ನದಿ ತೀರದಲ್ಲಿ ಆಟವಾಡುವ ಮಕ್ಕಳು ತಮ್ಮ ಖುಷಿಗೆ ಕಾಗದದ ದೋಣಿಯನ್ನು ಮಾಡಿ ನೀರಿನಲ್ಲಿ ಬಿಟ್ಟ ಹಾಗೆ ನಾವು ‘ಕಾಗದದದೋಣಿ’ ಬದಲು ‘ಆಲೋಚನೆ’ ಎಂಬ ‘ಈ’ ದೋಣಿಯನ್ನು ತೇಲಿ ಬಿಟ್ಟಿದ್ದೇವೆ. ಅದನ್ನು ಮುಳುಗದಂತೆ ಕಾಳಜಿಯಿಂದ ದೂರ ತೀರವ ಸೇರಿಸುವ ಹೊಣೆ ನಿಮ್ಮದು. ಪತ್ರಿಕೆಯ ಡಿಜಿಟಲ್ ರೂಪ ನನ್ನ ತಲೆಮಾರಿನವರಿಗೆ ಕಬ್ಬಿಣದ ಕಡಲೆಯೆಂದನಿಸಿದರೂ ಹೊಸ ತಲೆಮಾರಿಗೆ ಅದು ಸುಲಿದ ಬಾಳೆಯ ಹಣ್ಣಿನಂತೆ. ಈ ಪತ್ರಿಕೆಗೆ ಒಂದು ರೂಪು ರೇಷೆಯನ್ನು,ಆಯ, ಆಕಾರಗಳನ್ನು ನೀಡಿ ಅದನ್ನು ಮುನ್ನಡೆಸುವ ಹೊಣೆ ನಮ್ಮ ಯುವ ಮಿತ್ರರದು. ಹಿರಿಯರ ಬೆಂಬಲ ಮತ್ತು ಮಾರ್ಗದರ್ಶನ ಅವರ ಜೊತೆಗೆ ಸದಾ ಇದ್ದೇ ಇರುತ್ತದೆ.
ಆಲೋಚನೆ.ಕಾಂ ವೆಬ್ ಪತ್ರಿಕೆಯನ್ನು ನಿಧಾನವಾಗಿ ಅಪ್‍ಡೇಟ್ ಮಾಡುತ್ತಿದ್ದೇವೆ. ಹೊಸ ಆರಂಭದ ಹಿನ್ನೆಲೆಯಲ್ಲಿ ಅನಿವಾರ್ಯವಾದ ಅಡಚಣಿಯನ್ನು ಸಹೃದಯರು ಅರ್ಥವಿಸಿಕೊಂಡು ಸಹಕರಿಸುತ್ತೀರೆಂಬ ವಿಶ್ವಾಸ ನಮ್ಮದು. ಹನಿ ಹನಿ ಕೂಡಿ ಹಳ್ಳ ಎಂಬ ಮಾತಿನಂತೆ ನಿಮ್ಮ ವಿಚಾರಗಳು, ಕತೆ, ಕವಿತೆ, ವಿಮರ್ಶೆ, ಲಲಿತ ಪ್ರಬಂಧ, ನಗೆ ಬರಹಗಳು, ಕಲೆ, ಪೃಕೃತಿ ಹಾಗೂ ಪರಿಸರ ಹೀಗೆ ವಿವಿಧ ಆಯಾಮಗಳ ಕುರಿತ ಲೇಖನಗಳಿಂದ ಈ ಪತ್ರಿಕೆಯ ಆಕರ್ಷಣೆಯನ್ನು ಹೆಚ್ಚಿಸುವ ಹೊಣೆಗಾರಿಕೆ ನಿಮ್ಮದು.
