top of page

ಆಲೋಚನೀಯ-೨೬

ಮಹಾತ್ಮಾ ಗಾಂಧೀಜಿಯವರು ಈ ಜಗತ್ತು ಕಂಡ ಅಪ್ರತಿಮ ಚೇತನ.ಭಾರತ ದೇಶದ ಭಾಗ್ಯ ವಿಧಾತ. ಇನ್ನು ಎಷ್ಟೋ ಕಾಲ ಜನ ಗಾಂಧೀಜಿಯನ್ನು ಮರೆಯಲಾರರು.ಚಲಾವಣೆಯಾಗುವ ಭಾರತದ ಕರೆನ್ಸಿಯಲ್ಲಿ ಅವರ ಪೋಟೊ ಇದೆ ಎಂಬ ಕಾರಣ ಒಂದೇ ಅಲ್ಲ.ಭಾರತ ದೇಶದ ನಡೆ,ನುಡಿ. ಚಿಂತನೆ ಗಳನ್ನು ರೂಪಿಸುವಲ್ಲಿ ಗಾಂಧೀಜಿಯವರ ಪಾತ್ರ ಅಸಾಧಾರಣವಾದುದು. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಜನರ ಮುಂದೆ ಮಂಡಿಸಿದ ಅವರು ಹಳ್ಳಿಗಳ ಉದ್ಧಾರ ದೇಶದ ಉದ್ಧಾರ ಎಂದು ಸಾರಿ ಹೇಳಿದರು.


ಹಳ್ಳಿಗಳ ಉದ್ಧಾರದ ಆಶಯವನ್ನೆ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಗ್ರಾಮ ಪಂಚಾಯತ ಚುನಾವಣೆಯ ಪರ್ವ ಆರಂಭವಾಗಿದೆ

ಡಿಸೆಂಬರ ೨೨ ಮತ್ತು ೨೭ ರಂದು ಚುನಾವಣೆ ನಡೆದು ಡಿಸೆಂಬರ ೩೧ ಕ್ಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಈ ಚುನಾವಣೆಗೆ ಕೆಲವು ಕಡೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ಆಗಿದೆ. ಇಂತಹ ಆಯ್ಕೆ ಕೆಲವೆಡೆ ಸವಾಲಿನ ಮೂಲಕ ಮಾಡಲಾಗಿದೆ ಎಂಬ ಕಳಂಕವನ್ನು ಅಂಟಿಸಿಕೊಂಡಿದೆ.ಇನ್ನು ಕೆಲವು ಕಡೆ ಉಮೇದುವಾರರೆ ಇಲ್ಲದ ಸ್ಥಿತಿಯು ಇದೆ.ಹಲವು ಕಡೆ ಸ್ಪರ್ಧಾಳುಗಳ ನಡುವೆ ತೀವ್ರವಾದ ಪೈಪೋಟಿ ನಡೆದಿದೆ. ಆಯ್ಕೆಯಾದ ಬಳಿಕ ನಾವು ಕರೆದರೂ ಮಾತನಾಡದ ಅಭ್ಯರ್ಥಿಗಳು ಈಗ ಕರೆದು ಮಾತನಾಡಿಸುತ್ತಿದ್ದಾರೆ.ಸಿಕ್ಕ ಸಿಕ್ಕಲ್ಲಿ ಯೋಗ ಕ್ಷೇಮ ವಿಚಾರಿಸುತ್ತಾ ನಾವು ನಿಮಗೆ ಎಷ್ಟು ಆಪ್ತರು ಎಂದು ಬಿಂಬಿಸಲು ಹರ ಸಾಹಸ ಮಾಡುತ್ತಿದ್ದಾರೆ.


