top of page

ಆಲೋಚನೀಯ: ಉತ್ಸವಮೂರ್ತಿ

ಇಂದಿನ ಸಾಹಿತ್ಯಲೋಕವು ಉತ್ಸವಮೂರ್ತಿಯಾಗುವುದರ ಕಡೆಗೆ ಹೆಚ್ಚು ಆಸಕ್ತವಾಗಿದೆ ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ಗರ್ಭಗುಡಿಯ ವಿಗ್ರಹವಾಗುವುದಕ್ಕಿಂತ ಉತ್ಸವಮೂರ್ತಿಯಾಗುವುದರ ಕಡೆಗೆ ಅದು ಹೆಚ್ಚು ಓಲುವೆಯನ್ನು ಪ್ರದರ್ಶಿಸುತ್ತಿದೆ. ಉತ್ಸವಮೂರ್ತಿ ಆಗುವಲ್ಲಿ ಆಕರ್ಷಣೆಗಳು ಅಧಿಕ; ರಥಾರೂಢನಾದ ಮೇಲೆ ಮುಚ್ಚಿಡುವುದಕ್ಕೆ ಏನಿದೆ? ರಥಪ್ರದರ್ಶನದಲ್ಲಿ ತೆರೆದುಕೊಳ್ಳುವುದು ಹೆಚ್ಚು ಮತ್ತು ಅಲಂಕಾರಗೊಂಡು ವೈಭವೋಪೇತವಾಗಿ ಸಾರ್ವಜನಿಕರ ನಡುವೆ ಸಾಗುವುದರಿಂದ ಸಿಗುವ ಜೈಕಾರಗಳು ಕಿವಿ ತುಂಬಿಕೊಳ್ಳುತ್ತದೆ! ಆದರೆ ಗರ್ಭಗುಡಿಯಲ್ಲಿ ನಿತ್ಯಪೂಜೆಯ ಅನುಷ್ಠಾನದಿಂದ ಸಾಂದ್ರವಾಗುವ ಸಾಧ್ಯತೆಗಳಿಂದ ತಾನು ದೂರವಾಗುತ್ತೇನೆ ಎಂಬ ಅರಿವು ಅದಕ್ಕೆ ಇರುವುದಿಲ್ಲ.


ಸಾಹಿತ್ಯದ ಗುಣಮಟ್ಟ ಮತ್ತು ಮೌಲ್ಯವು ಪ್ರಚಾರದಿಂದ ನಿರ್ಧರಿತವಾಗುವುದಿಲ್ಲ. ಸ್ವಂತ ಗುಣಮಟ್ಟ ಮತ್ತು ಮೌಲ್ಯ ಇಲ್ಲದೇ ಹೋದಾಗ ಪ್ರಚಾರದ ವೇಷದಲ್ಲಿ ಅದು ಸಾರ್ವಜನಿಕರ ಮುಂದೆ ಹೋಗಲು ತವಕಿಸುತ್ತದೆ.


ಹೀಗೆ ವೇಷ ತೊಟ್ಟ ಸಾಹಿತ್ಯವು ಒಮ್ಮೆಗೆ ಚಂದವಾಗಿ ಮತ್ತು ಸಿಹಿಯಾಗಿ ಕಂಡರೂ ನೀರಿಗೆ ಹಾಕಿದ ಸಕ್ಕರೆಯ ಗೊಂಬೆಯ ಹಾಗೆ ಮರುದಿನಕ್ಕೆ ಅದರ ನಿಜಬಣ್ಣ ಗೊತ್ತಾಗಿಬಿಡುತ್ತದೆ. ಅತಿಶೀಘ್ರವಾಗಿ ಪ್ರಚಾರಕ್ಕೆ ಬರಬೇಕೆಂಬ ಮತ್ತು ಸ್ಥಾನಮಾನಗಳನ್ನು ಗಳಿಸಿಕೊಳ್ಳಬೇಕೆಂಬ ಹಪಹಪಿಕೆ ಇವತ್ತು ಸಾಹಿತ್ಯಕ್ಷೇತ್ರದಲ್ಲಿ ವಿಜೃಂಭಿಸುತ್ತಿರುವಂತೆ ಕಾಣುತ್ತದೆ.


