top of page

ಆಲೋಚನೀಯ ೨೩

ಚಳಿಯೂ ಇಲ್ಲದ,ಸೆಕೆಯು ಅಲ್ಲದ,ಮಳೆಯು ಬರದ ಸ್ಥಿತಿಯಲ್ಲಿ ನಾವು ಇದ್ದೇವೆ‌.ಈ ಮೂರು ಕಾಲಗಳು ಮಾತನಾಡಿಕೊಂಡು ಮೌನ ತಳೆದಂತಿದೆ ನಮ್ಮನ್ನು ಆಳುವ ಸರಕಾರದ ಪರಿಯಂತೆ.ಜನ ಸಾಮಾನ್ಯರು ಮತ ಚಲಾಯಿಸುವ ದಿನ ಮಾತ್ರ ಮತದಾರ ಪ್ರಭುಗಳು.ಮತದಾನ ಮುಗಿದ ಬಳಿಕ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂತೆ ಅವರ ಪಾಡು. ಕುರ್ಚಿ ಹಿಡಿದವರಿಗೆ ಅದನ್ನು ಗಟ್ಟಿ ಮಾಡಿಕೊಳ್ಳುವ ದಗದ.ಅವರನ್ನು ನಿಯಂತ್ರಿಸುವವರಿಗೆ ಮೂಗುದಾಣವನ್ನು ಹಾಕುವ ತವಕ.ಈ ಕಾರಣಕ್ಕಾಗಿ ಎರಡು ಬಣಗಳು ರಚನೆಗೊಂಡು ಅವು ತಮ್ಮ ಅಸಲಿ ಬಣ್ಣವನ್ನು ಪ್ರಕಟಿಸಲು ಆರಂಭಿಸಿವೆ. ಜನ ಹೇಗೆ ಇರಲಿ.ರಸ್ತೆ ಅವ್ಯವಸ್ಥೆಯಾಗಿರಲಿ.ಕುಡಿಯುವ ನೀರು ಬರದೆ ಇರಲಿ.ಕೋವಿಡ್ ನಿಂದ ಸಾಮಾನ್ಯರು ಸಂಕಷ್ಟವನ್ನು ಅನುಭವಿಸಲಿ.ಊರಿಗೆ ಊರೆ ಗುಳೆ ಎದ್ದು ಹೋಗಲಿ ಇವರ ಖುರ್ಚಿ ಗಟ್ಟಿಯಾಗಿದ್ದರೆ ಸಾಕು.ಇದನ್ನನೆಲ್ಲಾ ಕಂಡು ಕಾಣದಂತಿರ ಬೇಕಾದ ಪರಿಸ್ಥಿತಿ ನಮ್ಮೆಲ್ಲರದು. ಮುಂದೆ ಬರುವ ಸಂಕಷ್ಟವನ್ನು ಎದುರಿಸಲು ಜಾತಿ,ಮತಗಳಿಗೆ ನಿಗಮವನ್ನು ರಚಿಸಿ ಅದಕ್ಕೆ ಅನುದಾನ ಬಿಡುಗಡೆ ಆಗಿದೆ.ಈ ಬಗ್ಗೆ ಯಾವ ರಾಜಕೀಯ ಪಕ್ಷವು ಚಕಾರವೆತ್ತುವಂತಿಲ್ಲ.ಹಾಗೆ ಮಾಡಿದಲ್ಲಿ ಆ ಪಕ್ಷದ ಅಭ್ಯರ್ಥಿಗಳು ಇಡಗಂಟನ್ನು ಕಳೆದುಕೊಳ್ಳುವ ಭಯ ಅವರನ್ನು ಬಿಡದೆ ಕಾಡುತ್ತದೆ.ಎಲ್ಲದರಿಂದ ರಕ್ಷಿಸುವ ಶಕ್ತಿ ಜಾತಿಗೆ ಇದೆ.ಎಂದು ನಮ್ಮ ರಾಜಕೀಯ ದುರಂಧರರೂ ಒಪ್ಪಿಕೊಂಡಂತಿದೆ. ಡಾ.ಯು.ಆರ್.