top of page

ಆಲೋಚನೀಯ -೧೫

ನಿನ್ನೆ ಅಕ್ಟೋಬರ ಎರಡರಂದು ಮಹಾತ್ಮಾ ಗಾಂಧೀಜಿಯವರ ೧೫೧ ನೇಯ ಜನ್ಮ ದಿನೋತ್ಸವದ ಆಚರಣೆ ಮುಗಿಯಿತು.ಆಚರಣೆಗಳು ಮಾಮೂಲಿನಂತೆ ನಡೆಯುತ್ತವೆ.ಹಳೆಯ ರೀತಿ ನೀತಿಗಳನ್ನು ತಪ್ಪದಂತೆ ಎಚ್ಚರವಹಿಸಿ ಆಚರಿಸಲಾಗುತ್ತದೆ.ಇಲ್ಲಿ ಹೊಸತನಕ್ಕಿಂತ ಹಳೆಯ ರೀತಿ ನೀತಿಗಳನ್ನು ಬಿಡದೆ ಪಾಲಿಸಲು ಎಲ್ಲರೂ ಕಟಿಬದ್ಧರಾಗಿರುತ್ತಾರೆ."ಗತಾನುಗತಿಕೊ ಲೋಕ: ನ ಲೋಕ ಪಾರಮಾರ್ಥಿಕ" ಎಂಬ ಬಗೆ.ಇಂತಹ ಆಚರಣೆಗಳು ಗಾಂಧೀಜಿಯವರಂತಹ ಅಸಾಮಾನ್ಯ ಚೇತನಗಳ ನಿಜವಾದ ಚಹರೆಯನ್ನು, ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿರುತ್ತವೆ.ಆದರೆ ಈ ಆಚರಣೆ ಅತ್ಯಂತ ವಿನೂತನ ಎಂದು ಬಿಂಬಿಸಲು ಎಲ್ಲಾ ಬಗೆಯ ಸೋಷಿಯಲ್ ಮೀಡಿಯಾಗಳ ಮೂಲಕ ಶತಾಯು ಗತಾಯು ಪ್ರಯತ್ನ ಮಾಡುತ್ತಿರುತ್ತವೆ.ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎಂಬ ಹಾಗೆ ಕಡ್ಡಿಯಂತಹ ಚಿಕ್ಕ ಸುದ್ದಿಯನ್ನು ಗುಡ್ಡದಂತೆ ಮಾಡಿ ಪ್ರಚಾರ ಗಿಟ್ಟಿಸುವ ತಂತ್ರ ಕೆಲಸ ಮಾಡುತ್ತಿರುತ್ತದೆ.ಇದಕ್ಕೆ ಪ್ರಜ್ಞಾವಂತರಾದವರು ಈ ಸುಳ್ಳುಗಳ ಬಗ್ಗೆ ಜನರಲ್ಲಿ ನಿಜವಾದ ಅರಿವನ್ನು ಜಾಗೃತಗೊಳಿಸುವ,ದೇಶ ಪ್ರೇಮವನ್ನು ಜಾಗೃತಗೊಳಿಸಲು ಅಣಿಯಾಗಿರ ಬೇಕು.

ನನ್ನ ಜೀವನವೆ ನನ್ನ ಸಂದೇಶ ಎಂಬ ಗಾಂಧೀಜಿ ಯವರ ಮಾತನ್ನು ನಂಬಿ ಅವರು ನಡೆದು ಬಂದ ದಾರಿಯನ್ನು ಗುರುತಿಸಿ,ಅಂತಹ ಋಜುಮಾರ್ಗದಲ್ಲಿ ನಾವು ನಡೆಯ ಬೇಕು.ಭಾರತ ದೇಶವೊಂದೆ ಅಲ್ಲ.ಇಡಿ ಜಗತ್ತಿನಲ್ಲಿ ಗಾಂಧಿ ಎಂದಾಕ್ಷಣ ಜನರ ಕಣ್ಣು ಅರಳಿ,ಕಿವಿ ನಿಮಿರಿ,ರೋಮಾಂಚನಗೊಂಡು

ಅವರು ಗಾಂಧೀಜಿ ಬಗ್ಗೆ ಇನ್ನಿಷ್ಟು ಮತ್ತಷ್ಟು ತಿಳಿಯಲು ಉತ್ಸುಕರಾತ್ತರೆ‌.ಗಾಂಧಿ ಎಂದರೆ ಒಂದು ಚಿಂತನೆಯ ಚಿಲುಮೆ.ಅದರ್ಶದ ಮೂರ್ತಿಮಂತ ಅಭಿವ್ಯಕ್ತಿ.


