top of page

ಆಲೋಚನೀಯ ೬

ಭೂಮಿ ಮತ್ತು ಆಕಾಶಗಳ ಸಂಬಂಧವನ್ನು ಗಾಢವಾಗಿಸುವ ಮಳೆ ಬಿಡದೆ ಸುರಿಯುತ್ತಿದೆ. ಹರ ಕರುಣೆಯ ಪರಮಾನಂದ ರಸವೆ ಮಳೆಯಾಗಿ ಇಳೆಗೆ ಸುರಿಯುವ ಪರಿಯನ್ನು ಹರಿಹರ ಕವಿ ಇಳೆಯಾಂಡ ಗುಡಿಮಾರನ ರಗಳೆಯಲ್ಲಿ ಬಣ್ಣಿಸಿದ್ದಾನೆ. ಮಳೆ ಮಳೆ ಮಳೆ ಮನೆಬಿಟ್ಟು ಎಲ್ಲಿಗೂ ಹೋಗದಂತೆ ತಡೆಹಾಕಿ ಸುರಿವ ಮಳೆ.ಅದು ಸೃಷ್ಟಿಸಿದ ಪ್ರವಾಹ,ಭೂ ಕುಸಿತ,ಕಂಗಾಲದ ಬಡವರು,ಕೊಚ್ಚಿಹೋದ ಹಸುಳೆಗಳು,ಘೋರ ಮಳೆ ಮತ್ತು ಚಳಿಯಲ್ಲಿ ನಡುಗುತ್ತಿರುವ ಈ ನೆಲದ ಮಕ್ಕಳು, ಕಡಲ್ಕೋರೆತ,ಮಂತ್ರಿಮಾನ್ಯರ ಸಂಚಾರದ ಸುದ್ದಿಯನ್ನು ಬಿತ್ತರಿಸುವಲ್ಲಿ ಗರ್ಕಾಗಿರುವ ಮಾಧ್ಯಮದ ಮಂದಿ ಕೊರೊನಾ ಸುದ್ದಿಯನ್ನು ಹಿಂದೆ ಬಿಟ್ಟು ಜನರ ಭಯವನ್ನು ಕೊಂಚ ಕಡಿಮೆ ಮಾಡಿದ್ದಾರೆ. ಸುರಿವ ಮಳೆ ಕೊರೊನಾಕ್ಕೆ ಹೆದರಲಿಲ್ಲ.ಹಾರುವ ಹಾಡುವ ನಲಿಯುವ ಬಾನಾಡಿಗಳು ತಮ್ಮ ಹರುಷವನ್ನು ಬಗೆ ಬಗೆಯ ಚಲನೆ ಮತ್ತು ಇಂಪಾದ ಧ್ವನಿಗಳ ಮೂಲಕ ಹೊರಹೊಮ್ಮಿಸುತ್ತಿವೆ.ನದಿಗಳು ಮೈದುಂಬಿ ಹರಿಯುತ್ತಿವೆ.ಜಲಾಶಯಗಳು ತುಂಬಿಕೊಂಡು ಮುಂದಿನ ವರ್ಷ ವಿದ್ಯುಚ್ಚಕ್ತಿಯ ಕೊರತೆ ಆಗುವುದಿಲ್ಲ ಎಂಬ ಭರವಸೆ ಕೊಟ್ಟಿದೆ.ಜನ ಸಾವಕಾಶವಾಗಿ ಕೊರೋನಾದಿಂದ ರಕ್ಷಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.ಮಾಸ್ಕನ್ನು ಬಹಳ ಜನ ಕಡ್ಡಾಯವಾಗಿ ಧರಿಸುತ್ತಿದ್ದಾರೆ.ಕೆಲವರು ಮಾತ್ರ ಮೂಗು ಬಾಯಿ ತೋರಿಸುತ್ತ ಅದನ್ನು ಗಡ್ಡದ ರಕ್ಷಣೆಗಾಗಿ ಹಾಕಿಕೊಂಡಂತೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.ಇನ್ನು ಕೆಲವರು ಕೊರೋನಾ ಫೋಬಿಯಾದಿಂದ ಗಂಭೀರವಾದ ದೈಹಿಕ ತೊಂದರೆಗಳಿದ್ದರೂ ಆಸ್ಪತ್ರೆಗೆ ಹೋಗಲು ಹೆದರಿ ಪರಿಸ್ಥಿತಿ ಕೈ ಮೀರಿದ ಮೇಲೆ ಆಸ್ಪತ್ರೆಗೆ ಹೋಗಿ ಸಾವಿಗೀಡಾಗಿದ್ದಾರೆ.Life is a tale told by an idiot full with furies signifies nothing. ಎಂಬ ಕವಿ, ನಾಟಕಕಾರ ಶೇಕ್ಸಫಿಯರನ ಮಾತು ನೆನಪಾಗುತ್ತಿದೆ.