ಅನಂತಮೂರ್ತಿ ಯವರು ಜಾತಿ ತುಂಬ ಸೃಜನಶೀಲ ಎಂದರು. ಅವರು ಯಾವ ಅರ್ಥದಲ್ಲಿ ಹೇಳಿದ್ದರೊ ಇವರು ಅದನ್ನು ಹೇಗೆ ಅಪಾರ್ಥ ಮಾಡಿಕೊಂಡಿದ್ದಾರೊ ಎಲ್ಲವು ಬಿಡಿಸಲಾರದ ಒಗಟಿನಂತೆ ಕಾಣುತ್ತಿದೆ. ಜಾತಿ ಯಾರಿಗು ಸುಖವನ್ನು ನೆಮ್ಮದಿಯನ್ನು ಕೊಟ್ಟಿಲ್ಲ ಎಂಬುದು ನನ್ನ ಅನಿಸಿಕೆ.ಜಾತಿಯನ್ನು ಹುಟ್ಟು ಹಾಕಿದ ಪುಣ್ಯವಂತನು ನೆಮ್ಮದಿಯಿಂದ ಸತ್ತಂತಿಲ್ಲ.ಮೇಲ್ಜಾತಿಯವರು ತಾವು ಮೇಲಿನವರು ಎಂದು ಹೇಳಿ ತಾರತಮ್ಯ ಮಾಡುವ, ಅಟ್ಟಹಾಸದಿಂದ ಮೆರೆಯುವ ಕಾಲ ಈಗಿಲ್ಲ.ಕೆಳವರ್ಗದವರು,ದಲಿತರು ಈ ಜಾತಿಯಿಂದ ಸುಖವನ್ನು ಅನುಭವಿಸುತ್ತಿಲ್ಲ.ಯಾರೆ ಆಗಲಿ ನಾನು ಇದೆ ಜಾತಿಯಲ್ಲಿ ಹುಟ್ಟುತ್ತೇನೆ ಎಂದು ಅರ್ಜಿ ಹಾಕಿಕೊಂಡು ಅದೆ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ.ಗಾಂದೀಜಿಯವರು ಉಪವಾಸ ಕೈಗೊಂಡಾಗ ಅವರ ಬೆಟ್ಟಿಗೆ ಅನಿವಾರ್ಯವಾಗಿ ಹೋದ ಅಂಬೇಡ್ಕರ ಅವರು ಗಾಂದೀಜಿ ನಮ್ಮನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವ ಇದನ್ನು ನನ್ನ ದೇಶ ಎಂದು ಹೇಗೆ ಕರೆಯಲಿ ಎಂದು ಪ್ರಶ್ನೆ ಹಾಕುತ್ತಾರೆ. ಚೌಡರ ಕೆರೆಯ ಸನಿವೇಶ ಅಂಬೇಡ್ಕರ ಅವರನ್ನು ಘಾಸಿಗೊಳಿಸಿರುತ್ತದೆ.ಅವರು ಜಗತ್ತಿನ ಸಂವಿಧಾನಗಳನ್ನು ಅಧ್ಯಯನ ಮಾಡಿ ಅತ್ಯಂತ ಜಾಗರೂಕತೆಯಿಂದ ಭಾರತದ ಸಂವಿಧಾನವನ್ನು ಬರೆಯುತ್ತಾರೆ. ಜಗತ್ತಿನಲ್ಲೆ ಮಾದರಿ ಎನ್ನುವಂತಹ ಸಂವಿಧಾನವನ್ನು ಹೊಂದಿದ ಭಾರತ ದೇಶದಲ್ಲಿ ಜಾತಿ ಪದ್ದತಿಯು ಉಂಟು ಮಾಡಿರುವ ಎಡವಟ್ಟುಗಳು ಆವಾಂತರಗಳು ಒಂದಲ್ಲ ಎರಡಲ್ಲ ನೂರಾರು. ರಾಜಕಾರಣಿಗಳು ಜಾತೀಯತೆಯ ಗಿಡಗಳಿಗೆ ನೀರೆರೆದು ಬೆಳೆಸಿ ಅದನ್ನು ಭಂಡವಾಳ ಮಾಡಿಕೊಂಡು ಕೊಬ್ಬಿ ಹೋಗಿದ್ದಾರೆ.