top of page

‘ಆಲೋಚನೆ’ - ಮುದ್ರಣದಿಂದ ಡಿಜಿಟಲೀಕರಣದತ್ತ

Updated: Sep 3, 2020

ಸುಮಾರು ಎರಡು ದಶಕಗಳಿಗೂ ಹಿಂದೆ ಮುದ್ರಣ ರೂಪದಲ್ಲಿ ಪ್ರಾರಂಭಗೊಂಡು ಈ ಮಧ್ಯೆ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ‘ಆಲೋಚನೆ’ ತ್ರೈಮಾಸಿಕವು ಇಂದು ಡಿಜಿಟಲ್‍ ನತ್ತ ಹೊರಳಿ ಪುನಃ ಕನ್ನಡ ಸಾಹಿತ್ಯಾರಾಧಕರ ಮನೆ ಬಾಗಿಲಿಗೆ ಹೊಸ ರೂಪದಲ್ಲಿ ಬರುತ್ತಿರುವ ಈ ಹೊತ್ತಿನಲ್ಲಿ ‘ ಆಲೋಚನೆ’ ಯ ಸಂಪಾದಕರು, ಸಾಹಿತಿಗಳು ಆಗಿರುವ ಡಾ.ಶ್ರೀಪಾದ ಶೆಟ್ಟಿ ಇವರೊಂದಿಗೆ ಒಂದು ಸಮಾಲೋಚನೆ.


ಆಲೋಚನಾ ವೇದಿಕೆಯ ಹೊಳಹು ಮತ್ತು ಹುಟ್ಟು ಹೇಗಾಯಿತು?

ನಡೆದು ಬಂದ ದಾರಿಯ ಕಡೆಗೆ ತಿರುಗಿ ನೋಡಿಕೊಳ್ಳುವ ಪ್ರಶ್ನೆ ಇದು. ಸರಳವಾಗಿ ಹೇಳುವದಾದರೆ ಆಲೋಚನಾ ವೇದಿಕೆಯ ಹೊಳಹು ಮತ್ತು ಹುಟ್ಟು ಒಟ್ಟೊಟ್ಟಿಗೆ ಆಯಿತು. ಅದು ೪೩ ವರ್ಷಗಳ ಹಿಂದೆ.ಅಂದರೆ ೧೯೭೭ ನೆ ಇಸ್ವಿ. ನಾನು ಎಂ.ಎ.ಅಂತಿಮ ವರ್ಷದ ವಿದ್ಯಾರ್ಥಿ. ನನ್ನ ಮಿತ್ರರ ಒತ್ತಾಸೆಗೆ ಮಣಿದು ಆಗ ಜರುಗಲಿದ್ದ ಕನ್ನಡ ಅಧ್ಯಯನ ಪೀಠದ ಕನ್ನಡ ಸಂಘದ ಚುನಾವಣೆಗೆ ನಾನು ಸ್ಪರ್ಧಿಸಬೇಕಾಯಿತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಯಿತು. ನಾನು ಚುನಾವಣೆಯಲ್ಲಿ ಪರಾಜಿತನಾದೆ. ಆದರೆ ಸುಮ್ಮನೆ ಇರುವ ಜಾಯಮಾನ ನನ್ನದಲ್ಲ. ನನ್ನ ಕೆಲವು ಮಿತ್ರರು ಮತ್ತು ವಿಶೇಷವಾಗಿ ಕ.ವಿ.ವಿ.ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿ ಉದ್ಯೋಗಿಯಾಗಿದ್ದ ಕವಿ ಮಿತ್ರ ಸಿದ್ಧಲಿಂಗ ದೇಸಾಯಿ ನನ್ನ ಬೆಂಬಲಕ್ಕೆ ನಿಂತರು. ಅದರ ಫಲವೇ ಅಲೋಚನಾ ವೇದಿಕೆ ಸೃಷ್ಟಿ. ಚಂದ್ರಶೇಖರ ಪಾಟಿಲರ ಸಂಕ್ರಮಣ ಸಾಹಿತ್ಯ ವೇದಿಕೆ ಮತ್ತು ಆಲೋಚನಾ ವೇದಿಕೆಯ ಜಂಟಿ ಆಶ್ರಯದಲ್ಲಿ ಪಿ.ಲಂಕೇಶ ಅವರನ್ನು ಕರೆಯಿಸಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯಶಸ್ವಿ ಕಾರ್ಯಕ್ರಮವೊಂದನನ್ನು ನಡೆಸಲಾಯಿತು. ಪ್ರಸಿದ್ಧ ಕವಿ ಪ್ರೊ.ಬುದ್ದಣ್ಣ ಹಿಂಗಮಿರೆ ಅವರ ‘ಹದ್ದುಗಳ ಹಾಡು’ ಕವನ ಸಂಕಲನ ಆಲೋಚನಾ ವೇದಿಕೆಯ ಆಶ್ರಯದಲ್ಲಿ ಬಿಡುಗಡೆಗೊಂಡಿತು. ಹೀಗೆ ಆಲೋಚನಾ ವೇದಿಕೆ ಏನನ್ನಾದರೂ ಸಾಧಿಸ ಬೇಕೆಂಬ ಸಾತ್ವಿಕ ಹಟದಿಂದ ಹುಟ್ಟಿಕೊಂಡಿತು. ಉದ್ದೇಶ ಪ್ರಾಮಾಣಿಕವಾಗಿದ್ದರೆ ನಮ್ಮ ಹಾದಿಯಲ್ಲಿ ಯಶಸ್ಸು ಸಾಧ್ಯ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೆ.


