top of page

ಆಲೋಚನೀಯ -೪೧

ಹೇಗೆ ಬರವಣಿಗೆ ಆರಂಭಿಸಲಿ ಎಂದು ತೋಚದ ಸ್ಥಿತಿ. ಬಿಡದೆ ಶಾಲೆಗೆ ಹೋಗುತ್ತಿದ್ದ ಮಕ್ಕಳು ಒಂದು ವಾರದ ರಜೆಯ ಬಳಿಕ ಮತ್ತೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ.ಈ ಹಿಂಜರಿಕೆ ಮತ್ತು ಹಿಂದುಳಿದಿರುವಿಕೆ ಅವರನ್ನು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದು ಇದೆ.ಅದನ್ನೆ ಗೈರು ಹಾಜರಿ ಎನ್ನುತ್ತಾರೆ.ಅದು ಸುಖಪ್ರದವಂತೂ ಅಲ್ಲ.ಅದು ದು:ಖ ಕಾರಕವೆ ಸರಿ.

ಆಲೋಚನೆ.ಕಾಂ ನಿಮ್ಮೆಲ್ಲರ ಪತ್ರಿಕೆ.ಕಳೆದ ಜೂನ್ ಎರಡನೆ ವಾರದಲ್ಲಿ ಅದು ತನ್ನ ಮೊದಲ ವರ್ಷ ಮುಗಿಸಿದೆ.

ಕೋವಿಡ್ -೧೯ ರ. ತೀವ್ರತೆ,ಮನೆ ಬಿಟ್ಟು ಹೊರಗಡೆ ಹೋಗಲಾರದ ಅಸಹಾಯಕತೆ, ದೇಹಾಲಸ್ಯ,ನೋವು ಈ ಎಲ್ಲಾ ಕಾರಣದಿಂದ ಎರಡನೆ ವರ್ಷದ ಆಲೋಚನೀಯ ನಿಮಗೆ ತಲಪಲು ತಡವಾಯಿತು.ಅದಕ್ಕಾಗಿ ನೀವು ನನ್ನ ವಿಳಂಬ ನೀತಿಯನ್ನು ಮನ್ನಿಸಿ ಪತ್ತಿಕೆಯ ಗುಣ ಮತ್ತು ದೋಷಗಳ ಬಗ್ಗೆ ಮುಕ್ತವಾಗಿ ಚರ್ಚಿಸುತ್ತೀರಿ ಎಂದು ನಂಬಿರುವೆ.

