ಎಲ್. ಎಸ್. ಶಾಸ್ತ್ರಿ
ಕನ್ನಡ ಮತ್ತು ಕೃಷ್ಣರಾಯರು - ಈ ಎರಡು ಶಬ್ದಗಳನ್ನು ಬೇರ್ಪಡಿಸಬೇಕಿಲ್ಲ. "ಕನ್ನಡದ ಕೃಷ್ಣರಾಯರು " ಎಂದರೂ ಸರಿ. "ಕನ್ನಡಕ್ಕೊಬ್ಬರೇ ಕೃಷ್ಣರಾಯರು" ಎಂದರೂ ಆದೀತು. ಅಷ್ಟರ ಮಟ್ಟಿಗೆ ಕನ್ನಡದೊಡನೆ ಬೆರೆತು ಹೋದ ಬದುಕು ಅ. ನ. ಕೃಷ್ಣರಾಯರದಾಗಿತ್ತು. ನಾಡಿನಲ್ಲಿ ಕಾದಂಬರಿ ಸಾಮ್ರಾಟರೆಂದು ಅವರು ಖ್ಯಾತಿವೆತ್ತಿದ್ದರೂ ಸಹ ಅವರು ವಾಸ್ತವವಾಗಿ ಕನ್ನಡ ಭಾಷೆ, ನಾಡು ನುಡಿಗಾಗಿ ಮಾಡಿದ ಕೆಲಸ ಅವಿಸ್ಮರಣೀಯ ಮತ್ತು ಅಮೂಲ್ಯವಾದುದು.
ಶತಮಾನದ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿದಂತಹ ಸಂದರ್ಭದಲ್ಲಿ 'ಶಾಂತಕವಿ' ಸಕ್ಕರಿ ಬಾಳಾಚಾರ್ಯರು ಕನ್ನಡಿಗರಲ್ಲಿ ಎಚ್ಚರ ಮೂಡಿಸಲು ಪ್ರಯತ್ನಿಸಿದ ಸಂಗತಿಯನ್ನಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ತಮಿಳರ ದಟ್ಟ ಪ್ರಭಾವ ಕನ್ನಡವನ್ನು ಮೂಲೆಗೆ ಸರಿಸಿದಾಗ ಮೊಟ್ಟಮೊದಲು ಅದರ ವಿರುದ್ಧ ದನಿಯೆತ್ತಿ ಕನ್ನಡಿಗರನ್ನು ಎಚ್ಚರಿಸಲು ಹೋರಾಟವನ್ನೇ ಆರಂಭಿಸಿದವರು ಅ. ನ. ಕೃಷ್ಣರಾಯರು. ಶಾಂತಿನಿಕೇತನದಲ್ಲಿ ಗುರುದೇವ ರವೀಂದ್ರನಾಥ ಟಾಗೋರ ಅವರಿಂದ ನಾಡುನುಡಿಗಳ ಅಭಿಮಾನದ ಪಾಠ ಕಲಿತ ಕೃಷ್ಣರಾಯರು ಕನ್ನಡ ಭಾಷೆ, ಸಾಹಿತ್ಯ, ಕಲೆ ಸಂಸ್ಕೃತಿಗಳ ಕುರಿತು ಆಳವಾದ ಅಧ್ಯಯನವನ್ನು ಮಾಡುವದರೊಂದಿಗೆ ತಮ್ಮ ಕೃತಿಗಳ ಮೂಲಕವೂ ಕನ್ನಡತನವನ್ನು ಜಾಗೃತಗೊಳಿಸುವ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಗಟ್ಟಿಗೊಳಿಸುವ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರ ಪ್ರಸಿದ್ಧ ಕಾದಂಬರಿಗಳಲ್ಲೊಂದಾದ " ಸಂಧ್ಯಾರಾಗ" ದಲ್ಲಿ ಬರುವ ಒಂದು ಸನ್ನಿವೇಶವನ್ನು ಗಮನಿಸಿದರೆ ಸಾಕು ಅವರ ಕನ್ನಡ ಪ್ರೇಮ ಎಷ್ಟು ಉತ್ಕಟವಾದುದಾಗಿತ್ತು ಎನ್ನುವದು ಸ್ಪಷ್ಟವಾಗುತ್ತದೆ . ಸಾಮಾನ್ಯವಾಗಿ ಅಂದು ಬೆಂಗಳೂರಿನಲ್ಲಿ ರಾಮೋತ್ಸವ ಮತ್ತಿತರ ಸಂದರ್ಭಗಳಲ್ಲಿ ತಮಿಳು ಹಾಡುಗಳದೇ ಸಿಂಹಪಾಲು ಇರುತ್ತಿತ್ತು. ನಮ್ಮ ಗಾಯಕರು ಕನ್ನಡದ ದಾಸರಪದ ವಚನಗಳನ್ನೆಲ್ಲ ರಾಗ ಸಂಯೋಜಿಸಿ ಹಾಡಬೇಕೆಂಬುದು ಅನಕೃ ಅವರ ಆಸೆಯಾಗಿತ್ತು. ಅದನ್ನೇ ಅವರು ಸಂಧ್ಯಾರಾಗದ ನಾಯಕ ಲಕ್ಷ್ಮಣನ ಮೂಲಕ ವ್ಯಕ್ತಪಡಿಸುತ್ತಾರೆ.