      ಇಂತಹ ಸಂದರ್ಭದಲ್ಲಿಯೂ ನಮ್ಮ ಆಲೋಚನೆ.ಕಾಂ ಪತ್ರಿಕೆ ನಮಗೆ ಒಳ್ಳೆಯ ಸಂಗಾತಿಗಳನ್ನು ಕೊಟ್ಟಿದೆ. ಬರಹಗಾರರು, ಓದುಗರು,ಪತ್ರಿಕೆಯ ಬಳಗದವರು ನಮ್ಮನ್ನುಸತತೋದ್ಯೋಗಿಗಳನ್ನಾಗಿ ಮಾಡಿದ್ದಾರೆ. Man is known by company he keeps ಎಂಬ ಮಾತಿನಂತೆ ಆಲೋಚನೆ.ಕಾಂ ಕಂಪನಿ ನಮ್ಮ ಖುಷಿಯನ್ನು ಸದಾಕಾಲ ಹೆಚ್ಚಿಸುವುದರೊಂದಿಗೆ ನಮಗೆ ಜನರ ಪ್ರೀತಿಯ ಗಾಢತೆಯ ಅರಿವನ್ನುಂಟು ಮಾಡಿದೆ.ಪರಿಚಿತರ ಬಳಗವನ್ನು ವಿಸ್ತರಿಸುತ್ತಾ ಇದೆ.ನಮ್ಮ ಬರಹಗಾರರ ತಾಳ್ಮೆ ಬಲು ದೊಡ್ಡದು.ಕೆಲವೊಮ್ಮೆ ತಾಂತ್ರಿಕ ಕಾರಣದಿಂದ,ನನ್ನಂತವರ ತಂತ್ರಜ್ಞಾನದ ಕೊರತೆಯಿಂದ ಲೇಖನ ಪ್ರಕಟವಾಗಲು ತಡವಾಗಿದೆ.ಆದರೆ ಲೇಖಕರ ಭೂಮಿಯಂತಹ ತಾಳ್ಮೆಗೆ ತಲೆಬಾಗುತ್ತೇನೆ ನಾನು. ನಮ್ಮ ಪತ್ರಿಕೆಯ ನಡೆಯನ್ನು ಮೆಚ್ಚಿ ಹಿರಿಯರಾದ ಡಾ.ಕೆ.ಪಿ.ದಾಮೋದರ   ಮಿತ್ರರಾದ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಮತ್ತು ನೀವು ಮನತುಂಬಿ ನಮ್ಮನ್ನು ಹುರಿದುಂಬಿಸಿದ್ದೀರಿ.ನಮ್ಮ ಆಲೋಚನೆಗೆ ಒಂದು ದಿಕ್ಕು ತೋರಿಸುತ್ತಿರುವ ಎಲ್ಲ ಸಹೃದಯರಿಗೆ ವಂದನೆಗಳು.


      ನಾವು ಈ ಪತ್ರಿಕೆ ಆರಂಭಿಸಿದ್ದು ಎಲ್ಲರ ಖುಷಿಗಾಗಿ.ನಮಗೆ ಬೇಕಾದದ್ದು ಮಿತ್ತ ಲಾಭ.

ಹೊಸ ತಲೆಮಾರಿನ ಬರಹಗಾರರ ಲೇಖನಗಳಿಗೆ ನಾವು ಇನ್ನೂ ಹೆಚ್ಚು ಬರಹಗಳಿಗೆ ಕಾಯುತ್ತಿದ್ದೇವೆ. ಹಿರಿಯರು, ಅನುಭವಿಗಳು,ಸಿದ್ಧ ಪ್ರಸಿದ್ಧರು ನಮ್ಮ ಪತ್ರಿಕೆಯಲ್ಲಿ ಬರೆಯುತ್ತಿರುವುದು ಒಂದು ಸಂಭ್ರಮದ ಸಂಗತಿಯೆ ಸರಿ.ನಿಮ್ಮ ಮೌಲ್ಯಯುತವಾದ ಬರಹಗಳಿಂದ ಈ ಪತ್ರಿಕೆಯ ಘನತೆ,ಗಾಂಭೀರ್ಯ ಮತ್ತು ಗುರುತ್ವವನ್ನು ನೀವು ಹೆಚ್ಚಿಸುತ್ತೀರಿ ಎಂಬ ನಂಬಿಕೆ ನನ್ನದು ಮತ್ತು ಗೆಳೆಯ ಶ್ರೀಪಾದನದು ನಮಗೆ ನಿಮ್ಮ ಪ್ರೀತಿಯ ಬಲವೊಂದಿದ್ದರೆ ಸಾಕು.


ಕಾಯದ ಕಳವಳಕ್ಕಂಜಿ ಕಾಯಯ್ಯ ಎನ್ನೆನು

ಜೀವನೋಪಾಯಕ್ಕೆ ಈಯಯ್ಯಾ ಎನ್ನೆನು

'ಯದ್ಭಾವಂ ತದ್ಭವತಿ' ಉರಿ ಬರಲಿ ಸಿರಿ ಬರಲಿ

ಬೇಕು ಬೇಡೆನ್ನೆನಯ್ಯಾ,

ಆ ನಿಮ್ಮ ಹಾರೆನು ಮಾನವರ ಬೇಡೆನು.

ಆಣೆ ನಿಮ್ಮಾಣೆ ಕೂಡಲ ಸಂಗಮದೇವಾ.

          ಬಸವಣ್ಣ


-ಡಾ.ಶ್ರೀಪಾದ ಶೆಟ್ಟಿ

54 views0 comments

Comments


bottom of page