ್ದು ಈಗಲು ಹಸಿರಾದ ಸವಿ ನೆನಪು.


ಕರ್ನಾಟಕ ಯಕ್ಷಗಾನ ಅಕಾಡೆಮಿ ರಾಮಕೃಷ್ಣ ಗುಂದಿಯವರ ಅಭಿನಯದ ಸಾಕ್ಷ್ಯ ಚಿತ್ರ ಮಾಡಿ ನೆನಪುಳಿಯುವಂತಹ ಕೆಲಸ ಮಾಡಿದೆ. ಗುಂದಿಯವರು ಪ್ರಶಸ್ತಿಗೆ ಲಾಭಿ ಮಾಡುವವರಲ್ಲ. ರಾಜಕೀಯ ದುರಂಧರರ, ಮಠಾಧಿಪತಿಗಳನ್ನು ಎಡತಾಕಿ ಅಧ್ಯಕ್ಷ ಪದವಿಗೆ ದುಂಬಾಲು ಬಿದ್ದವರಲ್ಲ. ಜಾತಿಯ ಕೂಪದಲ್ಲಿ ಕುದಿದು ಬಸವಳಿದ ಅವರಿಗೆ ಜಾತಿ ಲಾಬಿ ಮಾಡಲು ಗಾಡ್ ಫಾದರುಗಳಿಲ್ಲ. Better  late than never ಎಂಬಂತೆ ಅವರಿಗೆ ಪ್ರಶಸ್ತಿ ಬಂದ ಸಂಭ್ರಮವನ್ನು ನಾವು ಹಂಚಿಕೊಂಡು ಅವರನ್ನು ಮನಸಾರೆ ಅಭಿನಂದಿಸೋಣ. ಪತಿಯ ಪ್ರಶಸ್ತಿಯನ್ನು ಮೌನ ಮತ್ತು ವಿನಯದಿಂದ ಒಪ್ಪಿಕೊಂಡ ನನ್ನ ಸಹೋದರಿ ನಿರ್ಮಲಾ ಗುಂದಿ, ಅವರ ಮಕ್ಕಳಾದ ಸಚಿನ್ ಅವನ ಕುಟುಂಬ, ನಟ ಅಭಿಷೇಕ ಮತ್ತು ಅವರ ಕುಟುಂಬದ ಎಲ್ಲರಿಗೆ ನನ್ನ ಹಾರ್ದಿಕ ಅಭಿನಂದನೆಗಳು.


         =000=

            
  ಡಾ.ಶ್ರೀಪಾದ ಶೆಟ್ಟಿ. 

54 views4 comments
bottom of page