top of page

ಆಲೋಚನೀಯ- ೨೧


ಓ ಬೆಳಕೆ ಕಣ್ಮನವನ್ನು ತುಂಬಿಕೊಳ್ಳುವ ಪುಣ್ಯದ ಸೆಳಕೆ.ತಾಯಿಯ ಒಡಲಿನಿಂದ ಭೂಮಿಗೆ ಬಂದ ಕೂಡಲೆ ಮೊದಲು ಕಂಡ ಬೆಳಕೆ.ನಿನ್ನನ್ನು ಕಂಡು ಮುದಗೊಂಡು ಅಂಬೆಗಾಲಿಟ್ಟ ಬಾಲ್ಯದ ದಿನಗಳಿಂದಲೂ ನಿನ್ನ ಜೊತೆ.ಸೂರ್ಯ ಚಂದ್ರರು ನಮಗೆ ಬೆಳಕನ್ನು ನೀಡುತ್ತಾರೆ.ಅವರ ಗೈರು ಹಾಜರಿಯಲ್ಲಿ ನಾವು ಹಣತೆಯನ್ನು ಹಚ್ಚುತ್ತೇವೆ.ಸೃಷ್ಟಿಯ ಜಡ ಚೇತನಕ್ಕೆ ಪ್ರಾಣಾಗ್ನಿಯ ಹೊಳೆ ಹರಿಸುವ ಪಾಲ್ಗುಣ ರವಿ ದರ್ಶನಕೆ ಕವಿ ಕುವೆಂಪು ಸಹೃದಯನನ್ನು ಆಹ್ವಾನಿಸುತ್ತಾರೆ. ಚಂದಿರನ ತಂಗಿರಣಗಳ ಕುರಿತು ಕವಿಗಳು ಮನದುಂಬಿ ಹಾಡಿದ್ದಾರೆ.   ಗುರುದೇವ ರವೀಂದ್ರನಾಥ ಟಾಗೋರರು ಸೂರ್ಯ ಮುಳುಗಿದ,ಚಂದ್ರ ಬರಲಿಲ್ಲ.ಆಗ ಹಣತೆ ಹೇಳಿತು ಚಿಂತೆ ಬಿಡು ನಾನು ನನ್ನ ಮೂಲೆಯನ್ನು ಬೆಳಗುತ್ತೇನೆ. ಬೆಳಕಿಲ್ಲದ ಪ್ರಪಂಚವನ್ನು ನಾವು ಕಲ್ಪಿಸಿಕೊಳ್ಳಲಾರೆವು. ಒಂದು ಮಿನುಗುವ ಕಾಂತಿ ನಿಂದಿದೆ ಎಲ್ಲ ದೆಸೆಗಳ ದೀಪಿಸಿ ಆದಿಶಕ್ತಿಯ ಮಂದಹಾಸವ ನಭದ ತೇಜದಿ ರೂಪಿಸಿ ವಿನಾಯಕರ ಕವಿತೆ  ಎಂದು ನೆನಪು.ಆ ಮಿನುಗುವ ಕಾಂತಿ ನಮ್ಮ ಕಣ್ಣೊಳಗಿದ್ದರೆ ಅದೆ ಜೀವಂತಿಕೆ. ಪ್ರತಿವರ್ಷ ಆಶ್ವಿಜವನ್ನು ಬೀಳ್ಕೊಟ್ಟು ಕಾರ್ತಿಕವನ್ನು ಬರಮಾಡಿಕೊಳ್ಳುವ ಕಾಲವನ್ನು ದೀಪಾವಳಿ ಎಂದು ಭಾರತದಾದ್ಯಂತ ಆಚರಿಸಲಾಗುತ್ತಿದೆ. "ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆನ್ನನು ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ ಕೈ ಹಿಡಿದು ನಡೆಸು " ಎಂದು ಬಿ.ಎಂ.