ಮನುಷ್ಯನ ಕನಸು ಯೋಜನೆ ಯೋಜನೆಗಳನ್ನೆಲ್ಲಾ ಮೂಟೆ ಕಟ್ಟಿ ಇಡುವಂತೆ ಪ್ರಕೃತಿ ಒಂದೊಂದೆ ಸವಾಲನ್ನು ಕಣ್ಮುಂದೆ ತಂದು ಒಡ್ಡುತ್ತಿದೆ. ಕೊರೊನಾವನ್ನು ಕಿಲ್ಲರ್ ಕೊರೊನಾ ಎಂದು ಮಾಧ್ಯಮದವರು ಕರೆಯುತ್ತಿದ್ದಾರೆ. ಪೀಡಿತರು,ಸೋಂಕಿತರು ಸಾವಿನ ಭಯದಿಂದ ಕೊರೊನಾ ಸಂಕಷ್ಟದಿಂದ ಭಯಗ್ರಸ್ತರಾಗಿ ಸಾವಿನ ದವಡೆಯನ್ನು ಸೇರುವ ಸಂದರ್ಭದಲ್ಲಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲ.ಜನ ಕ್ಯೂ ನಿಂತಿದ್ದಾರೆ.ಹಾಸಿಗೆ ದೊರೆತರು ಆಕ್ಷಿಜನ್ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಾವಿನ ಅಲೆಯೆದ್ದು ಅದು ಮಾಧ್ಯಮದಲ್ಲಿ ಮತ್ತೆ ಮತ್ತೆ ಬಂದು ಅಪ್ಪಳಿಸಿದ ಕಾರಣ ಜನ ಟಿ.ವಿ.ಯನ್ನು ನೋಡಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಶವ ಸಂಸ್ಕಾರಕ್ಕಾಗಿ ಇಪ್ಪತ್ತು ಮೂವತ್ತು ಅಂಬ್ಯುಲೆನ್ಸಗಳು ಚಿತಾಗಾರದ ಎದುರು ಕ್ಯೂ ನಿಲ್ಲುತ್ತಿವೆ. ಬಂಧುಗಳನ್ನು,ಮನೆಯವರನ್ನು ಕಳೆದುಕೊಂಡು ಅತ್ತು ಹಗುರಾಗಲು ಆಗದೆ ಅವರ ಕಣ್ಣೀರು ಬತ್ತಿ ಹೋಗುತ್ತಿದೆ.ಕೆಲವು ಆಸ್ಪತ್ರೆಗಳಲ್ಲಿ ಶವವನ್ನು ಎತ್ತದೆ ಅವರ ಪಕ್ಕದಲ್ಲಿರುವ ಕೋವಿಡ್ ಪೀಡಿತ ರೋಗಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಸತ್ತವರ ಶವವನ್ನು ಕೊಂಡೊಯ್ಯಲು ಖಾಸಗಿ ಅಂಬ್ಯುಲೆನ್ಸಿನವರು ₹ 40000 ಸಾವಿರದ ವರೆಗೆ ಹಣ ಕೇಳುತ್ತಿದ್ದಾರೆ.ಇದೆಲ್ಲಾ ಟಿ.ವಿ.ವಾಹಿನಿಗಳು ಬಿತ್ತರಿಸಿ್ ಸುದ್ದಿ.ಸರ್ಕಾರ ಈ ಬಗ್ಗೆ ಯಾವ ನಿಯಮ ಮಾಡಿದೆ,ಸತ್ತವರ ಕುಟುಂಬದವರು ಸೋತು ಹೋಗಿದ್ದಾರೆ.ಅವರ ಪರವಾಗಿ ಸರ್ಕಾರ ಪ್ರತಿ ಖಾಸಗಿ ಅಂಬ್ಯುಲೆನ್ಸಿಗೆ ಶವವನ್ನು ಒಯ್ಯಲು ಎಷ್ಟು ಹಣ ನಿಗದಿ ಮಾಡಿದೆ ಎಂಬುದು ಇನ್ನಷ್ಟೆ ಪ್ರಕಟವಾಗ ಬೇಕಾಗಿದೆ.
