top of page

ಆಲೋಚನೀಯ - ಮನ್ನಣೆಯ ದಾಹ

Updated: Dec 11, 2021


ಮನ್ನಣೆಯ ಅಪೇಕ್ಷೆ ಎಲ್ಲರಲ್ಲೂ ಇರುತ್ತದೆ. ತಾನು ಸಮಾಜದಲ್ಲಿ ಎದ್ದು ಕಾಣಬೇಕು, ತನ್ನ ಕೆಲಸಕ್ಕೆ ಮನ್ನಣೆ ದೊರೆಯಬೇಕು, ಜನ ತನ್ನನ್ನು ಗುರುತಿಸಬೇಕು ಹೊಗಳಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಸುಪ್ತವಾಗಿರುತ್ತದೆ. ಆ ಆಸೆ ಸಹಜವೇ. ಅದು ಮನುಷ್ಯ ಸಹಜವಾದ ಒಂದು ಆಕಾಂಕ್ಷೆ.


ಆದರೆ ಅದನ್ನು ಪಡೆಯಲು ಬೇಕಾದ ಸಿದ್ಧತೆ ನಮ್ಮಲ್ಲಿರಬೇಕಲ್ಲವೇ? ಅದನ್ನು ಹೊತ್ತುಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕಲ್ಲವೇ? ಚೆನ್ನಾಗಿ ಓದುವ ವಿದ್ಯಾರ್ಥಿಗಳನ್ನು ಅಧ್ಯಾಪಕರು ಎಲ್ಲರ ಮುಂದೆ ಹೊಗಳುತ್ತಾರೆ. ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ನಾವು ಅದನ್ನು ಎತ್ತಿ ಆಡುತ್ತೇವೆ. ಅದು ಒಳ್ಳೆಯ ಕೆಲಸ ಮಾಡುವವರಿಗೆ ಪ್ರೇರಣೆ ಕೊಟ್ಟಂತಾಗುತ್ತದೆ. ಮುಂದಕ್ಕೆ ಇನ್ನೂ ಉತ್ತಮ ಕೆಲಸ ಮಾಡಲು ಅವರಿಗೆ ಉತ್ಸಾಹ ತುಂಬಿದಂತಾಗುತ್ತದೆ. ಇದೆಲ್ಲ ಸರಿಯೇ. ಆದರೆ ಅದರರ್ಥ- ಈಗಿನ ಕೆಲಸ ಪರವಾಗಿಲ್ಲ, ಅದನ್ನು ಉಳಿಸಿಕೊಳ್ಳಲು ನೀನು ತಕ್ಷಣದಿಂದಲೇ ಇನ್ನಷ್ಟು ಯೋಗ್ಯತೆ ಗಳಿಸಿಕೊಳ್ಳಲು ಹೆಣಗಬೇಕೆಂಬ ಜವಾಬ್ದಾರಿ ಹೇರಿಕೆಯೇ ಆಗಿದೆ!


ಹೊಗಳಿಕೆ ಅಥವಾ ಶ್ಲಾಘನೆ ಆ ನಿರ್ದಿಷ್ಟ ಕೆಲಸಕ್ಕೆ ಸಂಬಂಧಿಸಿದ್ದು; ಅದು ನಿರಂತರವೇನಲ್ಲ. ಅದನ್ನು ಅಪೇಕ್ಷಿಸುವವನ ಆಸೆ ಒಂದು ಹಂತದ ವರೆಗೆ ಇದ್ದರೆ ಅಡ್ಡಿಯಿಲ್ಲ. ಮಿತಿಮೀರಿದರೆ ಅದು ವ್ಯಕ್ತಿಯ ಅವನತಿಗೂ ಕಾರಣವಾಗುತ್ತದೆ. ಆ ಆಸೆ ಒಂದು ಚಟವಾಗಿಬಿಟ್ಟರೆ ಗುಣಮಟ್ಟ ಎಂಬುದು ಗೌಣವಾಗಿ ತೋರುಗಾಣಿಕೆಯಾಗಿ ಬಹಿರಾಡಂಬರವೇ ಎದ್ದು ಕಾಣುತ್ತದೆ.


ನಮ್ಮ ಇವತ್ತಿನ ಸಮಾಜಜೀವನವನ್ನು, ಅದರಲ್ಲೂ ಸಾಹಿತ್ಯ-ಸಾಂಸ್ಕೃತಿಕ ಲೋಕದ ವಿದ್ಯಮಾನಗಳನ್ನು ಗಮನಿಸಿದರೆ ಈ ಮನ್ನಣೆಯ ದಾಹ ಹಪಹಪಿಕೆಯ ಹಂತಕ್ಕೆ ತಲಪಿರುವಂತೆ ಕಾಣುತ್ತದೆ.


'ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ' ಎಂಬಂತೆ, ಇವತ್ತು ಸಾಹಿತ್ಯ ವ್ಯವಸಾಯಕ್ಕಿಳಿದು, ನಾಳೆಯೇ ಬಹುಮಾನ ಪುರಸ್ಕಾರ ಪ್ರಶಸ್ತಿಗಳನ್ನು ಗಳಿಸಿ ಪ್ರಸಿದ್ಧರಾಗಿ ಬಿಡಬೇಕೆಂಬ, ಮಾನ ಮನ್ನಣೆ ಗಳಿಸಿ ಪ್ರತಿಷ್ಠಿತರಾಗಬೇಕೆಂಬ ಹಂಬಲಕ್ಕೆ ಬಿದ್ದಂತೆ ಕಾಣುತ್ತದೆ. ತನ್ನ ಮೊದಲ ಕೃತಿಗೆ ಹನ್ನೆರಡು ಪ್ರಶಸ್ತಿ ಬಂತೆಂದೂ ಎರಡನೇ ಕೃತಿಗೆ ಹದಿನೈದು ಪ್ರಶಸ್ತಿ ಬಂತೆಂದೂ - ಚಲನಚಿತ್ರಗಳ ಜಾಹಿರಾತಿನಂತೆ - ಅದನ್ನು ಅಂಬಾರಿ ಮೆರವಣಿಗೆ ಮಾಡುವುದನ್ನು ನೋಡಿದರೆ ನಾವು ಎಲ್ಲಿಗೆ ಬಂದು ನಿಂತಿದ್ದೇವೆ ಅನ್ನಿಸದಿರದು.


ಬಹುಮಾನ - ಪ್ರಶಸ್ತಿ ಎಂಬುದು ಆಯಾ ವ್ಯಕ್ತಿಯ ವೈಯಕ್ತಿಕ ಬದುಕಿನಲ್ಲಿ ಒಂದು ದಿನದ ರಂಗು ಇರಬಹುದು. ಯಾರಿಗೆ ಯಾವ ಬಹುಮಾನ ಬಂದಿದೆ, ಯಾವ ಪ್ರಶಸ್ತಿ ಬಂದಿದೆ ಎಂಬುದು ಮರುದಿನ ಯಾರಿಗೂ ನೆನಪಿರುವುದಿಲ್ಲ. ಅಷ್ಟೇಕೆ, ನಾಲ್ಕಾರು ವರ್ಷ ಕಳೆದ ಮೇಲೆ ಸ್ವತಃ ಅದನ್ನು ಪಡೆದವರಿಗೇ ನೆನಪಿರಲಿಕ್ಕಿಲ್ಲ, ಪ್ರತಿಷ್ಠೆಯ ಅಹಂಕಾರವೊಂದು ಬಿಟ್ಟರೆ! ಬಹುಮಾನ ಪ್ರಶಸ್ತಿ ಎಂಬವುಗಳು ಅವರವರ ವೈಯಕ್ತಿಕ ಬದುಕಿನಲ್ಲಿ ಒಂದು ಮೆಟ್ಟಿಲಾಗಿರಬಹುದು, ಆದರೆ ಸಾರ್ವಜನಿಕರಿಗೆ ಅದು ಮೆಟ್ಟಿಲಾಗಿರುವುದಿಲ್ಲ ಎಂಬುದು ನಮಗೆ ತಿಳಿದಿರಬೇಕು.


ನಾವು ರಚನೆ ಮಾಡಿದ ಒಳ್ಳೆಯ ಸಾಹಿತ್ಯ ಕೃತಿಗಳು ಮಾತ್ರ ನಾಲ್ಕು ಕಾಲ ನಿಲ್ಲುತ್ತವೆ. ಸಾಹಿತ್ಯದ ಮುಖೇನ ಮಾಡುವ ಇತರೇ ಚಟುವಟಿಕೆಗಳಲ್ಲ. ಅಂಥವೇನಿದ್ದರೂ ಕೇವಲ ಅಂದಂದಿನ ದಂದುಗವಾಗಬಹುದು, ಅಷ್ಟೆ! ನಮ್ಮ ಪ್ರತಿಭೆ, ಸಮಯ, ಶ್ರಮಗಳನ್ನು ಒಳ್ಳೆಯ ಕೃತಿರಚನೆಯ ಕಡೆಗೆ ತಿರುಗಿಸುವುದು ಸಾಹಿತ್ಯದ ಮತ್ತು ನಮ್ಮ ಏಳಿಗೆಯ ದೃಷ್ಟಿಯಿಂದ ಒಳಿತು. ಕೊನೆಗೂ ಉಳಿಯುವುದು ಒಳ್ಳೆಯ ಸಾಹಿತ್ಯ ಮಾತ್ರ..


