top of page

ಆಲೋಚನೀಯ -೪೦

ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ

ಕೆಡುಕು ಮಾಡಿದರೆ ಅದು ಪಾಪ ಬಿಕನಾಸಿ

ಯಾವ ಪೂಜೆ ಮಾಅಡಿದರೂ ವ್ಯರ್ಥ

ಜನಸೇವೆಯೆ ಪೂಜೆ ಅದುವೆ ಪುರುಷಾರ್ಥ

ದಿನಕರ ದೇಸಾಯಿ

Help ever Hurt never. Saayi Baaba

A good man's thought never goes in vain- Saying.

ಇಂದು ತಮ್ಮ ಸಾರ್ಥಕ ಹಾಗು ಸುದೀರ್ಘ ಪೋಲಿಸ್ ಇಲಾಖೆಯ ಸೇವೆಯಿಂದ ೩೧-೫-೨೦೨೧ ರಂದು ನಿವೃತ್ತಿ ಹೊಂದುತ್ತಿರುವ ಮಂಗಳೂರು ನಗರದಲ್ಲಿ ಡಿ.ಸಿ.ಪಿ.ಯಾಗಿ ದಕ್ಷತೆ ಮತ್ತು ಚಾಣಾಕ್ಷತನದಿಂದ ಕಾರ್ಯ ನಿರ್ವಹಿಸಿ ವಯೊ ನಿವೃತ್ತಿ ಹೊಂದುತ್ತಿರುವ ಅಂಕೋಲೆಯ ಬೋಳೆ ಗ್ರಾಮದ ವಾಸಿ ವಿನಯ

ಎ.ಗಾಂವಕರ ಬಗ್ಗೆ ಕೆಲವು ಮಾತುಗಳನ್ನು ಬರೆಯಲು ಆಲೋಚನೆ.ಕಾಂ.ಪತ್ರಿಕೆಯ ಸಂಪಾಕೀಯವನ್ನು ಬಳಸಿಕೊಳ್ಳಲು ನನಗೆ ಹೆಮ್ಹೆ ಎನಿಸುತ್ತಿದೆ.

೧೯೭೮ ನಾನು ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕನಾಗಿ ಸೇರಿದ ವರ್ಷ.ಅಂಕೋಲೆಯ ಪ್ರಗತಿಪರ ಚಿಂತನೆಯ ಡಾ.ರಮೇಶ ನಾಯಕ ಅವರು ಅಂಕೋಲೆಯ ಸಮಾಜ ಮಂದಿರದಲ್ಲಿ ಡಾ.ಕೋವೂರ ಮತ್ತು ಮೂಢನಂಬಿಕೆಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿ ಮುಖ್ಯ ಮಾತುಗಾರನನ್ನಾಗಿ ನನ್ನನ್ನು ಆಮಂತ್ರಿಸಿದ್ದರು. ಪ್ರೊ.ಜಿನದೇವ ನಾಯಕ ಅವರು ನನ್ನ ಹೆಸರನ್ನು ಸೂಚಿಸಿದ್ದ ನೆನಪು.ಅಂದು ರವಿವಾರ.ವಾಹನ ಸಂಚಾರವು ಕಡಿಮೆ. ನಾನು ಟ್ರಕ್ಕಿನಲ್ಲಿ ಹೋಗಿ ಅಂಕೋಲೆಯ ಜಿ.ಸಿ.ಕಾಲೇಜು ಎದುರು ಇಳಿದುಕೊಂಡ ನೆನಪು.ಆಗ ಅಲ್ಲಿ ಇದ್ದ ತರುಣರೊಬ್ಬರನ್ನು ಮಾತನಾಡಿಸಿ ಸಮಾಜಮಂದಿರ ಎಲ್ಲಿ ಎಂದು ಕೇಳಿದೆ. ಆ ತರುಣ ನಾನು ಅಲ್ಲಿಗೆ ಹೋಗುತ್ತಿದ್ದೇನೆ ಬನ್ನಿ ನನ್ನ ಜೊತೆಗೆ ಎಂದು ತನ್ನ ಹೊಸ ರ್ಯಾಲಿ(Rally) ಸೈಕಲ್ಲಿನಲ್ಲಿ ಸಮಾಜ ಮಂದಿರಕ್ಕೆ ಕರೆದುಕೊಂಡು ಹೋದರು. ಉಪನ್ಯಾಸವನ್ನು ಮೆಚ್ಚಿಕೊಂಡ ಬಹಳ ಜನ ಅಂದು ಪರಿಚಿತರಾದರು.ನಂತರ ಹೊನ್ನಾವರ ಕಾಲೇಜಿನಲ್ಲಿ ಕಾರ್ಯಬಾಹುಳ್ಯ(Work load) ಕಡಿಮೆಯಾಗಿ ನಾನು ಅಂಕೋಲೆಯ ಜಿ.ಸಿ.ಕಾಲೇಜಿಗೆ ನೌಕರಿಗೆ ಸೇರಿದೆ.ಆಗ ಮತ್ತೆ ತರಗತಿಯಲ್ಲಿ ಕಂಡಿದ್ದು ಅದೆ ಸ್ಪುರದ್ರೂಪಿಯಾದ ತರುಣನನ್ನು. ಅಂಕೋಲೆಯ ಕಾಲೇಜಿಗೆ ಸೇರಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಪಾಠ ಮಾಡಿ ಎಲ್ಲರ ಮೆಚ್ಚಿಗೆ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಕಾಲೇಜಿನ ಯಾವುದೊ ತರಗತಿಯಲ್ಲಿ ಹಾಹಾಕರ ಶುರುವಾಗಿದ್ದರೆ ಅಲ್ಲಿ ಯಾರೊ ಒಬ್ಬ ಹೊಸ ಲೆಕ್ಚರರ್ ಪ್ರವೇಶ ಆಗಿದೆ ಎಂದೆ ಅರ್ಥ.ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವುದಾದರೆ ಅದು ಎಲ್ಲರಿಗು ಒಗ್ಗುವ ಪಿಚ್ ಅಲ್ಲ. ಹೋಮ್ ಪಿಚ್ ಎಂಬ ಕಾರಣಕ್ಕೆ ಕೆಲವರು ಅಲ್ಲಿ ನಿರಾಯಾಸವಾಗಿ ಹಳೆಯ ನೋಟ್ಸನ್ನು ಇಟ್ಟುಕೊಂಡು ಪಾಠ ಮಾಡುವವರು ಇದ್ದರು.ಆದರೆ ಉಪನ್ಯಾಸಕನ ವಿದ್ವತ್ತು,ಪ್ರತಿಭೆ, ಪಾಂಡಿತ್ಯ ಮತ್ತು ಕಲಿಸುವ ರೀತಿ ಇಷ್ಟವಾದರೆ ಅಂತಹವರನ್ನು ಹೊತ್ತು ಮೆರೆಸುವಲ್ಲಿಯೂ ಅಂಕೋಲೆ ಕಾಲೇಜಿನ ಮಕ್ಕಳು ಅಗ್ರಗಣ್ಯರು. ಅಂತಹ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ, ಒಡನಾಟ,ಟೀಕೆ ಟಿಪ್ಪಣಿಗಳ ಸಿಹಿಯುಂಡು ನನ್ನ ಬದುಕನ್ನು ರೂಪಿಸಿಕೊಂಡವನು ನಾನು.ಆ ಸುಖ ನನಗೆ ಹೊನ್ನಾವರದಲ್ಲಿ ಸಿಗಲೆ ಇಲ್ಲ!