ಮಂತ್ರಿ ಮಾನ್ಯರು,ಅಧಿಕಾರಿಗಳು,ಆಸ್ಪತ್ರೆಗಳ ವೈದ್ಯಾಧಿಕಾರಿಗಳು,ಸಿಬ್ಬಂದಿ ವರ್ಗದವರು,ಸಮಾಜ ಸೇವಾ ಸಂಸ್ಥೆಗಳು ತಮ್ಮ ಸ್ವಂತದ ಕೆಲಸವನ್ನು ಬದಿಗೊತ್ತಿ ಕರೊನಾ ಪೀಡಿತರ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಕೊಳ್ಳಬೇಕಾದ ಸಂದರ್ಭ ಇದು. ಈಗ ನಾವು ಕಂಫರ್ಟ ಝೋನ್ ನಿಂದ ಹೊರ ಬಂದು ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸ ಬೇಕಾಗಿದೆ.ಖಾಸಗಿಅಂಬ್ಯುಲೆನ್ಸ ಮಾಲಕರು ಬೆಂಕಿ ಬಿದ್ದ ಮನೆಯಲ್ಲಿ ಹಿರಿದುಕೊಳ್ಳುವ ಕೆಲಸ ನಿಲ್ಲಿಸಿ ಮಾನವೀಯತೆಯನ್ನು ಮೆರೆಯುವ ಸಂದರ್ಭ ಈಗ ಬಂದಿದೆ.
" Money comes and goes
but morality comes and grows"
ಈ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಕಾಲ ಇದು.
ಕೊರೊನಾ ಒಂದನೆ ಅಲೆ ಬಂದಾಗ ನಾವು ಬಹಳಷ್ಟು ವಿಷಯಗಳನ್ನು ಕೊರೊನಾದಿಂದ ರಕ್ಷಣೆ ಪಡೆಯಲು ಕಲಿತೆವು.ಅದು ಸ್ವಲ್ಪ ಕಡಿಮೆಯಾಗಿ ಸರ್ಕಾರ ನಿಯಮಗಳನ್ನು ಸಡಿಲಿಸಿದಾಗ ಏನು ಆಗಲೆ ಇಲ್ಲ ಎಂಬಂತೆ ಮೈ ಮರೆತೆವು. ಜನರ ನಡುವಿನ ಅಂತರ ಕಡಿಮೆ ಆಯಿತು. ಮಾಸ್ಕ ಕಾಣೆಯಾಯಿತು,ಸೆನಟೈಸರ್ ಮರೆತು ಹೋಯಿತು. ಏನೂ ನಡೆದೆ ಇಲ್ಲ ಎಂಬ ಹಾಗೆ ಜನರು ವರ್ತಿಸಿದರು.ಹಬ್ಬ ಹರಿದಿನಗಳು,ಮದುವೆ ಉಪನಯನಗಳು ಮೊದಲಿನಂತೆ ನಡೆಯತೊಡಗಿದವು. ಈಗ ಎರಡನೆಯ ಅಲೆ ಅಪ್ಪಳಿಸಿದೆ.ಇದು ಮೊದಲ ಅಲೆಗಿಂತ ಅಪಾಯಕಾರಿ ಎಂಬ ಸುದ್ದಿ ಹಬ್ಬಿದೆ.ಬೆಂಗಳೂರಿನಲ್ಲಿಯ ಸಾವುಗಳನ್ನು ನೋಡಿದರೆ ಭಯ ಮತ್ತು ತಲ್ಲಣ ಉಂಟಾಗಿದೆ.ವ್ಯಾಕ್ಷಿನ್ ತೆಗೆದುಕೊಂಡರೆ ಕಡಿಮೆ ಆಗುತ್ತಿದೆ ಎಂಬ ಮಾತಿನ ಸತ್ಯಾಸತ್ಯತೆಯ ತಾಳೆ ನೋಡದೆ ಕೋವ್ಯಾಕ್ಷಿನ್ ತೆಗೆದುಕೊಳ್ಳ ಬೇಕು.
