top of page

ಆಲೋಚನೀಯ - ೨೪

ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆಗೆ ತುಡಿವುದೆ ಜೀವನ - ಎಂ.ಗೋಪಾಲಕೃಷ್ಣ ಅಡಿಗ.


ಮೊಗೇರಿ ಗೋಪಾಲಕೃಷ್ಣ ಅಡಿಗರು ನವ್ಯ ಸಾಹಿತ್ಯದ ಪಂಥ ಪ್ರವರ್ತಕರು ಎಂದು ಹೆಸರಾದ ಕವಿ.ಅವರ ಮೋಹನ ಮುರಲಿ ಎಂಬ ಕವನದ ಸಾಲು ಇದು. ಇರುವುದು ಏನೇ ಇದ್ದರೂ ಅದರಲ್ಲಿ ಸಂತೃಪ್ತಿಯಿಲ್ಲ. ಇಲ್ಲದೆ ಇರುವುದರ ಬಗ್ಗೆ ಆಶೆ, ಆಸಕ್ತಿ. ಆಶೆಯಿಂದ ಪರಮ ದು:ಖವೂ ಪ್ರಾಪ್ತವಾಗುತ್ತದೆ.ಆದರೂ ಅದರಿಂದ ಬಿಡುಗಡೆ ಸಾಧ್ಯವಾಗುವುದಿಲ್ಲ. ಇದರಿಂದ ಬಿಡುಗಡೆಗೊಂಡ ಯುವರಾಜ ಗೌತಮನು ಬುದ್ದನಾದ ತಥಾಗತನಾದ.ಜಗತ್ತಿನ ಇತಿಹಾಸದಲ್ಲಿ ಜನಮನದಲ್ಲಿ ಶಾಶ್ವತವಾಗಿ ನೆಲೆ ನಿಂತ. ಆತನ ಹಿರಿಯರು ಕಟ್ಟಿದ ಸಾಮ್ರಾಜ್ಯ ಈಗ ಇಲ್ಲ.ಆದರೆ ಬುದ್ದನ ಉಪದೇಶಗಳು, ಚಿಂತನೆಗಳು, ಆತ ಹೇಳಿದ ದೃಷ್ಟಾಂತದ ಕತೆಗಳು ಜನ ಮನದಲ್ಲಿ ಪ್ರತಿನಿತ್ಯ ಹೊಸ ರೂಪವನ್ನು ಪಡೆದು ಜನರ ನಡೆ ನುಡಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನಾಡುತ್ತಿವೆ. ಆದರೆ ಆಸೆಯ ಹಗ್ಗದಲ್ಲಿ ತಮ್ಮನ್ನು ಕಟ್ಟಿಕೊಂಡವರು ಬಂಧನದಲ್ಲಿಯೆ ತಾವು ಸುಖ ಪಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಬದುಕುತ್ತಾರೆ. ಅವರು ಅದರಿಂದ ಹೊರ ಬರಲಾರದ ಪರಿಸ್ಥಿತಿಯಲ್ಲಿದ್ದಾರೆ. ಬಂಧನದ ಕತ್ತಲೆಗೆ ಒಗ್ಗಿಕೊಂಡ ಅವರಿಗೆ ಬಿಡುಗಡೆಯ ಬೆಳಕು ದುಸ್ತರ. ನಮ್ಮಲ್ಲಿ ಇರುವುದು ನಮಗೆ ಖುಷಿ ಕೊಡುವುದಿಲ್ಲ. ಆದರೆ ಇಲ್ಲದೆ ಇರುವುದರ ಬಗ್ಗೆ ಹಪಹಪಿ. ಅದಕ್ಕೆ ಅನುಭವಿಗಳು ನೆರೆಮನೆಯವನ ಹೆಂಡತಿ ಚೆಂದ ಎಂಬ ಗಾದೆಯನ್ನು ಕಟ್ಟಿರ ಬೇಕು.