‘ಆಲೋಚನೆ’ ಪತ್ರಿಕೆಯನ್ನು ಹೊರತರುವ ಹಿನ್ನೆಲೆ ಏನು?

೧೯೭೭ ರಲ್ಲಿ ಆರಂಭವಾದ ಆಲೋಚನಾ ವೇದಿಕೆ ಕೆಲಕಾಲ ಅನಿವಾರ್ಯ ಕಾರಣಗಳಿಂದ ಸುಪ್ತಾವಸ್ಥೆಯಲ್ಲಿತ್ತು. ೧೯೮೬ ನೆ ಇಸ್ವಿಯಲ್ಲಿ ಲಂಕೇಶ ಪತ್ರಿಕೆಯ ಸಂಪಾದಕರಾದ ಪಿ.ಲಂಕೇಶ ಅವರನ್ನು ಅಂಕೋಲೆಗೆ ಕರೆಸಿ ಕಾರ್ಯಕ್ರಮ ನಡೆಸುವ ಮೂಲಕ ಆಲೋಚನಾ ವೇದಿಕೆ ಮತ್ತೆ ಸುದ್ದಿಯಾಯಿತು. ಲಂಕೇಶ ಅವರ ಜೊತೆ ನನ್ನ ಮಿತ್ರರಾದ ಶೂದ್ರ ಶ್ರೀನಿವಾಸ ಅವರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ ನಾನು ಅಂಕೋಲಾ ಜಿ.ಸಿ.ಕಾಲೇಜಿನಿಂದ ಹೊನ್ನಾವರಕ್ಕೆ ವರ್ಗಾವಣೆಗೊಂಡು ಬಂದ ನಂತರ ಆಲೋಚನಾ ವೇದಿಕೆಯು ಹೆಚ್ಚು ಕ್ರಿಯಾಶೀಲವಾಯಿತು. ನಮ್ಮ ಚಟುವಟಿಕೆಗಳು ಗಾಳಿಯಲ್ಲಿ ತೇಲಿ ಹೋಗದಂತೆ ಅದನ್ನು ದಾಖಲಿಸಲು ಒಂದು ಮುಖವಾಣಿ ಬೇಕು. ಇದರೊಂದಿಗೆ ಸಮಾನ ಮನಸ್ಕರ ಆಲೋಚನೆಗಳು, ಸೃಷ್ಟಿಕ್ರಿಯೆಗಳು ಸಾಹಿತ್ಯವಾಗಿ ಜನಮನವನ್ನು ತಲುಪಲೆಂದು ಆಲೋಚನೆ ಪತ್ರಿಕೆಯನ್ನು ೨೦೦೨ ನೆ ಇಸ್ವಿ ಸೆಪ್ಟಂಬರ ತಿಂಗಳಲ್ಲಿ ಆರಂಭಿಸಿದೆವು.