ಆಲೋಚನೆ.ಕಾಂ ಪತ್ರಿಕೆ ಆರಂಭಿಸುವ ಹಂಬಲ ಮನದೊಳಗಿದ್ದರು ಅದನ್ನು ಪ್ರಕಟ ಮಾಡಿರಲಿಲ್ಲ. ಇಂತಿರಲು ಒಂದು ದಿನ ನನ್ನ ಮಗ ನಿಶಾಂತ ಅಮೇರಿಕಾದಿಂದ ಪೋನು ಮಾಡಿ ಅಪ್ಪಾ ನಾನು ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಹಣತುಂಬಿ ಆಲೋಚನೆ.ಕಾಂ.ವೆಬ್ ಪತ್ರಿಕೆ ನಡೆಸಲು ಅನುಮತಿ ಪಡೆದಿರುವೆ. ನೀನು ಪತ್ರಿಕೆಗೆ ನಿನಗೆ ಆಪ್ತರಾದವರನ್ನು ಸೇರಿಸಿಕೊಂಡು ಪ್ರಕಟಿಸುವ ಸಿದ್ಧತೆ ಮಾಡು ಎಂದಾಗ ಖುಷಿ ಮತ್ತು ಒತ್ತಡ ಎರಡು ಒಟ್ಟಾಗಿ ಕಾರ್ಯಸೂಚಿಯ ಸಿದ್ಧತೆಯಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ನನ್ನ ನೆರವಿಗೆ ಬಂದ ಗೆಳೆಯ ಶ್ರೀಪಾದ ಹೆಗಡೆ ಸಾಲಕೋಡ ಅವರ ತ್ರಿಕರಣಪೂರ್ವಕ ತೊಡಗಿಕೊಳ್ಳುವಿಕೆ ಪತ್ರಿಕೆಯನ್ನು ಆರಂಭಿಸುವಲ್ಲಿ ನನಗೆ ವೇಗವರ್ಧಕವಾಯಿತು. ಶ್ರೀಪಾದ ಹೆಗಡೆ ಅವರು ನನ್ನ ಒಂದು ಸಂದರ್ಶನವನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು. ನಿಶಾಂತನು ಪತ್ರಿಕೆಯ ವಿನ್ಯಾಸವನ್ನು ಮಾಡಿ ಆರಂಭದಲ್ಲಿ ನಾವು ಕಳಿಸಿದ ಲೇಖನವನ್ನು ಪ್ರಕಟಿಸಿದ.ಅದನ್ನು ಪ್ರಕಟಿಸುವ ಬಗೆಯನ್ನು ಹೇಳಿಕೊಟ್ಟ.ಅದನ್ನು ಮಿತ್ರ ಶ್ರೀಪಾದ ಹೆಗಡೆಯವರು ಕಲಿತು ಲೇಖನ ಪ್ರಕಟಣೆಯ ಹೊಣೆ ಹೊತ್ತು ನಿಶಾಂತನ ಒತಗತಡವನ್ನು ಕಡಿಮೆ ಮಾಡಿದರು. ಆರಂಭದಿಂದ ೨೦೨೦ ನೆ ಇಸ್ವಿ ಅಂತ್ಯದ ವರೆಗೆ ಪತ್ರಿಕೆಯ ಸಂಪಾದಕರಾಗಿ ಅವರು ನಿರ್ವಹಿಸಿದ ಜವಾಬ್ದಾರಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು.ನನಗೆ ಬ್ಲಾಗನಲ್ಲಿ ಲೇಖನ ಪ್ರಕಟಿಸುವ ಬಗೆ ತಿಳಿದಿರಲಿಲ್ಲ. ಆಗ ಶ್ರೀಪಾದರ ಹತ್ತಿರ ಇದೊಂದು ಲೇಖನ ಅರ್ಜಂಟು,ಆಮೇಲೆ ಇದು ಎಂದು ಒತ್ತಡ ಹೇರಿದರು ಅದನ್ನೆಲ್ಲ ಪ್ರೀತಿಯಿಂದ ಸಹಿಸಿಕೊಂಡು ತನ್ನದೆ ಪತ್ರಿಕೆ ಎಂಬ ಅಭಿಮಾನದಿಂದ ಅವರು ತಾವು ಲೇಖನ ಬರೆದು ತಮ್ಮ ಆಪ್ತೇಷ್ಟರಿಂದ ಲೇಖನ ತರಿಸಿಕೊಂಡು ಶೈಶವದಲ್ಲಿಯೆ ಈ ಪತ್ರಿಕೆ ಪ್ರಬುದ್ಧವಾಗಿದೆ ಎಂಬ ಅಭಿಪ್ರಾಯ ಓದುಗರಲ್ಲಿ ಮೂಡುವಂತೆ ಮಾಡಿದರು. ಚವತಿ ಹಬ್ಬ ಮುಗಿದು ಮೂರ್ನಾಲ್ಕು ದಿನಗಳಲ್ಲಿ ನಾನು ಕೋವಿಡ್ ಪೀಡಿತನಾಗಿ ಆಸ್ಪತ್ರೆಯಲ್ಲಿದ್ದಾಗ,ಆಸ್ಪತ್ರೆಯಿಂದ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾಗ ಪತ್ರಿಕೆಯ ಸಂಪೂರ್ಣ ಹೊಣೆಯನ್ನು ನಿಭಾಯಿಸಿದ‌ ಶ್ರೀಪಾದ ಹೆಗಡೆ ಮತ್ತು ನಿಶಾಂತನ ಕಾರ್ಯ ದಕ್ಷತೆಯನ್ನು ಎಂತು ಮರೆಯಲಿ.

