top of page

ಅಸ್ತಿತ್ವ

ತೇಪೆ ಹಾಕುತ್ತ ಹಾಕುತ್ತ

ಅರಿವೆ ಹಾಕಬಹುದು ಒಲವು

ಹರಿದು ಹೋದ ಮೇಲೆ

ಸೆಳವು

ಅರಿವೇ ಆಗದು; ಬರಿದೆ

ಬೆವರು.

ಕಳಚಿ ಬೀಳುವ ಅಂಗಿ

ಭಾವ ಕುಟುಕುವ ಭಂಗಿ

ದೀಪವಾರಿದ ಮನೆಯಲ್ಲಿ

ದೀಪ ಹಚ್ಚುವ ನಿಲುವು

ಎಣ್ಣೆ ತೀರಿದ ಮೇಲೆ

ದೀಪ ಉರಿಯದು ಸತ್ಯ

ದೀಪವಾರಿಸುವ ಕಾಯಕಕ್ಕೆ

ಎಷ್ಟು ಕೈಗಳು ನೆರವು

ಕಟ್ಟಿಕೊಂಡವರಲ್ಲ

ಹಚ್ಚಿಕೊಂಡವರೇ ಎಲ್ಲ

ಬಂಧದ ಹಂಗಿಲ್ಲ

ಬಂಧನವು ಬೇಕಿಲ್ಲ

ಅಂಗಳದ ರಂಗೋಲಿ

ಅಂಗಾಲ ಕೆಳಗಿಹುದು

ಮುರಿದ ಬಾಗಿಲಿಗೇಕೆ

ಅಷ್ಟೊಂದು ಅಲಂಕಾರ?

ಹಚ್ಚಿಟ್ಟ ಹಾಡಲ್ಲಿ

ಅಪಸ್ವರದ್ದೇ ನಾದ

ಅಸ್ತಿತ್ವದ ಉಳಿಕೆಯಲ್ಲಿ

ಅನುಗ್ರಹವೇ ಆಟ

ಕೇಳುವವರಿರುವಲ್ಲಿ

ಹೇಳಿಕೆಯಿರಬೇಕು

ಕಿವಿ ಮುಚ್ಚಿದವರೆದುರು

ಮಂಗಳವ ಹಾಡಬೇಕು

ಬೇರೆ

ಆಯಾಮದಲ್ಲೊಂದು

ಆಯತವ ಹಾಕಿ

ಆಯದೊಳಗೊಂದು ಆಯವ

ಮಾಡಿ

ತೆರೆದ ಬಾಗಿಲುಗಳನಿಟ್ಟು

ನಿಸೂರಾಗಿರಬೇಕು.


- ವಿದ್ಯಾ ಭರತನಹಳ್ಳಿ


ಪ್ರತಿಭಾವಂತ ಕವಿಯಿತ್ರಿ ಶ್ರೀಮತಿ ವಿದ್ಯಾ ಭರತನಹಳ್ಳಿಯವರು ಮೂಲತಃ ಯಲ್ಲಾಪುರದ ಭರತನಹಳ್ಳಿಯವರು. ಇವರ ಕವನ ಸಂಕಲನಕ್ಕೆ ‘ ಬೆಳಕು ಕನಸಿನ ಸುತ್ತ’ ಪ್ರಕಟಣಾಪೂರ್ವ ಬಕುಳ ಪ್ರಶಸ್ತಿ ಲಭಿಸಿದೆ, ಇದೇ ಸಂಕಲನಕ್ಕೆ ಅತ್ತಿಮಬ್ಬೆ ಗೌರವ ಪ್ರಶಸ್ತಿಯೂ ದೊರಕಿದೆ. ‘ಮುನ್ನಡೆ’ ಪತ್ರಿಕೆಯ ಸಂಸ್ಥಾಪಕರು, ಕಾದಂಬರಿಕಾರರು ಹಾಗೂ ಬರೆಹಗಾರರಾದಶ್ರೀ ನಾ.ಸು.ಭರತನಹಳ್ಳಿಯವರ ಕೊನೆಯ ಮಗಳಾದ ಇವರುತಂದೆಯವರ ಹೆಸರಿನಲ್ಲಿ ‘ ನಾ.ಸು.ಬದುಕು ಬೊಗಸೆಯಲ್ಲಿ ಹಿಡಿದಷ್ಟು’ ಎಂಬ ಸಂಪಾದನಾ ಗ್ರಂಥ ಹೊರತಂದಿದ್ದಾರೆ. ಇವರಿಗೆ ತ.ರಾ.ಸು. ಸ್ಮಾರಕ ಕಾವ್ಯ, ಬೇಂದ್ರೆ ಸ್ಮೃತಿ ಕಾವ್ಯ, ಅಭಿಮಾನಿ ಕಾವ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಲಭಿಸಿದೆ.ಇದಲ್ಲದೆ ಪತ್ರಿಕೋಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಸಂಯುಕ್ತ ಕರ್ನಾಟಕ ಮತ್ತು ಕರ್ಮವೀರ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯೂ ಮತ್ತು ‘ಹಾಯ್ ಬೆಂಗಳೂರ್’ ಪತ್ರಿಕೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.ಹಾಗೆಯೆ ‘ರಾಧಾ’ ಧಾರಾವಾಹಿಗೆ ಚಿತ್ರಕತೆ ಮತ್ತು ‘ಬಾಲ್‍ಪೆನ್’ ಎಂಬ ಮಕ್ಕಳ ಚಿತ್ರದಲ್ಲಿ ಪಾತ್ರವಹಿಸಿರುವುದರ ಜೊತೆಗೆ ಕಥಾ ವಿಸ್ತರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ವೆಬ್ ಮ್ಯಾಗಜಿನ್‍ ಗಳಿಗೆಬರೆಯುವುದರಲ್ಲಿ ಕ್ರಿಯಾಶೀಲರಾಗಿದ್ದಾರೆ. -ಸಂಪಾದಕ.

