ದಂಡೆ ಮುಟ್ಟಲೆಂದೇ
ತೆರೆಗಳ ಓಟ ನಡೆದೇ ಇದೆ:
ಪಕ್ಕದ
ಕಿರು ಅಲೆಗಳ ಮೆಟ್ಟದೇ ಮುಟ್ಟಿ ಕೂಡುತ್ತ
ಬೃಹದಲೆಯಾಗಿ ಅವತಾರ ತಾಳಿ
ಕಾಲದ ಮೇರೆಗಳ ಮೀಟಿ ದಾಟಿ.
***
ಮೊದಲ ಅಲೆಯ ಮೊದಲ ಓಟದ ಆರಂಭಕೆ
ಎಷ್ಟು ವರ್ಷಗಳ ಇತಿಹಾಸ!?
ಬರೆದ ದಾಖಲೆಯೆಲ್ಲ ತಿಂದ ಒರಲೆಯ ಚರಿತೆ,
ಮತ್ತಾವ ಒರಲೆಗೆ ಊಟವಾಯ್ತೋ!?
***
ಆದರೂ
ಅಲೆಯ ಸಂತಾನ ಆಂತ್ಯವಾಗದು ಎಂದೂ
ಅಲೆ
ಹಿರಿ ಅಲೆ
ಕಿರು ಅಲೆ
ಅಲೆ ಅಲೆ ಅಲೆಯ ಪೀಳಿಗೆ
ಚಿರಾಯು ಕುಲ ಬೆಳೆದು
ತೂಗುವ
ಕಡಲ ಅಮ್ಮನ ಮಡಿಲು
ಇರುವವರೆಗೆ!
ಗಣಪತಿ ಗೌಡ,ಹೊನ್ನಳ್ಳಿ
Comments