ಮನೆಗೆ ಬಂದ ನಂತರವು ಪತ್ರಿಕೆ ಕೆಲಕಾಲ ಅದೆ ವೇಗ ಮತ್ತು ಓಘದಲ್ಲಿ ಸಾಗಿತು. ಕಾಲ ಎನ್ನುವುದು ನಾವು ಹೇಳಿದಂತೆ ಇರುವುದಿಲ್ಲ.ಅದರ ಗತಿಯ ಅರಿವು ಈ ವರೆಗೆ ಮನುಜರಾದ ನಮಗೆ ತಿಳಿಯಲಿಲ್ಲ.ಮುಂದೆಯು ತಿಳಿಯ ಬಲ್ಲ ಎಂಬ ಕಾಲ ಜ್ಞಾನ ನಮಗೆ ದಕ್ಕಿಲ್ಲ. ಪತ್ರಿಕೆಯಲ್ಲಿಯ ಬರಹಗಳ ಪ್ರಕಟಣೆ ಮಾಡುತ್ತಿದ್ದ ಗೆಳೆಯ ಶ್ರೀಪಾದರಿಗೆ ಕತ್ತು ನೋವು ಬಂದು ಅವರ ಹತ್ತಿರ ಲೇಖನ ಪ್ರಕಟಣೆ ಕಷ್ಡವಾಗಿ ಅವರು ವಿಶ್ರಾಂತಿ ಪಡೆಯ ಬೇಕಾಯಿತು. ಬಂದ ಲೇಖನ ಪ್ರಕಟಿಸಲು ಮಗ ನಿಶಾಂತ ಮತ್ತು ಮಗಳು ಗೌತಮಿಗೆ ಇನ್ನಿಲ್ಲದ ಒತ್ತಡ ನೀಡಿದೆ.ಅವರು ತಮಗೆ ಬಿಡುವಾದಾಗ ಪ್ರಕಟ ಮಾಡುತ್ತಾ ಬಂದರು.ಮಗ ಜಯದತ್ತ ತಾನಿರುವಲ್ಲಿ ಇಂಟರ್ನೆಟ್ ಇಲ್ಲ ಎಂದು ಹೇಳಿ ತಟಸ್ಥನಾಗಿದ್ದ.ಈಗ ಆತ ಇಂಟರ್ನೆಟ್ ಹಾಕಿಕೊಂಡು ಪ್ರಕಟ ಮಾಡುತ್ತಿದ್ದಾನೆ. ಈ ನಡುವೆ ನಾನು ನನ್ನ ಕಂಪ್ಯೂಟರ್‌ ಸರಿ ಪಡಿಸಿಕೊಂಡು ಗೌತಮಿಗೆ ದುಂಬಾಲು ಬಿದ್ದು ಲೇಖನ ಪ್ರಕಟ ಮಾಡುವುದನ್ನು ಕಲಿತೆ.ಕಲಿತೆನೆಂದರೂ ಪರಿಪೂರ್ಣ ಎಂದಲ್ಲ.ವಿನ್ಯಾಸ ಮಾಡುವುದನ್ನು,ಪೋಟೊ ಹಾಕುವುದನ್ನು,ಎಡಿಟ್ ಮಾಡುವುದನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಬಂದ ಮಳೆಗೆ ಕೊಡೆ ಹಿಡಿದ ಹಾಗೆ.ಗಾಳಿ ಬಂದರೆ ಸಂಬಾಳಿಸಿಕೊಳ್ಖುವುದು ಕಷ್ಟ.