ಕೃತಿಯ ವಸ್ತುವಿಷಯದ ಬಗ್ಗೆ, ಅದರ ಸಾಹಿತ್ಯಿಕ ಮಹತ್ವದ ಬಗ್ಗೆ ಚರ್ಚೆ-ಸಂವಾದ ನಡೆಯಬೇಕಲ್ಲದೆ ಅದಕ್ಕೆ ಬಂದಿರುವ ಬಹುಮಾನ ಪ್ರಶಸ್ತಿಗಳನ್ನು ಕಟ್ಟಿಕೊಂಡು ಓದುಗರೇನು ಮಾಡಬೇಕು! ಅಬ್ಬಬ್ಬ ಎಂದರೆ ಅದು ಕೃತಿಕಾರನ ಅಹಂಕಾರವನ್ನು ತುಸು ಹೆಚ್ಚು ಮಾಡಿ ಆತನ ಅಧಃಪತನದ ಹಾದಿಯನ್ನು ಇನ್ನಷ್ಟು ಸುಗಮ ಮಾಡಬಹುದು, ಅಷ್ಟೆ! ಕೃತಿಯ ಮಹತ್ವ ಮತ್ತು ಮೌಲ್ಯಕ್ಕೂ ಬಹುಮಾನ-ಪ್ರಶಸ್ತಿಗಳಿಗೂ ಅರ್ಥಾರ್ಥ ಸಂಬಂಧ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಎಷ್ಟೋ ಬಾರಿ ಅದು ಕೃತಿಯ ಮಹತ್ವಿಕೆಗಾಗಿ ಸಲ್ಲುವುದಾಗಿರದೆ 'ಕೃತಿಕಾರನಿಗಾಗಿ' ಸಲ್ಲುತ್ತದೆ ಎಂಬುದು ಗುಟ್ಟಾಗಿ ಏನೂ ಉಳಿದಿಲ್ಲ!


'ಸಾಧನೆ' ಮಾಡದೆ 'ಸಿದ್ಧಿ' ಪಡೆಯುವ ಹಾದಿ ಎಲ್ಲಾದರೂ ಇದೆಯೇ? ಸಾಧನೆ ಎಂದರೆ ತಪಸ್ಸು; ಒಂದನ್ನೇ ಕುರಿತು ನಿರಂತರ ಧೇನಿಸುತ್ತ, ಶ್ರಮಿಸುತ್ತ, ಕುಶಲಿ (expert) ಆಗುತ್ತ ಸಾಗುವ ಹಾದಿ ಅದು. 'ತಪಸ್ಸು' ಮಾಡಿ 'ವರ' ಪಡೆದುಕೊಳ್ಳಬೇಕಲ್ಲದೆ ಕೂತಲ್ಲಿಗೆ ಯಾರಿಗಾದರೂ 'ವರ' ಪಡೆಯಲಾಗುತ್ತದೆಯೇ?


ನಾವು ಕ್ಷಣಿಕ ಆಸೆಗಳಿಗೆ ಬಲಿಯಾಗದೆ ಸಾಹಿತ್ಯವನ್ನು ಚೆನ್ನಾಗಿ ಓದಿ ಮನನ ಮಾಡಿಕೊಂಡು ಸಾಧನೆಯ ಮೂಲಕ ಸಮಕಾಲೀನ ಸಮಾಜವನ್ನು ನವೀನ ರೀತಿಯಲ್ಲಿ ಕಂಡರಿಸುವ ಕಾಯಕಕ್ಕೆ ಕೈಹಾಕಿದರೆ ಮಾತ್ರ ಒಳ್ಳೆಯ ಸಾಹಿತ್ಯವನ್ನು ನೀಡಲು ಸಾಧ್ಯ. ಮೆರವಣಿಗೆಯಲ್ಲಿ ಸಾಗುತ್ತ ಸ್ವರತಿ ಸಂಕೀರ್ತನೆಯಲ್ಲಿ ತೊಡಗಿದರೆ ಹಿಮ್ಮೇಳ ನಿಂತ ಕೂಡಲೇ ಮೇಳವೂ ನಿಂತುಬಿಡುವ ಪರಿಸ್ಥಿತಿ ಬಂದೀತು!


-ಡಾ. ವಸಂತಕುಮಾರ ಪೆರ್ಲ

33 views1 comment

1 commentaire


shreepadns
shreepadns
12 déc. 2021

ಮನ್ನಣೆಯ ದಾಹವೊಂದೆ ಮುಂದೆ ಬಂದು ಬರವಣಿಗೆಯ ಧ್ಯಾನ ಮತ್ತು ಗುರಿ ಮಸಳಿಸುತ್ತಿರುವ ಬಗ್ಗೆ ಕಣ್ಣು ತೆರೆಸುವ ಸಂಪಾದಕೀಯ. ಬಹುಶ್ಡಾರುತರಾದ.ವಸಂತ ಕುಮಾರ ಪೆರ್ಲ ಅವರಿಗೆ ಅಭಿವಂದನೆ ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ.

J'aime
bottom of page