ತಾಕತ್ತಿದ್ದರೆ ನನ್ನನ್ನು ಸೋಲಿಸಿ ಎಂದು ಸವಾಲು ಹಾಕುತ್ತಾರೆ. ಡಾ.ಅಂಬೇಡ್ಕರ ಅವರು ವಿದ್ಯಾರ್ಥಿಯಾಗಿದ್ದಾಗ ಮಳೆಯಲ್ಲಿ ತೊಯ್ದು ಬಟ್ಟೆಯಿಲ್ಲದೆ ಗಡಗಡನೆ ನಡುಗುವಾಗ ತನ್ನನ್ನು ಕರೆದು ಮೈ ಒರೆಸಲು ಬಟ್ಟೆಯನ್ನ ಕೊಟ್ಟು ಉಪಚರಿಸಿದ, ಆತ್ಮವಿಶ್ವಾಸವನ್ನು ತುಂಬಿದ ಅಂಬೆವಾಡೆಕರ ಗುರುಗಳ ಹೆಸರನ್ನು ತಮ್ಮ ಅಡ್ಡ ಹೆಸರು ಸಕ್ಪಾಲ್ ಬದಲಾಗಿ ಇಟ್ಟುಕೊಳ್ಳುತ್ತಾರೆ. ನಾನು ಅಂಕೋಲಾ ಜಿ.ಸಿ.ಕಾಲೇಜಿನಿಂದ ಹೊನ್ನಾವರ ಎಸ್.ಡಿ.ಎಂ.ಕಾಲೇಜಿಗೆ ವರ್ಗಾವಣೆಗೆ ಅನುಮತಿ ನೀಡಲು ನನ್ನ ಬಗ್ಗೆ ಒಂದು ಮಾತನ್ನು ಎಸ್.ಪಿ.ಕಾಮತ ಅವರಿಗೆ ಹೇಳಿ ಎಂದು ವಿನಂತಿಸಿಕೊಳ್ಳಲು ದಿವೇಕರ ಕಾಮರ್ಸ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ.ಜಿ.ವಿ.ಭಟ್ ಕೊಂಕೇರಿ ಪಟೇಲರ ಮನೆಗೆ ರವಿವಾರ ದಿನ ಮದ್ಯಾಹ್ನ ಹೋಗಿದ್ದೆ.ಅಂದು ಅವರ ತಂದೆ ಅಥವಾ ತಾಯಿಯವರ ಶ್ರಾದ್ಧ ನಡೆಯುತ್ತಿತ್ತು. ಆಗ ಅವರು ನನ್ನನ್ನು ಶ್ರಾದ್ಧ ನಡೆಯುವ ಕೋಣೆಗೆ ಕರೆದು ಶ್ರಾದ್ಧ ಉಣ್ಣುವ ಭಟ್ಟರ ಜೊತೆಗೆ ತಮ್ಮ ಪಕ್ಕದಲ್ಲಿ ಕೂಡ್ರಿಸಿಕೊಂಡು ಊಟಕ್ಕೆ ಹಾಕಿದರು. ಅವರೆಲ್ಲರು ಮಡಿ ಬಟ್ಟೆಯಲ್ಲಿದ್ದರು.ನಾನು ಪ್ಯಾಂಟು ಶರ್ಟು ಧರಿಸಿದ್ದೆ. ನನಗೆ ಅಚ್ಚರಿಯೆನಿಸಿತು.ಶೂದ್ರರು ಬ್ರಾಹ್ಮಣರ ಪೌರೋಹಿತ್ಯದಲ್ಲಿ ಶ್ರಾದ್ಧ ಮಾಡುವಾಗ ಯಾರಾದರೂ ಅತಿಥಿ ಬಂದರೆ ಆತನನ್ನು ಬೇರಡೆಗೆ ಕೂಡ್ರಿಸಿ ಉಣ ಬಡಿಸುತ್ತಿದ್ದರು ಅನಿಸಿತು.