top of page

ಅರುಣೋದಯ

(ಶರ ಷಟ್ಪದಿ)

 

ನೋಡದೊ ಕಂದನೆ

ಮೂಡಣದಂಚಲಿ

ಮಾಡಿಹ ದಿನಕರನಚ್ಚರಿಯ

ಕಾಡದೆ ನಮ್ಮನು

ಮಾಡದೆ ತಡವನು

ಮೂಡುತ ಬೆಳಗುತಲೀಧರೆಯ//


ಸುತ್ತಣ ಲೋಕದ

ಕತ್ತಲೆಯೋಡಿಸಿ

ಮುತ್ತಿನಲೆರಕವ ಹೊಯ್ದಿಹನು

ನೆತ್ತಿಗೆ ತಿಲಕವ

ನಿತ್ತಿಹ ಭೂರಮೆ

ಚಿತ್ತದಿ ಪುಳಕಿತ ಮಾಡಿಹನು//


ರಂಗಿನಗಿರಣದೆ

ಸಿಂಗರವೀನೆಲ

ಕೆಂಗದಿರನೊಲವನೂ ತೊಡಿಸಿ

ಚಂಗನೆ ಚೆಲ್ಲಿದ

ರಂಗಲೆ ನಾಚಿದೆ

ಕಂಗೊಳಿತ ಸೊಬಗು ಸಂಭ್ರಮಿಸಿ// 


ಅರುಣನುದಯವದು

ಚುರುಕುಗೊಳಿಸುತಿದೆ

ತರುಲತೆ ಮಿಗಖಗ ವೆಚ್ಚರಿಸಿ

ಬೆರಗನೆ ತಂದಿದೆ

ತೊರೆನದಿ ಕಡಲಲಿ

ಸಿರಿಗಿರಣವಿಳಿದು ಮಿಂಚಿರಿಸಿ//


ತೆಂಗದು‌ ತೂಗಿದೆ

ಕಂಗದು ಬಳುಕಿದೆ

ಭೃಂಗವು  ಪಾಡಿದೆ ಸವಿಗಾನ

ರಿಂಗಣ ಕೋಗಿಲೆ

ಸಂಗಡ  ಮಾಡಿದೆ

ತಂಗೊಳ ಮಿಂದಿದೆ ಕಾಜಾಣ//


ಸುಂದರ ನೋಟವ

ಕಂದನೆ ನೋಡುತ

ಲಿಂದಿಗೆ ನೇಮವ ತಿಳಿಯಯ್ಯ

ಚಂದದ‌ ಭಾನುವಿ

ನಂದದ ಕಾರ್ಯವ

ನೊಂದನು ಅರಿಯುತ ಬಾಳಯ್ಯ//


ಭವಾನಿ ಗೌಡ (ಭುವಿ)

ವಿಜಯಪುರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page