ಅಳಬೇಕು ನಗ ಬೇಕು ಸಮತೆ ಶಮವಿರಬೇಕು

ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು

ಅಲೆಯಿನಲುಗದ ಬಂಡೆಯವೋಲಾತ್ಮವಿರಬೇಕು

ತಿಳಿದವರ ಚರಿತವದು- ಮಂಕುತಿಮ್ಮ.


ಡಿ.ವಿ.ಜಿ.ಯವರು ಕಗ್ಗದಲ್ಲಿ ಬರೆದ ಈ ಸಾಲುಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ಥಿತ ಪ್ರಜ್ಞತೆಯಿಂದ  ಹೋರಾಡಿದ ಮಹಾತ್ಮ ಗಾಂಧಿಯವರ ವ್ಯಕ್ತಿತ್ವವನ್ನು ಹಿಡಿದಿಟ್ಟಿದೆ. ಸಮತೆ,ಶಮವನ್ನು  ಗಾಂಧಿ ವ್ಯಕ್ತಿತ್ವದ ಮೂಲ ಶ್ರೋತ.ಹೊಳೆಗೆ ಬಂದ ನೆರೆಯಂತೆ ಅವರ ಹೃದಯ ರಸ.ಅಲೆಯಿಂದ ಅಲುಗಾಡದ ಬಂಡೆಯಂತೆ ಅವರ ಆತ್ಮ ಶಕ್ತಿ.ಗಾಂಧಿ ತತ್ವದಿಂದ ಪ್ರಭಾವಿತರಾದ ಡಿವಿಜಿಯವರು ಗಾಂಧಿ ಪ್ರಭಾವ ವಲಯದಲ್ಲಿಯೆ ತಮ್ಮ ವ್ಯಕ್ತಿತ್ವದ ಪ್ರಭೆಯನ್ನು ಹೆಚ್ಚಿಸಿಕೊಂಡವರು.ಆ ಕಾರಣದಿಂದ ಮಂಕುತಿಮ್ಮನ ಕಗ್ಗ ಇಂದಿಗೂ ಸಮಕಾಲೀನವಾಗಿದೆ.

ಭಾರತದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಬರೆದ ಎ.ಪಿ.ಶ್ರೀನಿವಾಸಮೂರ್ತಿಯವರು ಗಾಂಧೀಜಿಯವರ ೨೧ ದಿನಗಳ ಉಪವಾಸ ಸತ್ಯಾಗ್ರಹವನ್ನು ವಿವರಿಸಿದ ಬಗೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

" ೧೯೪೩ ರ ಫೆಬ್ರುವರಿ ೧೮ ರಂದು ಗಾಂಧೀಜಿಯವರು ೨೧ ದಿವಸಗಳ ಉಪವಾಸವನ್ನು ಪ್ರಾರಂಭಿಸಿದರು.೯-೧೦ ದಿನಗಳ ನಂತರ ಅವರ ದೇಹಸ್ಥಿತಿ ತುಂಬ ಕೆಟ್ಟಿತು.ದೇಶದಲ್ಲಿ ಎಲ್ಲರೂ ತುಂಬ ಆತಂಕಗೊಂಡಿದ್ದರು.ಆದರೆ ಸರ್ಕಾರಕ್ಕೆ ಏನೂ ಆತಂಕವಾಗಲಿಲ್ಲ.ಅವರ ಕಾರ್ಯಕಾರಿ ಸಮಿತಿಯಲ್ಲಿ ಉಳಿದಿದ್ದ ಹೆಚ್.ಪಿ.ಮೋದಿ, ಎಂ.ಎಸ್.ಅಣೆ ಮತ್ತು ಎನ್.ಆರ್.ಸರ್ಕಾರ ಅವರುಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಇತ್ತರು.ಫೆಬ್ರುವರಿ ೧೯ ರಂದು ಗಾಂಧೀಜಿ ಉಪವಾಸ ಆರಂಭವಾಗಿ ೯ದಿನಗಳ ನಂತರ ಟಿ.ಬಿ.ಸಪ್ರು ಅವರ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಒಟ್ಟು ೧೫೦ ಮುಖಂಡರುಗಳ ಸಭೆ ಸೇರಿ ಮಹಾತ್ಮಾ ಗಾಂಧೀಯವರನ್ನು ತಕ್ಷಣವೆ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ವೈಸರಾಯ್ ಅವರನ್ನು ಒತ್ತಾಯಿಸುವ ನಿರ್ಣಯವನ್ನು ಮಾಡಿದರು.ಬ್ರಿಟಿಷ್ ಪ್ರಧಾನಿ ಚರ್ಚಿಲ್ ಅವರಿಗೂ ಬ್ರಿಟಿಷ್ ಹೌಸ್ ಆಫ್ ಕಾಮನ್ಸನ ಕೆಲವು ನಾಯಕರುಗಳಿಗೂ ಗಾಂಧೀಜಿಯವರನ್ನು ಸೆರೆ ಮನೆಯಿಂದ ಬಿಡುವಂತೆ ಕೇಬಲ್ ಮೂಲಕ ಕೇಳಿಕೊಂಡರು.ಇವರಲ್ದರಿಂದ ಏನೂ ಪ್ರಯೋಜನವಾಗಲಿಲ್ಲ.


