ಶಬ್ದವೆಂಬೆನೆ?ಶ್ರೋತ್ರದೆಂಜಲು.ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.ರೂಪೆಂಬೆನೆ? ನೇತ್ರದೆಂಜಲು.ರುಚಿಯೆಂಬೆನೆ? ಜಿಹ್ವೆಯೆಂಜಲು.ಪರಿಮಳವೆಂಬೆನೆ? ಘ್ರಾಣದೆಂಜಲು.ನಾನೆಂಬೆನೆ? ಅರಿವಿನೆಂಜಲು.ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗೊಹೇಶ್ವರಲಿಂಗವು.
- ಅಲ್ಲಮ ಪ್ರಭು.
ಯುಗಾದಿ ಸಮೀಪಿಸುತ್ತಿದೆ.ಯತಾವತ್ತಾಗಿ ಹಬ್ಬದ ಆಚರಣೆ ನಡೆಯುತ್ತದೆ.ವಿದ್ಯುನ್ಮಾನ ಮಾಧ್ಯಮಗಳು ಜ್ಯೋತಿಷಿಗಳ ಮೂಲಕ ಯುಗಾಧಿಯ ಫಲವನ್ನು, ಲಾಭ ನಷ್ಟಗಳನ್ನು, ಪುಣ್ಯ ಗಳಿಕೆಗೆ,ಗ್ರಹಚಾರ ನಿವಾರಣೆಗೆ ಮಾಡ ಬೇಕಾದ ಕಾರ್ಯಕ್ರಮಗಳ ಪಟ್ಟಿಯನ್ನು ನೀಡುತ್ತಾರೆ.ಟಿ.ವಿ. ನೋಡುತ್ತಾ ಅದನ್ನು ಬರೆದುಕೊಂಡು,ರೆಕಾರ್ಡಮಾಡಿಕೊಂಡು ಅನುಷ್ಠಾನ ,ಆಚರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನೆಲ್ಲಾ ತರ್ಕ ಮತ್ತು ಅರಿವಿನ ನಿಕಷಕ್ಕೆ ಒಡ್ಡಿದ ಅಲ್ಲಮ ಪ್ರಭುವಿನ ಒಂದೊಂದು ವಚನಗಳು ನಮ್ಮ ತಿಳುವಳಿಕೆಯನ್ನು ವಿಸ್ತರಿಸುತ್ತವೆ.
ನಾನು ಎಂಬುದು ಅರಿವಿನ ಎಂಜಲು.ಎಂಜಲು ಎಂಬ ಭಿನ್ನವನನು ಅಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರ ಲಿಂಗ ಎಂಬ ಅಲ್ಲಮನ ಮಾತು ಸದಾಕಾಲ ಸ್ಮರಣಾರ್ಹ. ಈ ಎಂಜಲನ್ನು ಮೀರಿ ನಿಲ್ಲುವ ಮಹಾಗುಣವನ್ನು ಹೊಂದಿದವನೆ ಸಾಧು.ಆತನೆ ಸಂತ.
ಅಂಗಕ್ಕೆ ಆಚಾರವೆ ಚೆಲುವು.ಮನಕ್ಕೆ ಮಹಾನುಭಾವವೆ ಚೆಲುವು.ಅಖಂಡೇಶ್ವರನೆಂಬ ನಿಜವಿಂಬುಗೊಂಡವಂಗೆ ಶರಣರ ಸಂಗವೆ ಚೆಲುವು.
ಎಂಬ ಶರಣರ ವಚನವು ನಿಜವಾದ ಚೆಲುವು ಯಾವುದೆಂದು ಶ್ರುತ ಪಡಿಸುತ್ತದೆ.
ಸೆಕೆ ಶಿವರಾತ್ರಿಯ ನಂತರ ಮತ್ತಿಷ್ಟು ಹೆಚ್ಚಾಗಿದೆ.ಎಲ್ಲಿಗೂ ಹೋಗ ಬೇಡಿರಿ ಮನೆಯಲ್ಲಿಯೆ ಇರಿ ಎಂದು ಸಾರಿ ಹೇಳಲು ಕೊರೊನಾ ಎರಡನೆಯ ಅಲೆ ಬಂದಿದೆ. ಜನರು ಕೋವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. ಬದುಕುವ ಹಂಬಲವನ್ನು ಗಾಢವಾಗಿಸಿಕೊಳ್ಳುತ್ತಿದ್ದಾರೆ. ಈ ಸಲದ ಕೋವಿಡ್ ಅಲೆಗೆ ಪ್ರಾಣಗಳು ಹಾರಿ ಹೋಗದಿರಲಿ.ಎಲ್ಲರ ಬದುಕು ಹಸನಾಗಲಿ. ಜನರ ಭಯವು ದೂರವಾಗಲಿ
ದೇವಿ ನಮ್ಮನ್ನು ಭಯದಿಂದ ರಕ್ಷಿಸು.ದೇವಿ ದುರ್ಗೆ ನಿನಗೆ ನಮಸ್ಕಾರ ಎಂಬ ಪ್ರಾರ್ಥನೆಯಿದೆ. ನಾವು ಭಯರಹಿತರಾಗಿ ಅಂದರೆ ನಿರ್ಭಯದಿಂದ ಬದುಕುವ ಬಗೆಯನ್ನು ಕಂಡುಕೊಳ್ಳ ಬೇಕಾಗಬೇಕು.