ಪತ್ರಿಕೆ ಆರಂಭಿಸಿದಾಗ ನಮ್ಮನ್ನು ಬೆಂಬಲಿಸಿ್ ಹಿರಿಯರನ್ನು ಮಿತ್ರರನ್ನು ಮರೆಯುವಂತಿಲ್ಲ. ಹುಡುಗಾಟ ಎನ್ನದೆ ಅವರೆಲ್ಲರು ತಮ್ಮ ಬೆಂಬಲದಿಂದ ನನ್ನ ಹಂಬಲವು ಚಿಗಿತು ದಾಂಗುಡಿವರೆಯಲು ಕಾರಣರಾರು.ನಮ್ಮ ಹಿತೈಷಿಗಳು,ಹೆಸರಾಂತ ಸ್ತ್ರೀರೋಗ ತಜ್ಞರು ಆದ ಡಾ.ಕೆ.ಪಿ.ದಾಮೋದರ ಅವರು ಪತ್ರಿಕೆಯ ಆರಂಭದಲ್ಲಿ ಆರೋಗ್ಯ ಸಂಬಂಧಿಯಾದ ಅಂಕಣಗಳನ್ನು ಬರೆದರು. ಬೇರೆಯವರಿಂದ ಅದನ್ನು ಟೈಪ್ ಮಾಡಿಸಿ ಕಳಿಸುವುದು ಅವರಿಗೆ ಕೊರೊನಾ ಕಾರಣದಿಂದ ಕಷ್ಟವಾಯಿತು. ಕವಿ,ವಿಮರ್ಶಕ ಚಿಂತಕ ಡಾ.ವಸಂತ ಕುಮಾರ ಪೆರ್ಲ,ಚಿಂತನಶೀಲರೂ ಮೇಧಾವಿಗಳು ಆದ ಶ್ರೀರಂಗ ಕಟ್ಟಿ,ಪತ್ರಕರ್ತ ಮಿತ್ರ ಪ್ರಿ.ಬೀರಣ್ಣ ನಾಯಕ ಮೊಗಟಾ,ಡಾ.ರಾಜು ಹೆಗಡೆ,ಸುರೇಶ ಹೆಗಡೆ ಹುಬ್ಬಳ್ಳಿ,ಪ್ರಕಾಶ ಕಡಮೆ,ಸುನಂದಾ ಕಡಮೆ,ಹೊನ್ನಪ್ಪಯ್ಯ ಗುನಗಾ, ಡಾ.ಎನ್.ಆರ್. ನಾಯಕ,ಹೊನ್ನಮ್ಮ ನಾಯಕ ವಂದಿಗೆ,ಡಾ.ಗಜಾಙ ನಾಯಕ,ನಾಗರಾಜ ಹೆಗಡೆ ಅಪಗಾಲ,ಚಂದ್ರು ಹುಣಸೂರು,ಮಲಿಕ್ ಜಾನ್ ಶೇಖ,ಪಾಲ್ಗುಣ ಗೌಡ ಅಚವೆ,ಶ್ರೀದೇವಿ ಕೆರೆಮನೆ,ರೇಣುಕಾ ರಮಾನಂದ,ಮೋಹನ ಹಬ್ಬು,ಶ್ರೀಧರ ಶೇಟ್ ಸಿರಾಲಿ,ಪ್ರೊ.ವೆಂಕಟೇಶ ಹುಣಶಿಕಟ್ಟಿ,ನೂತನ ದೋಶೆಟ್ಟಿ,ಅಬ್ಳಿ ಹೆಗಡೆ,ನಿರ್ಮಲಾ ಬಟ್ಡಲ್,ಕೃಷ್ಣ ನಾಯಕ ಹಿಚಕಡ ಮೋಹನ ಗೌಡ ಹೆಗ್ರೆ,ಸಾತು ಗೌಡ ಬಡಗೇರಿ,ಡಾ.ಜಗನ್ನಾಥ,ಅಕ್ಷತಾ ಕೃಷ್ಣಮೂರ್ತಿ,ಗಣಪತಿ ಗೌಡ ಹೊನ್ನಳ್ಳಿ,ಸುಧಾ ಭಂಡಾರಿ,ಪ್ರಭಾಕರ ತಾಮ್ರಗೌರಿ,ಅನಂತ ವೈದ್ಯ,ರಾಧಾಕೃಷ್ಣ ಕಾಮತ,ಲಕ್ಷ್ಮೀ ದಾವಣಗೆರೆ,ಸುಭದ್ರಾ ಹೆಗಡೆ,ಮಂಜುನಾಥ ಯಲ್ವಡಿಕವುರು,ಬಾಲಕೃಷ್ಣ ದೇವನಮನೆ, ಡಾ.ನಾ.ಮೊಗಸಾಲೆಇನ್ನೂ ಅನೇಕರು ಈ ಪತ್ರಿಕೆಯ ಹಣತೆ ಬೆಳಗಲು ಎಣ್ಣೆಯನ್ನು ಸುರಿದಿದ್ದಾರೆ.