ಯಾವುದೆ ಗದ್ದಲ ಗೊಂದಲಗಳ ಉಸಾಬರಿಗೆ ಹೋಗದೆ ತಾನಾಯಿತು ತನ್ನ ಕಲಿಕೆ ಆಯಿತು ಎಂದು ಡಿಗ್ನಿಪೈಡ್ ಸ್ಟುಡೆಂಟ್ ಆಗಿ ಬದುಕಿದ ಕೆಲವು ವಿದ್ಯಾರ್ಥಿಗಳ ಗಡಣದಲ್ಲಿ ತನ್ನ ನಗು ಮುಖ,ಗುಣ ಗೌರವ ಹಾಗು ಹಿತ ಮಿತವಾದ ಮಾತು ಮತ್ತು ನಡೆಯಿಂದ ವನಸುಮದಂತೆ ತಮ್ಮ ಕಾಲೇಜು ಜೀವನವನ್ನು ಪೂರ್ತಿಗೊಳಿಸಿದವರು ವಿನಯ ಗಾಂವಕರ.ವಿನಯ ನಂತಹ ಕೆಲವು ವಿದ್ಯಾರ್ಥಿಗಳ ಗಾಂಭೀರ್ಯ, ಗುಣ ಗೌರವದ ಬಗೆಗೆ ನಾನು ಅಧ್ಯಾಪಕನಾಗಿರುವಾಗಲೆ ಮನಸೋತಿದ್ದೆ. ವಿನಯ ಪದವಿ ಶಿಕ್ಷಣದ ಬಳಿಕ ರಾಜ್ಯಶಾಸ್ತ್ರ ವಿಷಯದಲ್ಲಿ ಕ.ವಿ.ವಿ. ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಎರಡು ವರ್ಷ ರಾಜ್ಯ ಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಆ ಬಳಿಕ ಪಿ.ಎಸ್.ಐ. ಹುದ್ದೆಗೆ ಆಯ್ಕೆಯಾದರು.ಆದರೆ ತಂದೆ ವಿಶ್ರಾಂತ ಪ್ರಾಚಾರ್ಯ ಅನಂತ ಗಾಂವಕರ ಅವರಿಗೆ ಅದು ಇಷ್ಟವಿರಲಿಲ್ಲ.ಕೊನೆಗು ಬಂಧುಗಳೊಬ್ಬರ ಮನವೊಲಿಕೆಯಿಂದ ಹತ್ತು ದಿನ ತಡವಾಗಿ ಅವರು ಪೋಲಿಸ್ ಟ್ರೇನಿಂಗಿಗೆ ಹಾಜರಾದರು. ಆ ಬಳಿಕ ಅವರು ತಮ್ಮ ವೃತ್ತಿಯಲ್ಲಿ ಹಿಂದಿರುಗಿ ನೋಡದೆ ಸಾಹಸ ಮತ್ತು ಸಾಧನೆಯ ಪಥದಲ್ಲಿ ಮುನ್ನಡೆದರು.

"ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ"

ಎಂಬ ಕುವೆಂಪು ಕವಿ ವಾಣಿಯಂತೆ ಮುನ್ನಡೆದರು.