ಶ್ರೀಯವರು ನ್ಯೂಮನ್ನನ ಕವನವನ್ನು ಮೂಲಕ್ಕಿಂತ ಚೆನ್ನಾಗಿ ಕನ್ನಡದಲ್ಲಿ ಅನುವಾದಿಸಿದ್ದಾರೆ.ಬೆಳಕಿನ ಬೀದಿಯಲ್ಲಿ ನಡೆಯುವುದೆ ಒಂದು ಸಂಭ್ರಮ. "ದೀಪ ಕತ್ತಲೆಗೆ ಶಾಪ" ಎಂದವರು ಕವಿ ಜಿ.ಆರ್.ಪಾಂಡೇಶ್ವರ. " ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯ/ ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ / ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯ" ಎಂದು ಅಲ್ಲ ಪ್ರಭು ತನ್ನ ವಚನದಲ್ಲಿ ಹೇಳಿದ.ಒಳ್ಳೆಯದರ ಬಲದಿಂದ ಕೆಟ್ಟುದರ ಕೇಡನ್ನು ನೋಡು ಎಂದು ಅಲ್ಲಮ ಎಚ್ಚರಿಸುತ್ತಾನೆ.ಕೆಡುಕುಗಳ ಮೆಟ್ಟಿ ಒಳಿತನ್ನು ಬಿತ್ತಿ ಬೆಳೆಯೋಣ.ಸತ್ಯವಂತರಾಗಿ ಬಾಳೋಣ.  ದೀಪಾವಳಿಯಲ್ಲಿ ಬಾಣ ಬಿರುಸುಗಳ ಪ್ರದರ್ಶನ,ಸಿಡಿಮದ್ದಿನ ಸ್ಪೋಟಕ ಶಬ್ದಗಳನ್ನು ಕೇಳಿ ಕಿವುಡಾಗಿಸಿಕೊಂಡವರಿಗೆ ಈ ಸಲದ ಪರಿಸರ ಪಟಾಕಿಯ ಪ್ರಸ್ತಾಪ ಕೊಂಚ ನೆಮ್ಮದಿ ತಂದಿದೆ. ಆದರೆ ಪರಿಸರ ಪಟಾಕಿ ಎಂದರೇನು ಎಂಬುದು ಬಹಳ ಜನರಿಗೆ ಸ್ಪಷ್ಟವಾಗಿಲ್ಲ.  ಸುರಬಾಣ ಸುರ್ ಸುರ್ ಸದ್ದು ಮಾಡುತ್ತಾ ಬೆಳಕಿನೊಂದಿಗೆ ಒಮ್ಮೆಲೆ ಆಗಸಕ್ಕಕೆ ನೆಗೆದು ಕ್ಷಣ ಮಾತ್ರದಲ್ಲಿ ಪತನಗೊಂಡು ಬೂದಿಯಾಗುತ್ತದೆ. ಹಾಗೆ ಕೆಲವರ ಜೀವನ ಕ್ರಮ.ಆದರೆ ಹಣತೆ ನಿದಾನವಾಗಿ ಎಣ್ಣೆ ಮುಗಿಯುವ ವರೆಗೆ ತನ್ನ ಸುತ್ತು ಮುತ್ತನ್ನು ಬೆಳಗುತ್ತದೆ.ಹಣತೆಯಂತೆ ಕೆಲವರು ಯಾವುದೆ ಅಬ್ಬರ ಆಡಂಬರವಿಲ್ಲದೆ ಸಹಜವಾಗಿ ಬದುಕುತ್ತಾರೆ.ತನ್ನ ಸಂಪರ್ಕಕ್ಕೆ ಬಂದವರನ್ನು ಬೆಳಗುತ್ತಾರೆ.ನಮ್ಮ ಜೀವನವನ್ನು ಹಣತೆಯಂತೆ  ರೂಪಿಸಿಕೊಂಡರೆ ಅದು ಬದುಕಿನ ಸಾರ್ಥಕತೆ. ಇತ್ತೀಚೆಗೆ ಗೋಮಯದಿಂದ ಮಾಡಿದ ಹಣತೆ ಸುದ್ದಿಯಲ್ಲಿದೆ.