ಈಗಿನ ವೈರಸ್ ದಾಳಿಯಿಂದ ನೆಗಡಿ,ಕೆಮ್ಮು ಯಾವುದೆ ಮುನ್ಸೂಚನೆ ಇಲ್ಲದೆ ಅದು ಶ್ವಾಸಕೋಶ ವನ್ನು ಆವರಿಸಿ ಕೊಳ್ಳುತ್ತದೆ ಎಂಬ ಸುದ್ದಿ ಎಲ್ಲೆಡೆಗು ಹಬ್ಬಿದೆ. ಇಂತಹ ಸಂದರ್ಭಗಳಲ್ಲಿ ಆದಷ್ಟು ಮನೆಯಲ್ಲಿಯೆ ಇರುವುದು,ಮಾಸ್ಕ ಧರಿಸುವುದು,ಅಂತರ ಕಾಯ್ದುಕೊಳ್ಳುವುದು, ಸೆನಿಟೈಸರ ಬಳಸುವುದನ್ನು ಖಡ್ಡಾಯವಾಗಿ ಪಾಲಿಸಲೆ ಬೇಕಾಗಿದೆ. ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ಇಮ್ಯುನಿಟಿಯನ್ನು ಬೆಳೆಸಿಕೊಂಡು.ಲಘು ವ್ಯಾಯಾಮ ಪ್ರಾಣಾಯಾಮ ಧ್ಯಾನವನ್ನು ಮಾಡುತ್ತಾ ಮನೆಯಲ್ಲಿಯೆ ಹೆಚ್ಚಿನ ಸಮಯ ಕಳೆಯ ಬೇಕು.
ಮದುವೆಯಂತಹ ಕಾರ್ಯಗಳನ್ನು ಮಾಡುವಾಗ ಸರ್ಕಾರದ ನಿಯಮ ನಮ್ಮ ಹಿತಕ್ಕಾಗಿ ಎಂಬ ಭಾವನೆಯೊಂದಿಗೆ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತ ಸರ್ಕಾರದ ಮಾರ್ಗಸೂಚಿಯಂತೆ ಐವತ್ತು ಜನ ಇರಲಿ,ಬೆಂಗಳೂರಿನ ನಿಯಮದಂತೆ ೨೫ ಜನರೆ ಇರಲಿ ಶೃದ್ಧೆಯಿಂದ ಮದುವೆಯ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ಮಾಡಿ ಪೂರೈಸ ಬೇಕಾಗಿದೆ.ನಿಯಮಕ್ಕಿಂತ ಹೆಚ್ಚು ಜನರನ್ನು ಕರೆದು ಪೋಲಿಸರಿಗೆ ಅಧಿಕಾರಿಗಳಿಗೆ ಹೆದರಿ ಅಂಜಿಕೆಯಿಂದ ಕಾರ್ಯ ಮಾಡುವುದಕ್ಕಿಂತ ಆ ನಿಯಮಗಳನ್ನು ಪಾಲಿಸಿ ನಿರ್ಭಯವಾಗಿ ಮದುವೆಯಂತಹ ಮಂಗಲ ಕಾರ್ಯಗಳನ್ನು ಸಂಪನ್ನಗೊಳಿಸ ಬೇಕಾದದ್ದು ಜಾಣತನದ ನಡೆ. ಈ ಹಿಂದೆ ಮದುವೆಗಳು ಮನೆಯಲ್ಲಿಯೆ ನಡೆಯುತ್ತಿದ್ದವು. ಬಂಧು ಬಳಗದವರಷ್ಟೆ ಮದುವೆಗೆ ಬಂದು ಹೋಗುತ್ತಿದ್ದರು.ಆಗ ಎಲ್ಲರೂ ನೆಮ್ಮದಿಯಿಂದ ಇದ್ದರು.ಈಗ ಆಡಂಬರ,ಅಬ್ಬರ,ಪ್ರಚಾರದಲ್ಲಿ ನಾವು ನೆಮ್ಮದಿಯನ್ನು ಹುಡುಕುವ ಹುಚ್ಚು ಸಾಹಸ ಮಾಡುತ್ರಿದ್ದೇವೆ.