ಅತಿ ಉತ್ಸಾಹದಿಂದ ಪ್ರಾರಂಭವಾದ ಆಲೋಚನೆ ಪತ್ರಿಕೆಯನ್ನು ಮಧ್ಯೆ ನಿಲ್ಲಿಸಬೇಕಾದ ಅನಿವಾರ್ಯತೆ ಏನಿತ್ತು?

‌ಅತ್ಯಂತ ಹುರುಪಿನಿಂದ ಆಲೋಚನೆಯ ಪ್ರಯೋಗ ಸಂಚಿಕೆಯ ಬಿಡುಗಡೆಯನ್ನು ನನ್ನ ವಿದ್ಯಾಗುರುಗಳಾದ ಪ್ರೊ.ವಿ.ಕೆ.ವೀಣಾಕರ ಅವರು ನೆರವೇರಿಸಿದರು. ಶಾಸಕರಾಗಿದ್ದ ಮೋಹನ ಕೆ.ಶೆಟ್ಟಿಯವರು ಅಂದಿನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಈಗ ಅವರಿಬ್ಬರು ನಮಗೆ ನೆನಪು ಮಾತ್ರ. ಆಲೋಚನೆ ತ್ರೈಮಾಸಿಕದ ಎರಡು ಮತ್ತು ಮೂರನೇಯ ಸಂಚಿಕೆಯನ್ನು ಹೊರತಂದೆವು. ಅಷ್ಟರಲ್ಲಿ ವಾಸ್ತವಿಕತೆಯ ಅರಿವಾಗಿತ್ತು. ಲೇಖನ ಬರೆಸುವ, ಡಿ.ಟಿ.ಪಿ ಮಾಡಿಸುವ ವಿನ್ಯಾಸ ಮಾಡುವ, ಪತ್ರಿಕೆಯನ್ನು ಪೋಷ್ಟ್ ಮಾಡುವ ಎಲ್ಲಾ ಹೊಣೆಯನ್ನು ನನ್ನ ವೃತ್ತಿಯ ಜೊತೆಯಲ್ಲಿ ನಿಭಾಯಿಸುವುದು ಕಷ್ಟವಾಯಿತು. ಸಂಪಾದಕ ಮಂಡಲಿಯಲ್ಲಿದ್ದ ನನ್ನ ಮಿತ್ರರಿಗು ಅವರದೆ ಆದ ಕೆಲಸದ ಒತ್ತಡಗಳಿದ್ದವು. ನಾನು ಪತ್ರಿಕೆ ಮಾಡಿಕೊಂಡ ಕಾರಣ ನನ್ನ ಅಧ್ಯಾಪನ ವೃತ್ತಿಗೆ ಸಂಬಂಧಿಸಿ ಟೀಕೆಗೆ ಒಳಗಾಗಬಾರದು ಎಂಬ ಎಚ್ಚರದಿಂದ ಪತ್ರಿಕೆಯನ್ನು ನಿಲ್ಲಿಸಬೇಕಾಗಿ ಬಂತು. ಇದನ್ನು ಆರಂಭ ಶೂರತ್ವ ಎನ್ನಲೆ? ಅಥವಾ ಪತ್ರಿಕೆಗೆ ಬಂದ ಬಾಲಗ್ರಹ ಎನ್ನಲೆ ? ನನಗೆ ಸ್ಪಷ್ಟವಾಗುತ್ತಿಲ್ಲ.


ಮುದ್ರಣ ರೂಪದಿಂದ ಡಿಜಿಟಲ್ ರೂಪಕ್ಕೆ ಆಲೋಚನಾ ಪತ್ರಿಕೆಯನ್ನು ಹೊರತರುವ ಕನಸು ಹುಟ್ಟಿದ್ದು ಹೇಗೆ?