ಈ ಅಭ್ಯರ್ಥಿಗಳು ಮತವನ್ನು ಕೇಳುವುದನ್ನು ಬಿಟ್ಟು ತಾನು ಸ್ಪರ್ಧಿಸಿದ ಕ್ಷೇತ್ರಕ್ಕೆ ಯಾವ ಯೋಜನೆ ತರುತ್ತೇನೆ,ಇಲ್ಲಿ ಯಾವ ಕಾಮಗಾರಿಯ ಅಗತ್ಯವಿದೆ ಎಂದು ಹೇಳಲಾರದ ಮನೋಸ್ಥಿತಿಯವರು. ಆಯ್ಕೆಯಾದ ಬಳಿಕ ಎಲ್ಲಿ ಕಾಮಗಾರಿ ಮಾಡ ಬೇಕು,ಅದರಲ್ಲಿ ಎಷ್ಟು ಹಣ ಕಮಾಯಿಸ ಬೇಕು.ಅಧಿಕಾರಿಗಳಿಗೆ ಎಷ್ಟು ಪರ್ಸಂಟೇಜ್ ಕೊಡ ಬೇಕು ಎಲ್ಲಾ ಕ್ರಿಯಾಯೋಜನೆಯನ್ನು ಈಗಾಗಲೆ ಸಿದ್ಧ ಮಾಡಿಕೊಂಡು ಚುನಾವಣೆಯ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ.ಕಾಲು ಹಿಡಿದು ನಮಸ್ಕತಿಸುವ, ಗುಂಪು ಕಟ್ಟಿಕೊಂಡು ಪ್ರಚಾರ ಮಾಡುವ, ದೇವಾಲಯದ ಉತ್ಸವಗಳಲ್ಲಿ ಪಾಲ್ಗೊಳ್ಳುವ ಗುಪ್ತವಾಗಿ ಮತದಾರರ ಕೂ ಬೆಚ್ಚಗೆ ಮಾಡುವ, ಕೆಲವರನ್ನು ಕರೆದು ಅವರಿಗೆ ಅಮಲೇರಿಸುವ ಕೆಲಸದಲ್ಲಿ ಬಿಸಿಯಾಗಿದ್ದಾರೆ.ಚುನಾವಣೆ ಮುಗಿದು ಇವರು ಆಯ್ಕೆಯಾದರೆ ಮುಂದಿನದ ಭೂಪ ಕೇಳೆಂದ.ಇವರನ್ನು ತಡೆಯುವವರು ಯಾರು ಇಲ್ಲ!


ಯುವಕರು ಇದನ್ನು ಸವಾಲಾಗಿ ಸ್ವೀಕರಿಸಲಾರದ ಸಂದಿಗ್ಧದಲ್ಲಿ ಇದ್ದಾರೆ.ಯತಾಸ್ಥಿತಿವಾದಕ್ಕೆ ಹೊಂದಿಕೊಂಡ ಅವರು ಈ ದಡ್ಡು ಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸುವ ಉಸಾಬರಿ ನಮಗೇಕೆ ಎಂದು ರಂಗದಿಂದ ಒಂದಿಷ್ಟು ದೂರ ಉಳಿದಿದ್ದಾರೆ.ನವ ಭಾರತದ ಅಧಿಕಾರಿಗಳಿಗೂ ಈ ಬಗ್ಗೆ ಕಾಳಜಿಯಿಲ್ಲ.ಅವರ ಮೇಲಿನವರು ನೀಡಿದ ಆದೇಶವನ್ನು ಪಾಲಿಸುತ್ತಾ,ಚುನಾವಣೆಯನ್ನು ಸುಸೂತ್ರವಾಗಿ ಮುಗಿಸಿ( ಈ ಒತ್ತಡಕ್ಕೆ ಒಳಗಾಗುವರು ಕೆಳ ಹಂತದ ಅಧಿಕಾರಿಗಳು) ದಪ್ತರು ಕಟ್ಟಿ ನಿರಾಳವಾಗಿ ಬಿಡುತ್ತಾರೆ.ಮುಂದೆ ಚಕ್ರ ತಾನೆ ತಾನಾಗಿ ಉರುಳುತ್ತದೆ.ಅಧ್ಯಕ್ಷರ,ಉಪಾಧ್ಯಕ್ಷರ ಆಯ್ಕೆ,ಪತ್ರಿಕಾ ಪ್ರಚಾರ,ಅಭಿನಂದನಾ ಸಮಾರಂಭ ಎಗ್ಗಿಲ್ಲದೆ ಸಾಗುತ್ತದೆ.ಎಡಗೈ ಹೆಬ್ಬೆರಳಿಗೆ ಕಪ್ಪು ಹಚ್ಚಿಕೊಂಡ ಮತದಾರ ಪ್ರಭು ಕತ್ತಲೆಯಲ್ಲಿಯೆ ಉಳಿಯುತ್ತಾನೆ. ಮಂತ್ರಿ ಮಾನ್ಯರು ಬಾಜಾ ಬಜಂತ್ರಿಯೊಂದಿಗೆ ಅವರ ಕ್ಷೇತ್ರದ ತಾಲೂಕಗಳ ರಂಗ ಪ್ರವೇಶ ಮಾಡಿ ಪ್ರವೇಶ ಕುಣಿತ ಕುಣಿದು ಪೀಠಿಕೆಯ ಅರ್ಥ ಹೇಳಿ ಕಾಣದಂತೆ ಮಾಯವಾಗಿ ಬಿಡುತ್ತಾರೆ.


