top of page

ಆಲೋಚನೀಯ- ೩೪

ಬದುಕು ಎಂಬ ಮೂರಕ್ಷರದ ಮೂರೆಲೆಯಾಟದಲ್ಲಿ

ಗೆದ್ದವರೆಷ್ಟೊ,ಬಿದ್ದವರೆಷ್ಟೊ,ಮರಳಿ ಮೈ ಕೊಡವಿ ಎದ್ದು ಬಂದವರೆಷ್ಟೊ ಲೆಕ್ಕವಿಟ್ಟವರು ಯಾರು?

ತನ್ನ ನಾಟಕದಲ್ಲಿ ಬದುಕನ್ನು ಕುರಿತು ವಿಲಿಯಂ ಶೇಕ್ಷಪಿಯರ ಎಂಬ ನಾಟಕಕಾರ,ಕವಿ,ಚಿಂತಕ ಮಾಡಿದ ವ್ಯಖ್ಯಾನಗಳು ಸದಾಕಾಲ ಉಲ್ಲೇಖನಾರ್ಹ

"Life is a tale told by an idiot full with Furies signifies nothing." ಇಡಿಯೆಟ್ ಹೇಳಿದ ಬದುಕಿನ ಒಗಟು ಕತೆಯನ್ನು ಬಿಡಿಸಿ ಅರ್ಥ ಹುಡುಕಿ ಕೊಟ್ಟವರು ವಿರಳ.ಅಂತವರ ವ್ಯಾಖ್ಯಾನಗಳು ನಮಗೆ ಒಪ್ಪಿತವಾಗಿಲ್ಲ.ಏಳು ಜನ ಕುರುಡರು ಆನೆಯ ಒಂದೊಂದು ಭಾಗವನ್ನು ಮುಟ್ಟಿ ತಮಗೆ ತೋಚಿದಂತೆ ಅರ್ಥೈಸಿದಂತೆ. ಆನೆಯ ಕಾಲು ಕಂಬ,ಕಿವಿ ಮೊರ,ಮೈ ಗೋಡೆ,ಬಾಲ ಹಾವು.ಇದು ಆ ಕುರುಡರು ಕಂಡ ಭಾಗಶಃ ಸತ್ಯವೆ ಹೊರತು ಪೂರ್ಣ ಸತ್ಯವಲ್ಲ. ಹಾಗೆ ಬದುಕನ್ನು ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನ ನಡೆದೆ ಇದೆ. ಈ ಪ್ರಯತ್ನದ ಫಲಶ್ರುತಿಯಾಗಿ ಕಾವ್ಯ,ಪುರಾಣ,ಕತೆ,

ನಾಟಕ,ನೃತ್ಯ,ವೇದ,ಉಪನಿಷತ್ತು,ತಂತ್ರ,ಮಂತ್ರ,ಮಾಟ,ಮೋಡಿ,ಯಜ್ಞ,ಯಾಗ,ಬಲಿ,ಹೋಮ,ಹವನ,ದರ್ಶನ,ತೇರು,ಜಾತ್ರೆ,ಉತ್ಸವ ಹಾಗು ಹಲವು ಆಚರಣೆಗಳು,ಹಬ್ಬ ಹರಿದಿನಗಳು ಹುಟ್ಟಿಕೊಂಡವು. ಬದುಕಿದ್ದಾಗ ನಡೆಯುವ ಆಚರಣೆಗಳು ಒಂದು ವಿಧವಾದರೆ ಮರಣೋತ್ತರವಾಗಿ ನಡೆಯುವ ಉತ್ತರ ಕ್ರಿಯೆಯ ಪರಿ ಇನ್ನೊಂದು ಬಗೆಯದು. ಸಾವಿನ ನಂತರ ಮುಂದೇನು ಎಂಬ ಬಗ್ಗೆ ಈ ವರೆಗೆ ಆ ಲೋಕಕ್ಕೆ ಹೋಗಿ ಮರಳಿ ಬಂದವರು ಇಲ್ಲ ಅಲ್ಲಿಂದ ವರದಿ ತಂದವರು ಇಲ್ಲ. ದೇವರ ಅಸ್ಥಿತ್ವದ ಬಗ್ಗೆಯು ಇದೆ ಬಗೆಯ ಜಿಜ್ಞಾಸೆ ನಡೆಯುತ್ತಲೆ ಇದೆ.

ಕವಿ ಮಧುರ ಚೆನ್ನರು ತಮ್ಮ ನನ್ನ ನಲ್ಲ ಕವನದಲ್ಲಿ ದೇವರ ಅಸ್ಥಿತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿ ಅದಕ್ಕೆ ಉತ್ತರವನ್ನು ಕಂಡು ಕೊಂಡಿದ್ದಾರೆ.ನನ್ನ ನಲ್ಲ ಕನ್ನಡದ ಮೊದಲ ಅನುಭಾವ ಕಾವ್ಯ ಎನ್ನ ಬಹುದು.

" ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು

ಬಯಕೆ ಬರುವುದರ ಕಣ್ಸನ್ನೆ ಕಾಣೊ

ಅರಿಯದಾ ಹವಣಿಕೆಯು ಜೀವ ಜೀವನ ಲೀಲೆ

ದೇವ ದೇವನ ಗೂಢ ವಿಧಿಯು ಕಾಣೊ"

ಅಂತಹ ದೇವರ ಸ್ವರೂಪವನ್ನು ಕವಿ ಬಸವಣ್ಣನವರ ವಚನವನ್ನು ಕಾವ್ಯದ ಮೊದಲು ಉಲ್ಲೇಖಿಸಿದ್ದಾರೆ

" ಎಲ್ಲರ ಗಂಡನಂತಲ್ಲವ್ವ ನನ ಗಂಡ

ಸುಳಿಯಲಿಲ್ಲ ಸುಳಿದು ಶೃಂಗಾರವ ಮಾಡಲಿಲ್ಲ

ಎನ್ನೊಳಗೆ ತನ್ನ ಬೈತಿಟ್ಟನಲ್ಲಾ ಕೂಡಲ ಸಂಗಮದೇವಾ" ಎಂದು 'ಶರಣ ಸತಿ ಲಿಂಗ ಪತಿ' ಎಂಬ ಭಾವವನ್ನು ಬಲಗೊಳಿಸುತ್ತಾರೆ.

" ದೇವರಾಯನ ಹೆಸರ ನಾನೇಕೆ ಕೇಳಿದೆನೆ ತಾಯಿ

ನಾನೇಕೆ ನಂಜು ನುಂಗಿದೆನೆ ತಾಯಿ

ಯಾವ ಕಡೆಗು ಮಗ್ಗಲೂರಗೊಡದಮ್ಮಯ್ಯ

ಈ ನೋವ ನಾ ತಾಳಲೆಂತೆ ತಾಯಿ"

ಆ ಕಾಲ ಹದಿನಾಲ್ಕು ವರ್ಷದ ರಾಮರ ವನವಾಸ,ಗರ್ಭಿಣಿಯ ನವಮಾಸ ಮೃತ್ಯುಹಾಸವಾಗಿ ಕವಿಯನ್ನು ಕಾಡಿದೆ.ಆದರೆ ದೇವರ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಗಲಿಲ್ಲ.ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನು.ಅಂದು ದೇವರಾಯನ ಹೆಸರನ್ನು ಕೇಳಿ ಆತನಿಗಾಗಿ ಪರಿತಪಿಸಿದ ಪರಿಯನ್ನು ಕವಿ ಮೆಲುಕು ಹಾಕುತ್ತಾನೆ

" ಬರುವನೆಂಬರು ಕೆಲರುಬಾರನೆಂಬರು ಕೆಲರು

ಅಹುದುಬಹುದೆಂದು ನರಳುವರು ಕೆಲರು

ಸತ್ತವನ ಮನೆಯಲ್ಲಿ ಸಂತೆ ನೆರೆಯುವ ತೆರದಿ

ಬಲ್ಲವರು ಬಲ್ಲಂತೆ ಹೇಳಿ ಮನೆಗೋಡುತಿಹರು

ಸತ್ತವನ ಬದುಕಿಸುವ ಸಾಮರ್ಥ್ಯದವರಾರು"

ಎಂದು ಪ್ರಶ್ನಿಸಿದ ಪರಿ ನಿಜದ ದರ್ಶನವೆ ಆಗಿದೆ.

