ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು,ಪುಷ್ಯ ಮಾಸದ ಬಿದಿಗೆ.ಮಕರ ಸಂಕ್ರಮಣ ನಿನ್ನೆ ಮುಗಿಯಿತು.ಸೂರ್ಯ ಮಕರ ವೃತ್ತಕ್ಕೆ ಬಂದಿದ್ದಾನೆ.ಜನ ಎಳ್ಳು ಬೆಲ್ಲಗಳನ್ನು ಹಂಚಿಕೊಂಡುಒಳ್ಳೊಳ್ಳೆ ಮಾತನಾಡುತ್ತಾ , ದೇವಸ್ಥಾನಗಳಿಗೆ,ದೈವದ ಮನೆಗಳಿಗೆ ಹೋಗಿ ವಾರ್ಷಿಕ ಪೂಜೆಯನ್ನು ಸಲ್ಲಿಸಿ,ಅಶ್ವತ್ಥ ವೃಕ್ಷಕ್ಕೆ ಪೂಜೆ ಗೈದು,ನದಿ ಸ್ನಾನ ಮಾಡಿ ಸಂಕ್ರಾಂತಿಯ ಹಬ್ಬವನ್ನು ಆಚರಿಸಿದ್ದಾರೆ.
ಗಿಡ ಗಿಡಕ ಕೂತು ಕೈ ಮಾಡಿ ಕರಿತಾವ ಹಾಡಿ ಹಕ್ಕಿ ಬಳಗ
ಸಂಕ್ರಾಂತಿ ಬಂತ ಸಡಗರ ತಂತ ಕುಸುರೆಳ್ಳು ಬೆಲ್ಲದೊಳಗ
ಎಂಬ ಜನಪದ ಹಾಡು ನೆನಪಾಯಿತು. ಒಂದೊಂದು ಋತುವಿಗೂ ವಿಶೇಷವಿದೆ.ಆರು ಋತುಗಳು ತನ್ನ ವೈವಿಧ್ಯದಿಂದ ಪೃಕೃತಿಯ ಅಂದ ಮತ್ತು ಸೊಬಗನ್ನು ಇಮ್ಮಡಿಗೊಳಿಸುತ್ತವೆ. ಕವಿಕುಲ ಗುರುವೆಂದು ಪ್ರಸಿದ್ಧನಾದ ಮಹಾಕವಿ ಕಾಳಿದಾಸ ತನ್ನ" ಋತು ಸಂಹಾರ" ಎಂಬ ಕಾವ್ಯದಲ್ಲಿ ಅದನ್ನು ಅದ್ಭುತವಾಗಿ ವರ್ಣಿಸಿದ್ದಾನೆ. ಅಭಿನವ ಕಾಳಿದಾಸ ಎಂದು ಪ್ರತೀತಯಶರಾದ ಎಸ್.ವಿ.ಪರಮೇಶ್ವರ ಭಟ್ಟ ಅವರು ಕನ್ನಡ ಕಾಳಿದಾಸ ಮಹಾಸಂಪುಟದಲ್ಲಿ ಕಾಳಿದಾಸನ ಕಾವ್ಯವನ್ನು ಕನ್ನಡಿಸಿದ್ದಾರೆ. ಹೇಮಂತ ಬರುವ ಬಗೆಯನ್ನು ಬಣ್ಣಿಸಿದ ಕಾಳಿದಾಸನ ಕಾವ್ಯದ ಕನ್ನಡಾನುವಾದ ಇಂತಿದೆ.
ಗಿಡಮರದ ಕೊನೆಗಳಲಿ ಹೊಸ ಚಿಗುರನಿರಿಸಿ
ಶಾಲಿವನಗಳ ಬೆಳೆಸಿ ಬಾಗೆ ಹೂ ಬಿರಿಸಿ
ತಾವರೆಯ ಮೊಗವಿಳಿಸಿ ಬಿಳಿ ಮಂಜು ಸುರಿಸಿ
ಹೇಮಂತ ಋತುರಾಜನೈತರುವನರಸಿ.
ಸುರಿವ ಮಂಜು ಸೋನೆಯಿಂದ ಗಾಳಿ ಶೀತಮಾಗಿರೆ
ಮದಿಸಿದಂಚೆಯುಲಿಗಳೆಮಗೆ ಕಿವಿಗೆ ಮಧುರಮಾಗಿರೆ
ಶುಭ್ರ ಸರೋವರದ ಸಲಿಲ ಸವಿಗೆ ಸ್ವಾದುಮಾಗಿರೆ
ಸರಸಿಯೆನಿತು ನಲವನೀವುದದರ ಬಳಿಯೊಳೈತರೆ.