" ನಾನಳಿವೆ ನೀನಳಿವೆ ನಮ್ಮೆಲುವುಗಳ ಮೇಲೆ

ಮೂಡುವುದು ನವ ಭಾರತದ ಲೀಲೆ" ಎಂಬ ಮಾತಿನಂತೆ ಭೂಗತ ಪಾತಕಿಗಳನ್ನು ಮಟ್ಟ ಹಾಕಲು ಪ್ರಾಣವನ್ನೆ ಪಣವಾಗಿಟ್ಟು ಹೋರಾಟ ನಡೆಸಿದರು.ಒಪ್ಪಿಕೊಂಡ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದರಲ್ಲಿ ಸಂತೃಪ್ತಿ ಮತ್ತು ಸಮಾಧಾನವನ್ನು ಕಂಡವರು ವಿನಯ ಗಾಂವಕರ. ಮುತ್ತಪ್ಪ ರೈ ಎಲ್ಲರಿಗು ಸಿಂಹಸ್ವಪ್ನವಾಗಿದ್ದ ಭೂಗತ ಪಾತಕಿ.ಅಂತಹ ಮುತ್ತಪ್ಪ ರೈ ಗೆ ತಮ್ಮ ದಿಟ್ಟ ನಿಲುವಿನಿಂದ ಭಯ ಹುಟ್ಟಿಸಿದವರು ವಿನಯ ಗಾಂವಕರ.ಬನ್ನಂಜೆ ರಾಜಾ,ರಶೀದ್,ರವಿ ಪೂಜಾರಿ,ಕಲಿ ಯೋಗೀಶ್ ಮತ್ತಿತರ ಭೂಗತರ ಸಹಚರರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ವಿನಯ ಗಾಂವಕರ. ಮಂಗಳೂರು ಸಿಸಿಬಿ ಪೋಲಿಸರನ್ನು ಬಳಸಿ ನಡೆಸಿದ ಕಾರು ಮಾರಾಟ ಪ್ರಕರಣವನ್ನು ಜಾಣ್ಮೆಯಿಂದ ಬೇಧಿಸಿ ಮಧ್ಯಂತರ ವಿಚಾರಣಾ ವರದಿ ಸಲ್ಲಿಸಿ ನಾಲ್ವರು ಪೋಲಿಸರ ಅಮಾನತುಗೊಳ್ಳಲು ಕಾರಣರಾಗಿದ್ದಾರೆ.ಈಗ ಆ ಪ್ರಕರಣದ ತನಿಖೆ ಮುಂದುವರಿದಿದೆ.

ಕಾನೂನು ಸುವ್ಯವಸ್ಥೆಯನ್ನು ಪಾಲಿಸುವಲ್ಲಿ, ಅಪರಾಧ ಪತ್ತೆ ಮಾಡುವಲ್ಲಿ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಳ್ಳುವಲ್ಲಿ,ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಲ್ಲಿ,ವಿದ್ಯಾರ್ಥಿ ಸಂಘಟನೆಗಳ ಮುಖಂಡರೊಂದಿಗೆ ಸಂವಾದ ನಡೆಸಿ ಸಮನ್ವಯವನ್ನು ಸಾಧಿಸುವಲ್ಲಿ ವಿನಯ ಗಾಂವಕರ ಅವರ ಪರಿಣತಿ ಅಸಾಧಾರಣವಾದುದು.

ವಿನಯ ಗಾಂವಕರ ಅವರು ಪಿ.ಎಸ್.ಐ ಆಗಿ ಗಣೇಶಗುಡಿ,ವಿಟ್ಲ,ಮಲ್ಪೆ,ಕುಂದಾಪುರ,ಬಜ್ಪೆ,ಮುಲ್ಕಿಜನ ನೆನಪಿಟ್ಟುಕೊಳ್ಳವಂತಹ ಸೇವೆ ಸಲ್ಲಿಸಿದ್ದಾರೆ ಸಿಪಿಐ ಆಗಿ ಐಜಿಪಿ ಕಚೇರಿ ಮಂಗಳೂರು,ರಾಜ್ಯ ಗುಪ್ತವಾರ್ತೆ ಬೆಂಗಳೂರು,ಕಡೆಬಾಜಾರ ಬೆಳಗಾವಿ,ಮಂಗಳೂರು ಉತ್ತರ ಠಾಣೆಯಲ್ಲಿ ಎರಡು ಸಲ,ಜನ ನೆನಪಿಸಿಕೊಳ್ಳುವಂತಹ ಉತ್ತಮ ಸೇವೆ ಸಲ್ಲಿಸಿದ್ದಾರೆ. ಡಿವೈಎಸ್.ಪಿ ಆಗಿ ಮೆಸ್ಕಾಂ ನಿಗ್ರಹದಳ ಮಂಗಳೂರು, ಕಬ್ಬನ್ ಪಾರ್ಕ ಉಪವಿಭಾಗ ಬೆಂಗಳೂರುನಗರ, ಸಿಸಿಐಬಿ ಮಂಗಳೂರು,ಮಾರ್ಕೇಟ್ ಉಪವಿಭಾಗ ಬೆಂಗಳೂರು,ಸಿಐಡಿ ಘಟಕ ಬೆಂಗಳೂರಿನಲ್ಲಿ ತಮ್ಮ ದಕ್ಷ ಮತ್ತು ಪ್ರಾಮಾಣಿಕ ಸೇವೆಯಿಂದ ಇಲಾಖೆಗೆ ಹೆಸರನ್ನು ತಂದಿದ್ದಾರೆ. ಎಸ್.ಪಿ. ಆಗಿ ಪದೋನ್ನತಿ ಹೊಂದಿನ ವಿನಯ ಗಾಂವಕರ ಅವರು ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಪೋಲಿಸ್ ಆಯುಕ್ತರಾಗಿ ಮಂಗಳೂರಿನ ಪ್ರಜ್ಞಾವಂತರಾದ ಜನ ಮೆಚ್ಚುವಂತಹ ಕೆಲಸ ಮಾಡಿ ೨೦೨೧ ನೆ ಇಸ್ವಿ ಮೇ ತಿಂಗಳ ೩೧ ಸೋಮವಾರ ಈ ದಿನ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.