ದೇವರ ಹುಡುಕಾಟಕ್ಕೆ ಅನ್ವೇಷಣೆಗೆ ಅನುಭಾವಿಯಾದ ಕವಿ ಪರಿತಪಿಸುವ ಪರಿ ಅನನ್ಯ.

"ನಿಲ್ಲು ನಿಲ್ಲೆಲೆ ನವಿಲೆ ನಿನ್ನ ಕಣ್ಣುಗಳೇಸು

ಕಣ್ಣ ಬಣ್ಣಗಳೇಸು ಎಲ್ಲ ರೂಪಿಸಿದವನು

ಎಲ್ಲಿ ತಾನಡಗಿದನೆ ತಾಳಲಾರದು ಜೀವ ಹೇಳ ಬಾರೆ"

ಎಂದು ಸೃಷ್ಟಿಯ ಅಗಾಧತೆಯನ್ನು ದೇವನ ನಿಗೂಢತೆಯನ್ನು ನವಿಲಿನ ಕಣ್ಣುಗಳ ಮೂಲಕ ಹುಡುಕುವ ಪರಿ ಪ್ರತಿಭಾವಂತ ಕವಿಯಿಂದ ಮಾತ್ರ ಸಾಧ್ಯ.ಅಲ್ಲಿ ಇಲ್ಲಿ ಎಲ್ಲಯೂ ಮುಗಿಯದ ಆಕಾಶ ತಂದೆಯ ಹತ್ತಿರ ನೀನಾರೆ ಬಲ್ಲೆಯಾ ನಲ್ಲನೆಲ್ಲಿ ಎಂದು ಕೇಳುವ ಕವಿ" ಆರದಾರತಿ ಹಿಡಿದು ಹಾರುತಿರುವವಳಾರೆ ಹೊನ್ನಿ ಏ ಹೊನ್ನಿ ನೀನಾರೆ ಬಾರೆ ಅಲ್ಲಿಯಾರೆ ನಲ್ಲನಿದ್ದಾನು ತೋರೆ" ಎಂದು ಹಲುಬಿ ಹಂಬಲಿಸುವ,ಪರಿ ಪರಿಯಾಗಿ ಬೇಡುವ ಪರಿ ನನ್ನ ನಲ್ಲ ಕವನದಲ್ಲಿ ಹೃದಯಂಗಮವಾಗಿ ಮೂಡಿ ಬಂದಿದೆ.

ಕೊನೆಗೆ ತನ್ನೊಳಗೆ ಭಗವಂತನ ಸಾಕ್ಷಾತ್ಕಾರ ಆಗುವುದನ್ನು ಕವಿ ಮನಗಾಣುತ್ತಾನೆ.

"ತುಂಬಿ ಬಂದಿತು ಕಾಂತಿ ತುಂಬಿ ಬಂದಿತು ಶಾಂತಿ

ತುಂಬಿ ಜಗದೊಡಲ ಜೀವ ತುಂಬಿ

ತುಂಬಿ ಬಂತೆಂದರೂ ಇದ್ದುದಿತ್ತೆ ಇತ್ತು

ತುಂಬಿ ಜಗದೊಡಲ ಜೀವ ತುಂಬಿ."

"ಶಿಲೆಯ ಮೇಲಿರುತಿಹ ಮೋಹಿಯುಂಟು

ಮೊಲೆಯ ಮೇಲಿರ್ದ ಯೋಗಿಯುಂಟು

ಉಂಡುಪವಾಸಿ ಬಳಸಿ ಬ್ರಹ್ಮಚಾರಿ

ನಮಗಿದೆ ಬೇಕಾದ ಗಂಟು"

ಮತ್ತೆ ಮಧುರ ಚೆನ್ನರು,

ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು

ಎಂಬ ಪಲ್ಲವಿಯೊಂದಿಗೆ ನನ್ನ ನಲ್ಲ ಕಾವ್ಯಕ್ಕೆ ಮುಕ್ತಾಯ ಹಾಡುತ್ತಾರೆ. ಈ ನೆಲೆಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿ ಫಲವನ್ನು ಪಡೆಯೋಣ.

- ಡಾ.ಶ್ರೀಪಾದ ಶೆಟ್ಟಿ57 views0 comments
bottom of page