top of page

ಆಲೋಚನೀಯ : ಮತ್ಯಾಕೆ ಬಂದ್ಯೊ ಮಳಿರಾಜ !!


ಮನುಷ್ಯ ನೀರಿಲ್ಲದೆಯೆ ಬದುಕಲಾರ. ಮೊದಲು ಪ್ರಾಣವಾಯು ಬಳಿಕ ನೀರು ಆಮೇಲೆ ಆಹಾರ. ಇದಕ್ಕೆಲ್ಲ ಮೂಲ‌ಸೆಲೆಯಾಗಿ ನೀರು ಬೇಕೆ ಬೇಕು. ನೀರನ್ನು ಕೆರೆ ಬಾವಿಗಳಲ್ಲಿ ನದಿ ನದಗಳಲ್ಲಿ ಹೊಳೆ ಹಳ್ಳ ಸರೋವರ ಸಮುದ್ರ, ಮಹಾ ಸಾಗರಗಳಲ್ಲಿ ಕಾಣುತ್ತೇವೆ. ಈ ನೀರು ಸೂರ್ಯನ ಶಾಖದಿಂದ ಆವಿಯಾಗಿ ಆ ಆವಿ ಮೋಡವಾಗಿ ಆಮೋಡ ಕಾರ್ಮೋಡವಾಗಿ ಮಿಂಚು ಗುಡುಗು ಸಿಡಿಲಿನ ಹಿನ್ನೆಲೆಯಲ್ಲಿ ಮಳೆಯಾಗಿ ಭೂಮಿಗೆ ಇಳಿದು ಬರುತ್ತದೆ. ಈ ಕಾಲವನ್ನು ಮಳೆಗಾಲ ಎಂದು ಕರೆಯುತ್ತಾರೆ.

ಕಡು ಬೇಸಿಗೆಯಲ್ಲಿ ಸೂರ್ಯನ ತಾಪ ಹೆಚ್ಚಾಗಿ ನೀರಿಗೆ ತತ್ವಾರವಾಗಿ ಗಿಡ ಮರ ಜನ ಜಾನುವಾರುಗಳು ತೊಂದರೆ ಅನುಭವಿಸ ಬೇಕಾಗುತ್ತದೆ. ಎಷ್ಟೊ ದಿನದಿಂದ ಮಳೆಗಾಗಿ ಕಾಯ ಬೇಕಾಗುತ್ತದೆ. ಮಳೆ ತಡವಾದಾಗ ದೇವಾಲಯಗಳಲ್ಲಿ ಹೋಮ ಹವನ ಜಪ ಜಲಾಭಿಷೇಕಗಳನ್ನು ಮಾಡುತ್ತಾರೆ. ಕತ್ತೆ ಮದುವೆ ಮಾಡುತ್ತಾರೆ. ಮಳೆಯು ಬರುವಂತೆ ಮಾಡಲು ಬೇರೆ ಬೇರೆ ಕಡೆಯಲ್ಲಿ ಜನಪದರು ನಡೆಸುವ ಆಚರಣೆಗಳ ಅಧ್ಯಯನ ಕುತೂಹಲಕಾರಿ. ಬುಡಕಟ್ಟು ಸಮುದಾಯದವರು ಮಳೆಯು ಬರುವ ಮುನ್ಸೂಚನೆಯನ್ನು‌ ನಿಸರ್ಗದ ಬದಲಾವಣೆಯನ್ನು ಕಂಡು ಹಿಡಿದು ಹೇಳುತ್ತಾರೆ. ಅಲ್ಲಿಯ ವಿವರಗಳು ಪ್ರಕೃತಿಯೊಂದಿಗೆ ಮನುಷ್ಯನ ಒಡನಾಟದ ವಿವಿಧ ಮಜಲುಗಳನ್ನು

