top of page

ಆಲೋಚನೀಯ ೧೯

Updated: Oct 31, 2020


ಕನ್ನಡದ ನನ್ನ ಬಂಧು ಭಗಿನಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಎಂಬುದು ಒಂದು ನಾಡು, ನುಡಿ, ಸಂಸ್ಕೃತಿ, ಜೀವನ ಶೈಲಿ, ಇತಿಹಾಸ, ಪರಂಪರೆ, ಸಂಪ್ರದಾಯ, ಭೂಗೋಳ ಎಲ್ಲದರ ಸಮ್ಮಿಲನ. ೧೯೫೬ ನೆ ಇಸ್ವಿಯಿಂದ ನಾವು ಕನ್ನಡ ರಾಜ್ಯೋತ್ಸವವನ್ನು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ.ಕನ್ನಡದ ನಾಡು ನುಡಿಯ ಕುರಿತು ನಮ್ಮ ಸಾಹಿತಿಗಳು ಬರೆದ ಬರಹಗಳನ್ನು ಸಂಗ್ರಹಿಸಿ ವಿಭಿನ್ನ ನೆಲೆಯಲ್ಲಿ ವಿಶ್ಲೇಷಣೆ ಮಾಡಿದರೆ ಅದು ಹಲವು ಪಿಎಚ್,ಡಿ. ಪ್ರಬಂಧಕ್ಕೆ ಸಾಮಗ್ರಿಯಾಗಬಹುದು. ಕನ್ನಡ ನಾಡಿನ ಕುರಿತು ಹುಯಿಲಗೋಳ ನಾರಾಯಣ ರಾಯರು  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕವನ ಬರೆದರು. ಕರ್ನಾಟಕ ಏಕೀಕರಣ ನಡೆದು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡಾಗ ಕವಿ ಚೆನ್ನವೀರ ಕಣವಿಯವರು


ಹೆಸರಾಯಿತು ಕರ್ನಾಟಕ

            ಉಸಿರಾಗಲಿ ಕನ್ನಡ

ಹಸಿಗೋಡೆಯ ಹರಳಿನಂತೆ

               ಹುಸಿಹೋಗದ ಕನ್ನಡ


ಎಂದು ಬರೆದರು. ಕನ್ನಡ ನಮ್ಮ ಪ್ರಾಣ.ಪ್ರಾಣ ಎಂದರೆ ಉಸಿರು.ಅದು ಎಂದಿಗೂ ಹುಸಿ ಹೋಗ ಬಾರದು.ಕವಿಯ ಆಶಯ ಕನ್ನಡಿಗರೆಲ್ಲರ ಆಶಯವಾಗ ಬೇಕು.ಹಣಗಳಿಕೆಯ ದಾಹದಲ್ಲಿ ಕನ್ನಡವನ್ನು ಮರೆತು ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುವವರು ಸರಾಗ ಉಸಿರಾಟ ನಡೆಸಿ ಕಾರು ಬಾರು ನಡೆಸುವ ಸ್ಥಿತಿಗೆ ಕಡಿವಾಣ ಬೀಳ ಬೇಕಾಗಿದೆ.

   

ಕನ್ನಡ ಎಂದರೆ ಅದು ಭಾವಾವೇಶವಲ್ಲ.ಅದು ಸದಾ ತುಂಬಿ ಹರಿಯುವ ಜೀವ ನದಿ. ಅದು  ತನ್ನ ದಡವನ್ನು ತಬ್ಬಿಕೊಳ್ಳುತ್ತಾ ಪರಿಸರವನ್ನು ತಂಪಾಗಿಸಿ ಚೈತನ್ಯವನ್ನು ನೀಡುತ್ತದೆ. ಕನ್ನಡ ನಾಡಿನ ಸಮೃದ್ಧಿ,ಸಮಸ್ಯೆ,ಸವಾಲು, ಅಭಿವೃದ್ಧಿಯ ಸಾಧ್ಯತೆಯತ್ತ ಚಿಂತಿಸುತ್ತ, ಚಿಂತೆಗಳಿಗೆ ಪರಿಹಾರ ಕಂಡುಕೊಳ್ಳತ್ತಾ  ಮುನ್ನಡೆಯ ಬೇಕಾದ ಅಗತ್ಯ ಇಂದಿನದು.


        ಕನ್ನಡದ ದೀಪವನ್ನು ಹಚ್ಚುವ ಕಾರ್ಯ ನಿರಂತರವಾಗಿ ನಡೆಯ ಬೇಕಾಗಿದೆ.ಕವಿ  ಡಿ.ಎಸ್.ಕರ್ಕಿಯವರು ಬಹಳ ಹಿಂದೆ ತಮ್ಮ ಹಚ್ಚೇವು ಕನ್ನಡದ ದೀಪ ಎಂಬ ಕವನದಲ್ಲಿ ಎಚ್ಚರಿಸಿದ್ದಾರೆ. ಆ ಕವನದ ಮೊದಲ ಪರಿಚ್ಛೇದ


" ಬಹುದಿನಗಳಿಂದ ಮೈಮರವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ-

ಅಲ್ಲಲ್ಲಿ ಕರಣ ಚಾಚೇವು

ನಡು ನಾಡೆ ಇರಲಿ ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರೆವ,ತೆರೆದೇವು ಮನವ ಎರೆದೇವು

ಒಲವ- ಹಿಡಿ ನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು

ಕನ್ನಡದ ದೀಪ

    ‌                             ಡಿ.ಎಸ್.ಕರ್ಕಿ.