ನಾವು ಅಹಂಕಾರ, ಸ್ವಾರ್ಥ, ದುರಾಸೆ, ಅಸೂಯೆ, ಕೊಳ್ಳುಬಾಕತನವನ್ನು ಬೇಕಷ್ಟು ತುಂಬಿಕೊಂಡು ನಾವೆ ಶ್ರೀಮಂತರು ಎಂಬ ನೆಣಗೊಬ್ಬಿನಲ್ಲಿ ಮೆರೆಯುತ್ತಿದ್ದೇವೆ. ನಿಸ್ವಾರ್ಥ, ನಿರಹಂಕಾರ, ನಿರಪೇಕ್ಷತೆ, ಅನಸೂಯಾಪರತೆ, ಅಪರಿಗ್ರಹದಂತಹ ಗುಣಗಳು ನಮ್ಮ ಬಳಿಗೆ ಬರದಂತೆ ನಮ್ಮ ಸುತ್ತ ಬೇಲಿಯನ್ನು ಕಟ್ಟಿಕೊಂಡಿದ್ದೇವೆ. ನಮ್ಮೊಳಗಿನ ನೆಮ್ಮದಿ, ಶಾಂತಿ, ಸಹನೆ, ಏಕಾಗ್ರತೆ, ಸಮಚಿತ್ತವನ್ನು ದೂರ ತಳ್ಳಿದ್ದೇವೆ. ನಮ್ಮ ಚರ್ಮ ಚಕ್ಷುಗಳಿಗೆ ಕಾಣುವುದೆ ನಿಜ ಎಂದು ನಂಬಿದ ನಾವು ನಮ್ಮಲ್ಲಿ ಇರದ ಬೌತಿಕ ವಸ್ತುಗಳ ಸಂಗ್ರಹಕ್ಕಾಗಿ ಬದುಕನ್ನು ಸವೆಸುತ್ತಿದ್ದೇವೆ. ಅದನ್ನು ಶತಾಯು ಗತಾಯು ಪ್ರಯತ್ನದಿಂದ ಪಡೆದುಕೊಂಡರು ನೆಮ್ಮದಿ ಸಿಗಲಿಲ್ಲ. ಆಶೆಗೆ ಗಡಿ ಗುರುತುಗಳೆ ಇಲ್ಲ. ನಾವು ಯಾವುದನ್ನು ಜೀವನ ಎಂದು ತಿಳಿದುಕೊಂಡು ಇದ್ದೇವೆಯೋ ಅದು ನಿಜವಾದ ಜೀವನವಲ್ಲ.


ಅನುಭಾವಿ ಕವಿ ಮಧುರ ಚೆನ್ನರು ತಮ್ಮ ನನ್ನ ನಲ್ಲ ಎಂಬ ಕವಿತೆಯಲ್ಲಿ ದೇವರ ನಿರಂತರವಾದ ಹುಡುಕಾಟ ನಡೆಸಿ ಕೊನೆಗೆ ಸಿದ್ಧಿಯನ್ನು ಪಡೆದು ಸಂತೃಪ್ತರಾದ ಬಗೆಯನ್ನು ಅವರ ಕವನದಲ್ಲಿಯೆ ಕಾಣ ಬಹುದಾಗಿದೆ.


ತುಂಬಿ ಬಂದಿತು ಕಾಂತಿ ತುಂಬಿ ಬಂದಿತು ಶಾಂತಿ

ತುಂಬಿ ಜಗದೊಡಲ ಜೀವ ತುಂಬಿ

ತುಂಬಿ ಬಂತೆಂದರೂ ಇದ್ದುದಿದ್ದೆ ಇತ್ತು


ಎಂದು ಹೇಳುತ್ತಾರೆ.


ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು

ಬಯಕೆ ಬರುವುದರ ಕಣ್ಸನ್ನೆ ಕಾಣೊ

ಅರಿಯದಾ ಹವಣಿಕೆಯು ಜೀವಜೀವನ ಲೀಲೆ

ದೇವದೇವನ ಗೂಢವಿಧಿಯು ಕಾಣೊ


ಎಂದು ಹೇಳುತ್ತಾರೆ. ಅಂತಹ ಒಂದು ಅನುಭೂತಿ ಮಧುರ ಚೆನ್ನರಂತಹ ಕವಿಗಳಿಂದ ಸಾಧ್ಯ. ಕನ್ನಡದ ಕವಿಚರಿತೆಯಲ್ಲಿ ಧನ್ಯರು ಮಧುರ ಚೆನ್ನರು.






ಡಾ.ಶ್ರೀಪಾದ ಶೆಟ್ಟಿ.

32 views0 comments

Comments


bottom of page