top of page

ಆಲೋಚನೀಯ-೨೨

ಕಾಯಿ ಹಣ್ಣಾಗುವುದು ಅದರ ಕಾಯುವಿಕೆಯಿಂದಲೆ.ಅದು ಮಾಗುವ ಕಾಲಕ್ಕಾಗಿ ಕಾಯದೆ ತೊಟ್ಟು ಕಳಚಿಬಿದ್ದರೆ ಅದರ ಬದುಕು ಪೂರ್ಣ ಆಗುವುದಿಲ್ಲ.ಯಾರಿಗೆ ಉಪಯೋಗವು ಆಗುವುದಿಲ್ಲ.ಕಂಡವರು ಅದನ್ನ ಕಸುಗಾಯಿ ಎಂದು ಕಾಲಿನಲ್ಲಿಯೆ ತೂರಿ ಬಿಡುವ ಸಂದರ್ಭವೆ ಹೆಚ್ಚು.ಕೆಲವು ಕಾಯಿಗಳನ್ನು ತಿನ್ನಲು ಬರುವುದಿಲ್ಲ.ಅದು ಹಣ್ಣಾದ ಮೇಲೆ ಅದರ ಸ್ವಾದ ಮತ್ತು ಘಮಕ್ಕೆ ಮನ ಸೋಲುವ ಪರಿ ಅನನ್ಯ ವಾದುದು.ಮರದ ಬದುಕು ಸಾರ್ಥಕವಾಗುವುದು ಸವಿಯಾದ ಹಣ್ಣನ್ನು ದಾರಿ ಹೋಕರು ತಿಂದು ದಣಿವಾರಿಸಿಕೊಂಡು,ಯಾವ ಪುಣ್ಯಾತ್ಮ ಈ ಮರ ನೆಟ್ಟಿರುವನೊ ಅವನ ಹೊಟ್ಟೆ ತಣ್ಣಗಾಗಿರಲಿ ಎಂದು ಹಾರೈಸಿದಾಗಲೆ.

ನೆಟ್ಟಿರುವ ಸಸಿಯೊಂದು ಗಿಡವಾಗಿ, ಮಡಗಿಯಾಗಿ, ಮರವಾಗಿ,ಹೆಮ್ಮರವಾಗಿ ಬೆಳೆದು ಯತೇಷ್ಟ ಹಣ್ಣುಗಳನ್ನು ಕೊಡುವಾಗ ಅದನ್ನು ತಿಂದು ತೃಪ್ತಿ ಪಡುವ ಪಕ್ಷಿಗಳು ಬಾವಲಿಗಳು, ಪ್ರಾಣಿಗಳು, ಮನುಷ್ಯರು ಸಂತೃಪ್ತಿಯನ್ನು ಅನುಭವಿಸುತ್ತಾರೆ. ಹಣ್ಣಾಗುವವರೆಗೆ ಕಾದ ಮರ ಫಲಕೊಟ್ಟು ಸಾರ್ಥಕತೆಯನ್ನು ಪಡೆಯುತ್ತದೆ.

ಹಾಗೆ ಫಲಪ್ರಾಪ್ತಿಯಾಗುವ ವರೆಗೆ ಮನುಷ್ಯರು ಕಾಯ ಬೇಕಾಗುತ್ತದೆ.ಅದಕ್ಕೆ ತಾಳ್ಮೆ ಬೇಕು.ಬಹಳ ಜನ ಬಸ್ಸಿಗೆ ಕಾದು ಕಾದು ಬೇಸತ್ತು ಕೊನೆಗೆ ಎದುರಿಗೆ ಬಂದ ಯಾವುದೊ ಬಾಡಿಗೆ ವಾಹನ ಏರುತ್ತಾರೆ. ಅವರು ಅಲ್ಲಿ ಕುಳಿತಾಗಲೆ ಸುಪರ್ ಫಾಸ್ಟ ಎಕ್ಸ್ಪ್ರೆಸ್ ಬಸ್ ಹೋಗುತ್ತದೆ.ಇದರಿಂದ ಅವರ ಪಯಣದ ವೇಳಾಪಟ್ಟಿ ಅಸ್ತವ್ಯಸ್ತವಾಗುತ್ತದೆ.ಇವರು ಅಲ್ಲಿಗೆ ಹೋದಾಗ ರೈಲು ಆಗ ಮಾತ್ರ ಹೊರಟು ಹೋಗುತ್ತದೆ.ರೈಲು ನಿಲ್ದಾಣದಲ್ಲಿ ಸೊಳ್ಳೆಗಳ ಕಾಟದಿಂದ ನಿದ್ದೆಯಿಲ್ಲದೆ ರಾತ್ರಿ ಕಳೆಯ ಬೇಕಾಗುತ್ತದೆ.ತಾಳ್ಮೆಗೆಟ್ಟರೆ ಏನನ್ನು ಸಾಧಿಸಲಾರೆವು.ಅದಕ್ಕೆ ಹಿರಿಯರು ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ ಎಂದು ಹೇಳಿದರು.ಏ ಮನಸ್ಸೆ ನಿದಾನವಾಗಿ ಕೆಲಸ ಮಾಡು.ನಿದಾನಗತಿಯಿಂದ ಎಲ್ಲವನ್ನು ಸಾಧಿಸ ಬಹುದು.ಎಂದು ಸಂತ ಕಬೀರ ತನ್ನ ದೋಹೆ ಯಲ್ಲಿ ಹೇಳಿದ.ಒಂದು ಸಿಟ್ಟಿಗೆ ಯಾರೊ ಬಾವಿಯನ್ನು ಹಾರಿಕೊಂಡ ಕೊನೆಗೆ ಏಳು ಸಿಟ್ಟು ಬಂದರೂ ಆತನಿಗೆ ಮೇಲೇಳಲಾಗಲಿಲ್ಲ ಎಂದು ಹಿರಿಯರು ದೃಷ್ಟಾಂತ ಹೇಳುತ್ತಿದ್ದರು.ಆದ್ದರಿಂದ ಕಾಯ ಬೇಕು.ಈ ಕಾಯುವಿಕೆ ಸಾತ್ವಿಕವಾದ ಉದ್ದೇಶವನ್ನು ಹೊಂದಿದಾಗ ಅದು ತಪಸ್ಸಾಗುತ್ತದೆ.ತನ್ನ ತಪಸ್ಸಿನಿಂದ ದೇವಾನು ದೇವತೆಗಳನ್ನು ಮೆಚ್ಚಿಸಿದ ಬಾಲಕ ಧ್ರುವ ಕೊನೆಗೆ ತಾರೆಯಾಗಿ ಉಳಿದ.