Handsome is what hand some does

ಎಂಬ ಇಂಗ್ಲೀಷ ಗಾದೆ ವಿನಯ ಗಾಂವಕರ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.

" ವಿದ್ಯಾ ವಿನಯೇನ ಶೋಭತೆ" ಎಂಬ ಮಾತು ವಿನಯ ಗಾಂವಕರ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.ಸ್ಪುರದ್ರೂಪಿ ವಿನಯ ತಾವು ಮಾಡುವ ಕೆಲಸವನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಗುಣವನ್ನು ಹೊಂದಿದವರು. ಅವರ ದಕ್ಷತೆಯನ್ನು ಕರ್ತವ್ಯನಿಷ್ಠೆಯನ್ನು ಗಮನಿಸಿ ಕರ್ನಾಟಕ ಸರ್ಕಾರವು ೨೦೧೫ ರಲ್ಲಿ ಮುಖ್ಯಮಂತ್ರಿಗಳ ಬಂಗಾರದ ಪದಕವಮ್ನು ೨೦೧೬ ರಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿ ಅವರನ್ನು ಗೌರವಿಸಿದೆ.

ಪೋಲಿಸ್ ಇಲಾಖೆಯಲ್ಲಿದ್ದು ಗೌರವ ಮತ್ರು ಘನತೆಯನ್ನು ಕಾಪಾಡಿಕೊಳ್ಳುವುದು ಬಹಳ ಷ್ಟದ ಕೆಲಸ. ಅಧಿಕಾರಿ ವರ್ಗದವರಲ್ಲಿ ಹಣಗಳಿಕೆಯ ವಿಷಯದಲ್ಲಿ ತಣ್ಣಗಿನ ಪೈಪೋಟಿಯೊಂದು ಜಾರಿಯಲ್ಲಿರುತ್ತದೆ. ಆದರೆ ವಿನಯ ಗಾಂವಕರ ಅದಕ್ಕಿಂತ ಭಿನ್ನವಾಗಿ ಬದುಕಿದವರು. ಅವರ ತಂದೆ ಅನಂತ ಗಾಂವಕರ ನಿಷ್ಠೆ ಮತ್ತು ನಿಯತ್ತಿನ ಕಟ್ಟಾಳು.೧೯೪೨ ರ ಚಲೇಜಾವ್ ಚಳುವಳಿಯಲ್ಲಿ ಪಾಲ್ಗೊಂಡವರು.ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಹಪಾಠಿ.ಕಾಶಿ ವಿದ್ಯಾಪೀಠದಲ್ಲಿ ಓದಿದವರು. ಅವರ ತಾಯಿ ಸಾವಿತ್ರಿ ಬೋಳೆಯ ಸ್ವಾತಂತ್ರ್ಯ ಹೋರಾಟ ಗಾರ ಕೃಷ್ಣ ನಾಯಕ ಅವರ ಮಗಳು.

