top of page

ಅಂಬಲಿಯ ರುಚಿಕಂಡ ಅಂಬರದ ನಾಲಿಗೆ

Updated: Jun 15, 2020

ಕರಿಕಾಲಚೋಳನ ಕುದುರೆಲಾಯಾದ ಚೆನ್ನ

ಕಂಚಿಪಟ್ಟಣದಲ್ಲಿ ಗೊತ್ತಿಲ್ಲ ಯಾರಿಗೂ

ಹುಲ್ಲು ಹುರುಳಿ ನೀರನಿಕ್ಕುವುದೇ ಕಾಯಕ

ಮುಖ ತೋರಿದವನಲ್ಲ ನಾಡ ದೊರೆಗೂ


ಊರಾಚೆ ಕೇರಿಯಲಿ ಸೂತಕದ ಸರಹದ್ದು

ಹಗಲಲ್ಲು ಬೆಳಕಿರದ ಗುಡಿಸಲಲ್ಲಿ

ಸಾಗಿತ್ತು ಸಂಸಾರ,ಮಡದಿ ಗಂಗಮ್ಮನು

ಇಹ-ಪರಕೆ ಅಂಬಲಿ ಬಡಿಸಲಲ್ಲಿ


ಇಷ್ಟಲಿಂಗದ ಪೂಜೆಗಂಬಲಿಯೆ ನೈವೇದ್ಯ

ಕೀರೆ ಸೊಪ್ಪಿನ ಸಾರು ಜತೆಗೂಡಲು

ನೈವೇದ್ಯಪ್ರಸಾದ ಊಟಗಳು ಒಂದಾಗಿರಲು

ತಣಿಯುತ್ತ ಸಾಗಿರಲು ಚೆನ್ನನೋಡಲು


ಸವಿದ ಸವಿದೇಸವಿದ ಮತ್ತಷ್ಟು ಮಗದಷ್ಟು

ಎಷ್ಟು ಸವಿದರು ಹಸಿವು ಹಿಂಗುತಿಲ್ಲ

ತನ್ನ ನಾಲಿಗೆ ಒಡಲು ತನ್ನವೇ?ಎಂದೆಂಬ

ಅನುಮಾನ ಮನದೊಳಗೆ ಮೂಡಿತಲ್ಲ!