ಸದ್ಯದ ಸಂದರ್ಭದಲ್ಲಿ ಎಲ್ಲವು ಕರೋನಾಮಯವಾಗಿ ಹೋಗಿದೆ. ಅದರ ಬಗ್ಗೆ ಹೆಚ್ಚು ಮಾತನಾಡದ ಪರಿಸ್ಥಿತಿ ಬಂದೊದಗಿದೆ. ಶಿವಶರಣ ಅಜಗಣ್ಣ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಶಿವ ಶರಣೆ ಮುಕ್ತಾಯಕ್ಕ 'ಎನ್ಮ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣ ನಿನ್ನ ಯೋಗ' ಎಂದು ಪರಿತಪಿಸುತ್ತಾಳೆ. ಈ ಕರೋನಾ ಕಾರಣವಾಗಿ ಇಡೀ ಜಗತ್ತು ಸೂತಕದ ಮನೆಯಂತಾಗಿದೆ. ಸಾವಿನ ಭಯ ಅದನ್ನು ಮುಂದೂಡುವ ಮುಂಜಾಗ್ರತೆ ಎರಡು ಒಟ್ಟೊಟ್ಟಿಗೆ ಸೇರಿಕೊಂಡಿವೆ. ಕಣ್ಣಿಗೆ ಕಾಣದ ವೈರಾಣುವಿನ ಎದುರು ಮನುಷ್ಯನ ದರ್ಪ, ದೌರ್ಜನ್ಯ, ಅಹಂಕಾರ, ಶ್ರೀಮಂತಿಕೆಯ ಪ್ರದರ್ಶನ ಹಿನ್ನೆಲೆಗೆ ಸರಿದಂತೆ ಭಾಸವಾಗುತ್ತಿದೆ. ಕೊರೋನಾ ನಮ್ಮೊಳಗಿನ ಸಂಬಂಧವನ್ನು ಗಾಢವಾಗಿಸುವತ್ತ ನಮ್ಮ ಮುಖ ತಿರುಗಿಸುವಂತೆ ಮಾಡಿದೆಯೆಂದು ಅನಿಸುತ್ತಿದೆ. ದೂರದಲ್ಲಿದ್ದವರು ತಮ್ಮ ಸ್ವಂತ ಮನೆಗೆ ಮರಳಿದ್ದಾರೆ. ಕುಲ ಕಸುಬು ಮತ್ತು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ವಲಸೆಯಿಂದ ಬರಿದಾಗಿದ್ದ ಮನೆ ಮತ್ತು ಮನಗಳು ಮತ್ತೆ ತುಂಬಿಕೊಂಡಿವೆ. ಕರೋನಾ ಸೃಷ್ಟಿಸಿದ ಈ ಇಂಟರ್ವಲ್ ಅಥವಾ ಮಧ್ಯಂತರ ವಿರಾಮದಲ್ಲಿ ಕೆಲವರು ತಮ್ಮ ಸಮಯದ ಸದುಪಯೋಗದ ಬಗ್ಗೆ ಚಿಂತನೆ ನಡೆಸಿ ಕಾರ್ಯೋನ್ಮುಖರಾದರೆ ಮತ್ತೆ ಕೆಲವರು ಈ ವಿರಾಮಕ್ಕೆ ಎಂದು ಕೊನೆ, ಸಿನೆಮಾ ಯಾವಾಗ ಶುರು ಆಗುತ್ತದೆ ಎಂಬ ಕಾತರದಲ್ಲಿದ್ದಾರೆ.
ಕರೋನಾಕ್ಕೆ ಮಣಿಯದೆ ಹೊಸ ಬದುಕನ್ನು ಕಟ್ಟುವ ಮತ್ತು ಆ ಕುರಿತು ಹೊಸ ಮಾರ್ಗೊಪಾಯಗಳನ್ನು ಹುಡುಕುವ ಆಲೋಚನೆ ನಮ್ಮೆಲ್ಲರದಾಗಲಿ ಎಂಬುದೇ ನಮ್ಮ ಆಶಯ.
-ಸಂಪಾದಕ
ಕುವೆಂಪು ಮಾತುಗಳು ಕತ್ತಲನ್ನು ಹೊಡೆದೋಡಿಸುವ ಹಣತೆಯ ಸಾಲುಗಳಂತಿವೆ.