ಅಂತಹ ತಂದೆ ತಾಯಂದಿರ ಮಕ್ಕಳಾದ ಮದನ ಮತ್ತು ವಿನಯ ನಿಷ್ಠೆ ಮತ್ತು ನಿಯತ್ತಿನಿಂದ

ಪೋಲಿಸ್ ಹುದ್ದೆಯನ್ನು ನಿಭಾಯಿಸಿ ಕೃತಾರ್ಥ ರಾದವರು.ವಿನಯ್ ತಮ್ಮನ್ನು ಬಚಾವ್ ಮಾಡಿಕೊಳ್ಳಲು ನುಗ್ಗಿ ಬಂದ ರೌಡಿಗಳ ಗುಂಪಿನ ಮೇಲೆ ಅನಿವಾರ್ಯವಾಗಿ ರಿವಾಲ್ವರ್ ನಿಂದ ಮೂರು ಸುತ್ತು ಗಂಡು ಹಾರಿಸಿ ಅವರನ್ನು ಚದುರಿಸ ಬೇಕಾಗಿ ಬಂತು.ಅದರಲ್ಲಿ ಒಬ್ಬ ಹತನಾಗಿ ಇನ್ನೊಬ್ಬ ಗಾಯಗೊಂಡಾಗ ಮತ್ತೆ ರಿವಾಲ್ವರ ಬಳಸದಂತೆ ತಂದೆ ತಾಕೀತು ಮಾಡುತ್ತಾರೆ. ಕರಾವಳಿಯ ಚಹರೆ ಮತ್ತು ಹೃದಯದ ಬಡಿತವನ್ಬು ಅರಿತ ದಿಟ್ಟ ಹಾಗು ದಕ್ಷ ಪೋಲಿಸ್ ಅಧಿಕಾರಿ ವಿನಯ ರೌಡಿಗಳನ್ನು ನಿಗ್ರಹಿಸುವಲ್ಲಿ ಪರಿಣತರಾಗಿದ್ದರು.ಅವರ ಜಾಣ್ಮೆ ಹಾಗು ಕಾರ್ಯದಕ್ಷತೆಯನ್ನು ಕುರಿತು ಹಿರಿಯ ಅಧಿಕಾರಿಗಳ ಸಮಕಾಲೀನರು ಆದ ಎಡಿಜಿಪಿ ಪ್ರತಾಪ ರೆಡ್ಡಿ ಸಿ.ಎಚ್,ಬಿ.ದಯಾನಂದ,ಸೀಮಂತ ಕುಮಾರ ಸಿಂಗ,ಮಂಗಳೂರಿನ ಕಮಿಶನರ ಎನ್.ಶಶಿಕುಮಾರ,ಡಿಸಿಪಿ ಹರಿರಾಂ ಶಂಕರ್ ಅವರು ಒಬ್ಬ ಮನೆಯ ಯಜಮಾನನಂತೆ ಎಲ್ಲರನ್ನು ಒಳಗೊಂಡು ಕಾರ್ಯವನ್ನು ನಿರ್ವಹಿಸುವ ಗಾಂವಕರ ಅವರ ರೀತಿ,ನೀತಿ,ಕಾರ್ಯಕ್ಷಮತೆಯನ್ನು ಮೆಚ್ಚಿ ಮಾತನಾಡಿದ್ದಾರೆ.

ಡಿ ಎಸ್ ಪಿ ಆಗಿ ವಿಶ್ರಂತ ಜೀವನ ನಡೆಸುತ್ತಿರುವ ಡಿ.ಎಂ.ನಾಯಕ ಅವರ ಮಗಳು ಮಾಲಿನಿಯ ಪತಿಯಾಗಿರುವ ವಿನಯ ಅವರ ಮೊದಲ ಮಗಳಯ ಅರ್ಪಿತಾ ಎಂಬಿಎ ಪದವಿ ಓದುತ್ತಿದ್ದು ಕಿರಿಯ ಮಗಳು ಶಿವಾನಿ ಇಂಜಿನಿಯರಿಂಗ ಪದವಿಗೆ ಓದುತ್ತಿದ್ದಾರೆ.ಅವರಿಗೆ ಬೆಳಕಿನ ದಾರಿ ತೆರೆದು ಕೊಳ್ಳಲಿ.