ಒಳ್ಳೆಯ ಮನಸ್ಸು,ಒಳ್ಳೆಯ ಆಚಾರ,ಯಾರ ಕೇಡನ್ನೂ ಹಾರೈಸದ ಸುಗುಣ,ತನ್ನಂತೆ ಪರರನ್ನು ಭಾವಿಸುವ ಗೌರವಿಸುವ ಔದಾರ್ಯ ಎಲ್ಲರಲ್ಲಿಯು ನೆಲೆಸಲಿ.ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಬ್ಬರನ್ನು ನಮ್ಮದೆ ಆದ ಯರ್ಡಸ್ಟಿಕ್ ನಿಂದ ಅಳೆಯುವ, ಇವರಿಂದ ನಮಗೆಷ್ಟು ಲಾಭ,ಎಷ್ಟು ಪ್ರಯೋಜನ ,ಇವರು ನಮಗಿಂತ ಶ್ರೀಮಂತರೊ ಬಡವರೊ ಎಂದೆಲ್ಲಾ ತೂಕ ಹಾಕಿ,ಲೆಕ್ಕಾಚಾರಮಾಡಿ ನೀ ನನಗಿದ್ದರೆ ನಾ ನಿನಗೆ ಎಂಬವರೆ ಹೆಚ್ಚಾಗಿದ್ದರೆ. ಮಾತನಾಡಿದರೆ ಮಾತ್ರ ಮಾತನಾಡುವ,ಸಂದೇಶ ಕಳಿಸಿದರೆ ಮಾತ್ರ ಮರು ಸಂದೇಶ ಕಳಿಸುವ,ನಕ್ಕರ ಮಾತ್ರ ನಗುವವರ ಸಂತಾನ ಹೆಚ್ಚಾಗಿದೆ.ಆ ಕಾಲದ ನಿಜದ ಪ್ರೀತಿ,ಅಪಾರವಾದ ಮಮತೆ, ನಿರ್ವ್ಯಾಜವಾದ ಪ್ರೇಮ ಕಡಿಮೆಯಾಗುತ್ತಾ ಇದು ಬರಿದಾಗಿ ಬಿಡುವುದೇನೋ ಎಂಬ ಭ್ರಮೆ ಮೂಡ ತೊಡಗಿದೆ. ನಾವು ಒಳಿತನ್ನು ಕಾಣುವ,ಕೇಳುವ,ಆಡುವ ಗುಣಗಳಿಂದ ವಿಮುಖರಾಗಿ ಬಿಡುತ್ತೇವೊ ಏನೋ ಎಂಬ ಆತಂಕದ ಸ್ಥಿತಿಯಲ್ಲಿ ಇದ್ದೇವೆ.ಆದರೆ ಹಾಗಾಗ ಬಾರದು.ನಮ್ಮ ಕುಬ್ಜತೆಯನ್ನು ಕಳೆದು ಸುಳಿದೆಗೆದು ಬೆಳೆವ ಗುಣವನ್ನು ಅಹರ್ನಿಶಿ ಬೆಳೆಸಿಕೊಳ್ಳ ಬೇಕು. ಅದಕ್ಕೆ ಒಳ್ಳೆಯವರ ಒಡನಾಟ,ಒಳ್ಳೆಯ ಆಚಾರ ವಿಚಾರ ನಮ್ಮದಾಗ ಬೇಕು.ಸತ್ಯ ಶರಣರ ಸಂಗ ಸುಖವನ್ನು ಸಂತಸವನ್ನು ನೀಡಬಲ್ಲುದು.
ಕಾಣಬಹುದೆ ಪರುಷದ ಗಿರಿಯಂಧಕಂಗಗೆ?
ರಸದ ಬಾವಿ ನಿರ್ಭಾಗ್ಯಂಗೆ?
ತೆಗೆಯಬಹುದೆ ಕಡವರವು ದರಿದ್ರಂಗೆ?
ಕರೆಯ ಬಹುದೆ ಕಾಮಧೇನುವಶುದ್ಧಂಗೆ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ ಹುಣ್ಣ ಮಾಡಿಕೊಂಡರೆ ಹೋಲ ಬಹುದೆ?
ಎನ್ನೊಡೆಯ ಕೂಡಲ ಸಂಗನ ಶರಣರನು ಪುಣ್ಯವಿಲ್ಲದೆ ಕಾಣಬಹುದೆ? ಬಸವಣ್ಣ.
-ಡಾ.ಶ್ರೀಪಾದ ಶೆಟ್ಟಿ.
Comments