
ಹೂವು ಕೂಡ ಅಳಬಹುದು
ಕೆಲವೊಮ್ಮೆ ಬದುಕಿನಹಾಗೆ
ಕವಿತೆಯಹಾಗೆ ನಗು ನೋಟಕ್ಕಷ್ಟೆ
ವೇಧ್ಯ ಅಳು ಅಭೇಧ್ಯ
ಮುಂಜಾವಲ್ಲಿ ಮೈನೆರೆದ ಹುಡುಗಿ
ಮುಖದ ತುಂಬ ಮತ್ತುಬರಿಸುವ
ಮಂದಹಾಸ ಮನಸೋತ ದುಂಬಿಗಳ
ಸಾಲು,ಸಾಲು ಮೇಲಾಟ
ಹಸಿದ ಕಣ್ಣು ಮನಸ್ಸು ಹೊಟ್ಟೆ
ತಣಿಸುವ ಪರಿ ಸಂಜೆವರೆಗಷ್ಟೆ
ಅಂದ,ಗಂಧ,ಮಕರಂದ,ಉನ್ಮಾದ
ವೆಲ್ಲ ಖಾಲಿ ತೊಳೆದು ಚೆಲ್ಲಾಪಿಲ್ಲಿ
ಬೀಸಾಡಿದ ಪಾತ್ರೆ,ಬಾಡಿ ಬಸವಳಿದು
ಗಿಡದಿಂದ ತೊಟ್ಟು ಕಳಚಿ
ನೆಲಕ್ಕುದುರಿ ಮಣ್ಣಲಿ ಮಣ್ಣಾಗುವ
ಒಂದು ದಿನದ ಬದುಕ ಯಾತ್ರೆ ನೆನೆದು
ಒಳಗೊಳಗೇ ಅಳುತ್ತಿರಬಹುದು
ಮೌನವಾಗಿ ಮುಂಜಾವಲ್ಲೂ
ಈ ಅಂದದ ಹೂವು.
- ಅಬ್ಳಿ,ಹೆಗಡೆ