 
 
 

4 Comments


ಪ್ರೀತಿಯ ಶ್ರೀಪಾದ ಶೆಟ್ಟರಿಗೆ ನಮಸ್ಕಾರಗಳು. ನನ್ನ ಕವಿತೆ ಮೆಚ್ಚಿದ್ದಕ್ಕೆ ಮತ್ತು ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಮೊದಲಿನಿಂದಲೂ ನೀವು, ದಿ.ಜಿ.ಎಸ್ ಅವಧಾನಿ ,ವಿಷ್ಣು ನಾಯ್ಕ್ ಎಲ್ಲರೂ ನನಗೆ ಪ್ರೋತ್ಸಾಹ ನೀಡಿದವರು. ನಿಮ್ಮನ್ನು ಸದಾ ನೆನಪಿಸಿಕೊಳ್ತೇನೆ. ಗದ್ಯವನ್ನೂ ಕಳಿಸುವೆ.

Like

shreepadns
shreepadns
Jul 07, 2020

ವಿದ್ಯಾ ಅವರೆ ನಿಮ್ಮ ಕವನ ಗಮನ ಸೆಳೆಯಿತು.ಬರೆಯುತ್ತಾ ಇರಿ.ನಿಮ್ಮ ಗದ್ಯ ಬರಹಗಳನ್ನು ನಮಗೆ ಕಳಿಸಿರಿ.ಅಭಿನಂದನೆಗಳು. ಶ್ರೀಪಾದ.

Like

ನಿಮ್ಮ ಈ ಅಭಿಪ್ರಾಯ ಇವತ್ತು ನೋಡಿದೆ.ತುಂಬಾ ಖುಷಿಯಾಯಿತು ಸುನಂದಾ ಮೇಡಮ್. ಧನ್ಯವಾದಗಳು

Like

sunandakadame
sunandakadame
Jun 30, 2020

ನಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ, ತೆರೆದ ಬಾಗಿಲುಗಳು ಯಾವುದೋ ತೆರನಲ್ಲಿ ಸಹಾಯಕ್ಕೆ ಬಂದಾವು ಎಂಬ ಆಶಯವನ್ನಿಟ್ಟುಕೊಂಡು ಬೆಳೆಯುವ ಕವಿತೆ ಈ ಅಸಮಾನ ವ್ಯವಸ್ಥೆಯ ಸತ್ಯಗಳನ್ನು ಒಂದೊ0ದಾಗಿ ಕಳಚುತ್ತ ಬಯಲಾಗುತ್ತ ನಿಸೂರಾಗುವ ಪರಿ ಅನನ್ಯವಾಗಿದೆ. ಪದಗಳ ಲಾಲಿತ್ಯ ಇಷ್ಟವಾಗುವಂತಿದೆ.

Like

©Alochane.com 

bottom of page