top of page

ಆಲೋಚನೀಯ- ೭

ಅಗಷ್ಟ ೧೫ ಭಾರತೀಯರ ಬದುಕಿನಲ್ಲಿ ಅತ್ಯಂತ ಮಹತ್ವದ ದಿನ.ಬಹಳ ಕಾಲದಿಂದಲೂ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದು ಹೇಳುತ್ತಲೆ ಬಂದಿದ್ದೇವೆ‌.ಹೀಗೆ ಹೇಳುತ್ತಲೆ ನಾವು ನಮ್ಮ ಚಿನ್ನದ ಉತ್ಪಾದನೆ,ದೇಶದ ಉತ್ಪಾದಕ ಶಕ್ತಿಯ ಅಭಿವೃದ್ಧಿಯ ಬಗ್ಗೆ ನಿರಂತರ ಗಮನ ಹರಿಸ ಬೇಕಾಗಿದೆ.ನಮ್ಮ ಅರ್ಥಶಾಸ್ತ್ರಜ್ಞರ "ಭಾರತ ಶ್ರೀಮಂತ ದೇಶ ಆದರೆ ಇಲ್ಲಿಯ ನಿವಾಸಿಗಳು ಬಡವರು."( India is a rich country but its inhabitants are poor) ಎಂಬ ಹೇಳಿಕೆಯನ್ನು ಅಲ್ಲಗಳೆಯುವ ಶಕ್ತಿ,ಸಾಮರ್ಥ್ಯ ನಮ್ಮದಾಗ ಬೇಕಾಗಿದೆ. ೭೫ ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ಅಭಿವೃದ್ಧಿಯ ಮಂತ್ರ ಸಿದ್ಧಿಸ ಬೇಕಾಗಿದೆ.

        ಮಹಾತ್ಮಾ ಗಾಂಧೀಜಿಯವರ ೧೫೦ ನೇಯ ವರ್ಷಾಚರಣೆಯ ಕಾಲದಲ್ಲಿ ನಾವಿದ್ದೇವೆ.ನನ್ನ ಜೀವನವೆ ನನ್ನ ಸಂದೇಶ ಎಂದ ಗಾಂಧೀಜಿ ನಮಗೆ ಹಿಂದೆ,ಇಂದು ಮತ್ತು ಮುಂದೆ ಪ್ರಸ್ತುತವಾಗಿರುವಂಥ ವ್ಯಕ್ತಿ.ಅರೆ ಬೆತ್ತಲೆಯ ಫಕೀರ

ಎಂದು ಕರೆಸಿಕೊಂಡ ಗಾಂಧೀಜಿ ಭಾರತದ ಸ್ವಾತಂತ್ರ್ಯದ ಭಾಗ್ಯಶಿಲ್ಪಿಯು ಹೌದು.ಅವರ ಅಂತ್ಯ ನಮ್ಮ ಬುದ್ದಿ ಮತ್ತು ವಿವೇಚನಾ ಶಕ್ತಿಯ ದಾರಿದ್ರ್ಯದ  ಉದಾಹರಣೆಯಾಗಿ ಸದಾಕಾಲ ಕಾಡುತ್ತದೆ.ಅಹಿಂಸೆಯ ಸಂತನೊಬ್ಬನ ಅಂತ್ಯ ಹಿಂಸೆಯಿಂದ ಆದದ್ದು ಇತಿಹಾಸದ ಕ್ರೂರ ವ್ಯಂಗ್ಯ ಎಂದು ಅಂದಿನ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ರೇಡಿಯೊ  ಭಾಷಣದಲ್ಲಿ ಕಂಬನಿ ಮಿಡಿದರು.

