top of page

ಆಲೋಚನೀಯ -೩೮

ಕೊರೊನಾ ಮತ್ತೆ ವಕ್ಕರಿಸಿದೆ.ನಮ್ಮೆಲ್ಲರ ನಿಷ್ಕಾಳಜಿಯು ಕಾರಣವಾಗಿ ಅದು ಹೆಚ್ಚಿಕೊಂಡಿದೆ.

ನಾವು ತಯಾರಿಸಿದ ವ್ಯಾಕ್ಷಿನ್ ಅನ್ನು ವಿದೇಶಕ್ಕೂ ಕಳಿಸಿ ಔದಾರ್ಯವನ್ನು ಮೆರೆದ ನಾವು ನಮ್ಮ ದೇಶವಾಸಿಗಳಿಗೆ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಲಿಲ್ಲ‌.ಇದರಿಂದ ಇನ್ನೂ ಒಂದು ಬಾರಿಯು ವ್ಯಾಕ್ಸಿನ್ ತೆಗೆದುಕೊಳ್ಳದ ಜನ ನಮ್ಮ ನಡುವೆ ಇದ್ದಾರೆ. ಇದರ ಬಗ್ಗೆ ನಮ್ಮ ವಾಟ್ಸಯಾಪ ನಲ್ಲಿ ಬಂದ ಬೇಕಾಬಿಟ್ಟಿ ಬರಹಗಳು ಬಹಳ ದಿಕ್ಕು ತಪ್ಪಿಸಿದ್ದು ನಿಜ.ಸಮೂಹ ಮಾಧ್ಯಮಗಳಂತು ಜನರಿಗೆ ಭರವಸೆಯನ್ನು ತುಂಬುವ ಬದಲು ಅವರನ್ನು ದಿಗ್ಭ್ರಾಂತರನ್ನಾಗಿ ಮಾಡುತ್ತಿವೆ.ಜನ ಟಿ.ವಿ.ವಾಹಿನಿಗಳು ಬಿಡದೆ ಬಿತ್ತರಿಸುತ್ತಿರುವ ಸುದ್ದಿಗಳನ್ನು ನೋಡಿ,ಕೇಳಿ ಕಂಗಾಲಾಗುತ್ತಿದ್ದಾರೆ. ಸ್ವಲ್ಪ ನೆಗಡಿಯಾಗಿ ಜ್ವರ ಬಂದರೆ ತಮಗೆ ಆಕ್ಷಿಜನ್ ಕಡಿಮೆ ಆಗಿದೆಯೇನೊ ಎಂಬ ಆತಂಕ ಅವರದು.

ಜನರು ತಮ್ಮ ಆರೋಗ್ಯವನ್ನು ಪ್ರಾಣಾಯಾಮ, ಧ್ಯಾನ,ಉತ್ತಮ ಆಹಾರ,ಪ್ರತ್ಯೇಕವಾಗಿ ಕ್ವರೆಂಟೈನ್ ನಲ್ಲಿ ಇದ್ದು ಚೇತರಿಸಿಕೊಳ್ಳುವ ಬದಲು ಆಸ್ಪತ್ರೆಗೆ ಧಾವಿಸುವ ಧಾವಂತದಲ್ಲಿ ಇದ್ದಾರೆ. ಮನೆ ಬಿಟ್ಟು ಆಸ್ಪತ್ರೆಗೆ ಹೋದವರು ಅಲ್ಲಿಯ ವಾತಾವರಣ,ಸಾವು ನೋವು,ಸತ್ತವರ ಬಂಧು ಬಳಗದವರ ಆಕ್ರಂದನ ಕಂಡು ಕಂಗೆಟ್ಟು ಹೋಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಮಚಿತ್ತದಿಂದ ಇರುವುದು ಕಷ್ಟ.ಆದರೆ ದುಡುಕಿದರೆ ಅನರ್ಥ ಖಚಿತ

ಮನೆಯಲ್ಲಿಯೆ ಇರಿ.ಹೊರಗಡೆ ಹೋಗುವಾಗ ಖಡ್ಡಾಯವಾಗಿ ಮಾಸ್ಕನ್ನು ಬಳಸಿರಿ,ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿರಿ ಎಂಬ ಜಾಗರೂಕತೆಯ ಮಾತುಗಳನ್ನು ಕೇಳಿಯೂ ಕೇಳದಂತೆ ಜನರ ವರ್ತನೆ ಇದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ,ಅನಕ್ಷರಸ್ಥರು ಅಜ್ಞಾನಿಗಳು,ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಜನರು ಇರುವ ದೇಶದಲ್ಲಿ ಕೊರೊನಾದಂತಹ ಮಹಾಮಾರಿ ವಕ್ಕರಿಸಿದರೆ ಅದರಿಂದ ಬಚಾವಾಗಿ ಬರುವುದು ಕಷ್ಟ ಸಾಧ್ಯವಾದ ಕೆಲಸವೆ ಆಗಿದೆ.ಎರಡನೆಯ ಅಲೆಯ ಆರ್ಭಟ ಜೋರಾಗಿಯೆ ಇದೆ.ಮೂರನೆಯ ಅಲೆ ಬರುತ್ತದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

ಕೊರೊನಾ ಮೊದಲನೆಯ ಅಲೆಯಲ್ಲಿ ಸಾವು ನೋವನ್ನು ಅನುಭವಿಸಿ ಬಸವಳಿದು ಹೋದ ರಾಷ್ಟ್ರಗಳು ಸಕಾಲದಲ್ಲಿ ವ್ಯಾಕ್ಷಿನ್ ತೆಗೆದುಕೊಂಡು ಕೊರೊನಾ ಪಿಡುಗನ್ನು ನಿಯಂತ್ರಣದಲ್ಲಿ ಇಟ್ಟಿದ್ದಾರೆ.

ಆದರೆ ಜಗತ್ತಿಗೆ ನಮ್ಮ ನಡೆಯ ಮೂಲಕ ಹೊಸ ಪಾಠವನ್ನು ಹೇಳುತ್ತೇವೆ ಎಂದ ನಮ್ಮ ಹೆಡ್ಮಾಸ್ಟ್ರುಗಳು ಚುನಾವಣೆ ಗೆಲ್ಲುವ ಹರ ಸಾಹಸದಲ್ಲಿ ಎಲ್ಲವನ್ನು ಮರೆತ ಕಾರಣ ದೇಶಾದ್ಯಂತ ಕೊರೊನಾ ಹೆಚ್ಚಿಕೊಂಡಿದೆ ಎಂಬ ವಿಚಾರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

(ಶಬ್ದಮಣಿದರ್ಪಣ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಕೇಶಿರಾಜ ಎಂಬ ವೈಯಾಕರಣಿ,

" ಜನಮೆಂಬುದು ನಪುಂಸಕ ಲಿಂಗ" ಎಂದು ಕರೆದು,ಜನ ಬಂದುದು,ಜನ ನಿಂದುದು ಎಂದು ಉದಾಹರಣೆಯನ್ನು ನೀಡಿದ.ಆ ಮಾತು ನಿಜವಾಗಿದೆ.)

ಜನರು ಎಲ್ಲಿಯವರೆಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದಿಲ್ಲವೊ,ಅವರ ಆರೋಗ್ಯದ ಬಗ್ಗೆ ಅವರೆ ಕಾಳಜಿ ವಹಿಸುವುದಿಲ್ಲವೊ ಅಲ್ಲಿಯ ವರೆಗೆ ಅಪಾಯ ಕಟ್ಟಿಟ್ಟ ಬುತ್ತಿ..ಕಳೆದ ಲಾಕ್ ಡೌನ್ ಅವಧಿಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂದು

ಆತ್ಮಹತ್ಯೆ ಮಾಡಿಕೊಂಡವರು,ಸೆನಿಟೈಸರ ಕುಡಿದು ಜೀವ ಕಳೆದುಕೊಂಡವರು ಇದ್ದಾರೆ. ಬಹುಶ: ತೋರಿಕೆಗೆ ಬಹಳ ಗಟ್ಟಿಗರಂತೆ ಕಾಣುವ ಜನ ಒಂದು ಸಣ್ಣ ಸಮಸ್ಯೆಯನ್ನು ನಿಭಾಯಿಸಲಾರದೆ ಸಾವಿಗೆ ಶರಣಾಗುವ ರೀತಿ ಮನುಕುಲದ ದೌರ್ಬಲ್ಯವನ್ನು ಸಾರಿ ಹೇಳುತ್ತಿದೆಯೇನೊ! ಎಂದು ಅನಿಸಿದ್ದು ಉಂಟು.

ಈ ಸರ್ತಿ ಬಂದ ಕೊರೊನಾ ಬಹಳ ಜನ ಯುವಕರನ್ನು,ಪ್ರತಿಭಾವಂತರನ್ನು,ಮೇಧಾವಿಗಳನ್ನು ಉತ್ತಮ ಸಂಘಟಕರನ್ನು,ಇನ್ನೂ ಬಾಳಿ ಬದುಕ ಬೇಕಾದ ನಡು ಹರೆಯದ ಮಿತ್ರರನ್ನು ನಮ್ಮಿಂದ ಕಸಿದುಕೊಂಡಿದೆ.ಕೊರೊನಾ ನಿಮಿತ್ತ ಬಂದ ಅವರ ಅಗಲುವಿಕೆ ಮನಸ್ಸನ್ನು ತೀವ್ರವಾಗಿ ಕಲಕಿ ಬಿಟ್ಟಿದೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ಅತ್ಯಂತ ದು:ಖದಾಯಕ ಕೆಲಸವೊಂದು ಉಳಿದಿದೆ.ಗೆಳೆಯರಾದ ಜರಗನ ಹಳ್ಳಿ ಶಿವಶಂಕರ,ನನ್ನತಾಲೂಕಿನವರೆ ಆದ ಸಂಘಟಕ,ಪ್ರಕಾಶಕ( ಬಂಡಾಯ ಪ್ರಕಾಶನ) ಸಹಯಾನದ ಚಾಲಕ ಶಕ್ತಿ, ದಣಿವರಿಯದ ದುಡಿಮೆಗಾರ ಗೆಳೆಯ ಡಾ.ವಿಠ್ಠಲ ಭಂಡಾರಿ ಕೊರೊನಾ ಕಾಯಿಲೆಯಿಂದ ಇಂದು ವಿಧಿವಶರಾದರು.ಅವರಿಬ್ಬರ ಆತ್ಮಕ್ಕೆ ಚಿರಶಾಂತಿ ಸಿಗಲಿ.ಕೊರೊನಾ ತೊಲಗಲಿ.


ಡಾ.ಶ್ರೀಪಾದ ಶೆಟ್ಟಿ

3 views0 comments
bottom of page