ಮುಖ್ಯ ಮಂತ್ರಿಗಳಿಗೆ ಭಿನ್ನಮತವನ್ನು ಸರಿದೂಗಿಸಿಕೊಂಡು,ಕೇಂದ್ರದವರನ್ನು ಸಂಬಾಳಿಸಿಕೊಂಡು.ಅವರು ಗುರುಗುಟ್ಟಿದರೆ ಅನ್ಯ ಪಕ್ಷದವರ ಮೈತ್ರಿ ಮಾಡಿ ತೊಡೆತಟ್ಟಿ ಸಂಗ್ರಾಮಕ್ಕೆ ಕರೆಯುತ್ತಾ ಮೇಲಿನವರ ಬಾಯಿ ಮುಚ್ಚಿಸ ಬೇಕಾಗುತ್ತದೆ.ಸಚಿವರಿಗೆ ಅವರದೆ ತಲೆ ಬಿಸಿ,ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹೊಣೆ ಹೊರುವಾಗ ಹಾಗೆ ಮಾಡುವೆ ಹೀಗೆ ಮಾಡುವೆ ಎಂದು ಬೊಬ್ಬಿರಿದವರಿಗೆ ಮರೆವಿನ ರೋಗ!

ಮತದಾರ ಪ್ರಭು ಚುನಾವಣೆಯ ಬಳಿಕ ನೇಪಥ್ಯಕ್ಕೆ ಸರಿಯುತ್ತಾನೆ.ಮುಂದಿನ ಚುನಾವಣೆಯಲ್ಲಿ ಕೆಲವು ನಿಮಿಷ ಅಷ್ಟೆ ಅವನ ರಂಗ ಪ್ರವೇಶ.ಕುಣಿದು ಕುಪ್ಪಳಿಸಲು,ಹಣ ಗಳಿಸಿ ಮಹಡಿ ಮನೆ ಕಟ್ಟಿಕೊಳ್ಳಲು ಆಯ್ಕೆಯಾದವರು ಶತ ಪ್ರಯತ್ನ ಮಾಡುತ್ತಲೆ ಇರುತ್ತಾರೆ.ಪಿ.ಡಿ.ಒ.ಗಳನ್ನು,ಶಾನಭಾಗರನ್ನು ಗದರಿಸುತ್ತಾ,ತಹಶಿಲ್ದಾರರ ಎದುರು ಹಲ್ಲು ಕಿರಿಯುತ್ತಾ,ಜಿಲ್ಲಾಧಿಕಾರಿಗೆ ಸಲಾಮು ಸಲ್ಲಿಸುತ್ತಾ ರೊಟ್ಟಿ ಸುಟ್ಟುಕೊಳ್ಳುವ ಖದೀಮರ ನಡುವೆ ನಿಸ್ಪೃಹನಾದ ವ್ಯಕ್ತಿ ಆಯ್ಕೆಯಾಗಿದ್ದರೆ ಅವನಿಗೆ ಮಳ್ಳನ ಪಟ್ಟ ಕಟ್ಟಿ ಇವರು ಪಿತೂರಿ ನಡೆಸುತ್ತಾರೆ.ದೇಶಾವರಿ ನಗೆ ಸೂಸುತ್ತಾ ಪ್ರಜಾತಂತ್ರದ ಕತ್ತು ಹಿಚುಕುತ್ತಾರೆ.ಮಹಾತ್ಮಾ ಗಾಂಧೀಜಿ ಮತ್ತೊಮ್ಮೆ ಪ್ರತ್ಯಕ್ಷರಾದರೂ ರಿಪೇರಿ ಆಗದ ಸ್ಥಿತಿ ನಮ್ಮದು.

" ಇಂದು ಬಾಳಿದು ಕೂಳ ಕಾಳಗವು

ಹೊಟ್ಟೆಯೆ ಕೇಂದ್ರವಾಗಿದೆ ನರನ ಜೀವಿತಕ್ಕೆ

ಅನ್ನದನ್ಯಾಯ ದಾವಾಗ್ನಿಯಲಿ

ಬತ್ತುತಿದೆ ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ"


ಕವಿ ಎಂ.ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು ಕವನದ ಸಾಲು ನೆನಪಾಗುತ್ತಿದೆ.


ಕಟ್ಟುವೆವು ನಾವು ಹೊಸ ನಾಡೊಂದನು

ರಸದ ಬೀಡೊಂದನು

ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ

ಹೊಸ ನೆತ್ತರುಕ್ಕುಕ್ಕಿ ಆರಿಹೋಗದ ಮುನ್ನ

ಕಟ್ಟುವೆವು ನಾವು ಹೊಸ ನಾಡೊಂದನು.


ಎಂಬ ಸಾಲುಗಳು ನೆನಪಾಗಲಿ.ಯೋಗ್ಯರಾದವರ ಆಯ್ಕೆ ಆಗಲಿ.ಈ ನಾಡಿನಲ್ಲಿ ಮತ್ತೆ ಸತ್ಯ,ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದ ಹೊಸ ಗಾಳಿ ಬೀಸಲಿ.ಜನರು ಸಮೃದ್ಧಿಯ ಬಾಳನ್ನು ಬಾಳುವಂತಾಗಲಿ.

ಡಾ.ಶ್ರೀಪಾದ ಶೆಟ್ಟಿ.


17 views0 comments

Comentários


bottom of page