ಇದನ್ನೆಲ್ಲ ಮೀರಿ ನಿಂತ ಪ್ರೊ.ಜಿ.ವಿ.ಭಟ್ಟ ಅವರು ನನಗೆ ದೊಡ್ಡವರಾಗಿ ಕಂಡರು.ಇಂದಿಗೂ ಅವರು ದೊಡ್ಡ ವ್ಯಕ್ತಿ. ಇಂತಹ ಸವ್ಯಗಳ ನಡುವೆ ಜಾತಿ ಅಪಸವ್ಯವಾಗಿ ಪ್ರಜ್ಞಾವಂತರರಿಗೆ ಕಿರಿಕಿರಿ ಉಂಟು ಮಾಡಿದರೆ ರಾಜಕಾರಣಿಗಳು ತಮ್ಮ ರೊಟ್ಟಿ ಸುಟ್ಟುಕೊಳ್ಳುವ ಹುನ್ನಾರದಲ್ಲಿದ್ದಾರೆ. ದಿನಕರ ದೇಸಾಯಿಯವರಂತಹ ಧೀಮಂತ ವ್ಯಕ್ತಿಗಳು ಮಾತ್ರ ಜಾತಿಯನ್ನು ಮೀರಿ ನಿಂತರು. ಜನ ಹಿತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.ಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು.ಜನರನ್ನು ಮನುಜ ಮತಕ್ಕೆ ವಿಶ್ವಪಥಕ್ಕೆ ಬನ್ನಿರಿ ಎಂದು ಕರೆದರು. ದಿನಕರರ ಒಂದು ಚೌಪದಿ ಇಂತಿದೆ. ನಮಗೆಲ್ಲರಿಗೆ ಹಿಡಿದ ಈ ಹಾಳು ರೋಗ ಗುಣಹೊಂದುವುದು ಹೇಗೆ ಮತ್ತು ಯಾವಾಗ? ಜಾತಿಗಳನ್ನೆಲ್ಲ ಬೇಯಿಸಿ ಒಂದು ಖಿಚಡಿ ಮಾಡಿದರೆ ಮಾತ್ರ ಹೋಗುವುದು ಈ ನೆಗಡಿ. ಮೊನ್ನೆಯೆ ಹರಿದು ಹಾಕಿದೆನು ಜನಿವಾರ ಜನಿವಾರ ಜಾತಿವಾದಿಯ ಸೂತ್ರಧಾರ ಜಾತಿ ಎಂಬುದು ಕೋತಿ ಮಾನಸಿಕ ಗೋಡೆ ಈ ಗೋಡೆ ಎನ್ನುವುದು ಭಾರತದ ಪೀಡೆ. ದಿನಕರ ದೇಸಾಯಿ ೧೯೭೪ ನೆ ಮೇ ತಿಂಗಳ ಮಯೂರ ಮಾಸಿಕದಲ್ಲಿ ಪ್ರಕಟವಾದ ಈ ಚುಟಕಕ್ಕೆ ರಾಜಯ್ಯ ಎಂಬಾತ ಕಾರ್ಡಿನಲ್ಲಿ ಏನೇನೊ ಬರೆದು ತನ್ನ ಅಸಮಾಧಾನ ತೋಡಿಕೊಂಡ. ( ದಿನಕರ ದೇಸಾಯಿ ಬದುಕು ಬರಹ- ಡಾ.ಶ್ರೀಪಾದ ಶೆಟ್ಟಿ ಪು.೧೫೮-೫೯) ನಮಗೆ ಮನುಷ್ಯ ಜಾತಿಯೊಂದೆ ಸಾಕು.

ಡಾ.ಶ್ರೀಪಾದ ಶೆಟ್ಟಿ.



















43 views0 comments

Bình luận


bottom of page