      ದೇಶದ ಸಮೃದ್ಧಿಗೆ ನಮ್ಮ ಜನರ ಸಾಕ್ಷರತೆ,ತಾಂತ್ರಿಕ ಕೌಶಲ್ಯ,ಆತ್ಮ ವಿಶ್ವಾಸ,ದೇಶ ಪ್ರೇಮ ಹೆಚ್ಚ ಬೇಕಾಗಿದೆ. ಜನ ಸಂಖ್ಯೆಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತೀಯರು ಭ್ರಷ್ಟಾಚಾರದಲ್ಲಿಯು ಬಹಳಷ್ಟು ದೇಶಗಳಿಗಿಂತ ಮುಂದೆ ಇದ್ದೇವೆ ಎಂಬುದು ನಾಚಿಕೆಗೇಡಿನ ಸಂಗತಿ. ಕೊರೊನಾ ಕಾಲದಲ್ಲಿಯು ಬೆಂಕಿ ಬಿದ್ದ ಮನೆಯ ಗಳ ಹಿರಿದುಕೊಂಡಂತೆ ನಮ್ಮ ಅಧಿಕಾರಿಗಳು ಮತ್ತು ರಾಜಕಾರಣಿಗಳು  ವೆಂಟಿಲೇಟರ್ ಪಿ.ಪಿ.ಕಿಟ್,ಮಾಸ್ಕ,ಔಷಧಿ,ಉಪಕರಣ ಖರೀದಿಯಲ್ಲಿ  ಭ್ರಷ್ಟಾಚಾರವೆಸಗಿದ್ದು ಗುಟ್ಟಾಗಿ ಉಳಿದಿಲ್ಲ.ಆನ್ ಲೈನ್ ಕಲಿಕೆಯು ಹಣ ಪೀಕುವ ದಂದೆಯಾಗದೆ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಪವಿತ್ರ ಕಾಯಕದಲ್ಲಿಅದರ ಹೊಣೆ ಹೊತ್ತವರು ತೊಡಗಿಕೊಳ್ಳ ಬೇಕಾಗಿದೆ.ಪ್ರದಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದಂತೆ ಪರಿಸರ ಅಭಿವೃದ್ಧಿ ಮತ್ತು ಅರಣ್ಯ ರಕ್ಷಣೆ,ಪೆಟ್ರೋಲಿಗೆ ಪರ್ಯಾಯವಾಗಿ ಎಥೆನಾಲ್ ಉತ್ಪಾದನೆ,ಹುಲಿ ಮತ್ತು ಆನೆಗಳ ಸಂತತಿಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸುವ ಬಗ್ಗೆ ಮಾತನಾಡಿದ್ದಾರೆ.

ನಮ್ಮ ದೇಶ ವಾಸಿಗಳಲ್ಲಿ ರಾಷ್ಟ್ರಾಭಿಮಾನ ಉದ್ದೀಪನಗೊಳ್ಳಬೇಕಾದ ಅಗತ್ಯ ಇಂದಿನದು.

" ನನ್ನದು ಈ ದೇಶ ನನ್ನದು ಈ ನಾಡು

   ಎನ್ನದ ಮಾನವನೆದೆ ಸುಡುಗಾಡು" ಎಂಬ ಕುವೆಂಪು ಕವಿವಾಣಿ ನಮ್ಮನ್ನೆಲ್ಲ ಎಚ್ಚರಿಸುತ್ತಿರಲಿ.  ಸಕಾರಾತ್ಮಕವಾದ ಚಿಂತನೆ,ವಿಧಾಯಕ ಆಲೋಚನೆ,ಪ್ರಗತಿಪರ ನಿಲುವು ಮತ್ತು ನಿಸ್ಪೃಹತೆಯಿಂದ ಈ ದೇಶದ ಆಭಿವೃದ್ಧಿಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯು ತನ್ನದೆ ಆದ ಕೊಡುಗೆಯನ್ನು ಸಲ್ಲಿಸುತ್ತಾ ಇರಲಿ.ಎಲ್ಲರೂ ಸಮೃದ್ಧಿ ಮತ್ತು ಆನಂದದಿಂದ ಬದುಕುವ ಕಾಲ ಬರಲಿ ಎಂದು ಇಂದಿನ ಈ ಪರ್ವದಿನದಲ್ಲಿ ಹಾರೈಸುತ್ತೇನೆ.


"ಆಡುತಿಹುದೊ ಒಳಗು ಹೊರಗು ಒಂದೇ ಉಸಿರು

ಎಲ್ಲ ಚೇತನಕದುವೆ ಚೈತನ್ಯವು

ನಾದದಲಿ ಅದುವೆ ಪ್ರಭೆ,ಪ್ರಭೆಯೊಳದುವೇ ನಾದ

ಕಲ್ಪನೆಯ ತೆರೆಗೆ ತೆರೆಗೊಳುವ ಲಯವು

ಅದುವೆ ಎಲ್ಲೆಡೆ ತುಳುಕುವಾನಂದವು

                        ಕೊಲೆರಿಜ್


   ಡಾ.ಶ್ರೀಪಾದ ಶೆಟ್ಟಿ

34 views0 comments

Yorumlar


bottom of page