ಓರ್ವ ಸಾಹಿತಿ ತನ್ನ ಕೃತಿಯಿಂದ ಮಹತ್ತ್ವದವನಾಗಬೇಕೇ ಹೊರತು ಆತನ ಬಗೆಗಿನ ಪ್ರಚಾರದಿಂದಲ್ಲ. ಕೃತಿ ಮುಂದೆ ಇರಬೇಕು, ಕೃತಿಕಾರ ಹಿಂದೆ ಇರಬೇಕು. ಕವಿ ಸದಾ ಸೃಜನಶೀಲ ಕಾಯಕದಲ್ಲಿ ಮಗ್ನನಾಗಿರಬೇಕೇ ಹೊರತು ಅದನ್ನು ಚೀಲದಲ್ಲಿ ತುರುಕಿಕೊಂಡು ತಾನು ಸಂತೆಕಟ್ಟೆಯಲ್ಲಿ ಕುಳಿತುಕೊಳ್ಳುವಂತೆ ಆಗಬಾರದು.


ಹಾಗೆ ನೋಡಿದರೆ ಅತಿಯಾದ ಸಾರ್ವಜನಿಕತೆ ಮತ್ತು ಪ್ರಚಾರವು ಸಾಹಿತಿಗೆ ಶತ್ರುವೇ ಹೌದು. ಅತಿಯಾದ ಪ್ರಚಾರದಿಂದ ಸಾಹಿತ್ಯಸೃಷ್ಟಿ ಹಿನ್ನೆಲೆಗೆ ಸರಿಯುತ್ತದೆ. ಸಾಹಿತ್ಯೇತರ ಚಟುವಟಿಕೆಗಳಲ್ಲಿ ಮಗ್ನನಾಗಿ ಸಾಹಿತ್ಯವು ಮುಳುಗಿ ಬಿಡುತ್ತದೆ.


ಮುನ್ನೂರ ಅರವತ್ತು ದಿನಗಳ ಕಾಲ ಗರ್ಭಗುಡಿಯ ಒಳಗೆ ಕಾರಣಿಕದ ಪೂಜೆ ಸಂದರೆ ಮಾತ್ರ ಮೂರ್ನಾಲ್ಕು ದಿನಗಳ ಕಾಲ ಜಾತ್ರೆ-ಉತ್ಸವ ಕೈಗೊಳ್ಳುವ ಅರ್ಹತೆ ಬರುತ್ತದೆ. ವರ್ಷಪೂರ್ತಿ ಜಾತ್ರೆ-ಉತ್ಸವ ಮಾಡಿದರೆ ಭಾಗವಹಿಸುವವರು ಯಾರು? ಅಂತಹ ದೇವರನ್ನು ನೋಡುವವರು ಯಾರು?!


ಮೌಲ್ಯಯುತವಾದ ಬರವಣಿಗೆಯಿಂದ ಸಾಹಿತಿ ದೊಡ್ಡವನಾಗಬೇಕೇ ಹೊರತು ಪ್ರಚಾರದಿಂದಲ್ಲ. ಇಂದಿನ ಮಾಧ್ಯಮಯುಗದಲ್ಲಿ ಸಾಹಿತ್ಯವು ತನ್ನ ವಿಗ್ರಹವನ್ನು ತಾನೇ ಹೊತ್ತು ಮೆರವಣಿಗೆ ಹೋಗುವುದು ಹೊಸ ವಿದ್ಯಮಾನವಾಗಿದೆ. ಗರ್ಭಗುಡಿಯಲ್ಲಿ ದೇವರೇ ಇಲ್ಲವಾಗಿದ್ದಾನೆ.


ಇವತ್ತು ತಪಸ್ಸು ಮಾಡಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಸದಾ ಲೋಕಾಂತವೇ ಇವತ್ತಿನ ಬದುಕು ಎಂಬಂತಾಗಿದೆ. ಏಕಾಂತವೇ ಇಲ್ಲದೆ, ಚಿತ್ತಭಂಗಗೊಳಿಸುವ ವಾತಾವರಣದಲ್ಲಿ ಉತ್ತಮ ಸಾಹಿತ್ಯವನ್ನು ನಿರೀಕ್ಷಿಸುವುದಾದರೂ ಹೇಗೆ?


- ಡಾ. ವಸಂತಕುಮಾರ ಪೆರ್ಲ

21 views0 comments

Comments


bottom of page