ದೀಪದ ಜೊತೆಗೆ ತಾನು ಉರಿದು ಹೋಗುತ್ತ ಪರಿಸರ ಮಾಲಿನ್ಯವನ್ನು ಹೋಗಲಾಡಿಸುವ ಹಣತೆಗೆ ಬಹಳ ಬೇಡಿಕೆಯಿದೆ.    ಬೆಳಕಿನ ಬಗ್ಗೆ ಬರೆದಷ್ಟು ಬರೆಯ ಬೇಕಾದದ್ದು ಉಳಿದು ಬಿಡುತ್ತದೆ.ಬೆಳಕೆ ಹಾಗೆ ಅದು ನಮ್ಮನ್ನು ವ್ಯಾಪಿಸಿಕೊಂಡಾಗ ಜೀವನ ಪಾವನವಾಗುತ್ತದೆ. ಅಸತ್ತಿನಿಂದ ಸತ್ಯದ ಕಡೆಗೆ,ಕತ್ತಲೆಯಿಂದ ಬೆಳಕಿನ ಕಡೆಗೆ,ಸಾವಿನಿಂದ ಅಮೃತತ್ವದ ಕಡೆಗೆ ನನ್ನನ್ನು ಕರೆದುಕೊಂಡು ಹೋಗು ಎಂಬ ಪ್ರಾರ್ಥನೆಯಿದೆ. ಇದನ್ನೆಲ್ಲ ಕಾಣಿಸಲು ನಮಗೆ ಬೆಳಕು ಬೇಕು.ಆ ಬೆಳಕು ಕಾಣ್ಕೆಯಾಗ ಬೇಕು.ದರ್ಶನವಾಗ ಬೇಕು. ಬೆಳಕಿನ ಅಭ್ಯಂಜನವನ್ನು ತ್ರಿಕರಣ ಪೂರ್ವಕವಾಗಿ (ಕಾಯಾ,ವಾಚಾ,ಮನಸಾ,) ಮಾಡುತ್ತಾ "ಶ್ರಣ್ವಂತು ಅಮೃತಸ್ಯ ಪುತ್ರಾ" ಎಂಬ ಮಾತಿನಂತೆ ಅಮೃತೋಪಮವಾದ ಬಾಳನ್ನು ಬದುಕೋಣ.ಎಲ್ಲ ಜ್ಞಾನ ಶಿಸ್ತುಗಳಿಗೆ ನಾವು ತೆರೆದುಕೊಳ್ಳೋಣ. ಪ್ರೀತಿ,ದಯೆ,ಕರುಣೆಯೊಂದಿಗೆ ಸಮಾನತೆಯನ್ನು ಅಳವಡಿಸಿಕೊಳ್ಳೋಣ. ಅನುದಿನವು ಚಿತ್ತದಲ್ಲಿ ಜ್ಞಾನದ ಹಣತೆ ಹಚ್ಚುತ್ತ ನಿತ್ಯ ದೀಪಾವಳಿಯನ್ನು ಆಚರಿಸೋಣ. ಓ ಬೆಳಕೆ ನೀನು ಮಲ್ಲಿಗೆಯಾಗಿ ಇಲ್ಲಿಗೆ ಇಳಿದು ಬಾ ಎಂದು ಪ್ರಾರ್ಥಿಸೋಣ.    ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು

   


                     ಡಾ.ಶ್ರೀಪಾದ ಶೆಟ್ಟಿ







18 views1 comment

1 Comment


Unknown member
Nov 15, 2020

ಧನ್ಯವಾದಗಳು ಸರ್; ಎಲ್ಲರಿಗೆ ದೀಪಾವಳಿಯ ಶುಭಾಶಯಗಳು.

Like

©Alochane.com 

bottom of page