ಸಾದರ ಪಡಿಸುತ್ತದೆ. ಬಹಳ ದಿನಗಳಿಂದ ಕಾದು ಮಳೆ ಬರುವುದೆ ಇಲ್ಲವೇನೋ ಎಂದು ಕಂಗಾಲು ಆಗಿರುವಾಗ ಒಮ್ಮೆಲೆ ಮಿಂಚು ಗುಡುಗಿನೊಂದಿಗೆ ಮೊದಲ ಮಳೆ ಬಂದಾಗ ಹೇಳಲಾರದ ಅನಿರ್ವಚನೀಯ ಆನಂದ ವುಂಟಾಗುತ್ತದೆ. ಮಳೆಗಾಲ ಬಿಡದೆ ಸುರಿಯುತ್ತದೆ. ಕೆಲವು ಸಲ ಮಳೆಗಾಲಕ್ಕಿಂತ ಮೊದಲೆ ಮಳೆ ಬಂದು ಸಂತಸ ತರುತ್ತದೆ. ಕೆಲವೊಮ್ಮೆ ಮಳೆ ನಕ್ಷತ್ರ ಆರಂಭವಾಗಿ ಒಂದೆರಡು ನಕ್ಷತ್ರಗಳು ಮುಗಿಯುತ್ತಾ ಬಂದರು ಮಳೆ ಬರುವುದೆ ಇಲ್ಲ. ಸರಿಯಾದ ಕಾಲದಲ್ಲಿ ಮಳೆಗಾಲ ಆರಂಭವಾಯಿತು ಎನ್ನಿ‌ ಆ ಬಳಿಕ ಬಹಳ ದಿನ ಮಳೆ ಬರದೆ ಬಿತ್ತಿದ ಗದ್ದೆಗಳಲ್ಲಿ ನೀರು ಒಣಗಿ ಬರಗಾಲ ಕಾಲಿಡುವುದು ಇದೆ. ಮಳೆಯನ್ನೆ ನಂಬಿ ಬದುಕುವ ರೈತ ಕಂಗಾಲಾಗಿ‌ ಆತ್ಮಹತ್ಯೆಗೆ ಶರಣಾದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತದೆ.

ನಮ್ಮಲ್ಲಿ ಮಳೆ ಬರದಿದ್ದರು ಜಲಾಶಯಗಳ ಮೂಲಕ,ಕಿಂಡಿ ಆಣೆಕಟ್ಟುಗಳ ಮೂಲಕ ಏತ ನೀರಾವರಿಯ ಮೂಲಕ ಬೆಳೆಯನ್ನು ಪಡೆಯುವ ಸವಲತ್ತು ಬಹಳಷ್ಟು ಕಡೆ ಇಲ್ಲವಾಗಿದೆ. ನಮ್ಮ ಅರ್ಥ ಶಾಸ್ತ್ರಜ್ಞರು I ndian agriculture is gambling with mansoons ಎಂದು ಹೇಳಿದ ಮಾತು ನಿಜವಾಗಿದೆ. ಭಾರತದ ಕೃಷಿ ಮುಂಗಾರು ಮತ್ತು ಹಿಂಗಾರು ಮಳೆ ( ಮನ್ಸೂನ್ ಅವಲಂಬಿಸಿ) ಯೊಂದಿಗೆ ಜೂಜಾಟದಲ್ಲಿ ತೊಡಗ ಬೇಕಾಗಿ ಬಂದಿದೆ.

ಮಳೆ ನಾವು ಬಯಸಿದಂತೆ ಬೀಳುತ್ತಿಲ್ಲ. ಇದಕ್ಕೆ ಪರಿಸರ ನಾಶವು ಮುಖ್ಯ ಕಾರಣವಾಗಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ಅರಣ್ಯ ನಾಶ,ಕೃಷಿಗಾಗಿ ಅರಣ್ಯದ ಅತಿಕ್ರಮಣ,ಮರ ಮಟ್ಟುಗಳ ಕಳ್ಳ ಸಾಗಣೆ ಹೀಗೆ ಅರಣ್ಯ ಕಡಿಮೆಯಾಗಿ ಮಳೆಯ ಪ್ರಮಾಣವು ತೂಕ ತಪ್ಪಿದೆ. ಮಳೆ ಇಲ್ಲ ಎನ್ನುವಾಗ ಮಳೆ ಜೋರಾಗಿ ಹೊಳೆ ಹಳ್ಳ ತುಂಬಿ ನೆರೆ ಹಾವಳಿಯಿಂದ ಜನ ಜಾನುವಾರು ಬೆಳೆ ಎಲ್ಲವು ನೀರು ಪಾಲಾಗಿ ಅತಿವೃಷ್ಟಿಯ ಆಟಾಟೋಪಕ್ಕೆ ಆಡಳಿತವು ಕಂಗಾಲಾಗಿ ಬಿಡುತ್ತದೆ. ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಪುಸ್ತಕಕ್ಕೆ ಗೆದ್ದಲು ಹತ್ತಿಕೊಂಡಂತೆ ನೌಕರ ಶಾಹಿ,ರಾಜಕಾರಣಿಗಳ ಕಾರ್ಯಕರ್ತರು ಎಂಬ ಗೋಸುಂಬೆಗಳು ಬೀಸುವ ಗುಂಡಿಗೆ ಮುಕ್ಕಿದ್ದೆ ಲಾಭ ಎಂಬ ಹಾಗೆ ಸಂತ್ರಸ್ತರಿಗೆ ಕೊಡುವ ಪರಿಹಾರದಲ್ಲಿಯೆ ಪಾಲು ತಿನ್ನುತ್ತಾರೆ.

