top of page

ಆಲೋಚನೀಯ - ೮


ಚವತಿ ಹಬ್ಬವನ್ನು ದೇಶದ ಬಹಳ ಕಡೆಗಳಲ್ಲಿ ಭಕ್ತಿ ಮತ್ತು ಶೃದ್ಧೆಯಿಂದ ಸ್ವಾತಂತ್ರ್ಯ ಪೂರ್ವದಿಂದ  ಆಚರಿಸುತ್ತಾ ಬಂದಿದ್ದಾರೆ. ಜನರ ಶೃದ್ಧಾ ಕೇಂದ್ರವನ್ನು ಸಾರ್ವಜನಿಕ ಗಣಪತಿ ಉತ್ಸವದ ಮೂಲಕ ಏಕತ್ರಗೊಳಿಸಬೇಕೆಂದು ಬಾಲಗಂಗಾಧರ ತಿಲಕರು ಇದನ್ನು ಮಹಾರಾಷ್ಟ್ರದಲ್ಲಿ ಆರಂಭಿಸಿದವರು. ಅದು ಅತ್ಯಂತ ವರ್ಣರಂಜಿತವಾಗಿ ಈ ವರೆಗೆ ನಡೆಯುತ್ತಲೆ ಬಂದಿದೆ. ಎಂಬತ್ತರ ದಶಕದಲ್ಲಿ ನಮ್ಮ ರಾಜ್ಯಕ್ಕೆ ದೂರ ದರ್ಶನ ಬಂದಿತು. ಅದರಲ್ಲಿ ನಾವು ಬಹುಪಾಲು ಮರಾಠಿ ಕಾರ್ಯಕ್ರಮಗಳನ್ನು ನೋಡುವುದು ಅನಿವಾರದಯವಾಗಿತ್ತು. ಎಂಟೇನಾ,ಡಿಶ್ ಆ ಬಳಿಕ ಕೇಬಲ್ ಟಿವಿ ಬಂದು ಈಗ ಬಹು ಭಾಷೆಯ ಕಾರ್ಯಕ್ರಮ ನೋಡಲು ಸಾಧ್ಯವಾಗಿದೆ. ಗಣಪತಿಗೆ ಸಂಬಂಧಿಸಿದ ಮರಾಠಿ ಹಾಡು,ನೃತ್ಯ,ಮೆರವಣಿಗೆ ಒಂದೊಂದು ಚಿತ್ತಾಪಹಾರಿ. ಈಗ ಕೋವಿಡ್-೧೯ ರ ನಿಮಿತ್ತ ಇಂತಹ ಆಚರಣೆಗೆ ಮಿತಿಯನ್ನು ಹಾಕಿದ್ದು ಸೂಕ್ತ.


‌‌‌‌‌‌‌ಗಣಪತಿ ಮಣ್ಣಿನ ಮಗ ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿ ಸೃಷ್ಟಿಸಿದ ಕತೆ ಎಲ್ಲರಿಗೂ ಗೊತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ೨೬ ರಾತ್ರಿ ೨೭ ದಿನ ಜೈಲುವಾಸ ಅನುಭವಿಸಿದ ನಮ್ಮೆಲ್ಲರ ಪ್ರೀತಿಯ ಕವಿ ಚಂದ್ರಶೇಖರ ಪಾಟೀಲರು"ಓ ಎನ್ನ ದೇಶ ಬಾಂಧವರೆ" ಎಂಬ ಕವನ ಸಂಕಲನದಲ್ಲಿ ಪಾರೋತಮ್ಮನ ಮೂರುತಿ ಎಂಬ ಕವನ ಬರೆದರು. ಇಂದಿರಾ ಮತ್ತು ಸಂಜಯ ಗಂಧಿಯವರ ಕುರಿತು ಅವರು ಬರೆದ ಆ ಕಾಲದ ಜನಪ್ರಿಯ ಕವಿತೆಯಾಗಿತ್ತು. ಚಂಪಾ ಅವರ ಬಾಯಿಯಿಂದ ಆ ಕವಿತೆ ಕೇಳುವ ಸುಖವೆ ಬೇರೆ.


ಅಗಷ್ಟ ಕೊನೆ ಮತ್ತು ಸಪ್ಟಂಬರ ಮೊದಲ ವಾರದಲ್ಲಿ ಚವತಿ ಹಬ್ಬ ಬರುತ್ತದೆ.ಮಳೆಯ ನೀರನ್ನು, ಗೊಬ್ಬರವನ್ನು ಉಂಡ ಭೂಮಿಯಲ್ಲಿ ಭತ್ತದ ತೆನೆಗಳು ಹಾಲು ತುಂಬಿ ತೊನೆದಾಡುವುದನ್ನು ನೋಡುವುದೆ ಒಂದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ನಿಸರ್ಗ ಸ್ವರ್ಗವನ್ನು ಕಣ್ಣಿಗೆ ತುಂಬಿಕೊಳ್ಳುವುದೆ ಒಂದು ಹಬ್ಬ. ಉತ್ತರ ಕನ್ನಡದ ರೈತನನ್ನು ಬಡವ ಎಂದು ಕರೆದ ದಿನಕರ ದೇಸಾಯಿಯವರು ಇಲ್ಲಿಯ ಕಡಿಮೆ ಹಿಡುವಳಿ ಹೊಂದಿದ ಭೂಮಾಲಿಕರನ್ಮು ಗಂಜಿ ತೆಳಿಯ ಜಮಿನ್ದಾರರು ಎಂದು  ಕರೆದರು. ರೈತ ಕೂಟವನ್ನು ಕಟ್ಟಿದರು,ಲೇವಿ ಬಕಾಸುರ ಪ್ರತಿಕೃತಿಗೆ ಬೆಳಂಬಾರದ ಭೀಮ ಗೌಡರಿಂದ ಬೆಂಕಿ ಹಚ್ಚಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದರು." ರೈತರು ಕೂಟವ ಕಟ್ಟಿದರೊ ಒಡೆದಿರು ಘಟ್ಟವ ಹತ್ತಿದರೊ" ಎಂದು ಹಾಡು ಬರೆದರು.ಹಾಲಕ್ಕಿಗಳ ಗುಮಟೆ ಪಾಂಗಿನಲ್ಲಿ ಆ ಹಾಡು ಜನಪ್ರೀಯವಾಯಿತು.


