top of page

ಆಲೋಚನೀಯ - ೩೫

ಹೋದ ವರುಷದ ಹೋಳಿ ಹುಣ್ಣಿಮೆಗೆ ಬಣ್ಣವೆ ಇರಲಿಲ್ಲ.ಕೊರೊನಾ ತನ್ನ ಕಪ್ಪು ಹಸ್ತದಿಂದ ಹೋಳಿಯ ಬಣ್ಣಗಳ ಬೆಡಗನ್ನು ಮರೆ ಮಾಡಿತ್ತು. ಈ ವರ್ಷದ ಹೋಳಿ ಇಂದು ಸಮಾಪನಗೊಳ್ಳುತ್ತಿದೆ. ಈ ವರ್ಷ ಸುಗ್ಗಿ ಮಕ್ಕಳು ಊರು,ಕೇರಿ,ಮನೆಗಳಿಗೆ ಬಂದು ಸುಗ್ಗಿಯನ್ನು ಕುಣಿದದಿದ್ದಾರೆ.ಆದರೆ ಅವರ ಕುಣಿತದ ಹೊಯ್ಲಿನಲ್ಲಿ ಹಿಂದಿನ ಉಮೇದಿ ಮತ್ತು ಗಮ್ಮತ್ತು ಮರೆಯಾಗಿತ್ತು.ಯಾವುದೊ ಒಂದು ಅವ್ಯಕ್ತವಾದ ಭಯ ಮತ್ತು ಆತಂಕ ಒಟ್ಟಿಗೆ ಕಾಡುವಂತೆ ಕಾಣುತ್ತಿತ್ತು.

ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು

ನಡು ಮದ್ಯದಲಿ ಅಡಿಕೆ ತೆಂಗುಗಳ ಮಡಿಲು

ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

ಇಲ್ಲಿಯೆ ಇನ್ನೊಮ್ಮೆ ಹುಟ್ಟುವೆನು ನಲ್ಲೆ

ದಿನಕರ ದೇಸಾಯಿ

ವಸಂತಾಗಮನಕ್ಕೆ ಪೂರ್ವಭಾವಿಯಾಗಿ ಬರುವ ಸುಗ್ಗಿ ತದನಂತರ ಬಣ್ಣ ಬಣ್ಣಗಳ ರಂಗಿನೋಕುಳಿಯೆರಚುವ ಹೋಳಿ ಇವೆಲ್ಲಾ ಪ್ರಕೃತಿಯ ಪರಿವರ್ತನೆಯ ಪರಿಯನ್ನು ಪ್ರತಿನಿಧಿಸುತ್ತದೆ.ಫಸಲುಗಳನ್ನು ಮನೆಯೊಳಗೆ ತುಂಬಿಕೊಳ್ಳುವ ಸಂಭ್ರಮದ ಆಚರಣೆಯೆ ಸುಗ್ಗಿ.

" ಸುಗ್ಗಿ ಮಕ್ಳು ಬಂದಿರೊ ನುಗ್ಗಿ ಕಾಯ್ ಕೊಯ್ದಿರೊ

ಚೋ ಹೋ ಹೋಯ್ ಚೋ ಹೋ ಹೋಯ್"

ಎಂದು ಹಾಡುತ್ತಾ ಸುಗ್ಗಿ ಮಕ್ಕಳು ಕುಣಿದು ಕುಪ್ಪಳಿಸಿ ಆನಂದ ಪಡುವುದು ಈ ಸುಗ್ಗಿಯ ಕಾಲದಲ್ಲಿ. ಸುಗ್ಗಿ ಹಿಗ್ಗನು ತರುವ ಕಾಲ.ಉತ್ತರ ಕನ್ನಡದ ಸುಗ್ಗಿ ಅತ್ಯಂತ ವೈಶಿಷ್ಠ್ಯಪೂರ್ಣವಾದುದು. ನಾಡಿನ ಹೆಸರಾಂತ ಜನಪದ ವೈದ್ಯರಾದ ಬೆಳಂಬಾರದ ಬೊಮ್ಮು ಶಿವು ಗೌಡರ ಮಗ ನೇಮನಾಥ ಗೌಡ ಎಂಬ ನನ್ನ ವಿದ್ಯರ್ಥಿ "ಉತ್ತರ ಕನ್ನಡ ಜಿಲ್ಲೆಯ ಸುಗ್ಗಿ ಸಂಪ್ರದಾಯ" ಎಂಬ ವಿಷಯದಲ್ಲಿ ಪಿಎಚ್,ಡಿ. ಪದವಿ ಪಡೆಯಲು ನನ್ನ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಅಧ್ಯಯನ ನಡೆಸಿದ್ದರು.ಅವರು ಅಧ್ಯಯನ ಪೂರ್ಣಗೊಳಿಸಿ ಪಿಎಚ್,ಡಿ.ಪದವಿ ಪಡೆದಿದ್ದರೆ ಅದು ಉತ್ತರ ಕನ್ನಡ ಜಿಲ್ಲೆ ಮತ್ತು ಸುಗ್ಗಿ ಸಂಪ್ರದಾಯಕ್ಕೆ ಒಂದು ಉಲ್ಲೇಖನಾರ್ಹ ಗ್ರಂಥವಾಗುತಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ,ನಾಮಧಾರಿ,ಕೊಮಾರಪಂತ,ಮುಕ್ರಿ,

ಅಂಬಿಗ ಮುಂತಾದ ಜನ ವರ್ಗದವರು ಸುಗ್ಗಿಯ ಹಬ್ಬವನ್ನು ಶೃದ್ಧೆಯಿಂದ ಆಚರಿಸುತ್ತಾ ಬಂದಿದ್ದಾರೆ.