ನೆರೆ ಹಾವಳಿಯಿಂದ ಜರ್ಜರಿತರಾದ ಜನ ಸ್ವಲ್ಪ ಮಟ್ಟಿಗೆ ಉಸಿರು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಳೆಗಾಲದ ಕಡೆಯ ಸ್ವಾತಿ ನಕ್ಷತ್ರದಲ್ಲಿ ಮತ್ತೆ ಮಳೆ ಜೋರಾಗಿ ಹೊಳೆ ಹಳ್ಳ ತುಂಬಿ ಹೆಣ ಹರಿದಾಡುತ್ತದೆ.

ಮಳೆ ಬರದೆ ಬರಗಾಲ ಉಂಟಾಗಿ ಮಕ್ಕಳನ್ನು ಮಾರಾಟ ಮಾಡಿ ರೊಕ್ಕವನ್ನು ತೆಗೆದುಕೊಂಡು ಹಿಟ್ಟು ತರಲು ಹೋದರೆ ವ್ಯಾಪಾರಿಗಳು ತಿನ್ನುವ ಆಹಾರವನ್ನು ಕಲಬೆರಕೆ ಮಾಡಿ( ಹಿಟ್ಟಿಗೆ ಆಫೀಮು ಸೇರಿಸಿ ಮಾರಿದರು ಎನ್ನುತ್ತದೆ ಜನಪದ ಹಾಡು) ಅದನ್ನು ತಿಂದ ಎಳೆಯ ಮಕ್ಕಳು ಸಾವನ್ನಪ್ಪುತ್ತಾರೆ.

" ಬಣ್ಣದ ಗುಬ್ಯಾರು ಅವರು ಮಣ್ಣಾಗಿ ಹೋದರು ಮಳಿರಾಜ

ಮತ್ಯಾಕ ಬಂದ್ಯೊ ಮಳಿರಾಜ"

ಎಂದು ಜನಪದ ಗರತಿ ಮಳಿರಾಜನನ್ನು ಪ್ರಶ್ನಿಸುತ್ತಾಳೆ. ಇದು ಮಳೆಗಾಲದ ಚಕ್ರ. ಇಲ್ಲಿ ನೆಮ್ಮದಿಗಿಂತ ನೋವೆ ಜಾಸ್ತಿ. ಬಹಳಷ್ಟು ವಿಷಯದಲ್ಲಿ ಭಾರತ ಅಂತಾರಾಷ್ಟ್ರೀಯ ನೆಲೆಯಲ್ಲಿ ತನ್ನ ಸ್ಥಾನ ಮಾನವನ್ನು ಹೆಚ್ಚಿಸಿ ಕೊಂಡಿದ್ದೇನೊ ನಿಜ. ಆದರೆ ಮಳೆಯಂತಹ ಮೂಲಭೂತ ಅವಶ್ಯಕತೆಯನ್ನು ಪೂರೈಸಲು ಪರಿಸರ ಸಮತೋಲನ,ಅರಣ್ಯದ ಅಭಿವೃದ್ಧಿ ಭೂ ಸವಕಳಿಯನ್ನು ತಪ್ಪಿಸುವ ಮಾರ್ಗೋಪಾಯದ ಕೊರತೆಯಿಂದ ಜನರು ಈ ಮಳೆಯ ಆಘಾತಕ್ಕೆ ಜನ ಮೈಗೊಂಡು ಹೋಗಿದ್ದಾರೆ. ಈ ಬಗ್ಗೆ ಕೇಂದ್ರ ಮಂತ್ರಾಲಯದವರು ಸಮಾಲೋಚನೆ ಮಾಡಿ ಪರಿಹಾರ ಕಂಡುಕೊಂಡು ದೇಶದ ಬೆನ್ನೆಲುಬಾದ ರೈತನ ಬದುಕನ್ನು ಹಸನಾಗಿಸಲು ಪ್ರಯತ್ನ ಮಾಡುವಂತಾಗಲಿ. ನಿಮಗೆಲ್ಲರಿಗು ೭೭ನೇ ಸ್ವಾತಂತ್ಯೋತ್ಸವದ ಹಾರ್ದಿಕ ಶುಭ ಹಾರೈಕೆಗಳು.

ಜೈ ಜವಾನ್ ಜೈ ಕಿಶಾನ್.


ಡಾ.ಶ್ರೀಪಾದ ಶೆಟ್ಟಿ

45 views0 comments

Comments


bottom of page