-ಮೋಹನ್ ಗೌಡ ಹೆಗ್ರೆ
ಮನೆಯ ಮೊದಲ ಕರೆಗಂಟೆ ಅವ್ವ
ಎಳುತ್ತಾಳೆ ಸೈಬ ಕೂಗೋ ಮೊದಲೇ
ಅವಳು ಎದ್ದ ಮೇಲೆಯೇ ಬೂದಿ ಒಲೆಯಲ್ಲಿ
ಮಲಗಿದ ಬೆಕ್ಕು ಮೈ ಮುರಿಯುವುದು
ಮೈ ಮೇಲೆ ತಲೆ ಇಟ್ಟು ಮಲಗಿದ ದನಕರುಗಳು
ಮೈ ನೆಕ್ಕಿಕೊಳ್ಳುತ್ತಾ ಹೊಸ ದಿನಕ್ಕೆ ಅಣಿಯಾಗುವುದು
ಎಣ್ಣೆಯ ಸ್ಪರ್ಶ ಕಾಣದ ಸರಕಾರಿ ಬಾವಿಯ
ರಾಟೆಯ ಕಿಂಯ್ ಕಿಂಯ್ ಶಬ್ದ
ಇಡೀ ಕೊಪ್ಪಕೆ ಅವ್ವ ಎದ್ದ ಬಗ್ಗೆ ಸೂಚಿಸೋ ರಾಟೆನಾದ
ಕುಡಿವ ನೀರು ತುಂಬಿದ
ಪಾತ್ರೆಯ ನೀರು ಚೆಲ್ಲಿ
ಪಾತ್ರೆ ತೊಳೆದ ಮೇಲೆಯೇ
ಅಡಿಗೆ ಮನೆಯಲಿ ಹೊಗೆಯಾಡುವುದು
ಹೆಗ್ರೆ ಕರೆಯ ಸನಿಹ ಇರೋ ದೊಡ್ಡ ಗದ್ದೆ
ಶೇಂಗಾ ಹಾಕುವಾಗ ಮೂಡಣದ ಮೂಲೆ ತಂಪು ತಂಪು
ಒಂದು ಸಿದ್ದೆ ಉದ್ದು ಬಿತ್ತಿ ಬಂದರೂ
ದನಕರು ತಿಂದು ಕೈಗೆ ಸಿಗೋದೆ ನಾಲ್ಕೈದು ಕೊಳಗ
ಅರುಕಲ್ಲಲ್ಲಿ ಅರೆದ ಉದ್ದಿನ ದೋಸೆಯ ಹಿಟ್ಟ
ಉಪ್ಪು ಹಾಕಿ ಗೆಟ್ಟೆ ಸೌಟಿನಲಿ ತಿರುಗಿಸುತ್ತಾಳೆ ಜೋರಾಗಿ
ಕಾದ ಮಣ್ಣಹಂಚಿನ ಮೇಲೆ
ಮುರುಗಲೆಣ್ಣೆಯ ಹಿಂಡಿಯನು ಉರುಳಿಸಿ
ಹಿಟ್ಟ ಹೊಯ್ದಾಗ ಚೊಂಯ್ ಎಂದರೆ ನನಗದೇ ಅಲಾರಾಂ
ಮುಖ ತೊಳೆದು ಓಡಿ ಬಂದರೆ
ನಿನ್ನೆಯ ಆಸೆ ( ಸಾರು ) ಯ ಬಿಸಿಮಾಡಿ
ಮಣೆ ಹಾಕಿ ಎರಡೂ ಕಾಲನೂ ಒಲೆಗೆ ನೆಟ್ಟಗಿಟ್ಟು
ಚಳಿಕಾಯಿಸುತ್ತಾ
ದೋಚೆ ಆಚೆಯ ತಿನ್ನುವ ಮಜವೇ ರುಚಿಯ ಸತ್ಯಾನುಭವ
ಕಲಗ, ಕೋಳಿ, ಮೀನಾಸೆಗಳಾದರಂತೂ ಸ್ವರ್ಗ ಬೇಡವೇ ಬೇಡ
ಮೈ ಮೇಲೆ ಹತ್ತಿ ದೋಸೆಗಾಗಿ
ಮೀನ ಮುಳ್ಳಿಗಾಗಿ ಮೈ ತಿಕ್ಕಿ
ಸಣ್ಣಕೆ ಕೂಗಿ ಮಸ್ಕಾ ಹೊಡೆವ ಮನೆ ಬೆಕ್ಕು
ಬಿಸಿ ದೋಸೆಯನೆ ತಾಟಿಗಾಕುತ
'ತಿಂದಕ ಓದಕ ಮಗ ' ಎಂಬ ಅವ್ವೆಯ ಭವಿಷ್ಯದ ಕಾಳಜಿ
ಎಲ್ಲವೂ ನೋವ ತಿಂದ ಹೆಣ್ಣು ಮನದ ಕಥೆಗೆ ಸಾಕ್ಷಿ
ಆಕಳು ಕರುವಿಗೆಲ್ಲಾ ಒಂದೊಂದು ದೋಸೆ ಹಿಡಿದು
ಮುಂದೆ ಹೋಗಿ ಹಿತ್ತಲ ಹೊರಗೆ ಕಳಿಸಿಕೊಡುವಾಗ
ಶಾಲೆ ಬಿಟ್ಟು ಬಂದ ಮೇಲೆ ದೋಸೆ ಆಸೆ ತಿನ್ನುತ್ತಿದ್ದಾಗ
ಗೊಬ್ಬರ ಹೊರಲು ಗದ್ದೆ ಕಲಸಕ್ಕೆ ಬಂದ ಆಳುಗಳು
ದೋಸೆ ಮೆದು ಆಗದೆ ಎಂದು ಖುಷಿಪಟ್ಟು ಸವಿಯುವಾಗ
ನೋಟು ಕೊಟ್ಟು ತುಟ್ಟಿ ದೋಸೆಯ ಹೋಟೆಲಿನಲ್ಲಿ
ತಿನ್ನುವಾಗ ಅವ್ವೆಯ ದೋಸೆಯ ಚಿತ್ರ ಅಣುಕಿಸಿತು..