     ಗಾಂಧೀಜಿಯವರ ಆತ್ಮಶಕ್ತಿ ಆತ್ಮವಿಶ್ವಾಸ, ಮನಸ್ಥೈರ್ಯ ಅಸಾಧಾರಣವಾದುದು.ಅವರು ಕೈಗೊಂಡಿದ್ದ ೨೧ ದಿವಸಗಳ ಉಪವಾಸ ಸತ್ಯಾಗ್ರಹವನ್ನು ಯಶಸ್ವಿಯಾಗಿ ಪೂರೈಸಿದರು. ಮುಖ್ಯವಾಗಿ ಬ್ರಿಟಿಷರಿಗೆ ಗಾಂಧೀಜಿಯವರ ಈ ಅಸಾಧಾರಣ ಸಾಹಸ ಕಾರ್ಯದಿಂದ ಅತ್ಯಂತ ಆಶ್ಚರ್ಯವಾಯಿತು.ಗಾಂಧೀಜಿಯವರು ಉಪವಾಸ ಪೂರೈಸಿದುದರಿಂದ ಭಾರತದಲ್ಲಿ ಸಾರ್ವತ್ರಿಕ ಸಮಾಧಾನ ವಾತಾವರಣ ಉಂಟಾಯಿತು‌.ಅವರ ಬಗ್ಗೆ ಜನತೆಯ ಪೂಜ್ಯಭಾವನೆ ಇಮ್ಮಡಿಯಾಗಿ ಹೆಚ್ಚಿತು"( ಭಾರತದ ಸ್ವಾತಂತ್ರ್ಯ ಚಳುವಳಿ 1857-1947 -ಎ.ಪಿ.ಶ್ರೀನಿವಾಸ ಮೂರ್ತಿ ಪು.150-151 ಕ.ಪು.ಪ್ರಾಧಿಕಾರ 1994)

     ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ.ಅದೊಂದು ಅದ್ಭುತ ಶಕ್ತಿ.ಸತ್ಯ,ಅಹಿಂಸೆ,ಸತ್ಯಾಗ್ರಹಗಳ ಮಾಂತ್ರಿಕಶಕ್ತಿ.


ತ್ರಿಭುವನಕೆ ದಾರಿ ತೋರಿಸಿದೆ ಬಾಪೂಜಿ

ನಿನ್ನ ಕೈಯೊಳಗಿತ್ತು ಕಾಂಚನದ ಸೂಜಿ

ಚಿಂದಿಯಾದರೂ ಪೃಥಿವಿ ಹೋರಾಟದಿಂದೆ

ಅದನು ಹೊಲಿಯುವ ಶಕ್ತಿ ನಿನಗಿತ್ತು ತಂದೆ.

         ‌                            ದಿನಕರ ದೇಸಾಯಿ


- ಡಾ.ಶ್ರೀಪಾದ ಶೆಟ್ಟಿ.

25 views0 comments

コメント


©Alochane.com 

bottom of page