"ಶ್ರೀಮಂತ ಹೆಚ್ಚು ಖರ್ಚು ಮಾಡಿಯಾದರೂ ತನ್ನ ಕೆಲಸ ಮಾಡಿಕೊಳ್ಳುತ್ತಾನೆ.ಆದರೆ ಬಡವನಿಗೆ ಠಾಣೆಯಲ್ಲಿ ನ್ಯಾಯ ಸಿಗಲಿ "ಎಂಬ ನಿಲುವನ್ನು ಹೊಂದಿದ ವಿನಯ ಗಾಂವಕರ ಒಬ್ಬ ಜನಪರ ಅಧಿಕಾರಿಯಾಗಿ ತಮ್ಮ ಬದ್ಧತೆಯನ್ನು ಮೆರೆದವರು.

೨೦೨೦ ನೆ ಇಸ್ವಿ ಸಪ್ಟಂಬರ ೧ರಂದು ಕೊರೊನಾ ಪೀಡಿತನಾಗಿ ಮಂಗಳೂರಿಗೆ ಹೋಗಿ ಅಲ್ಲಿಯ ಆಸ್ಪತ್ರೆಯೊಂದರಲ್ಲಿ ಮೂರು ತಾಸು ಕಾಯ್ದು ಬಸವಳಿದು ಹಿರಿಯ ಪೋಲಿಸ ಅಧಿಕಾರಿ ಬಿ.ವಿ.ನಾಯಕ ಅವರ ಸಲಹೆ ಕೇಳಿದಾಗ ಅವರು ಮಂಗಳೂರಿನಲ್ಲಿ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿನಯ ಗಾಂವಕರ ಅವರ ನಂಬರ ಕೊಟ್ಟಾಗ ಅವರು ವಿಷಯ ತಿಳದು ಏನೂ ಉಪಾಯ ಕಾಣದೆ ಕೈಕಟ್ಟಿ ಕುಳಿತ ನನ್ನನ್ನು ಕೆ.ಎಂಸಿ ಮಣಿಪಾಲ ಅತ್ತಾವರ ಆಸ್ಪತ್ರೆಗೆ ಸೇರಿಸಿ ಅಲ್ಲಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿ ನಾನು ಮತ್ತೆ ಬದುಕಿಗೆ ಮರಳುವಂತೆ ಮಾಡಿದ ಪ್ರೀತಿಯ ಶಿಷ್ಯನ ಉಪಕಾರವನ್ನು ಎಂತು ಮರೆಯಲಿ.ಅವರ ಜೊತೆ ನನ್ನ ಆರೈಕೆಯಲ್ಲಿ ಭಾಗಿಗಳಾದ ಪಿಎಸ್ಐ ಗುರುಕಾಂತಿ ಮತ್ತು ಡಿವೈಎಸ್ಪಿ ಸುಜನ ಶೆಟ್ಟಿ ಅವರಿಗೆ ನನ್ನ ಕೃತಜ್ಞತೆಗಳು.

ವಿದ್ಯಾರ್ಥಿ ಮತ್ತು ಗೆಳೆಯ ವಿನಯ ಗಾಂವಕರ ಅವರ ನಿವೃತ್ತಿ ಜೀವನ ಸುಖ ಶಾಂತಿ ಸಮೃದ್ಧಿಯಿಂದ ಕೂಡಿರಲಿ.ಅವರ ಇಷ್ಟಾರ್ಥಗಳು ಈಡೇರಲಿ. ಅವರಿಗೆ ಉತ್ತಮ ಆರೋಗ್ಯ ಆಯುಷ್ಯ ಐಶ್ವರ್ಯಗಳು ಒದಗಿ ಬಂದು ಅವರ ನಿವೃತ್ತಿ ಜೀವನ ಸಮಾಜ ಸೇವೆಗೆ ವಿನಿಯೋಗವಾಗಲಿ.

ಡಾ.ಶ್ರೀಪಾದ ಶೆಟ್ಟಿ.

137 views0 comments
bottom of page