ಇಂತಹ ಪ್ರತಿಭಟನೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಂದ ಕನ್ನಡಿಗರ ಕಣ್ಮಣಿಯಾದ ಡಿ.ದೇವರಾಜ ಅರಸು ಅವರು ಊಳುವವನೆ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದರು. ಹಿಂದುಳಿದ ವರ್ಗದ ಆಯೋಗವನ್ನು ರಚಿಸಿದರು,ಮೈಸೂರು ರಾಜ್ಯ ಅವರ ಕಾಲದಲ್ಲಿ ಕರ್ನಾಟಕ ಎಂದು ನಾಮಕರಣಗೊಂಡಿತು.


ಈಗ ಊಳುವವನೆ ಒಡೆಯ ಎಂಬ ಭೂ ಸುಧಾರಣೆ ಕಾನೂನಿಗೆ ತಿದ್ದುಪಡಿ ವಿಧೇಯಕ ಮಂಡನೆಯಾಗಿ ಅದು ಕಾನೂನು ಆಯಿತು.  ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್,ಪರಿಸರ ತಜ್ಞ   ಅ.ನ‌.ಯಲ್ಲಪ್ಪ ರೆಡ್ಡಿಯವರು ಇದನ್ನು ಪ್ರಶ್ನಿಸಿದ್ದಾರೆ. ಆದರೆ ಬಹುಮತದ ವ್ಯವಹಾರದಲ್ಲಿ ಇದು ನಿಲ್ಲುತ್ತದೆ  ಎಂಬ ನಂಬಿಕೆ ಇಲ್ಲ. ಜಮಿನ್ದಾರರನ್ನು,ಕಾರ್ಪೋರೇಟ ಜಗತ್ತಿನ ದಣಿಗಳನ್ನು ಓಲೈಸುವಲ್ಲಿ ಸರಕಾರಗಳು ತೊಡಗಿಕೊಂಡಿರುವ ಗುಮಾನಿ ಬಿಡದೆ ಕಾಡುತ್ತಿದೆ.


ಪ್ರಜಾಪ್ರಭುತ್ವದ ಆಶಯ ಮತ್ತು ಆದರ್ಶಗಳನ್ನು ಶೋ ಕಪಾಟಿನಲ್ಲಿ ಕಾದಿಡುವ ಪ್ರಯತ್ನ ನಡೆಯುತ್ತಾ ಇದೆ. ಜೈ ಜವಾನ ಜೈ ಕಿಸಾನ್ ಎಂದು ಉದ್ಘೋಷ ಮಾಡುವ ಆಳುವ ಪ್ರಭುಗಳು ಅವರ ಬುಡಕ್ಕೆ ಬಂದ ಬೆಂಕಿಯನ್ನು ನಂದಿಸಿ ನೆಮ್ಮದಿಯನ್ನು ಕೊಡುವ ವಿಚಾರಕ್ಕೆ ಸಜ್ಜುಗೊಳ್ಳಲು ಇನ್ನೆಷ್ಟು ಕಾಲ ಬೇಕೊ ಏನೋ! ಹದಿನಾಲ್ಕನೆ ಶತಮಾನದ ವೈಯಾಕರಣಿ ಕೇಶಿರಾಜ ತನ್ನ ಶಬ್ದಮಣಿದರ್ಪಣ ದಲ್ಲಿ " ಜನಮೆಂಬುದು ನಪುಂಸಕ ಲಿಂಗ" ಎಂದು ಹೇಳಿದ. ಅದಕ್ಕೆ ಉದಾಹರಣೆ: ಜನ ಬಂದುದು, ಜನ ಹೋದುದು ಎನ್ನುತ್ತಾನೆ.ಅದರ ವಾಚ್ಯಾರ್ಥವನ್ನು ಮೀರಿ ನಮ್ಮ ಜನರನ್ನು ನಪುಂಸಕರನ್ನಾಗಿಸುವ ವ್ಯವಸ್ಥೆಯಿಂದ ಹೊರ ಬರುವ ಮಾರ್ಗೋಪಾಯಗಳನ್ನು ನೀವೆ ಆಲೋಚಿಸಿ ಹೇಳಿರಿ.



          ‌‌‌‌ ‌            



       ಡಾ.ಶ್ರೀಪಾದ ಶೆಟ್ಟಿ 

ಸಂಪಾದಕ

 
 
 

Comentários


©Alochane.com 

bottom of page