ನಮ್ಮ ಪತ್ರಿಕೆ ಆರಂಭವಾದಂದಿನಿಂದ ಇಂದಿನ ವರೆಗೆ ಬಿಡದೆ ತಮ್ಮ ಪ್ರಬುದ್ಧವಾದ ಲೇಖನಗಳನ್ನು,ಪುಸ್ತಕ ವಿಮರ್ಶೆ,ವಿವಿಧ ಕ್ಷೇತ್ರಗಳ ಸಾಧಕರ ಜೀವನ ದರ್ಶನವನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಲೆ ಪತ್ರಿಕೆಯ ಮೌಲ್ಯವನ್ನ ಹೆಚ್ಚಿಸುತ್ತಿರುವ ಹಿರಿಯ ಸಾಹಿತಿಗಳು ಚಿಂತಕರು ಪತ್ರಕರ್ತರು ಆದ ಶ್ರೀ ಎಲ್.ಎಸ್.ಶಾಸ್ತ್ರಿ ಅವರಿಗೆ ಕೃತಾನೇಕ ಕೃತಜ್ಞತೆಗಳು.

ಒಂದು ವೆಬ್ ಪತ್ರಿಕೆಯನ್ನು ಆರಂಭಿಸುವುದು ಕಷ್ಟ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ ಎಂಬುದರ ಅರಿವು ಈಗ ಆಗಿದೆ. ಅದರೊಂದಿಗೆ ಪತ್ರಿಕೆಗೆ ವರುಷ ತುಂಬಿದ ಹರುಷ ಜೊತೆಯಾಗಿದೆ. ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿರುವ ನಮ್ಮ ಪತ್ರಿಕೆಯ ಓದುಗ ಪ್ರಭುಗಳಾದ ನಿಮಗೆ ಅನೇಕ ಕೃತಜ್ಞತೆಗಳು. ನಾನು ಬರೆಯ ಬೇಕಾದ ಬಹಳ ಆಲೋಚನೀಯಗಳು ( ಸಂಪಾದಕೀಯ) ಬಾಕಿ ಉಳಿದಿವೆ.ಅದನ್ನೆಲ್ಲಾ ಬರೆವ ಹಂಬಲವಿದೆ. ಪತ್ರಿಕೆಯ ಬೆಳವಣಿಗೆಗೆ ಸಂಬಂಧಿಸಿದಂತೆ ನಿಮ್ಮ ಬೆಂಬಲ ಸದಾಕಾಲ ಇರಲಿ.ಇದು ಎಲ್ಲರ ಪತ್ರಿಕೆ.ಇದನ್ನು ಎತ್ತಿಕೊಂಡು ಬೆಳೆಸಸುವಲ್ಲಿ ನಿಮ್ಮ ಪಾತ್ರ ಮಹತ್ತರವಾದುದು.

‌‌‌‌‌ಡಾ.ಶ್ರೀಪಾದ ಶೆಟ್ಟಿ.

29 views0 comments

Comentários


bottom of page