ಕಾದಂಬರಿಯಲ್ಲಿ ಗೋಪಾಲ ತನ್ನ ಅಣ್ಣ ಲಕ್ಷ್ಮಣನಿಗೆ ಕೇಳುತ್ತಾನೆ -" ಕನ್ನಡ ಕೀರ್ತನೆಗಳು ಸಂಗೀತಕ್ಕೆ ಒಗ್ಗುವದಿಲ್ಲವೆಂದು ಕೆಲವರ ಅಭಿಪ್ರಾಯ. ಇದಕ್ಕೆ ನೀನೇನೆನ್ನುವಿ?"
ಲಕ್ಷ್ಮಣ ಹೇಳುತ್ತಾನೆ -" ಅದು ತಪ್ಪು ಅಭಿಪ್ರಾಯ. ಪುರಂದರ ಕನಕ, ವಿಜಯಾದಿ ದಾಸರ ಕೀರ್ತನೆಗಳೇ ಸಾಲವೇ? ತ್ಯಾಗರಾಜರು,ದೀಕ್ಷಿತರು ಇವರ ಕೀರ್ತನೆಗಳಲ್ಲಿ ಯಾವ ಕೆಲಸವನ್ನು ಮಾಡಬಹುದೋ ದಾಸರ ಕೀರ್ತನೆಗಳಲ್ಲೂ ಮಾಡಬಹುದಲ್ಲ"
" ಹಾಗೆಯೇ ಬಸವಣ್ಣ, ಅಕ್ಕಮಹಾದೇವಿ, ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಸಹಜಾನಂದ ಮೊದಲಾದವರ ಹಾಡುಗಳನ್ನೇಕೆ ನಮ್ಮ ಸಂಗೀತಗಾರರು ಬಳಕೆಗೆ ತರಬಾರದು?"
" ಖಂಡಿತವಾಗಿಯೂ ತರಬೇಕು. ತಾಯಿಭಾಷೆ ಹಾಡುವವನ ಹೃದಯದಿಂದ ಬರುವ ಹಾಗೆ ಬೇರೆ ಯಾವ ಭಾಷೆಯೂ ಬರುವದಿಲ್ಲ".
ಇಲ್ಲಿ ಅನಕೃ ಅವರ ಉದ್ದೇಶ ಏನಿತ್ತೆಂಬುದು ಸ್ಪಷ್ಟ. ಸಂಧ್ಯಾರಾಗದ ಲಕ್ಷ್ಮಣ ಕನ್ನಡ ಕೀರ್ತನೆ ವಚನಾದಿಗಳನ್ನು ತನ್ನ ಹಾಡುಗಾರಿಕೆಗೆ ಅಳವಡಿಸಿಕೊಂಡು ಕಚೇರಿ ನಡೆಸುವಂತಹ ಸನ್ನಿವೇಶ ಅನಕೃ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ಅನಕೃ ಖ್ಯಾತ ಹಿಂದುಸ್ತಾನಿ ಗಾಯಕರಾದ ಪಂ. ಮಲ್ಲಿಕಾರ್ಜುನ ಮನಸೂರ ಅವರಿಗೆ ಶರಣರ ವಚನಗಳನ್ನು ಹಾಡಲು ಪ್ರೇರಣೆ ನೀಡಿದರೆಂಬ ಸಂಗತಿ ಹಲವರಿಗೆ ತಿಳಿದಿದೆ. ಅವರು ತಮ್ಮ ಹಲವು ಕಾದಂಬರಿಗಳನ್ನು ಇದೇರೀತಿ ಕನ್ನಡದ ಅಭಿಮಾನ ಜಾಗೃತಗೊಳಿಸಲು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಸ್ಟರ್ ಹಿರಣ್ಣಯ್ಯ ಸಹಿತ ಹಲವು ಕಲಾವಿದರು ಮತ್ತು ಸಾಹಿತಿಗಳಿಗೆ ಅನಕೃ ಅವರು ಕಷ್ಟದ ಕಾಲದಲ್ಲಿ ನೆರವಾದದ್ದುಂಟು. ಅನಕೃ ವೈಶಿಷ್ಟ್ಯವೆಂದರೆ ಅವರು ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಪತ್ರಿಕೆ, ಚಿತ್ರಕಲೆ ಹೀಗೆ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿಯೂ ಕಾದಂಬರಿಗಳನ್ನು ಬರೆದಿದ್ದಾರೆ. ಆ ಎಲ್ಲ ಕ್ಷೇತ್ರಗಳ ಬಗೆಗೆ ಅವರಿಗೆ ಅಪಾರ ಜ್ಞಾನವಿತ್ತೆಂಬುದು ಮುಖ್ಯ. ಸಂಗೀತದ ಕುರಿತು ಸಂಧ್ಯಾರಾಗ, ಕಟ್ಟಿದ ಬಣ್ಣ, ಮಿಯಾಮಲ್ಹಾರ, ರಂಗಭೂಮಿಯ ಕುರಿತು ನಟಸಾರ್ವಭೌಮ, ಚಿತ್ರಕಲೆಯ ಕುರಿತು ಸಂಗ್ರಾಮ, ನೃತ್ಯಕಲೆಯ ಕುರಿತು ಬಣ್ಣದ ಬದುಕು ಮೊದಲಾದವುಗಳನ್ನಿಲ್ಲಿ ಉದಾಹರಿಸಬಹುದು. ಯಾವ ವಸ್ತು ವಿಷಯವೇ ಇರಲಿ, ಅನಕೃ ಅವುಗಳ ಕುರಿತು ತಲಸ್ಪರ್ಶಿಯಾದ ಅರಿವನ್ನು ಪಡೆದುಕೊಂಡೇ ಬರೆಯುತ್ತಿದ್ದರು. ರಂಗಭೂಮಿಯ ಕುರಿತಾದ ನಟಸಾರ್ವಭೌಮವಿರಲಿ, ವೇಶ್ಯಾಜೀವನದ ಕುರಿತಾದ ಕಾದಂಬರಿಗಳಿರಲಿ ಅವರು ಹೊಂದಿದ ಆಳವಾದ ವಿಷಯ ಜ್ಞಾನ ಬೆರಗುಗೊಳಿಸುವಂತಹದಾಗಿದೆ.
*
ಕನ್ನಡದ ವಿಷಯ ಬಂದಾಗ ಕೃಷ್ಣರಾಯರನ್ನು ಹುಟ್ಟುಹೋರಾಟಗಾರರೆಂದೇ ಕರೆಯಬೇಕಾಗುತ್ತದೆ. ಕನ್ನಡದ ಅವಹೇಳನವನ್ನಾಗಲಿ, ಅವಗಣನೆಯನ್ನಾಗಲಿ ಅವರು ಕಿಂಚಿತ್ತೂ ಸಹಿಸುತ್ತಿರಲಿಲ್ಲ. ಸ್ಥಳದಲ್ಲೇ ಉಗ್ರವಾಗಿ ಪ್ರತಿಭಟಿಸುತ್ತಿದ್ದರು. ರಾಜ್ಯದ ದಕ್ಷಿಣ ಭಾಗದಲ್ಲಿ ಕರ್ನಾಟಕ ಏಕೀಕರಣಕ್ಕೆ ಅಲ್ಲಿಯ ಜನರಿಂದ ಹೆಚ್ಚಿನ ಬೆಂಬಲವಿಲ್ಲದಾಗಲೂ ಅನಕೃ ಏಕೀಕರಣ ಚಳವಳಿಯನ್ನು ಬೆಂಬಲಿಸಿ ನಾಡಿನೆಲ್ಲೆಡೆ ಸಂಚರಿಸಿ ಉಪನ್ಯಾಸಗಳನ್ನಿತ್ತು ಕನ್ನಡಿಗರನ್ನು ಎಚ್ಚರಿಸುವ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಅನ್ಯಭಾಷಿಕರು ಕನ್ನಡದ ಮೇಲೆ ದಬ್ಬಾಳಿಕೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವದಕ್ಕಾಗಿ ಅನಕೃ ಆತಂಕಗೊಂಡಿದ್ದರು. ಥಿಯೇಟರ್ ಗಳಲ್ಲಿ ಕನ್ನಡಕ್ಕಿಂತ ಹೆಚ್ಚು ಬೇರೆ ಭಾಷೆಗಳ ಚಿತ್ರ ಪ್ರದರ್ಶನವಾಗುವದು, ಕನ್ನಡ ಪತ್ರಿಕೆ ಪುಸ್ತಕಗಳ ಬೇಡಿಕೆ ಕುಸಿಯುವದು, ಕನ್ನಡ ಕಲಾವಿದರನ್ನು ನಿರ್ಲಕ್ಷಿಸಿ ಇತರ ಭಾಷಾ ಕಲಾವಿದರಿಗೆ ಮಣೆ ಹಾಕುವದು , ರಾಜ್ಯದ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರು ವಂಚಿತರಾಗುವದು ಇಂತಹ ಹಲವು ವಿಷಯಗಳ ಕುರಿತು ಕೃಷ್ಣರಾಯರು ಚಿಂತೆ- ಚಿಂತನೆ ನಡೆಸಿದರಲ್ಲದೆ ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಒಂದು ಸಂಸ್ಥೆಯನ್ನು ಕಟ್ಟುವದು ಅನಿವಾರ್ಯವೆಂಬ ನಿರ್ಧಾರಕ್ಕೆ ಬಂದರು. ಅದಕ್ಕೆ ಪೂರಕವೆಂಬಂತೆ ಅದೇ ವೇಳೆಗೆ ಕೋಣಂದೂರು ಲಿಂಗಪ್ಪನವರ ಅಧ್ಯಕ್ಷತೆಯಲ್ಲಿ " ಕನ್ನಡ ಯುವಜನ ಸಭಾ" ಎಂಬ ಹೆಸರಿನ ಸಂಘಟನೆಯೊಂದು ೧೯೬೧ ರ ವೇಳೆಗೆ ರೂಪುಗೊಂಡಿತು. ಅನಕೃ ಚಿಂತನೆಗಳು ಅಲ್ಲಿ ಕಾರ್ಯರೂಪಕ್ಕೆ ಬರುವಂತಾದವು. ೧೯೬೨ ರಲ್ಲಿ ಹಲವು ಕನ್ನಡ ಸಂಘಸಂಸ್ಥೆಗಳನ್ನು ಸೇರಿಸಿ " ಸಂಯುಕ್ತ ರಂಗ" ಎಂಬ ಸಂಸ್ಥೆ ತಲೆಯೆತ್ತಿತು. ಅನಕೃ ಅವರೇ ಅದರ ಅಧ್ಯಕ್ಷರಾದರೆ ಮ. ರಾಮಮೂರ್ತಿ ಅದರ ಸಾರಥ್ಯ ವಹಿಸಿದರು. ನಾಡಿಗೇರ ಕೃಷ್ಣರಾವ್, ಮೈ. ಸು. ನಟರಾಜ, ಬಿ. ಎನ್ . ಈಶ್ವರಪ್ಪ, ಸಂಪಂಗಿರಾಮಯ್ಯ. ಶಂಕರಾನಂದ ಸರಸ್ವತಿಸ್ವಾಮಿ ಮೊದಲಾದವರೆಲ್ಲ ಆ ಸಂಸ್ಥೆಯ ವೇದಿಕೆಗಳ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಚಳುವಳಿಯನ್ನು ಪ್ರಾರಂಭಿಸಿದರು. ಯಾವ ಯಾರ ವಿರೋಧವನ್ನೂ ಅವರು ಲೆಕ್ಕಿಸಲಿಲ್ಲ. ಪ್ರಸಿದ್ಧ ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿಯಂಥವರ ಕಾರ್ಯಕ್ರಮದಲ್ಲೂ ಈ ಸಂಸ್ಥೆಯ ಸದಸ್ಯರು ಕನ್ನಡಪರ ಪ್ರತಿಭಟನೆ ನಡೆಸಿ ಕನ್ನಡಿಗರಿಗಾಗುವ ಅನ್ಯಾಯದ ಕಡೆಗೆ ಗಮನ ಸೆಳೆದರು. ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸುವ ಪರಂಪರೆಯನ್ನು ಮೊದಲು ಹುಟ್ಟು ಹಾಕಿದ್ದೇ ಕೃಷ್ಣರಾಯರ ಈ ಸಂಸ್ಥೆ. ೧೯೬೩ ರಲ್ಲಿ ನವೆಂಬರ್ ೧-೨-೩ ರಂದು ಬೆಂಗಳೂರಿನ ಸುಭಾಸನಗರದಲ್ಲಿ ಚಪ್ಪರ ಹಾಕಿ ಬೃಹತ್ಪ್ರಮಾಣದಲ್ಲಿ ರಾಜ್ಯೋತ್ಸವ ಆಚರಿಸಿ ಹೊಸ ಇತಿಹಾಸ ನಿರ್ಮಿಸಿದರು. ಕನ್ನಡಿಗರ ಸ್ವಾಭಿಮಾನವನ್ನು ಎಚ್ಚರಿಸಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಸಲು ಈ ವೇದಿಕೆ ಅಪಾರವಾಗಿ ಶ್ರಮಿಸಿತು. ಅದೇ ಮೊದಲ ಸಲ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಸಲಾಯಿತು.
(ಸಶೇಷ)
Comments