ಹೇಮಂತದ ಎಲ್ಲ ಚಹರೆಗಳನ್ನು ವಿಲಾಸದ ಕವಿ ಕಾಳಿದಾಸ ಕಟ್ಟಿಕೊಡುವ ಬಗೆ ರೋಚಕವಾದುದು.
ಈಗ ಕಾಲ ಮೊದಲಿನಂತಿಲ್ಲಕಾಲದ ಗಡಿಯಾರಕಕ್ಕೆ ಸರಿಯಾಗಿ ಕೀಲಿ ಕೊಡದ ಕಾರಣ ಅದು ಯಡವಟ್ಟಾದಂತೆ ಅನಿಸುತ್ತಿದೆ. ಚಳಿಗಾಲದಲ್ಲಿ ಸೆಕೆಗಾಲ ಬಂದು ಜೋರಾದ ಮಳೆ ಇಳೆಯನ್ನು ತೊಯ್ದು ತೊಪ್ಪೆಮಾಡಿದೆ. ಅಡಿಕೆ ಮರದಲ್ಲಿ ಅರಳುವ ಸಿಂಗಾರ ಕೊನೆಯೊಳಗೆ ನೀರು ಸಿಕ್ಕಿ ಅದು ಕೊಳೆಯ ತೊಡಗಿದೆ. ಎಷ್ಟೊ ಗಿಡ ಮರಗಳ ಹೂವು ಹೀಚು ಮಿಡಿ ಕಾಯಿಗಳು ನೆಲಕ್ಕೆ ಬಿದ್ದು ಮಣ್ಣಾಗಿವೆ.
ಇಪ್ಪತ್ತಕ್ಕೆ ಯಜಮಾನಿಕೆ ಸಿಗ ಬಾರದು. ಎಪ್ಪತ್ತಕ್ಕೆ ಭೇದಿ ಶುರುವಾಗ ಬಾರದು ಎಂಬ ಅನುಭವ ವಾಣಿ ನೆನಪಾಗುತ್ತಿದೆ. ಆದರೆ ಈ ಬಗ್ಗೆ ಏನು ಮಾತನಾಡದೆ ಒಪ್ಪಿಕೊಳ್ಳಲೆ ಬೇಕು. ನಾವು ಈ ವರೆಗೆ ಪರಿಸರಕ್ಕೆ ಮಾಡಿದ ದ್ರೋಹಕ್ಕೆ ಪ್ರತಿಫಲವನ್ನು ಪಡೆಯುತ್ತಿದ್ದೇವೆ.ಉಪ್ಪು ತಿಂದವ ನೀರು ಕುಡಿದ ಹಾಗೆ.ಬೆಂಕಿಯನ್ನು ಬಿತ್ತಿದವನು ಬೂದಿಯನ್ನು ಬೆಳೆದ ಹಾಗೆ.
ಉತ್ತರ ಕರ್ನಾಟಕದಲ್ಲಿ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ. ನಾನು ಎಂ.ಎ.ವ್ಯಾಸಂಗ ಮಾಡಲು ಧಾರವಾಡಕ್ಕೆ ಹೋಗದೆ ನನ್ನ ಜಿಲ್ಲೆಯಲ್ಲಿ ಬಿ.ಇಡಿ ಮಾಡಿಕೊಂಡು ಹೈಸ್ಕೂಲ ಮೇಷ್ಟ್ರು ಆಗಿದ್ದರೆ ನಾನು ಭಾವಿಯ ಕಪ್ಪೆ ಆಗಿ ಉಳಿಯುತ್ತಿದ್ದೆ. ನನ್ನ ವಲಯ ಸಂಕುಚಿತಗೊಳ್ಳುತ್ತಿತ್ತು.ನಾನು ಉತ್ತರ ಕನ್ನಡ ಜಿಲ್ಲೆಗೆ ಸೀಮಿತಗೊಳ್ಳುತ್ತಿದ್ದೆ.