ಅಂಕೋಲೆಯ ಬೆಳಂಬಾರದ ಸುಗ್ಗಿ ಬಹು ಕಾಲದಿಂದ ಪ್ರಸಿದ್ಧವಾಗಿದೆ.ಈ ವರ್ಷ ಕೊರೊನಾದ ಕಾರಣ ಸುಗ್ಗಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದೆ. ಅಂಕೋಲಾ ಸುಗ್ಗಿಯ ಹಗಣ ಸರಕಾರದ ಮತ್ತು ಆಳುವ ವರ್ಗದ ಎಡವಟ್ಟುಗಳನ್ನು ಹಗಣದ ಮೂಲಕ ಟೀಕಿಸುವ ಬಗೆ ಹಾಲಕ್ಕಿ ಸಮುದಾಯದ ಜಾಣ್ಮೆ ಮತ್ತು ಪ್ರತಿಭಟನಾ ಮನೋಭಾವಕ್ಕೆ ಸಾಕ್ಷಿಯಾಗಿತ್ತು.

ಈ ವರ್ಷ ದೆಹಲಿಯಲ್ಲಿ ರೈತರು ಹೋಳಿಯಲ್ಲಿ ಕಾಮನನ್ನು ಸುಡುವ ಬದಲು ಕೇಂದ್ರ ಸರ್ಕಾರ ಮಾಡಿದ ರೈತರ ಕುರಿತಾದ ಮೂರು ಮಸೂದೆಗಳನ್ನು ಸುಟ್ಟು ಕಾಮದಹನದ ಬದಲು ಸರ್ಕಾರದ ಕಾನೂನು ದಹನ ಮಾಡಿದ ಸಂದೇಶವನ್ನು ರವಾನಿಸಿದೆ.ಆದರೆ ಕಾರ್ಪೋರೇಟ ಕುಳಗಳ ಹಿತಾಸಕ್ತಿಗೆ ಅಜ್ಜಗಾವಾಲಾಗಿ ನಿಂತಿರುವ ಆಳುವ ಸರಕಾರಕ್ಕೆ ಇದೆಲ್ಲ ನಗಣ್ಯ. ರೈತರು ಸಹ ಚಳುವಳಿಯ ಕಾವು ತಣ್ಣಗಾಗದಂತೆ ನೋಡಿಕೊಳ್ಳುತ್ತಿದ್ದಾರೆ.ಸರ್ಕಾರ ಕೆಲಕಾಲ ಈ ಕಾಯಿದೆಯನ್ನು ಅಮಾನತ್ತಿನಲ್ಲಿಟ್ಟು ರೈತ ಪರ ಕಾಳಜಿಯನ್ನು ತೋರಬಹುದಿತ್ತು.ಇದೆಲ್ಲ ಆಳರಸರಿಗೆ ಅರ್ಥವಾಗುವ ಮಾತಲ್ಲ.ಇದನ್ನು ಅವರು ಪ್ರತಿಷ್ಠೆಯ ಸಂಗತಿಯಾಗಿ ಭಾವಿಸಿ ಮೊಂಡು ಹಟ ಮಾಡುತ್ತಿದ್ದಾರೆ.ಇದರಿಂದ ಬಡ ರೈತರು ಕಂಗೆಟ್ಟು ಹೋಗಿದ್ದಾರೆ.ಆದರೆ ಅವರು ಶರಣಾಗತರಾಗದೆ ಹೋರಾಟದ ಕೆಚ್ಚನ್ನು ತೀವ್ರಗೊಳಿಸಿದ್ದಾರೆ.ಹೋಳಿ ಹೋರಾಟದಲ್ಲಿರುವ ರೈತರ ಪಾಲಿಗೆ ಸಂಭ್ರಮಾಚರಣೆಯಾಗದೆ ಹೋರಾಟದ ಕೆಚ್ಚನ್ನು ತೀವ್ರಗೊಳಿಸಿದೆ.ಇನ್ನಾದರೂ ಆಳುವ ಸರಕಾರ ಬಡವರಾದ ಕೃಷಿಕಾರ್ಮಿಕರತ್ತ ದೃಷ್ಟಿ ಹರಿಸಿ ಅವರ ಸಮಸ್ಯೆಯನ್ನು ಪರಿಹರಿಸ ಬೇಕಾಗಿದೆ.ಆಗ ಹೋಳಿಯಂತಹ ಭೂಮಿ ಮತ್ತು ರೈತರ ಪರವಾದ ಆಚರಣೆಗಳು ಅರ್ಥಪೂರ್ಣವಾಗುತ್ತದೆ.

ಡಾ.ಶ್ರೀಪಾದ ಶೆಟ್ಟಿ

10 views0 comments
bottom of page