[ನಗುತ್ತ] ಗೆಳೆಯಾ, ಕನಸುಗಳು ಈಗ ಬಹಳ ಕಡಿಮೆಯಾಗಿವೆ. ಕನಸು ಬಿದ್ದರೂ ಅದನ್ನು ಕಾಣಲು ಚಸ್ಮಾ ಹಾಕಿಕೊಳ್ಳ ಬೇಕಾದ ಅನಿವಾರ್ಯತೆ ಬಂದಿದೆ. ಆದರೆ ಬರೆಹವೇ ನನ್ನ ಜೀವನದ ಉಸಿರಾಗಿರುವಾಗ ಕೈಕಟ್ಟಿ ಕೂಡ್ರುವ ಜಾಯಮಾನ ಖಂಡಿತ ನನ್ನದಲ್ಲ. ಜೊತೆಗೆ ನನ್ನಂತಹ ಮನೋಭೂಮಿಕೆಯ ಹಲವಾರು ಹಿರಿಯ ಮಿತ್ರರು ಹಾಗೂ ಯುವ ಮಿತ್ರರು ನನ್ನ ಜೊತೆಯಲ್ಲಿ ನಿಂತಿದ್ದಾರೆ. ಹೀಗಿರುವಾಗ ಇದು ಕೇವಲ ನನ್ನ ಕನಸು ಎಂದರೆ ಅಹಂಕಾರವಾದೀತು. ಇನ್ನು ನನ್ನ ಎರಡನೇಯ ಮಗ ನಿಶಾಂತನಿಗೆ ಹೊಸದನ್ನು ಮಾಡಬೇಕೆಂಬ ದೊಡ್ಡ ಹಂಬಲ. ಅಪ್ಪ ನೀನು ಏನಾದರು ಬರೆಯುತ್ತಿರು ನಾನು ಬರೆಯ ತೊಡಗುತ್ತೇನೆ ಎನ್ನುತ್ತಿದ್ದ. ಒಂದು ದಿನ ಪೋನ್ ಮಾಡಿ ಅಪ್ಪಾ ಆಲೋಚನೆ.ಕಾಂ ಆರಂಭಿಸೋಣ ನಿನ್ನ ಮಿತ್ರರಿಗೆಲ್ಲ ತಿಳಿಸು. ಇದೊಂದು ಸಾಹಿತ್ಯ, ಸಮಾಜ, ಸಮಾಲೋಚನೆಯ ವೇದಿಕೆಯಾಗಲಿ ಎಂದು ಒತ್ತಾಯಿಸಿದ. ನಿದ್ದೆ ಬಂದು ಕೂರುತ್ತಾ ಕುಳಿತವನನ್ನು ಹಾಸಿಗೆಯಲ್ಲಿ ದೂಡಿದ ಹಾಗಾಯಿತು. ಜೊತೆಗೆ ಮಿತ್ರರ ಬಲ ಮತ್ತು ಬೆಂಬಲ ನಮ್ಮ ಹಂಬಲಕ್ಕೆ ಸಾತ್ ನೀಡಿದ್ದರಿಂದ ಆಲೋಚನೆ.ಕಾಂ ಡಿಜಿಟಲ್ ರೂಪ ತಾಳಲು ಕಾರಣವಾಯಿತು.


ಹೊಸರೂಪದ ಆಲೋಚನೆ.ಕಾಂ ಪತ್ರಿಕೆ ಹೊರತರಲು ಹೊರಟಾಗ ಸಿಕ್ಕ ಪ್ರೋತ್ಸಾಹದ ನುಡಿಗಳೇನು? ಆಟದ ಮೈದಾನದಲ್ಲಿ ಓಡುತ್ತಿರುವ ಓಟಗಾರನಿಗೆ ನೋಡುಗರ ಚಪ್ಪಾಳೆಗಳು ವೇಗವರ್ಧಕವಾಗುತ್ತವಂತೆ. ಇದೇ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಆಲೋಚನೆಗೆ ಬೆಂಬಲಕೋರಿ ವಾಟ್ಸಅಪ್‍ನಲ್ಲಿ ಒಂದು ಸಂದೇಶ ಕಳಿಸಿದೆ. ಅದನ್ನು ನೋಡಿದವರು ಪ್ರೀತಿಯಿಂದ ಹುರಿದುಂಬಿಸಿದ್ದಾರೆ. ಲೇಖನ ಬರೆದು ಕೊಡುವುದಾಗಿ, ಕತೆ, ಕವನ, ಪುಸ್ತಕ ಪರಿಚಯ, ಅಂಕಣ ಬರಹಗಳ ಮೂಲಕ ಪತ್ರಿಕೆಯ ಅಂತರಂಗ ಮತ್ತು ಅಂತಃಕರಣವನ್ನು ಗಟ್ಟಿಗೊಳಿಸುವುದಾಗಿ ಹೇಳಿದ್ದಾರೆ. ಓಟಗಾರನಿಗೆ ಓಟ ಪ್ರಾರಂಭಿಸುವ ಮುನ್ನವೇ ಸಿಕ್ಕ ಈ ಚಪ್ಪಾಳೆ ನನ್ನ ಮನೋಬಲವನ್ನು ದ್ವಿಗುಣಗೊಳಿಸಿದೆ.