ಧಾರವಾಡ ನನಗೆ ದ.ರಾ.ಬೇಂದ್ರೆ, ಜಿ.ಬಿ.ಜೋಶಿ, ಪಾಟೀಲ ಪುಟ್ಟಪ್ಪ, ಹಳೇಪೇಟೆ ಚಿಂತಾಮಣಿ, ಬೆಟಗೇರಿ ಕೃಷ್ಣಶರ್ಮ, ಗೀತಾ ಕುಲಕರ್ಣಿ, ಕೀರ್ತಿನಾಥ ಕುರ್ತಕೋಟಿ, ಚಂಪಾ, ಸಿದ್ಧಲಿಂಗ ದೇಸಾಯಿ, ಗಿರಡ್ಡಿ ಗೋವಿಂದರಾಜ, ಶಂಕರ ಮೊಕಾಶಿ ಪುಣೇಕರ, ಪ್ರೊ.ಎಂಕೆ ನಾಯ್ಕ ಸಿ.ವಿ.ವೇಣುಗೋಪಾಲ, ಡಾ.ಸರೋಜಿನಿ ಶಿಂತ್ರಿ,
ಡಾ.ಕೆ.ಕೃಷ್ಣಮೂರ್ತಿ, ಡಾ.ಸಂಪಿಗೆ ತೋಂಟದಾರ್ಯ , ಪ್ರೊ.ಚಕ್ರಪಾಣಿ,ತೇಜಸ್ವಿ ಕಟ್ಟಿಮನಿ, ಮಹಾದೇವ ಹೊರಟ್ಟಿ, ಗಿರೀಶ ಕಾರ್ನಾಡ, ಆರ್ಯ, ರಮಾಕಾಂತ ಜೋಶಿ ಚನ್ನವೀರ ಕಣವಿ, ಎಸ್.ಬಿ.ನಾಯಕ ಪಾರುಮನೆ ಹಾಗು ಕನ್ನಡ ವಿಭಾಗದ ಗುರುಗಳಾದ ಡಾ.ಸುಂಕಾಪುರ, ಡಾ.ವೃಷಭೇಂದ್ರ ಸ್ವಾಮಿ, ಡಾ.ಕೊಟ್ರಶೆಟ್ಟಿ, ಡಾ.ಕಲಬುರ್ಗಿ, ಡಾ.ಇಮ್ರಾಪುರ,ಡಾ.ಮಲ್ಲಾಪುರ, ಡಾ.ಮಾಡ್ತಾ, ಡಾ.ಕೇ.ಜಿ.ಶಾಸ್ತ್ರಿ, ಡಾ.ಮಹೀಶವಾಡಿ, ಡಾ.ಹಿಂಗಮಿರೆ, ಡಾ.ಕಾಪಸೆ, ಡಾ.ಕುಳ್ಳಿ ಇವರೆಲ್ಲರನ್ನು ಹತ್ತಿರಕ್ಕೆ ತಂದಿತು.ಅವರ ಒಡನಾಟದ ರಸ ನಿಮಿಷಗಳು ಹಚ್ಚ ಹಸಿರಾಗಿವೆ.
ವಿಜಯ ದಶಮಿಯಂದು ಬನ್ನಿ ಹಂಚಿಕೊಳ್ಳುವ, ನಾಗರ ಪಂಚಮಿಯಂದು ಗೆಳೆಯರು ತಂದ ಪಂಚಮಿ ಉಂಡಿ ತಿನ್ನುವ, ಶ್ರಾವಣದಲ್ಲಿ ಮುರುಘಾ ಮಠಕ್ಕೆ ಹೋಗುವ ಆ ದಿನಗಳು ಅತ್ಯಂತ ಸುಖಪ್ರದವಾಗಿದ್ದವು.
ಧಾರವಾಡದ ನೆನಪೆ ಹಾಗೆ. ಅದು ಮೊಗೆದಷ್ಟು ಬತ್ತದ ನೃತ್ಯ ಕಾರಂಜಿ. ಧಾರವಾಡದಲ್ಲಿ ಕಂಡ ಹಬ್ಬಗಳು, ಆಚರಣೆಗಳು, ಸಾಹಿತ್ಯಕ ಕಾರ್ಯಕ್ರಮಗಳು ಚೇತೋಹಾರಿ.ಅದು ನನ್ನ ವ್ಯಕ್ತಿತ್ವವನ್ನು ಬೆಳೆಸಿದೆ. ಸಂಕ್ರಮಣದ ನೆನಪಿನಲ್ಲಿ ಧಾರವಾಡದ ನೆನಪು ಒತ್ತರಿಸಿ ಬಂತು.
"ತಿಳಗೋಳ ಗ್ಯಾ ಘೋಡ ಘೋಡ್ ಬೋಲ್ "ಎಂಬ ಮಾತು ನೆನಪಾಗುತ್ತಿದೆ. ಹಕ್ಕಿಯ ಬಳಗ ಗಿಡ ಮರಗಳಲ್ಲಿ ಕುಳಿತು ಹಾಡುತ್ತಾ ಕೈ ಮಾಡಿ ಕರೆಯುತ್ತಿದೆ.ಕೊರೊನಾ ದೂರ ಸರಿ ಎನ್ನುತ್ತಿದೆ.
- ಡಾ.ಶ್ರೀಪಾದ ಶೆಟ್ಟಿ
Comments