top of page

ಆಲೋಚನೀಯ-೨೭


ವರದಪುರದ ಮಹಾಯೋಗಿ ಭಗವಾನ್ ಶ್ರೀಧರ ಸ್ವಾಮಿ ಮಹಾರಾಜರ,ಗುರು ದತ್ತಾತ್ರೇಯನ ಜನ್ಮ ಜಯಂತಿ ಮಾರ್ಗಶೀರ್ಷ ಪೂರ್ಣಿಮೆ.ಮಹಾಕವಿ ರಸ ಋಷಿ ಕುವೆಂಪು ಅವರ ಜನ್ಮ ದಿನ ಡಿಸೆಂಬರ ೨೯.


ನಮ: ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ

ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮ:


ಶಾಂತ ಸ್ವಭಾವದ ದಿವ್ಯರು ಸತ್ಯ ಮತ್ತು ಧರ್ಮದ ಸ್ವರೂಪವೆ ಆಗಿರುವ ಸ್ವ ಆನಂದ ಎಂಬ ಅಮೃತದಿಂದ ತೃಪ್ತಿಯನ್ನು ಹೊಂದಿದ ಶ್ರೀಧರರಿಗೆ ನಮಸ್ಕಾರ.

ಸಚ್ಚಿದಾನಂದ ಕಂದಾಯ ಜಗದಂಕುರ ಹೇತವೆ

ಜಗದ್ದಿತಾಯ ದೇವಾಯಶ್ರೀದತ್ತಾಯ ನಮೋ ನಮ:


ಅನಸೂಯಾ ಅತ್ರಿಯರ ನಂದನನು ನಂಬಿದ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುವ ತ್ರಿಮೂರ್ತಿ ಸ್ವರೂಪನಾದ ದತ್ತಾತ್ರೇಯನಿಗೆ ನಮಸ್ಕಾರ.


ಕ್ಲೈಬ್ಯವನು ಸಂಹರಿಸೊ ದೌರ್ಬಲ್ಯವನು ದಹಿಸೊ

ಹೃದಯಕ್ಕೆ ಪೌರುಷವ ದಯಪಾಲಿಸೊ!

ಮನವು ಸರಿಯೆಂದುದನು ಎದೆಯನುಸರಿಸುವಂತೆ

ದೃಢತೆಯಾ ನಡೆಯನು ನನ್ನದೆನಿಸೊ!

ಕುವೆಂಪು.

ಲೋಕ ಹಿತವನ್ನು ಬಯಸುತ್ತ, ಎಲ್ಲರ ಅಭ್ಯುದಯವನ್ನು ಹಾರೈಸುವ ವಿಭೂತಿ ಪರುಷರು ನಮ್ಮ ನಡುವೆ ಆಗಿ ಹೋಗಿದ್ದಾರೆ.ಈಗ ಅಂತವರ ಸಂಖ್ಯೆ ಕಡಿಮೆಯಾಗಿದೆ.ಅಪರೂಪಕ್ಕೆ ಅಲ್ಲೊ ಇಲ್ಲೊ ಒಬ್ಬಿಬ್ಬರು ಸಿಕ್ಕಿದರೆ ನಮ್ಮ ಪುಣ್ಯ.

