top of page

ಅರ್ಧ ಸತ್ಯ

ಕಾಳ ರಾತ್ರಿಯಲ್ಲಿ ಕಿರುಬೆರಳನ್ನು ಹಿಡಿದು ನುಣ್ಣಗೆ

ನಡೆಯಬಾರದಿಲ್ಲಿ ಕತ್ತಲೆ ನೆತ್ತಿಗೇರುವ ಸರಿಹೊತ್ತಿನಲ್ಲಿ

ಅಂಗೈಯೇ ಕತ್ತಲೆಗೆ ನೆರಳಾಗುವ ತಿಳಿಹೊತ್ತಲ್ಲಿ


ಹಚ್ಚಿಟ್ಟ ದೀಪದ ದೇದೀಪ್ಯಮಾನ ಬೆಳಕಲ್ಲಿ

ತುಂಡು ರಾತ್ರಿಯೊಂದು ಬೆಳಕಿನ

ಕನ್ನಡಿಯಲ್ಲಿ ಮುಖ ಸಿಂಡರಿಸಿಕೊಂಡು

ಮತ್ತೆ ಮತ್ತೆ ಹಾದ ಬಿರುಗಾಳಿಗೆ ಮೈಯೊಡ್ಡಿ

ದೀಪದೆದೆಯಲ್ಲಿ ಅಗ್ನಿ ಗೂಡುಕಟ್ಟಿ

ದೀಪದ ಮುಖ ಕರ್ರಗಾಗಿ ಕತ್ತಲು ನೆರೆಯುತ್ತದೆ

ಅನಂತ ಆಕಾಶವೂ ಮೌನ ತಬ್ಬುತ್ತದೆ


ಎದೆ ಎದೆಯಲಿ ಚಿಗುರಿದ ಪ್ರೀತಿಯ ಪೃಣತೆಯ ಕವಲು ದಾರಿಯಲಿ

ಒಬ್ಬಂಟಿ ಬಿಟ್ಟುಹೋಗಬಾರದಿಲ್ಲಿ

ಕಾದು ಕುಳಿತ ಕಾಳ್ಗಿಚ್ಚಿನ ಕಾಡ ಸಂಚಿನಲ್ಲಿ


ಕರಾಳತೆಯ ಮುಖವಾಡದ ಕತ್ತಲಿನಲ್ಲಿ

ಬೆಳಕಿನ ಹಾದಿ ಸುಗಮವಲ್ಲ

ಅದಕ್ಕೆ ರಾತ್ರಿ ಸೂರ್ಯನಿಲ್ಲಇರುಳು ನಕ್ಕಂತೆ ಕಂಡರೂ

ನಂಬಬಾರದು

ಹಸೀ ರಾತ್ರಿಯಲ್ಲಿ ಕಂಡದ್ದೆಲ್ಲವೂ

ಸತ್ಯವಲ್ಲ


ಕಗ್ಗತ್ತಲ ಕ್ರೂರತೆಗೆ ಬೆಚ್ಚಿಬಿದ್ದ ಆರ್ದ್ರತೆಯ ತುಟಿಗಳು

ಅಮರ ಗೀತೆಯ ಗುನುಗುವುದಿಲ್ಲ

ಕಪ್ಪಿಟ್ಟಿರುವ ಅನಂತ ಆಕಾಶಕ್ಕೆ

ನಕ್ಷತ್ರದ ಹಾದಿ ಕಾಣುವುದಿಲ್ಲ


ನಿಂತಂತೆ ಭ್ರಮಿಸಿರುವ ಮಲಗಿರುವ ಮರ

ನೆರಳು ಬೀಳದೆ ಮೈಯೊರಗಿದ ಕತ್ತಲೆಯ ಗರ್ಭದಲ್ಲಿ ಬೀಜಾಂಕುರ

ಬೆಳಕಿನ ಮುಖ ಅದಿನ್ನೂ ದೂರ


ಮರಣದ ತೊಟ್ಟಿಲಲ್ಲಿ ಮಿಸುಕಾಡುವ ಸಂಜೆ

ಬೈಗು ನುಂಗಿದ ಇರುಳ ರಾತ್ರಿಯಲ್ಲಿ

ಅರ್ಧ ಚಂದ್ರನ ದರ್ಶನ


ಸತ್ತಂತೆ ನಟಿಸುವ ಬೆಳಕು ಹಾಯುವವರೆಗೂ

ನಿಶಾಚರ ರಾತ್ರಿಯ ಕಾರುಬಾರು

ಅರ್ಧ ಸತ್ಯ ಮಾತ್ರ



ಮಂಜುನಾಥ ನಾಯ್ಕ ಯಲ್ವಡಿಕವೂರ

3 views0 comments

Комментарии


©Alochane.com 

bottom of page