ಪ್ರಸ್ತುತ ಆಲೋಚನೆ ಪತ್ರಿಕೆಯ ಹಂಬಲ ಮತ್ತು ಆಶಯಗಳೇನು?

‘ಓ ಚಿತ್ತ ಕದವ ತೆರೆ ಬೆಳಕು ಬರಲಿ ಇತ್ತ' ಎಂಬ ಕವಿವಾಣಿ ನೆನಪಾಗುತ್ತಿದೆ.ಮನದ ಕದವನ್ನು ತೆರೆದು ಗಾಳಿ ಬೆಳಕನ್ನು ಬರಮಾಡಿಕೊಂಡು ಪ್ರೆಶ್ ಆಗುವ ಆಸೆ. ಇಲ್ಲಿ ಹಿರಿಯರು ಮತ್ತು ಕಿರಿಯರು ತಮ್ಮ ಆಲೋಚನೆಗಳಿಗೆ ಅಕ್ಷರದ ರೂಪ ಕೊಡುವ ಅವಕಾಶವಿದೆ. ಬೇರು ಹಳೆಯದಾದರೂ ಆ ಮರದ ಚಿಗುರು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. Like a tree we each must find a place to grow and branch out ಎಂಬ ಮಾತು ಆಲೋಚನೆ ಬಳಗದ ಬರಹಗಾರರಿಗೆ ಓದುಗರಿಗೆ ಒಂದು ದಿಕ್ಸೂಚಿ.


ಇಂದಿನ “ ಆಲೋಚನೆ’ ಹಿರಿ ಯ ಬರೆಹಗಾರರ ಜೊತೆಗೆ ಹೊಸಪ್ರತಿಭೆಗಳಿಗೆ ಅವಕಾಶ ನೀಡುತ್ತದೆಯೆ? ಸ್ವಲ್ಪ ವಿಶ್ಲೇ಼ಷಿಸಿ.

ಹೌದು. ಹಿರಿಯ ಬರಹಗಾರರೊಂದಿಗೆ ಕಿರಿಯರ ಗೆಜ್ಜೆ ಕಾಲ್ಗಳ ನಿನಾದ, ಅವರ ಮೆಲ್ಲುಲಿ ಇಲ್ಲಿ ಪಲ್ಲವಿಸಿದರೆ ಅದು ಚೆಂದ. ಕಿರಿಯರು ಅನುಭವಿಗಳಾಗಿರ ಬಲ್ಲರು.' Don't ask the old, ask the experience' ಎಂಬ ಮಾತಿನಂತೆ.


ಆಲೋಚನೆ ಪತ್ರಿಕೆಯಲ್ಲಿ ಯಾವ ಯಾವ ಪ್ರಕಾರಗಳಿಗೆ ಅವಕಾಶವಿದೆ?