ಕಾಯ ಬೇಕು,ಕಾದು ಮಾಗ ಬೇಕು,ಮಾಗಿ ತನಿವಣ್ಣಾಗಿ ತೊಟ್ಟು ಕಳಚಿ ಬಿದ್ದು ಹಸಿದವರ ಹಸಿವನ್ನು ಇಂಗಿಸ ಬೇಕು.ಇದು ಬದುಕಿನ ಸಾರ್ಥಕತೆ ಮತ್ತು ಪರಿಪಕ್ವತೆ. ಇಂದು ಮದ್ಯಾಹ್ನ ತನ್ನ ಪತಿ ಚಂದ್ರ ಮತ್ತು ಮಗಳು ಸಿಂಚನಾಳೊಂದಿಗೆ ಮನೆಗೆ ಬಂದ ಕವಯತ್ರಿ ಸಿಂಧು ಚಂದ್ರ ತನ್ನ ಪುಸ್ತಕಗಳೊಂದಿಗೆ,ಆಕೆಯ ತಂದೆ ಮತ್ತು ನನ್ನ ಗುರುಗಳಾದ ಜಯರಾಮ ಹೆಗಡೆ ಅವರ ಅಭಿನಂದನಾ ಗ್ರಂಥ ಜನಮನದಲಿ ಜಯರಾಮ,ಆತ್ಮ ಚರಿತ್ರೆ ನಾನು ನಿಮ್ಮೊಡನೆ,ಆಯ್ದ ಸಂಪಾದಕೀಯಗಳು, ಅಂತೂ ಇಂತೂ ಮಳೆ ಬಂತು ಕವನ ಸಂಕಲನವನ್ನು ಕೈಗಿತ್ತು ನನ್ನ ಓದಿನ ದಾಹಕ್ಕೆ ನೀರುಣಿಸಿದರು.ಗುರು ಜಯರಾಮರ ಕವಿತೆ ನನ್ನ ಇಂದಿನ ಮುನ್ನುಡಿಗೆ ಪ್ರೇರಣೆಯಾಯಿತು.ಅವರ ಕವಿತೆಯ ಸಾಲು ನಿಮ್ಮ ಓದಿಗಾಗಿ


ಕರುಳಿನ ಕಾವ್ಯದ ಸೆಳಕಿನ ನಂತರ

ಪದಗಳ ಸಿಂಪಡಿಸಿದ ಮೇಲೆ

ಸಾಂತ್ವನ ಮಾತ್ರೆ ಪ್ರಾಸದ ಬಳಿಕ

ನೆಮ್ಮದಿ ಮನೆಯ ಸೇರುವ ಮೊದಲು

ಕವನದ ಕೊಡವ ತುಂಬಲಿಕೆಂದು

ಕುಂತೂ ಕುಂತೂ ಕೊರಗಿದ ಮೇಲೆ

ಅಂತೂ ಇಂತೂ ಮಳೆ ಬಂತು

ಜಯರಾಮ ಹೆಗಡೆ


‌‌‌ ಡಾ.ಶ್ರೀಪಾದ ಶೆಟ್ಟಿ

35 views0 comments

Comments


bottom of page