ಕನ್ನಡ ನಾಡು ನುಡಿಯ ನೆನಪನ್ನು  ಮಾಡುವ ಕಾಲ ನವಂಬರ ತಿಂಗಳ ಈ ಸಂದರ್ಭದಲ್ಲಿ ನಾವು ಆಚರಣೆಗಾಗಿ ಆಚರಣೆ ಮಾಡದೆ ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಒಂದಾಗಿ ಚಿಂತಿಸೋಣ. ಕನ್ನಡದ ಹೆಸರನ್ನು ಹೇಳಿ ಬೇಳೆ ಬೇಯಿಸಿಕೊಳ್ಳುವವರ ಬಗ್ಗೆ ಜಾಗ್ರತರಾಗಿರೋಣ.

      

ಕನ್ನಡದ ಕಲ್ಲು, ಮಣ್ಣು, ಮನೆ ಮತ್ತು ಮನಗಳನ್ನು ಕಟ್ಟಿ ಬೆಳೆಸುವ ಕಾಯಕದಲ್ಲಿ ಕನ್ನಡಿಗರಾದ ನಾವೆಲ್ಲರೂ ಒಮ್ಮನದಿಂದ ದುಡಿಯೋಣ.ಗಡಿ ಸಮಸ್ಯೆ,ನದಿ  ನೀರಿನ ಸಮಸ್ಯೆ,ಭಾಷಾವಾರು ಪ್ರಾಂತದ ಸಮಸ್ಯೆ,ಭಾಷೆಗಳ ಸಮಸ್ಯೆ, ನಿರುದ್ಯೋಗ ಸಮಸ್ಯೆ ಎಲ್ಲವನ್ನು ಆತ್ಮ ವಿಶ್ವಾಸದಿಂದ ಬಗೆ ಹರಿಸಿಕೊಳ್ಳುವ ಶಕ್ತಿಯನ್ನು ನಮ್ಮದಾಗಿಸಿಕೊಳ್ಳೋಣ.


    ನನ್ನ ಕನ್ನಡ ನುಡಿಯೆ ನೀನೆನಿತು ಚೆಂದ

   ಎನಿತು ಗೀಚಿದರು ಆಗುವುದು ಶ್ರೀಗಂಧ

   ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು

   ಬಂಗಾರದೇಸಾಯಿ ಶ್ರೇಷ್ಠ ನುಡಿಮುತ್ತು

         ದಿನಕರ ದೇಸಾಯಿ


ಕನ್ನಡದ. ಕವಿಗಳು, ಸಾಹಿತಿಗಳು, ಶಿಲ್ಪಿಗಳು, ವಚನಕಾರರು, ರೈತರು, ಕಾರ್ಮಿಕರು, ಇಂಜಿನಿಯರ್ ಗಳು, ಉದ್ದಿಮೆದಾರರು, ಕಲಾವಿದರು ಕನ್ನಡಮ್ಮನ ತೇರನ್ನು ಏಳೆಯುತ್ತಾ ಸಂಭ್ರಮದಿಂದ ಸಾಗುತ್ತಿದ್ದಾರೆ.



ಈ ವರ್ಷ  ಹಠಾತ್ತನೆ ಬಂದೆರಗಿದ ಕೋವಿಡ್-೧೯  ಜನಮನವನ್ನು ತಲ್ಲಣಕ್ಕೆ ಒಳ ಪಡಿಸಿದೆ‌.  ಈ ಕಾಲವನ್ನು ನಾವು ಸಮಾಧಾನ ಮತ್ತು ಜಾಗ್ರತೆಯಿಂದ ಕಳೆಯ ಬೇಕಾಗಿದೆ.ಕೋವಿಡ್ ಗೆ ಸಂಬಂಧಿಸಿದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತಾ ವ್ಯಾಕ್ಷಿನ್ ಮಾರುಕಟ್ಟೆಗೆ ಬರುವ ವರೆಗೆ ತಾಳ್ಮೆಯಿಂದ ಕಾಯ ಬೇಕಾಗಿದೆ.


ಕನ್ನಡದ ಮಹಾಮನೆಯಲ್ಲಿ ಕನ್ನಡದ ಸವಿ ಸೊಲ್ಲಿನ ಗಾಯನವನ್ನು ಕೇಳುತ್ತಾ ಬದುಕಿ ಬಾಳೋಣ. ಕನ್ನಡಮ್ಮನಿಗೆ ಜೈ ಅನ್ನೋಣ.

         ‌‌              

==00==

 



   ಡಾ.ಶ್ರೀಪಾದ ಶೆಟ್ಟಿ.




                           



83 views0 comments

Komentarze


bottom of page