ಎಲ್ಲ ಪ್ರಕಾರಗಳಿಗೂ ಇಲ್ಲಿ ಅವಕಾಶವಿದೆ. ಕವನ, ಕತೆ, ವಿಮರ್ಶೆ, ಕವಿ-ಕೃತಿ ಪರಿಚಯ, ಪುಸ್ತಕ ವಿಮರ್ಶೆ, ಅಂಕಣ ಬರಹ, ಚಿತ್ರಕಲೆ, ವ್ಯಂಗ್ಯ ಚಿತ್ರ, ಪ್ರವಾಸಾನುಭವ, ಪತ್ರ ಲೇಖನ, ಲಲಿತ ಪ್ರಬಂಧಗಳು, ನುಡಿಚಿತ್ರ, ವ್ಯಕ್ತಿಚಿತ್ರ ಇನ್ನೂ ತಪ್ಪಿ ಉಳಿದ ಸಾಹಿತ್ಯ ಪ್ರಕಾರಗಳಿಗೆ ಅವಕಾಶವಿದೆ. ಹಳಗನ್ನಡ, ವಚನ, ನಡುಗನ್ನಡ ಸಾಹಿತ್ಯದ ಚರ್ಚೆ ಚಿಂತನೆಗಳಿಗೂ ಅವಕಾಶವಿದೆ. ಸುಭಾಷಿತ, ಚಿಂತನೆ, ದಿನದ ಮಾತಿಗು ಅವಕಾಶ ಕಲ್ಪಿಸಲಾಗಿದೆ.


ಕೊನೆಯದಾಗಿ ಆಲೋಚನೆಯ ಕುರಿತು ನಿಮ್ಮ ಕನಸೇನು?

ಆಲೋಚನೆ ಬೋಧಿ ವೃಕ್ಷದಂತೆ ಬೆಳೆಯ ಬೇಕು. ಅದರ ತಂಪಾದ ನೆರಳಿನಲ್ಲಿ ಎಲ್ಲರೂ ನಿರಾಳವಾಗಿರಬೇಕು. ಅಲ್ಲಿ ಗೂಡು ಕಟ್ಟಿದ ಹಕ್ಕಿಗಳ ಚಿಲಿ ಪಿಲಿ ನಮಗೆ ಮುದವನ್ನುಂಟು ಮಾಡಬೇಕು. ಯಯಾತಿ ನಾಟಕದಲ್ಲಿ ಗಿರೀಶ ಕಾರ್ನಾಡರು ಬರೆದ ಮಾತು,' ನೀರಿಗೆ ಕಲ್ಲು ಹಾಕುವುದಷ್ಟೆ ನಿನ್ನ ಅಧಿಕಾರವೆ ಹೊರತು ಅದು ಸೃಷ್ಟಿಸುವ ಅಲೆಗಳ ಮೇಲೆ ನಿನ್ನ ಹಿಡಿತವಿಲ್ಲ’. ಈ ಮಾತು ಆಲೋಚನೆಯ ಎಚ್ಚರದಲ್ಲಿ ಸದಾ ಇರುತ್ತದೆ. ಸಹೃದಯರ ಮನದಾಳಕ್ಕೆ ತಲುಪಿ ಆಲೋಚನೆಯು ಅಲೆಗಳನ್ನು, ತರಂಗವನ್ನು, ತೆರೆಗಳನ್ನು, ಹೆದ್ದೊರೆಯನ್ನು ಸೃಷ್ಟಿಸಲಿ ಎಂಬ ಪ್ರಾಮಾಣಿಕ ಕನಸು ನಮ್ಮದು.


ಕೊನೆಯದಾಗಿ ಹೊಸ ಆಯಾಮ ಮತ್ತು ಹೊಸ ಆಶಯದೊಂದಿಗೆ ಹೊರಬರುತ್ತಿರುವ ‘ಆಲೋಚನೆ’ ಸಾಹಿತ್ಯ ಮತ್ತು ಸಮಾಜದ ಹಿತಚಿಂತನೆಗೊಂದು ಅದ್ಭುತ ವೇದಿಕೆಯಾಗಲಿ ಎಂದು ಶುಭ ಹಾರೈಸುವೆ. ವಂದನೆಗಳು.


ಧನ್ಯವಾದಗಳು

ಸಂದರ್ಶನ: ಶ್ರೀಪಾದ ಹೆಗಡೆ, ಸಾಲಕೋಡ

241 views0 comments
bottom of page