ಮದುಮಗ ಮತ್ತು ಮದುಮಗಳು ತಮ್ಮ ಮುಂದಿನ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಮದುವೆ ಒಂದು ಮುನ್ನುಡಿ.ವಧು ವರರ ಭವಿಷ್ಯಕ್ಕೆ ಒಂದು ನಿಲುಗನ್ನಡಿ.ಅದನ್ನು ಅರಿತು ಅರ್ಥಮಾಡಿಕೊಂಡು ನಡೆದರೆ ಮದುವೆಯು ಯಶಸ್ವಿಯಾಗುತ್ತದೆ. ಯಾರನ್ನೊ ಮೆಚ್ಚಿಸುವ,ನಮ್ಮ ಅಹಂಕಾರವನ್ನು ಪ್ರಕಟಿಸುವ,ನಮ್ಮ ಘನತೆಯನ್ನು ಮೆರೆಯುವ ವೇದಿಕೆಯಾಗಬಾರದು ಮದುವೆಯ ಮಂಟಪ. ಅದು ಪ್ರೀತಿಯನ್ನು,ಪರಸ್ಪರ ಬಾಂಧವ್ಯವನ್ನು ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಸದ್ಭಾವನೆ ಮತ್ತು ಸಾಮರಸ್ಯದಿಂದ ನಾ ಮೇಲು ನೀ ಕೀಳು ಎಂಬ ಕ್ಲೈಬ್ಯವನ್ನು ಕಳೆದು ನಗು ನಗುತಾ ಬಾಳುವ ಸರಳ ವಿವಾಹವಾಗ ಬೇಕು.ಅದಕ್ಕೆ ಮಹಾಕವಿ ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ವಿನೂತನ ಪದ್ಧತಿಯನ್ನು ಇಪ್ಪತ್ತನೆ ಶತಮಾನದ ಆರಂಭದಲ್ಲಿಯೆ ರೂಢಿಗೆ ತಂದರು. ಶಿರಸಿಯ ತೋಟಗಾರರ ಕಲ್ಯಾಣ ಮಂಟಪದಲ್ಲಿ ಎರಡುವರೆ ದಶಕಗಳ ಹಿಂದೆ ನಮ್ಮ ಬಂಧುಗಳ ವಿವಾಹವನ್ನು ಹೆಸರಾಂತ ರೈತ ನಾಯಕ ಪರಿಸರವಾದಿ ಕಡಿದಾಳು ಶಾಮಣ್ಣ ಮತ್ತು ನಾನು ನಡೆಸಿಕೊಟ್ಟ ನೆನಪು ಇಂದಿಗೂ ಹಸಿರಾಗಿದೆ. ಮದುವೆಗೆ ಬರುವವರು ತಮ್ಮ ಆರೋಗ್ಯದ ಬಗೆಗು ಕಾಳಜಿ ವಹಿಸ ಬೇಕು. ಜೀವ ಎಲ್ಲಕ್ಕಿಂತ ಅಮೂಲ್ಯವಾದುದು. ಮದುವೆಗೆ ಬಂದವರಿಗೆ ಸೋಂಕು ತಗುಲಿದರೆ ಮದುವೆ ಮಾಡುವವರಿಗು ಒಂದು ಹೆಸರು ಮತ್ತು ಆತಂಕ. ಎಲ್ಕರೂ ಕ್ಷೇಮವಾಗಿ ಇರೋಣ
ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸೋಣ. ಮತ್ತೆ ನೆನಪಾಗುವ ಮಾತು
Life is a festival only for the wise.
- ಡಾ.ಶ್ರೀಪಾದ ಶೆಟ್ಟಿ.
Commentaires