ಸದ್ಗುರು ಶ್ರೀಧರ ಸ್ವಾಮಿಗಳು ಬಡ ಬಗ್ಗರ ಉದ್ಧಾರಕ್ಕಾಗಿಯೆ ಜನ್ಮ ತಾಳಿ ಬಂದವರೇನೊ ಎನ್ನುವ ಹಾಗೆ ಅವರು ತಮ್ಮ ಜೀವಿತವನ್ನು ವಿನಿಯೋಗಿಸಿದ್ದಾರೆ.ಅವರಿದ್ದಲ್ಲಿ ಬಿಕ್ಷುಕರು,ಬಾವಾಜಿಗಳು,ನಿರ್ಗತಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು.ಅವರಿಗೆ ಊಟ,ಬಟ್ಟೆ,ಖರ್ಚಿಗೆ ದುಡ್ಡು ಕೊಟ್ಟು ಶ್ರೀಧರರು ಕಳಿಸಿಕೊಡುತ್ತಿದ್ದರಂತೆ.ಮನೆ ಕಟ್ಟುವವರಿಗೆ,ಮಗನ ಉಪನಯನ ಮಾಡಲು ಗುರುಗಳ ಆಶೀರ್ವಾದ ಕೇಳ ಬಂದವರಿಗೆ ಅವರ ಕಾರ್ಯ ಸಾಂಗವಾಗಿ ಸಾಗಲು ಬೇಕಷ್ಟು ಹಣವನ್ನು ಕೊಟ್ಟು ಕಳಿಸುತ್ತಿದ್ದರಂತೆ.ಚಳಿಗಾಲದಲ್ಲಿ ಸಾಗರದಲ್ಲಿಯ ಕಂಬಳಿಗಳನ್ನು ಖರೀದಿಸಿ ಅದನ್ನು ಬಡವರಿಗೆ ಮತ್ತು ಬಿಕ್ಕುಕರಿಗೆ ಹಂಚುತ್ತಿದ್ದರಂತೆ. ಬದರಿಕಾಶ್ರಮ ದಲ್ಲಿ ಚಾತುರ್ಮಾಸದಲ್ಲಿ ಇದ್ದ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲ ಸಾಧಕರಿಗೆ ತಪಸ್ವಿಗಳಿಗೆ ಅನ್ನ ಛತ್ರವನ್ನು ತೆರೆದು ಅವರಿಗೆ ಸಂತೃಪ್ತಿ ನೀಡಿದವರು ಶ್ರೀಧರರು. ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತೇನೆ ಎಂದು ತಾಯಿ ಕಮಲಾ ಮಾತೆಗೆ ಮಾತು ಕೊಟ್ಟು ಅದೆ ರೀತಿ ನಡೆದುಕೊಂಡವರು.ಅವರು ಶೀಗೆ ಹಳ್ಳಿಯಲ್ಲಿ ಇದ್ದ ಸಂದರ್ಭದಲ್ಲಿ ದುಷ್ಟಳಾದ ಸ್ತ್ರೀಯೊಬ್ಬಳು ಕುಡಿಯಲು ವಿಷಮಿಶ್ರಿತ ಹಾಲನ್ನು ಕೊಟ್ಟಳು. ಆಕೆಯ ಹತ್ತಿರ ಅಮ್ಮಾ ಇದನ್ನು ನನಗೆ ಎಂದು ಕೊಟ್ಟೆಯಾ? ನಾನು ಇದನ್ನು ಕುಡಿಯಲಾ ಎಂದು ಪ್ರಶ್ನೆ ಮಾಡಿದಾಗ,ನಿಮಗೆ ಕೊಟ್ಟಿದ್ದು ಎಂದಾಗ ಅದನ್ನು ಕುಡಿಯುತ್ತಾರೆ.ವಿಷ ಪ್ರಾಶನದಿಂದ ಅವರ ದೇಹ ಜರ್ಜರಿತವಾಗುತ್ತದೆ.ಯಾತನೆಯಾಗುತ್ತದೆ.

ಅದನ್ನೆಲ್ಲಾ ತಾಳ್ಮೆಯಿಂದ ಸಹಿಸಿಕೊಂಡು ಲೋಕ ಕಲ್ಯಾಣಕ್ಕಾಗಿ ಅವರು ಜೀವ ಹಿಡಿದು ಬಾಳುತ್ತಾರೆ. ಅವರಿಗೆ ಬಾಲ್ಯದಲ್ಲಿ ಪೇಡೆ ಎಂದರೆ ಬಹಳ ಪ್ರೀತಿ. ಸನ್ಯಾಸಿಯಾದ ಬಳಿಕ ಜಿಹ್ವಾ ಚಾಪಲ್ಯವನ್ನು ಮೀರ ಬೇಕೆಂದು ಸಗಣಿಗೆ ಪೇಡೆಯನ್ನು ಕಲಸಿಕೊಂಡು ತಿಂದು ವಾಂತಿ ಮಾಡಿಕೊಳ್ಳುತ್ತಾರೆ. ತನ್ನ ಬಳಿಗೆ ಬಂದ ದೀನರಿಗೆ ಆರ್ತರಿಗೆ ಕಷ್ಟದಲ್ಲಿದ್ದವರಿಗೆ ಸಂತಾನವಿಲ್ಲದವರಿಗೆ ಮಂತ್ರಾಕ್ಷತೆಯನ್ನು ಕೊಟ್ಟು ಅವರ ಬಾಳಿಗೆ ಬೆಳಕನ್ನು ನೀಡಿದ್ದಾರೆ.೧೯೦೮ ನೆ ಇಸ್ವಿಯಲ್ಲಿ ಮಾರ್ಗಶೀರ್ಷ ಮಾಸದ ಹುಣ್ಣಿಮೆಯ ದಿನ ದತ್ತ ಜಯಂತಿಯ ದಿನದಂದು ಲಾಡಚಿಂಚೊಳಿಯ ಮನೆ ಹತ್ತಿರ ದತ್ತನ ಪಲ್ಲಕ್ಕಿ ಬಂದಾಗ ಶ್ರೀಧರ ಸ್ವಾಮಿಗಳ ಜನನವಾಗುತ್ತದೆ. ಪೂನಾದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಿದ ಅವರು ಸಜ್ಜನ ಗಡಕ್ಕೆ ಹೋಗಿ ಸಮರ್ಥರ ಸೇವೆ ಮಾಡಿ ಅವರ ಅನುಗ್ರಹ ಪಡೆದು ಶೀಗೆಹಳ್ಳಿಗೆ ಬಂದು ಅಲ್ಲಿ ತಪವನ್ನು ಗೈದು ನಂತರ ಸಾಗರ ತಾಲೂಕಿನ ವದ್ದಳ್ಳಿಗೆ ಹೋಗಿ ತಪವನ್ನು ಗೈದು ೧೯-೪-೧೯೭೩ ರಂದು ಸಮಾಧಿ ಹೊಂದುತ್ತಾರೆ. ಅವರ ತಪೋಭೂಮಿ ಈಗ ವರದಪುರ ಎಂಬ ಹೆಸರಿನಿಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಣವಾಗಿದೆ.

ದತ್ತಾತ್ರೇಯನು ಗುರು ಮತ್ತು ದೇವರು.ಶ್ರೀಪಾದ ಶ್ರೀವಲ್ಲಭ,ಶ್ರೀ ನರಸಿಂಹ ಸರಸ್ವತಿ,ಶ್ರೀ ಮಾಣಿಕ್ ಪ್ರಭು,ಶ್ರೀ ಸ್ವಾಮಿ ಸಮರ್ಥ,ಶ್ರೀ ಸಾಯಿಬಾಬಾ,ಶ್ರೀ ಭಾಲಚಂದ್ರ ಮಹಾರಾಜ ಇವರೆಲ್ಲರೂ ದತ್ತಾತ್ರೇಯನ ಅವತಾರಗಳು.ದತ್ತನ ಜೊತೆಗಿರುವ ಹಸು ಪೃಥ್ವಿ ತತ್ವವನ್ನು,ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ.ದತ್ತನು ಪ್ರತಿದಿನ ಮದ್ಯಾಹ್ನ ಗಾಣಗಾಪುರಕ್ಕೆ ಬೇರೆ ಬೇರೆ ವೇಷದಲ್ಲಿ ಭಿಕ್ಷೆ ಗೆ ಬರುತ್ತಾನೆ ಎಂಬ ನಂಬಿಕೆಯಿದೆ.ಅಲ್ಲಿಗೆ ಹೋದ ಭಕ್ತರು ಭಿಕ್ಷೆಯನ್ನು ಬೇಡಿ ತಿನ್ನುವ ರೂಢಿ ಮೊದಲಿನಿಂದಲೂ ಇದೆ.ಗುರು ಚರಿತ್ರೆ ಎಂಬ ಗ್ರಂಥವು ದತ್ತಾತ್ರೇಯನ ಮಹಿಮಾತಿಶಯದ ವರ್ಣನೆಯಿಂದ ಕೂಡಿದೆ.ಇದನ್ನು ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಪಾರಾಯಣ ಮಾಡುವ ಕ್ರಮ ಪ್ರಚಲಿತದಲ್ಲಿದೆ.

ದೇವಲ್ ಗಾಣಗಾಪುರ, ಮಾಹೂರ್,ಕುರವಪುರ,

ಪೀಠಾಪುರ, ವಾರಣಾಸಿ, ಶ್ರೀಶೈಲ, ಭಟ್ಟಗಾವ್, ಪಾಂಚಾಳೇಶ್ವರ, ಗಿರನಾರ್, ಕಾರಂಜಾ, ಔದುಂಬರ,ನರಸೋಬವಾಡಿ ಇವು ದತ್ತ ಕ್ಷೇತ್ರಗಳು.