ಅಂಬರದ ನಾಲಿಗೆ ಅಂಬಲಿಯ ರುಚಿಕಂಡು

ಶಂಭುವಿಗೆ ಆಕಾರವರಳಿ

ಗುಪ್ತಭಕ್ತಿಯಮಿಡುಕು ಸುಪ್ತಲೋಕಕೆ ತಾಗಿ

ಬಿಚ್ಚಿಕೊಂಡಿತು ಮೌನ ಸುರುಳಿ


ನಿನ್ನ ಒಡಲೊಳಗೆ ಅವಿತುಕೊಂಡವ ನಾನು

ನಿನ್ನ ನಾಲಿಗೆಯೊಳಗೆ ಕುಳಿತುಕೊಂಡೆ

ಅಂಬಲಿಯ ರುಚಿಕಂಡೆ ನಿನ್ನೊಡನೆ ಉಂಡೆ

ಇಹಪರದ ಸೂತಕವ ಕಳೆದುಕೊಂಡೆ


ಆಕಾಶ ಗುಡಿಸಿಲಿಗೆ ಇಳಿದು ಬರುವ

ಗುಡಿಸಲೇ ಆಕಾಶವಾಗಿಬಿಡುವ

ಮರ್ಮವನು ಲೋಕಕ್ಕೆ ಸಾರಬೇಕು

ಶೂನ್ಯವನು ಅನಂತಕ್ಕೇರಿಸುವ ಶಕ್ತಿ

ಅನಂತವನು ಶೂನ್ಯಕ್ಕೆ ಇಳಿಸುವನುರುಕ್ತಿ

ಗುಪ್ತಭಕ್ತಿಯ ಗೂಢವನು ಜಗಕೆ ತೋರಬೇಕು



ಯಾರುತಿಳಿಯದ ಹಾಗೆ ಇರುವ ಸೊಗವೆ ಬೇರೆ

ಶಬ್ದಗಳ ಸಂತೆಯಲಿ ಕಳೆಯುವದು ಬೇರೆ

ತಿಳಿನಿರಾಳದ ಕೊಳವ ಕಲುಕಿದರೆ ನಾನುಳಿವೆನೆ

ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಶಿವನೆ


ಕರಿಕಾಲ ಚೋಳನ ರಾಜಭಕ್ಷ್ಯವ ಬಿಟ್ಟು

ನಿನ್ನ ಅಂಬಲಿಯ ಸವಿದ ವಿಷಯ

ಗೊತ್ತಾಗಿ ಬರುತಿರುವನವನು ನಿನ್ನನ್ನು ಹುಡುಕಿ

ತಪ್ಪಾಯಿತು ಚೆನ್ನ ಬೇಡುವೆನು ಕ್ಷಮೆಯ!


ನಿನಗೆ ಮೀಸಲು ನನ್ನ ಭಕ್ತಿಯ ಹೊನಲು

ಸದ್ದುಗದ್ದಲದಲ್ಲಿ ಬೀಡಿಪಾಲಾಗುವುದೆ?

ನನ್ನೊಡಲ ಗುಡಿಸಲಲಿ ನಿತ್ಯ ಬೆಳಗುವ ದೀಪ

ಹೊರಗಡೆಯ ಬಿರುಗಳಾರಬಹುದೆ?


ಕರಿಕಾಲ ಚೋಳನ ಮೆರವಣಿಗೆ ಬಂದಿತು

ಚೆನ್ನನನು ಹುಡುಕುತ್ತ ಅಷ್ಟೊತ್ತಿಗೆ

ಕುದುರೆ ಶೇಷಾರವಾದ ಖುರಪುಟದ ಸದ್ದುಗಳು

ಸಕಲ ಸೈನ್ಯದ ಜತೆಗೆ ಹಾಕಿದವು ಮುತ್ತಿಗೆ


ನಿನ್ನ ಪಾದಕೆ ನನ್ನ ಶಿರಸರಿಯೆ ಚನ್ನ

ಎನ್ನುತ್ತ ಅಡ್ಡಬಿದ್ದನು ಕರಿಕಾಲಚೋಳ

ಅವರ ಹಿಗ್ಗಿನ ನಡುವೆ ಕುಗ್ಗಿಹೋದನು ಚೆನ್ನ

ಹೇಳಲಾಗದು ಹಿಡಿಯಾಗಿ ಮುದುಡಿದವನ ಗೋಳು


ಊರಿಗೂರೇ ಸೇರಿ ಜಯಘೋಷ ಮಾಡಿರಲು

ಜನರ ಬಾಯಿಗಳೆಲ್ಲ ಚೆನ್ನನನು ಹಾಡಿರಲು

ಶಿವನ ಬೆಳಕಿನ ತೇರು ಇಳಿದು ಬಂದಿತು ಧರೆಗೆ

ಚೆನ್ನನನು ಒಳಗೊಂಡು ಹಾರಿತು ಬಾನ ಕಡೆಗೆ

ಇಹಪರಗಳೊಂದಾಗಿ ನೆಲಮುಗಿಲು ತಾಗಿದಂತೆ

ಗುಪ್ತಸುಪ್ತಗಳು ಒಂದು ಕ್ಷಣ ಮಿಂಚಿಮಾಯವಾದಂತೆ.


ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ

ಪ್ರಾಧ್ಯಾಪಕ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ





 
 
 

1 Comment


sunandakadame
sunandakadame
Aug 01, 2020

ಆಕಾಶ ಗುಡಿಸಿಲಿಗೆ ಇಳಿದು ಬರುವ, ಗುಡಿಸಲೇ ಆಕಾಶವಾಗಿಬಿಡುವ ಮರ್ಮವನ್ನು ಜಗತ್ತಿಗೆ ಸಾರಿದ ಶರಣರ ತತ್ವಗಳ ಸ್ಪಂದಿಸುವ ಕಾವ್ಯ ಇಷ್ಟವಾಯಿತು ಮಟ್ಟಿಹಾಳ ಅವರೇ.

Like

©Alochane.com 

bottom of page