top of page

ಆತಂಕದಾಚೆಯ ಆನಂದ

ಆನಂದದ ಅನ್ವೇಷಣೆಯೇ ಈ ಬಾಳಿನ ಮೂಲ ಆಶಯವೆಂದು ಎಂದೋ ಸಾಬೀತಾಗಿ ಹೋಗಿದೆ. ಐಹಿಕ ಸುಖದ ನಶೆಗಾಗಿ ನಿರಂತರ ಹಪಹಪಿಸುವ ಜನರು ಒಂದಡೆಯಾದರೆ, ಕೀರ್ತಿ-ಪ್ರತಿಷ್ಠೆಯ ಬೆನ್ನೇರಿ ಸಾಗುತ್ತ, ಅದೂ ತೀರ ಲೌಕಿಕವಾದುದೇ ಎಂದರಿಯದೇ ಮುಂದುವರಿಯುತ್ತಲೇ ಸಾಗುವವರು ಮತ್ತೆ ಕೆಲವರು. ನಮ್ಮ ಬದುಕಿಗೆ ವರ್ಷಗಳನ್ನು ಸೇರಿಸುತ್ತ ಸಾಗುವುದಕ್ಕಿಂತ, ವರ್ಷಗಳಿಗೆ ಬದುಕನ್ನು ಅಥವಾ ಜೀವಂತಿಕೆಯನ್ನು ನೀಡುತ್ತ ಸಾಗುವುದೇ ನಿಜವಾದ ಸಾರ್ಥಕತೆ ಎಂದು ಬಗೆಯುವ ತೀರ ವಿರಳ ಪಂಕ್ತಿಯ ಅಸಾಮಾನ್ಯ ಚಿಂತಕರೂ ಈ ನೆಲದಲ್ಲಿ ಇನ್ನೂ ಇದ್ದಾರೆ-ಎನ್ನುವುದೇ ವಿಸ್ಮಯದ ಜತೆಗೆ ಆನಂದದ ಅನುಭೂತಿಯನ್ನೂ ನೀಡದಿರದು. ಕ್ಷಣ ಕ್ಷಣಕ್ಕೂ ಕುತೂಹಲವನ್ನು ಸೃಜಿಸುತ್ತಲೇ ಸಾಗುವ, ವಿಚಿತ್ರ ತಿರುವುಗಳನ್ನು ನೀಡುತ್ತಲೇ ನಡೆಯುವ, ವಿಸ್ಮಯಕಾರಿ ಆತಂಕವನ್ನು ಉಂಟುಮಾಡುತ್ತ ಮುಂದುವರೆಯುವ ಈ ಬಾಳನೌಕೆಯ ಓಟಕ್ಕೆ ಎಂಥ ವಿವೇಕದ ಹುಟ್ಟು ಬೇಕೆಂದು ನಿರ್ಧರಿಸುವುದೇ ಅತಿ ಕ್ಲಿಷ್ಟ ಎಂಬ ಆತಂಕದ ಕಾಲಘಟ್ಟದಲ್ಲಿ ನಾವಿರುವುದು ಸರ್ವವೇದ್ಯ. ಜೀವನದ ದಾರಿಯಲ್ಲಿ ಯಾವಾಗಲೂ ಕಲ್ಲು-ಮುಳ್ಳುಗಳು ಎದುರಾಗುವುದು ನಿಜವಾದರೂ, ಎಲ್ಲವನ್ನೂ ಸಮಚಿತ್ತದಿಂದ, ಆತ್ಮವಿಶ್ವಾಸದಿಂದ ಎದುರಿಸುತ್ತ ಆಶಾವಾದಿಯಾಗಿ ಬದುಕು ಸಾಗಿಸುವುದೊಂದೇ ಆತ್ಯಂತಿಕ ಜೀವನ ವಿಧಾನವೆಂದು ಅಂದುಕೊಂಡರೂ, ಈ ಬದುಕೊಂದು ಸುಂದರ ಸುಳ್ಳೆಂದೂ, ಸಾವೆನ್ನುವುದು ದಾರುಣ ಸತ್ಯವೆಂಬ ಕಹಿ ಅರಿವು ಈಗಾಗಲೇ ರುಜುವಾತು ಮಾಡಿಬಿಟ್ಟಿದೆ. ಪ್ರಕೃತಿಯ ನಿಗೂಢನಡೆಯ ಮುಂದೆ ಮಾನವನ ಅತಿಬುದ್ಧಿವಂತಿಕೆ ಏನನ್ನೂ ಮಾಡಲಾರದೆಂಬ ಅಪ್ಪಟ ಸತ್ಯದ ಅನಾವರಣವಾಗಿ ಹೋಗಿದೆ. ಅನಿಶ್ಚಿತ ಬದುಕಿನ ಹೋರಾಟದ ಅಲೆಗಳ ಮೇಲೆ ಸಾಗುವ ಈ ಬಾಳ ಬಂಡಿಗೆ ಕೊರೋನಾದ ಆಕಸ್ಮಿಕ ಅಬ್ಬರದ ಅಲೆಯ ಪ್ರಹಾರ ಆತಂಕವನ್ನು ಸೃಷ್ಟಿಸಿರುವುದು ನಿಜವಾದರೂ, ಆ ಆತಂಕದೊಡೆನೆಯೇ ಬದುಕನ್ನು ಮುನ್ನಡೆಸುವ, ಕಟ್ಟಿಕೊಳ್ಳುವ ಧಾವಂತದಲ್ಲಿ ಅದರಾಚೆಯ ಆನಂದವನ್ನು ಮನದಲ್ಲಿ ಸೃಷ್ಟಿಸಿಕೊಳ್ಳದೇ ಸಹ್ಯವಾಗಿ ಬದುಕ ನೂಕುವುದು ಹೇಗೆ? ಆತಂಕದಾಚೆಯ ಆನಂದವನ್ನು ಹೊಂದುವುದು ಮನಸ್ಸನ್ನು ನಿರ್ವಹಿಸುವ ಕಲೆಗಾರಿಕೆಯಿಂದ ಮಾತ್ರ ಸಾಧ್ಯ. ಮನದೊಳಗನ್ನು ಅರ್ಥಪೂರ್ಣವಾಗಿ ಆವರಿಸಿಕೊಳ್ಳುವ, ಆ ಮೂಲಕ ಜೀವನವನ್ನು ಅರಿಯುವ ಅನನ್ಯತೆಯಿಂದ ಮಾತ್ರ ಸಾಧ್ಯ. ಆಧ್ಯಾತ್ಮಿಕ ದೃಷ್ಟಿಕೋನ, ಲೌಕಿಕ ಮಿತಿಯ ಅರಿವಿನ ಸ್ಪಷ್ಟತೆ , ವಿಶಾಲ ವಿಶ್ವದ ಬ್ರಹತ್ ಶಕ್ತಿಯ ಮುಂದೆ, ಮನುಷ್ಯನ ಅಹಮಿಕೆ ನಗಣ್ಯ ಎಂಬ ಕಟುವಾಸ್ತವದ ಅರಿವು ಉಂಟಾಗಿ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಮನಸ್ಥಿತಿ, ನೈಜ ಬದುಕಿನ ಒಳಸೂಕ್ಷ್ಮದ ಅರಿವು ಉಂಟಾದಾಗ , ಲೌಕಿಕ ಮಿತಿಯ ಆಳದ ಕಲ್ಪನೆ ಗ್ರಹಿಕೆಗೆ ಬಂದಾಗ ಮಾತ್ರ ಬದುಕಿನ ನಿತ್ಯ-ಸತ್ಯದ ಅರಿವಾಗಿ ನಿರ್ಮಲ ಆನಂದದ ಅನುಭೂತಿಗೆ ಪಕ್ಕಾಗಲು ಸಾಧ್ಯ. ನಿಷ್ಕಲ್ಮಶ ಮನಸ್ಸು, ನಿರ್ವಿಕಾರದ ನಿರ್ವಂಚನೆಯ ಪ್ರಶಾಂತ ಮನಸ್ಥಿತಿ ಅನ್ಯರಿಗೆ ಕೇಡುಬಯಸದ, ಎಲ್ಲರನ್ನೂ, ಎಲ್ಲವನ್ನೂ ಸಮಾನವಾಗಿ ಮಾನವೀಯ ಕಾರುಣ್ಯದಿಂದ ಕಾಣುವ ಹೃದಯ ವೈಶಾಲ್ಯದ ಸಂಸ್ಕಾರಯುತ ಮನಸ್ಸಿದ್ದರೆ, ಆಗುವುದೆಲ್ಲವೂ ಒಳ್ಳೆಯದೇ-ಎಂಬ ಭರವಸೆಯ ಭಾವವಿದ್ದರೆ, ಜಾತಿ,ಮತ, ಧರ್ಮದ ಬೇಲಿಯಿಂದಾಚೆ ಬಂದು ಯೋಚಿಸುವ, ಎದೆಯ ದನಿಗೆ ಕಿವಿಯಾಗುವ, ಮನಸ್ಸಾಕ್ಷಿಗೆ ಮೆಚ್ಚಿ ನಡೆಯುವ ಹೃದಯ ಸಂಸ್ಕಾರವಿದ್ದರೆ, ಆತಂಕದಲ್ಲಿಯೂ ಆನಂದದ ಅಲೆಗಳು ಅಪ್ಪಳಿಸದಿದ್ದೀತೆ? ನಿಷ್ಪ್ರಹ ಮನಸ್ಸು, ನಿರ್ಮಲ ನಗು, ಗಂಭೀರ ಮೌನ-ಖಂಡಿತಾ ಆನಂದವನ್ನು ಶುದ್ಧಾಂತಕರಣದಲ್ಲಿ ಅರಳಿಸಬಲ್ಲುದು. ಎಂಥ ಆತಂಕದ ಸ್ಥಿತಿಯಲ್ಲಿಯೂ, ಸಮಚಿತ್ತವನ್ನು ಕಳೆದುಕೊಳ್ಳದ, ಬದುಕನ್ನು ಬಂದಂತೇ ಸ್ವೀಕರಿಸುವ ಬಲಿಷ್ಠ ಮನೋಬಲವೊಂದೇ ಎಂಥ ಅನಿಶ್ಚ್ಚಿತತೆಯ ಮಧ್ಯೆಯೂ ಸಂತೋಷವನ್ನು ಸೃಜಿಸಬಲ್ಲುದು; ಮನೋಧೈರ್ಯವನ್ನೂ ಪ್ರೇರೇಪಿಸಬಲ್ಲದು.


“ A heart of silence has the capacity to deepen the poise of the mind.”


ಮೌನಹೃದಯಕ್ಕೆ ಸಮಚಿತ್ತವನ್ನು ಹಾಗೂ ನಿರ್ಮಲ ಆನಂದವನ್ನೂ ನೀಡಬಲ್ಲ ದೈತ್ಯ ಶಕ್ತಿ ಇದೆಯಲ್ಲವೆ ?


-ಹೊನ್ನಪ್ಪಯ್ಯ ಗುನಗಾ


104 views0 comments

Comments


bottom of page