ಕುವೆಂಪು ಅವರು ಋಷಿಯಂತೆ ಬದುಕಿದವರು. ಹೊಸಗನ್ನಡ ಸಾಹಿತ್ಯದಲ್ಲಿ ಇಂಥ ಕವಿಗಳು ವಿರಳ. ನಾನೃಷೆ ಕುರುತೆ ಕಾವ್ಯಂ ಎಂಬ ಮಾತಿಗೆ ಹೊಸಗನ್ನಡ ಸಾಹಿತ್ಯದಲ್ಲಿ ನಿದರ್ಶನವಾದವರು ಕುವೆಂಪು.ರಾಮಕೃಷ್ಣ ಆಶ್ರಮದ ಪರಿಸರ ಮತ್ತು ಪ್ರಭಾವದಲ್ಲಿ ಬೆಳೆದ ಅವರು ಋಷಿ ವಾಖ್ಯ ಮತ್ತು ವಿಜ್ಞಾನವನ್ನು ಸರ್ವರ ಉದಯಕ್ಕಾಗಿ ಬಳಸಿಕೊಂಡವರು.ಪಂಪ " ಮನುಷ್ಯ ಜಾತಿ ತಾನೊಂದೆ ವಲಂ" ಎಂದರೆ ಕುವೆಂಪು " ಮನುಜ ಮತ ವಿಶ್ವ ಪಥ" ಎಂಬ ಸಂದೇಶವನ್ನು ಸಾರಿ ಹೇಳಿದವರು. "ಓ ನನ್ನ ಚೇತನ ಆಗು ನೀ ಅನಿಕೇತನ:" ಎಂದು ಹೇಳಿದವರು.ರಾಮಾಯಣ ದರ್ಶನಂ ಕುವೆಂಪು ಅವರ ದರ್ಶನ ದೃಷ್ಟಿಯನ್ನು ಹೊಸಕಾಲದ ಅಗತ್ಯವನ್ನರಿತು ಜಗದಭ್ಯುದಯದ ಕನಸನ್ನು ಬಿತ್ತರಿಸಿದ ಮಹಾಕಾವ್ಯ. ತಪ್ಪಿದರೆ ಏನೊರ್ಮೆ ಅನುಭವಕೆ ಅದುವೆ ಪೆರ್ಮೆ ಎಂದವರು ಕುವೆಂಪು.ಅವರ ಕಾವ್ಯದಂತೆ ಗದ್ಯ ಬರಹಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ.ಸ್ವಾಮಿ ವಿವೇಕಾನಂದ,ರಾಮಕೃಷ್ಣ ಪರಮ ಹಂಸರ ಜೀವನ ಚರಿತ್ರೆಗಳು,ಕುವೆಂಪು ಆತ್ಮ ಚರಿತ್ರೆ ನೆನಪಿನ ದೋಣಿಯಲ್ಲಿ,ಮಲೆ ನಾಡಿನ ಚಿತ್ರಗಳು ಲಲಿತ ಪ್ರಬಂಧ, ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು ಕಾದಂಬರಿಗಳು.ಅವರ ವಿಮರ್ಶೆಗಳು ಚೇತೋಹಾರಿಯಾದುದು. ಕುವೆಂಪು ಕನ್ನಡದ ಕಂಪು,ಇಂಪು,ಪೆಂಪು ಎಲ್ಲವೂ ಹೌದು.

"ಯಾವ ಶಾಸ್ತ್ರ ಏನು ಹೇಳಿದರೇನು ಎದೆಯು ಧ್ವನಿಗೂ ಮಿಗಿಲಾದ ಧ್ವನಿಯಿಹುದೇನು?" ಎಂದು ಪ್ರಶ್ನಿಸಿದವರು ಕನ್ನಡಿಗರ ಎದೆಯಾಣ್ಮ ಕುವೆಂಪು ಅವರು.

ಇಂದು ಈ ಪುಣ್ಯ ಪುರುಷರನ್ನು ಹೀಗೆ ನೆನಪಿಸಿಕೊಳ್ಳಲು ಕಾರಣವಾದ ಆಲೋಚನೆ.ಕಾಂ ಪತ್ರಿಕೆಯ ಜೊತೆಗಿನ ಬಂಧ ಅಷ್ಟ ಬಂಧದಂತೆ ಗಾಢವಾಗುತ್ತಿದೆ.

‌‌‌ ‌‌‌ ‌ ಡಾ.ಶ್ರೀಪಾದ ಶೆಟ್ಟಿ.

58 views0 comments
bottom of page